ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭೂಮಿಯು ಒಂದು ಆಕಾಶ

ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ.
ಅದು ವಸಿಷ್ಠ, ಅದು ಅರುಧಂತಿ.
ಅವರು ಬೆಳಕಿನ ಕೈಚಾಚಿ ಪರಸ್ಪರ ವರಿಸಿದ್ದಾರೆ.
ನವದಂಪತಿಗಳೇ.... ಅವರಂತಿರಬೇಕು ಸತಿ-ಪತಿ.

ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ.
ಅದು ಸಪ್ತರ್ಷಿ ಮಂಡಲ.  ಅವು ಭತ್ತದ ಅರಳು
ಸಪ್ತರ್ಷಿಗಳು ಅಗ್ನಿಕುಂಡದ ಸುತ್ತ ಕೂತಿದ್ದಾರೆ
ಹೊಮಾಗ್ನಿ ಉರಿಸಿ ಅಂತರತಮ ಕೆದಕುತ್ತ

ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ.
ಅವನು ಚಂದ್ರ ಅವಳು ತಾರೆ ಅವನು ಬುಧ
ಅವರದ್ದು ಒಂದು ಚಿಕ್ಕ ಚೊಕ್ಕ ಸಂಸಾರ
ಒಡಕು ಮರತು ಒಡನಿರುವುದೇ ಸಂಸಾರದ ಹದ.

ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ.
ಆಗಾಗ ಇವರ ಮನೆಗೆ ಅವರು ಅವರ ಮನೆಗೆ ಇವರು.
ಇದು ಕುಟುಂಬ ಧರ್ಮ; ಇದು ಮಾನವತ್ವದ ಮಾರ್ಗ.
ಆದರೆ ನಿಷ್ಠುರ ಸತ್ಯ; ಆಳದಲ್ಲಿ ಅವರೆಲ್ಲ ಏಕಾಂಗಿಗಳು.

ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ.
ನಕಾಷೆ ಬಿಡಿಸಿದ್ದು ನಾವು-ಎಳೆದು ಅವರ ನಡುವೆ ಸಂಬಂಧದ ಗೆರೆ
ಅಂತರ್ಜಾಲ ಹೆಣೆದಿದ್ದೇವೆ, ವಿಶ್ವ ಕುಟುಂಬ ಕನಸಿದ್ದೇವೆ.
ಆದರೂ ನಮಗೆ ಗೊತ್ತು-ಭೂಮಿಯೂ ಒಂದು ಆಕಾಶ.  ಇಲ್ಲಿ
ನಾವೆಲ್ಲ ಗ್ರಹತಾರೆಗಳು.

ಸಾಹಿತ್ಯ:  ಎಚ್. ಎಸ್. ವೆಂಕಟೇಶ ಮೂರ್ತಿ

TagL Bhoomiyoo Ondu Aakasha

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ