ಸೈಯದ್ ಖಾನ್
ಸೈಯದ್ ಖಾನ್
ಸೈಯದ್ ಖಾನ್ ಅಪರೂಪದ ಗ್ರಾಮೀಣ ಸಮಾಜ ಕಾರ್ಯಕರ್ತರು, ಪಾಂಡಿತ್ಯವುಳ್ಳ ಕನ್ನಡ ಭಾಷಿಗರು ಮತ್ತು ಬಹುಮುಖಿ ಪ್ರತಿಭಾವಂತರು. ಇವೆಲ್ಲಕ್ಕೂ ಮಿಗಿಲಾಗಿ ಸರಳ ಸಜ್ಕನಿಕೆಯ ಹೃದಯವಂತರು.
ನಾನು ಕೆಲವು ವರ್ಷಗಳ ಹಿಂದೆ ಮೈಸೂರಿನಲ್ಲಿದ್ದಾಗ ಬಡಜನರಿಗೆ ಅನುಕೂಲಕರವಾದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ವಿವೇಕಾನಂದ ಸೇವಾಶ್ರಮದ ಸೇವಾ ಕಾರ್ಯಗಳಲ್ಲಿ ಒಂದು ಅಳಿಲಾಗಿ ಪಾಲ್ಗೊಳ್ಳುತ್ತಿದ್ದೆ. ಅಲ್ಲಿನ ಚಟುವಟಿಕೆಗಳಲ್ಲಿ ಮುಖ್ಯ ಪಾತ್ರವಹಿಸಿದ್ದ ಹಿರಿಯರೆಲ್ಲರ ಮಾತುಗಳಲ್ಲಿ ಬಹಳ ಕೇಳಿಬರುತ್ತಿದ್ದ ಆಪ್ತ ಹೆಸರು ಸೈಯದ್ ಖಾನ್. ಹೀಗಾಗಿ ಅವರನ್ನು ಕಾಣಬೇಕೆಂಬ ಹಂಬಲ ನನ್ನಲ್ಲಿ ತೀವ್ರಗೊಂಡಿತು.
ಒಮ್ಮೆ ವಿವೇಕಾನಂದ ಸೇವಾಶ್ರಮದ ಮೈಸೂರು ವಿಭಾಗದ ಉಸ್ತುವಾರಿ ನಿರ್ವಹಿಸುತ್ತಿರುವ ಸೇತುರಾಮ್ ಅವರೊಂದಿಗೆ ಬೆಳಗೊಳದಲ್ಲಿ ಸೇವಾಶ್ರಮವು ಬೆಂಬಲಿಸುತ್ತಿರುವ ಬುದ್ಧಿ ಮತ್ತು ದೈಹಿಕ ವಿಕಲ್ಪತೆಗಳಿಗೆ ಒಳಗಾದ ಮಕ್ಕಳ ಶುಶ್ರೂಷಾ ಕೇಂದ್ರಕ್ಕೆ ಹೋದಾಗ ಅಲ್ಲಿ ಸುಶ್ರಾವ್ಯ ಕನ್ನಡ ಪಾಂಡಿತ್ಯದಲ್ಲಿ ವ್ಯವಹರಿಸುತ್ತಾ, ಮಕ್ಕಳ ಫಿಸಿಯೋ ತೆರಪಿಯಲ್ಲಿ ತನ್ಮಯತೆಯಿಂದ ಮುಳುಗಿದ್ದ ಮಹಾನುಭಾವ ಸೈಯದ್ ಖಾನ್ ಅವರನ್ನು ಪ್ರಥಮ ಬಾರಿಗೆ ಕಂಡ ಧನ್ಯತೆ ಅನುಭವಿಸಿದೆ.
ಮುಂದೆ ಹಲವು ಬಾರಿ ಅವರ ನೇತೃತ್ವದಲ್ಲಿ ವಿವೇಕಾನಂದ ಸೇವಾಶ್ರಮದ ಬೆಂಬಲದಲ್ಲಿ ನಡೆಯುತ್ತಿರುವ ವಿಶೇಷ ಮಕ್ಕಳ ಕುರಿತಾದ ಚಟುವಟಿಕೆಗಳು, ಗ್ರಾಮೀಣ ಮಕ್ಕಳ ರಜೆ ಶಿಬಿರಗಳು,ಗ್ರಾಮೀಣ ಹೆಣ್ಣುಮಕ್ಕಳು ಸ್ವಾವಲಂಬನೆ ಗಳಿಸಲು ಅವರನ್ನು ವಿವಿಧ ರೀತಿಯಲ್ಲಿ ಅತ್ಯಂತ ಸಭ್ಯ ವಾತಾವರಣದಲ್ಲಿ ಬೆಂಬಲಿಸುವುದು, ಹೀಗೆ ತಮ್ಮ ಎಲ್ಲ ನಡೆ ನುಡಿ ಮತ್ತು ಪ್ರತಿ ಕಾರ್ಯದಲ್ಲಿ ಸುಸಂಸ್ಕೃತ ನಡೆಯನ್ನು ಮನದಟ್ಟು ಮಾಡಿಸುತ್ತಿದ್ದ ವ್ಯಕ್ತಿ ಸೈಯದ್ ಖಾನ್. ಹೀಗಾಗಿ ನನಗೆ ಅವರ ಕುರಿತು ಅಪಾರ ಗೌರವ.
ಸೈಯದ್ ಖಾನ್ ಬಾಬು ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ಶ್ರೀ ಸರ್ದಾರ್ ಖಾನ್ ಹಬೀಬ್ ಜಾನ್ ದಂಪತಿಗಳ ಮೂರು ಗಂಡು ಮಕ್ಕಳಲ್ಲಿ ಮೊದಲ ಮಗನಾಗಿ 1969 ವರ್ಷದ ಏಪ್ರಿಲ್ 20 ರಂದು ಜನಿಸಿದರು. ತಮ್ಮ ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು ಕಷ್ಟಪಟ್ಟು ಜೀವನ ನಡೆಸುವುದರ ಜೊತೆಗೆ ಮೈಸೂರಿನ ಮಹಾರಾಜ ಸಂಜೆಕಾಲೇಜಿನಲ್ಲಿ ಪದವಿ ಶಿಕ್ಷಣ ಮತ್ತು ಮುಕ್ತ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಓದಿನ ದಿನಗಳಲ್ಲೇ ವಿದ್ಯಾರ್ಥಿ ಸಂಘ ಮತ್ತು ಕಾಲೇಜು ವಿದ್ಯಾರ್ಥಿಗಳ ನಾಟಕರಂಗದ ಪ್ರತಿನಿಧಿಯಾಗಿ ಹಲವು ನಾಟಕಗಳ ಅಭಿನಯ ಮತ್ತು ನಿರ್ದೇಶನದಲ್ಲಿ ಸಕ್ರಿಯರಾಗಿದ್ದರು.
ಜ್ಞಾನ ಬುತ್ತಿ ಮತ್ತಿತರ ಸಂಘ ಸಂಸ್ಥೆಗಳು ಮತ್ತು ಸಾಹಿತ್ಯ ಪರಿಷತ್ತಿನ ಕನ್ನಡ ಕಾರ್ಯಕ್ರಮಗಳ ಅನುಷ್ಠಾನದಲ್ಲಿಯೂ ಸೈಯದ್ ಖಾನ್ ಸೇವೆ ಸಲ್ಲಿಸುತ್ತಾ ಬಂದರು.
1994ರಲ್ಲಿ ಸಹ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಸ್ಥಾಪನೆಯಲ್ಲಿ ಪಾತ್ರವಹಿಸಿ, ಬೆಳಗೊಳ ಗ್ರಾಮದಲ್ಲಿ ಇಡೀ ಜಿಲ್ಲೆಯಲ್ಲಿಯೇ ಶುದ್ಧ ಕನ್ನಡ ಪ್ರಾಥಮಿಕ ಶಾಲೆ ಸ್ಥಾಪನೆ ಆಗುವಂತೆ ಪಾತ್ರವಹಿಸಿದರು.
ಕನ್ನಡ ಸಾಹಿತ್ಯ ಲೋಕದಲ್ಲಿ ಅಪಾರ ಶ್ರದ್ಧೆ ಹೊಂದಿರುವ ಸೈಯದ್ ಖಾನ್ ದ.ರಾ.ಬೇಂದ್ರೆ ಯವರ ನಿರಾಭರಣ ಸುಂದರಿ ವಿಮರ್ಶೆ, ರಾಘವಾಂಕನ ಹರಿಶ್ಚಂದ್ರ ಕಾವ್ಯ ವಿಮರ್ಶೆ, ಸೋಮನಾಥ ಚರಿತ್ರೆ ವಿಮರ್ಶೆ, ಮಾಸ್ತಿಯವರ ಕಥಾ ಸಂಕಲನ ಒಂದು ನೋಟ, ಲಗಾಮು ನಾಟಕ ಮುಂತಾದ ಬರಹಗಳನ್ನೂ ಪ್ರಕಟಿಸಿದ್ದಾರೆ. ಇವರ 'ಪ್ರೇಮ ಪ್ರಪಾತ' ಕಾದಂಬರಿ ದಾರವಾಹಿಯಾಗಿ ಪ್ರಕಟಗೊಂಡಿದೆ.
ನಿರಂತರ ಕಾವ್ಯ ಗೋಷ್ಠಿಗಳಲ್ಲಿ ಕವನ ವಾಚನದಲ್ಲಿ ಪಾಲ್ಗೊಳ್ಳುತ್ತ ಬಂದ ಸೈಯದ್ ಖಾನ್ ಪತ್ರಿಕೆಗಳಲ್ಲಿ ಪ್ರವಾಸ ಮತ್ತಿತರ ವಿಶೇಷ ಲೇಖನಗಳನ್ನು ಪ್ರಕಟಿಸಿದ್ದಾರೆ.
ಸರ್ಕಾರಿ ಪ್ರಾಥಮಿಕ ಶಿಕ್ಷಕರಾಗಿ 1998 ರಲ್ಲಿ ಸೇರ್ಪಡೆಗೊಂಡ ಸೈಯದ್ ಖಾನ್, ನಂತರ ವಿಶೇಷ ಶಿಕ್ಣಣದಲ್ಲಿ ಪದವಿ ಪಡೆದು ಸಮನ್ವಯ ಸಂಪನ್ಮೂಲ ಶಿಕ್ಷಕರಾಗಿ ಶ್ರೀರಂಗಪಟ್ಟಣದ ತಾಲ್ಲೂಕು ಸಂಪನ್ಮೂಲ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಕಲಾಂಗ ಮಕ್ಕಳ ಬಗ್ಗೆ ವಿಶೇಷ ಅಧ್ಯಯನ, ಇಲಾಖೆಯ ಹಲವಾರು ತರಬೇತಿ ಕೈಪಿಡಿಗಳಲ್ಲಿ ರಾಷ್ಟ್ರ,ರಾಜ್ಯ, ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ, ಇಲಾಖೆಯ ಟೆಲಿಕಾನ್ ಫರೆನ್ಸ್ ಗಳ ತರಬೇತಿದಾರರಾಗಿ ಕಾರ್ಯ ಮುಂತಾದ ಅನೇಕ ಚಟುವಟಿಕೆಗಳಲ್ಲಿ ಸೈಯದ್ ಖಾನ್ ನಿರಂತರ ಕ್ರಿಯಾಶೀಲರು.
ತಮ್ಮ ಪರಿಸರದಲ್ಲಿ. ಶಾಲಾ ಸಿದ್ಧತಾ ಕೇಂದ್ರಗಳಿಗೆ ಹೊಸ ಭಾಷ್ಯ ಬರೆದ ಕೀರ್ತಿ ಹೊಂದಿರುವ ಸೈಯದ್ ಖಾನ್, ತಮ್ಮದೇ ಸಂಪನ್ಮೂಲ ತಂಡ ಕಟ್ಟಿಕೊಂಡು ಸಹಾಯಾರ್ಥ ಸಂಘ ಸಂಸ್ಥೆಗಳ ಜೊತೆಗೂಡಿ ಶಿಕ್ಣಣವಂಚಿತ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಕಾಯಕದಲ್ಲಿ ಮತ್ತು ಗ್ರಾಮೀಣ ಯುವಜನತೆಯನ್ನು ಸ್ವಾವಲಂಬಿಗಳಾಗಿಸುವ ನಿಟ್ಟಿನಲ್ಲಿ ನಿರಂತರ ಕ್ರಿಯಾಶೀಲರಾಗಿದ್ದಾರೆ.
ಸೈಯದ್ ಖಾನ್ ಅವರಿಗೆ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯಿಂದ 2022-23ನೇ ಸಾಲಿನ ಮಂಡ್ಯ ಜಿಲ್ಲೆಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸಂದಿದೆ.
ಸಮಾಜಸೇವಕನೆಂಬ ಯಾವುದೇ ಸೋಗಿಲ್ಲದೆ ನೇರ ಸಮಾಜಮುಖಿಯಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿರುವ ಅಪರೂಪದ ಕರ್ಮಯೋಗಿ ನಮ್ಮ ಸೈಯದ್ ಖಾನ್
A true social worker and my affectionate friend Syed Khan
ಕಾಮೆಂಟ್‌ಗಳು