ಮನೋಜ್ ಕುಮಾರ್
ಮನೋಜ್ ಕುಮಾರ್
ಹಿಂದಿ ಚಲನಚಿತ್ರ ಲೋಕದಲ್ಲಿ ದೇಶಭಕ್ತಿ ಪ್ರಧಾನ ಚಿತ್ರಗಳಿಗೆ ಹೆಸರಾದವರು ಮನೋಜ್ ಕುಮಾರ್. ಅವರನ್ನು 'ಭಾರತ್ ಕುಮಾರ್' ಎಂದೇ ಕರೆಯುವಷ್ಟು ಅವರು ಈ ನಿಟ್ಟಿನಲ್ಲಿ ಪ್ರಸಿದ್ಧಿ ಪಡೆದಿದ್ದರು. ಪ್ರೇಮಗೀತೆಗಳಿಗೆ ನಟಿಸುವಾಗಲೂ ಆತ ನಟಿಯರಿಂದ ಸಾಕಷ್ಟು ದೂರವಿದ್ದು ನಟಿಸುತ್ತಿರುವಂತೆ ಕಾಣುತ್ತಿದ್ದ ಅಪರೂಪದ ನಟ.
ಮನೋಜ್ ಕುಮಾರ್ ಹರಿಯಾಲಿ ಔರ್ ರಾಸ್ತಾ, ವೋಹ್ ಕೌನ್ ಥೀ, ಹಿಮಾಲಯ್ ಕಿ ಗೋದ್ ಮೇ, ದೋ ಬದನ್, ಉಪಕಾರ್, ಪತ್ಥರ್ ಕಿ ಸನಮ್, ನೀಲ್ ಕಮಲ್, ಪೂರಬ್ ಔರ್ ಪಶ್ಚಿಮ್, ಬೇಇಮಾನ್, ರೋಟಿ ಕಪಡಾ ಔರ್ ಮಕಾನ್, ದಸ್ ನಂಬ್ರಿ, ಸಂನ್ಯಾಸಿ, ಕ್ರಾಂತಿ ಚಿತ್ರಗಳಲ್ಲಿನ ಉತ್ತಮ ಅಭಿನಯಕ್ಕೆ ಪ್ರಸಿದ್ಧರಾದವರು.
ಮನೋಜ್ ಕುಮಾರ್ ಈಗಿನ ಪಾಕಿಸ್ತಾನದ ಭಾಗವಾಗಿರುವ ಅಬ್ಬೊಟ್ಟಾಬಾದ್ ಎಂಬಲ್ಲಿ 1937ರ ಜುಲೈ 24ರಂದು ಜನಿಸಿದರು. ತಂದೆ ತಾಯಿ ಇಟ್ಟ ಹೆಸರು ಹರಿಕಿಶನ್ ಗಿರಿ ಗೋಸ್ವಾಮಿ. ದೇಶ ವಿಭಜನೆಯ ಸಂದರ್ಭದಲ್ಲಿ ಇವರ ಕುಟುಂಬ ದೆಹಲಿಗೆ ವಲಸೆ ಬಂತು. ವಿಜಯ್ ನಗರ್ ಕಿಂಗ್ಸ್ ವೇ ಶಿಬಿರದಲ್ಲಿ ನಿರಾಶ್ರಿತರಾಗಿ ದಿನಗಳನ್ನು ಕಳೆದು, ಕರಾಳ ಹಿಂಸಾಚಾರಗಳು ನಿಂತ ಬಳಿಕ ನವದೆಹಲಿಯ ಹಳೇ ರಾಜೇಂದ್ರ ನಗರಕ್ಕೆ ಬಂದು ನೆಲೆಸಿದರು. ದೆಹಲಿಯ ಹಿಂದೂ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದ ಮೇಲೆ ಗೋಸ್ವಾಮಿ ಚಿತ್ರರಂಗಕ್ಕೆ ಆಕರ್ಷಿತರಾದರು.
ತರುಣ ಗೋಸ್ವಾಮಿ ಬಾಲಿವುಡ್ನ ಸ್ಟಾರ್ ಗಳಾಗಿದ್ದ ದಿಲೀಪ್ ಕುಮಾರ್, ಅಶೋಕ್ ಕುಮಾರ್ ಹಾಗೂ ಕಾಮಿನಿ ಕೌಶಾಲ್ ನಟಿಸಿದ್ದ ಶಬ್ನಮ್ (1949 ವರ್ಷ) ಚಿತ್ರದಲ್ಲಿನ ದಿಲೀಪ್ ಕುಮಾರ್ ನಟನೆಯನ್ನು ಕಂಡು ತಮ್ಮ ಹೆಸರನ್ನು ಮನೋಜ್ ಕುಮಾರ್ ಎಂದು ಬದಲಾಯಿಸಿಕೊಂಡರು.
1957ರಲ್ಲಿ ಮನೋಜ್ ಕುಮಾರ್ ಫ್ಯಾಶನ್ ಎಂಬ ಹಿಂದಿ ಸಿನಿಮಾದಲ್ಲಿ ನಟಿಸಿದ್ದರು. 1960ರಲ್ಲಿ ಕಾಂಚ್ ಕೀ ಗುಡಿಯಾ ಚಿತ್ರದಲ್ಲಿ ಸೈದಾ ಖಾನ್ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 1962ರಲ್ಲಿ ಹರಿಯಾಲಿ ಔರ್ ರಾಸ್ತಾ ಸಿನಿಮಾದಲ್ಲಿ ಮಾಲಾ ಸಿನ್ಹಾಗೆ ನಾಯಕನಾಗಿ ನಟಿಸಿದರು.
1960ರಲ್ಲಿ ರೋಮ್ಯಾಂಟಿಕ್ ಸಿನಿಮಾಗಳಾದ ಹನಿಮೂನ್, ಅಪ್ನಾ ಬನಾಕೆ ದೇಖೋ, ನಕಲಿ ನವಾಬ್, ಪತ್ಥರ್ ಕೆ ಸನಂ ಹಾಗೂ ಸಾಮಾಜಿಕ ಕಳಕಳಿಯ ಶಾದಿ, ಪೆಹಚಾನ್ ಔರ್ ಆದ್ಮಿ, ಥ್ರಿಲ್ಲರ್ ಸಿನಿಮಾಗಳಾದ ಗುಮ್ ನಾಮ್, ಅನಿತಾ, ವೋ ಕೌನ್ ತಿ ಮುಂತಾದವು ಮನೋಜ್ ಕುಮಾರ್ ಅವರ ಯಶಸ್ವಿ ಚಿತ್ರಗಳಾಗಿದ್ದವು.
ಮನೋಜ್ ಕುಮಾರ್ ಚಲನಚಿತ್ರ ಜೀವನದಲ್ಲಿ ದೊಡ್ಡ ತಿರುವು 1965ರಲ್ಲಿ ಬಿಡುಗಡೆಯಾದ 'ಶಾಹೀದ್'. ಈ ಚಿತ್ರ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್ ಕಥಾ ಹಂದರವನ್ನು ಹೊಂದಿತ್ತು. ಇಲ್ಲಿಂದ ಅವರ ಜನಪ್ರಿಯ ದೇಶಭಕ್ತಿ ಚಿತ್ರಗಳ ಯುಗ ಆರಂಭಗೊಂಡಿತು.
1965ರಲ್ಲಿ ಭಾರತ, ಪಾಕಿಸ್ತಾನ ಯುದ್ಧ ಮುಗಿದ ಬಳಿಕ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಮನೋಜ್ ಕುಮಾರ್ ಅವರಿಗೆ ಜನಪ್ರಿಯ ಘೋಷವಾಕ್ಯವಾದ ಜೈ ಜವಾನ್, ಜೈ ಕಿಸಾನ್ ಆಧಾರಿತ ಸಿನಿಮಾ ನಿರ್ದೇಶಿಸಲು ಪ್ರೇರಣೆ ನೀಡಿದರು.
ಹೀಗೆ ಮನೋಜ್ ಕುಮಾರ್ 1967ರಲ್ಲಿ 'ಉಪಕಾರ್' ಎಂಬ ದೇಶಪ್ರೇಮದ ಪ್ರಸಿದ್ಧ ಚಿತ್ರವನ್ನು ನಿರ್ದೇಶಿಸಿದರು. ಇದರಲ್ಲಿ ಮನೋಜ್ ಕುಮಾರ್ ಅವರದು ಸೈನಿಕ ಹಾಗೂ ರೈತನ ಪಾತ್ರ. ಈ ಚಿತ್ರದಲ್ಲಿ ಗುಲ್ಜನ್ ಬಾವ್ರಾ ರಚಿಸಿ, ಕಲ್ಯಾಣ್ಜಿ ಆನಂದಜಿ ಸಂಗೀತ ಸಂಯೋಜನೆಯಲ್ಲಿ ಮಹೇಂದ್ರ ಕುಮಾರ್ ಹಾಡಿರುವ ಮೇರೆ 'ದೇಶ್ ಕಿ ಧರ್ತಿ' ಗೀತೆಯ ಚಿತ್ರಣ ಮತ್ತು ಮಾಧುರ್ಯ ಇಂದೂ ನೋಡುವಾಗ ಮತ್ತು ಕೇಳುವಾಗ ಸಹಾ ಸಂತಸ ಮತ್ತು ದೇಶಾಭಿಮಾನಗಳನ್ನು ಉಕ್ಕಿಸುತ್ತದೆ. ಇಂತಹ ಹಾಡುಗಳ ಚಿತ್ರಣಗಳನ್ನು ಮುಂದೆ ಎಲ್ಲ ಭಾರತೀಯ ಭಾಷಾಚಿತ್ರಗಳೂ ಒಂದಿಲ್ಲೊಂದು ರೀತಿಯಲ್ಲಿ ತೋರಲು ಪ್ರಾರಂಭಿಸಿದ್ದವು.
1970ರಲ್ಲಿ ಪೂರಬ್ ಔರ್ ಪಶ್ಚಿಮ್, 1972ರಲ್ಲಿ ಬೇಇಮಾನ್, 1972ರಲ್ಲಿ ಶೋರ್ ಮುಂತಾದವೂ ಭರ್ಜರಿ ಯಶಸ್ಸು ಕಂಡವು.
ರೋಟಿ ಕಪಡಾ ಔರ್ ಮಕಾನ್, ಸನ್ಯಾಸಿ ಹಾಗೂ ದಸ್ ನಂಬರಿ(1976) ಚಿತ್ರಗಳೂ ಯಶಸ್ವಿಯಾದವು.
1981ರಲ್ಲಿ ಮನೋಜ್ ಕುಮಾರ್ ತಾವೇ ನಿರ್ಮಿಸಿ ನಿರ್ದೇಶಿಸಿದ್ದ 'ಕ್ರಾಂತಿ' ಚಿತ್ರದಲ್ಲಿ ಮನೋಜ್ ಕುಮಾರ್ ಜೊತೆಗೆ ದಿಲೀಪ್ ಕುಮಾರ್, ಶಶಿಕಪೂರ್, ಹೇಮಾ ಮಾಲಿನಿ ಸೇರಿದಂತೆ ಘಟಾನುಘಟಿ ಕಲಾವಿದರ ದಂಡೇ ಅಭಿನಯಿಸಿತ್ತು. ಮುಂದೆ ಮನೋಜ್ ಕುಮಾರ್ ಅವರ ಚಿತ್ರಗಳು ಪ್ರಧಾನವಾಗಿ ಎಂಬಂತೆ ಯಶಸ್ಸು ಕಂಡದ್ದು ಕಡಿಮೆ.
ಮನೋಜ್ ಕುಮಾರ್ ಅವರು ತಮ್ಮ ಬಹುಚಿತ್ರಗಳಲ್ಲಿ ಪ್ರೇಮನಾಥ್, ಪ್ರಾಣ್, ಪ್ರೇಮ್ ಚೋಪ್ರಾ ಮತ್ತು ಹೇಮಾ ಮಾಲಿನಿ ಅವರಿಗೆ ಹೆಚ್ಚು ಅವಕಾಶಗಳನ್ನು ನೀಡಿದ್ದರು.
ಹಲವಾರು ಫಿಲಂ ಫೇರ್ ಪ್ರಶಸ್ತಿಗಳು, ಪದ್ಮಶ್ರೀ ಪ್ರಶಸ್ತಿ, ಉಪಕಾರ್ ಚಿತ್ರಕ್ಕೆ ಎರಡನೇ ಅತ್ಯುತ್ತಮ ಚಿತ್ರ ರಾಷ್ಟ್ರೀಯ ಪುರಸ್ಕಾರ ಮತ್ತು ಚಲನಚಿತ್ರರಂಗದಲ್ಲಿನ ಮಹತ್ವದ ಕೊಡುಗೆಗಳಿಗಾಗಿ ಸಲ್ಲುವ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರವೂ ಸೇರಿದಂತೆ ಮನೋಜ್ ಕುಮಾರ್ ಅವರಿಗೆ ಅನೇಕ ಗೌರವಗಳು ಸಂದಿವೆ.
On the birth day of Manoj Kumar known for patriotic films
ಕಾಮೆಂಟ್‌ಗಳು