ಮಾಸ್ತಿ ಭವ್ಯ ಲೋಕ
ಮಾಸ್ತಿ 'ಭಾವ' ಮತ್ತು 'ಸಣ್ಣ ಕತೆಗಳ' ಭವ್ಯ ಲೋಕ
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅಂದರೆ ಅದೊಂದು ಪ್ರಶಾಂತ ಸಾಗರ. ನನಗೆ ಇದುವರೆಗೆ ಓದಲು ಸಾಧ್ಯವಾಗಿರುವುದು ಅವರ 100 ಸಣ್ಣ ಕತೆಗಳ 5 ಸಂಪುಟಗಳು, ನೀಳ್ಗತೆ ‘ಸುಬ್ಬಣ್ಣ’, ಆತ್ಮ ಚರಿತ್ರೆಯ ಮೂರು ಸಂಪುಟಗಳಾದ ‘ಭಾವ’ ಮತ್ತು ಅವರ ಎರಡು ಕಾದಂಬರಿಗಳಾದ ‘ಚೆನ್ನಬಸವ ನಾಯಕ’ ಮತ್ತು ‘ಚಿಕ್ಕವೀರ ರಾಜೇಂದ್ರ’. ಅವರ ಇನ್ನಿತರ ಬರಹಗಳಾದ ನಾಟಕ, ಕಾವ್ಯ, ಇತ್ಯಾದಿಗಳಲ್ಲಿ ಒಂದಷ್ಟು ದೃಶ್ಯವಾಗಿ, ಶ್ರವ್ಯವಾಗಿ ನೋಡಿದ್ದು ಕೇಳಿದ್ದು ಒಂದಿಷ್ಟು- ಅಷ್ಟು, ಅಷ್ಟೇ.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು 1910-11ರ ಸುಮಾರಿನಲ್ಲೇ ತಮ್ಮ ‘ರಂಗನ ಮದುವೆ’ ಸಣ್ಣ ಕತೆಯನ್ನು ಬರೆದರಂತೆ. ನಿಜಗಲ್ಲಿನ ರಾಣಿ, ಒಂದು ಹಳೆಯ ಕತೆ, ಕಾಮನ ಹಬ್ಬದ ಒಂದು ಕತೆ, ಮೊಸರಿನ ಮಂಗಮ್ಮ, ಜೋಗ್ಯೋರ ಅಂಜಪ್ಪನ ಕೋಳಿ ಕಥೆ, ವೆಂಕಟಶಾಮಿಯ ಪ್ರಣಯ, ಕಲ್ಮಾಡಿಯ ಕೋಣ ಹೀಗೆ ಅವರ ಪ್ರತೀ ಕತೆಯೂ ವಿಶಿಷ್ಟವಾದದ್ದು.
ಮಾಸ್ತಿಯವರ ಕಥಾ ನಿರೂಪಣೆ ಅಂತರಂಗಕ್ಕೆ ಹತ್ತಿರವಾಗುವಂತದ್ದು. ಸುಮಾರು 70 ವರ್ಷಗಳಷ್ಟು ಸುದೀರ್ಘಕಾಲದಲ್ಲಿ ಅವರು 120 ಕನ್ನಡ ಗ್ರಂಥಗಳು ಮತ್ತು 17 ಇಂಗ್ಲಿಷ್ ಗ್ರಂಥಗಳನ್ನು ಬರೆದವರು. ತಮ್ಮ ಜೀವನ ಪತ್ರಿಕೆಯಲ್ಲಿ ತಾವು ಬರೆದದ್ದಲ್ಲದೆ ಅನೇಕರಿಗೆ ಬೆಂಬಲ ಕೊಟ್ಟು ಬರೆಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಅವರು ಮಾಡಿದ ಕೆಲಸ ಕೂಡಾ ಅಪಾರ. ಅವರು ಮಾಡಿದ ವಿಸ್ತೃತ ಬರಹಗಳಲ್ಲಿ ಇಂತದ್ದಿಲ್ಲ ಎಂದು ಹೇಳುವುದು ಕಷ್ಟವೇನೋ. ಬಡತನ, ಸಿರಿತನ, ಸಾಮಾನ್ಯ ಮನಗಳಲ್ಲಿನ ಸೊಬಗು, ಜಾರುವ ಮನ, ಪರಿಸ್ಥಿತಿ ತರುವ ನೋವು, ಕಾಠಿಣ್ಯ ಹೀಗೆ ಎಂತದ್ದೇ ಗುಣಗಳನ್ನೂ ಸರಳವಾಗಿ ಕಣ್ಣಿಗೆ ಕಾಣುವಂತೆ ಹತ್ತಿರಕ್ಕೆ ತಂದುಕೊಡುವಂತಹ ಅವರ ಬರಹ, ತಾನು ಯಾವುದೇ ಗುಣವನ್ನೂ ಭಿತ್ತರಿಸುವಾಗಲೂ ತನ್ನ ಸಹಜ ಸೌಮ್ಯತೆಯಿಂದ ದೂರನಿಂತಂತೆ ಭಾಸವಾಗುವುದಿಲ್ಲ. ಅಂತಹ ಸಮಸ್ಥಿತಿಯ ಮಾನವೀಯ ಗುಣ ಅವರ ಎಲ್ಲ ಬರಹಗಳ ಹಿಂದೆ ಹಿಂದೆ ನಿಂತು ಇವುಗಳೆಲ್ಲವನ್ನೂ ನಿದರ್ಶಿಸಿರುವುದನ್ನು ಕಂಡಂತೆನಿಸುತ್ತದೆ. ಅವರು ಜೀವನದಲ್ಲಿ ಬೆಳೆದ ಪರಿ ಅದರಲ್ಲಿ ತುಂಬಿರುವ ಮೌಲ್ಯಗಳೇ ಅಂತಹದ್ದು. ಹೀಗಾಗಿ ನನಗೆ ಮಾಸ್ತಿಯವರ ಎಲ್ಲ ಕಥೆಗಳು ಮತ್ತು ಕಾದಂಬರಿಗಳಷ್ಟೇ ಅವರ ಜೀವನಚರಿತ್ರೆಯಾದ ಮೂರು ಸಂಪುಟಗಳ 'ಭಾವ' ಕೂಡಾ ಅತ್ಯಂತ ಆಪ್ತತೆ ಕೊಟ್ಟ ಓದು.
ರಂಗಸಾಮಿ, ಮೊಸರಿನ ಮಂಗಮ್ಮ, ಮೇಷ್ಟ್ರು, ಬಾದಷಹ, ನಿಜಗಲ್ಲಿನ ರಾಣಿ, ಆಚಾರ್ಯರ ಪತ್ನಿ, ಅಲೆಗ್ಸಾಂಡರ, ನೆಪೋಲಿಯನ್, ಷೇಕ್ಸ್ ಪಿಯರ್, ಟಾಲ್ ಸ್ಟಾಯ್, ಕುಚೇಲ, ರಾಜಋಷಿ, ಟಾಂಗಾ ಹುಸೇನ, ಬೇಬಿಲಾನ್ ಕುಮಾರಿ ಹೀಗೆ ಮಾಸ್ತಿಯವರ ಅಸಂಖ್ಯಾತ ಸೃಷ್ಟಿಯಲ್ಲಿರುವ ಯಾವುದೇ ಪಾತ್ರಗಳೇ ಆಗಲಿ ನಮ್ಮ ನಡುವೆಯೇ ನಿಂತು ತಮ್ಮ ಕಥಾನಕವನ್ನು ದೃಷ್ಟಾಂತವನ್ನಾಗಿಸುತ್ತಿರುವರೇನೋ ಎಂಬಂತೆ ಗಾಢ ಭಾವ ಹುಟ್ಟಿಸುವ ಅನನ್ಯ ಪರಿ ಮಾಸ್ತಿಯವರ ಹೃದಯತುಂಬಿದ ಲೇಖನಿಯದ್ದು.
ವಿಶ್ವವೆಲ್ಲವನ್ನೂ ಎಲ್ಲೋ ಗುಣಭಾವಗಳ ಒಂದೇ ಛತ್ರದಡಿಯಲ್ಲಿ ತಂದು ನಿಲ್ಲಿಸಿರುವ ಅಪೂರ್ವ ಕೌಶಲ್ಯ ಮತ್ತು ಅದಕ್ಕೂ ಮೀರಿದ ಹೃದಯ ಸಾಮ್ರಾಜ್ಯ ಈ ಕರ್ಮಯೋಗದಲ್ಲಿದೆ.
ಕಾಮೆಂಟ್‌ಗಳು