ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀವಿದ್ಯಾ


 ಶ್ರೀವಿದ್ಯಾ


ಶ್ರೀವಿದ್ಯಾ ಚಲನಚಿತ್ರರಂಗದ ಅತ್ಯುತ್ತಮ ಕಲಾವಿದೆಯರಲ್ಲೊಬ್ಬರು. 

ಶ್ರೀವಿದ್ಯಾ 1953ರ ಜುಲೈ 24ರಂದು ಚೆನ್ನೈನಲ್ಲಿ ಜನಿಸಿದರು. ತಾಯಿ ಸಂಗೀತ ಕ್ಷೇತ್ರದಲ್ಲಿ ಮಹಾನ್ ಹೆಸರಾದ ಡಾ. ಎಂ. ಎಲ್. ವಸಂತಕುಮಾರಿ.  ತಂದೆ ಕೃಷ್ಣಮೂರ್ತಿ ತಮಿಳು ಚಿತ್ರರಂಗದಲ್ಲಿ ಹಾಸ್ಯ ಕಲಾವಿದರಾಗಿದ್ದರು. ತಂದೆಗೆ  ಅನಾರೋಗ್ಯವಾಗಿ ಕುಟುಂಬ ಸಂಕಷ್ಟದಲ್ಲಿತ್ತು.  ತಾಯಿಗೂ ಆ ಸಮಯದಲ್ಲಿ ಸಂಗೀತಕ್ಷೇತ್ರ ಇನ್ನೂ ವ್ಯವಸ್ಥಿತ ನೆಲೆ ನೀಡಿರಲಿಲ್ಲ.  ಹೀಗೆ ಶ್ರೀವಿದ್ಯಾ ಚಿಕ್ಕವಯಸ್ಸಿನಲ್ಲೇ ಅಭಿನಯಕ್ಕೆ ಕಾಲಿರಿಸಿದರು.

1967ರಲ್ಲಿ ಶಿವಾಜಿ ಗಣೇಶನ್ ನಟಿಸಿದ್ದ 'ತಿರುವರುತ್ತಚೆಲ್ವರ್' ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ ಶ್ರೀವಿದ್ಯಾ, 1969ರಲ್ಲಿ ಮಲಯಾಳಂನ 'ಕುಮಾರ ಸಂಭವಂ' ಚಿತ್ರದಲ್ಲಿ ನೃತ್ಯ ಕಲಾವಿದೆಯಾಗಿ ಮತ್ತು ದಾಸರಿ ನಾರಾಯಣರಾವ್ ಅವರ 'ತಾತಾ ಮನವುಡು' ತೆಲುಗು ಚಿತ್ರಗಳಲ್ಲಿ ನಟಿಸಿದರು. ಮುಂದೆ ಕೆ, ಬಾಲಚಂದರ್ ಅವರ ತಮಿಳಿನ ನೂಟ್ರಕ್ಕು ನೂರು, ವೆಳ್ಳಿ ವಿಯಾ, ಸೊಲ್ಲತ್ತಾನ್ ನಿನೈಕ್ಕಿರೇನ್, ಅಪೂರ್ವ ರಾಗಂಗಳ್ ಮುಂತಾದವು ಅವರಿಗೆ ಪ್ರಸಿದ್ಧಿ ತಂದವು. ಮುಂದೆ ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷಾ ಚಿತ್ರಗಳಲ್ಲೂ ನಿರಂತರವಾಗಿ ನಟಿಸಿ ಪ್ರಸಿದ್ಧಿ ಪಡೆದರು.  ಕೆಲವು ಚಿತ್ರಗಳಲ್ಲಿ ಹಾಡನ್ನೂ ಹಾಡಿದರು.  ಕನ್ನಡದಲ್ಲಿ ಅವರು ನಟಿಸಿರುವ ಚಿತ್ರಗಳಲ್ಲಿ ಎರಡು ಮುಖ, ಗೆದ್ದವಳು ನಾನೇ, ಸುಪ್ರಭಾತ, ಅಶ್ವಮೇಧ, ಎಕೆ 47, ಸೈನಿಕ ಮುಂತಾದವು ಸೇರಿವೆ.

ಭಾವನಾತ್ಕಕ ಅಭಿನಯದಲ್ಲಿ ಅತ್ಯಂತ ಸರಳ ಸುಂದರ ಅಭಿವ್ಯಕ್ತಿ ಹೊಂದಿದ್ದ ಶ್ರೀವಿದ್ಯಾ ಅವರ ಅಪೂರ್ವ ರಾಗಂಗಳ್, ಸುಪ್ರಭಾತ, ಸ್ವಾತಿ ತಿರುನಾಳ್ ಮುಂತಾದ ಚಿತ್ರಗಳಲ್ಲಿನ ಅಭಿನಯ ಇಂದೂ ಮನದಲ್ಲಿ ನಿಂತಿದೆ.

ಶ್ರೀವಿದ್ಯಾ ಹಲವು ನೂರು ಚಿತ್ರಗಳಲ್ಲಿ ನಟಿಸಿದರು.  ನಮಗೆ ತೆರೆಯ ಮೇಲೆ ಇಷ್ಟವಾಗಿ ಕಾಣುವಂತೆ ನಟಿಸುವ ಕಲಾವಿದರ ವೈಯಕ್ತಿಕ ಬದುಕು ವ್ಯಥೆಯ ಕಥೆಯಾಗಿರುತ್ತದೆ ಎಂಬುದು ದುಃಖದ ಸಂಗತಿ.  ಶ್ರೀವಿದ್ಯಾ ಪ್ರೇಮಿಸಿದ ಕಮಲಹಾಸನ್ ಹಲವು ಹೆಣ್ಣುಗಳ ಹಿಂದೆ ಹಾರಿದ.  ಈಕೆ ಜಾರ್ಜ್ ಥಾಮಸ್ ಎಂಬ ಸಹಾಯಕ ನಿರ್ದೇಶಕನನ್ನು ಮದುವೆಯಾಗಲು ಆತನ ಧರ್ಮಕ್ಕೂ ಕಾಲಿಟ್ಟು, ಸಿನಿಮಾ ಲೋಕವನ್ನೇ ಬಿಟ್ಟು ಬದುಕಲ್ಲಿ ನೆಲೆ ಆಶಿಸಿದ್ದರು. ಆತನಿಗೆ ಹಣಬೇಕಿತ್ತು.  ನಟನೆಯಲ್ಲಿದ್ದು ಸಂಪಾದಿಸಲು ಒತ್ತಾಯಿಸಿದ. ಆತನಿಗೆ ಹಣವೇ ಮುಖ್ಯ ಎಂದು ಅರಿತಾಗ ವಿಚ್ಛೇದನ ಬಯಸಿದರು.  ಆತ ಆಕೆಯ ಸಂಪತ್ತು ಮತ್ತು ಪಾರಿತೋಷಕಗಳನ್ನೂ ಕೂಡಾ ಕೊಡದೆ ತಾನಿಟ್ಟುಕೊಂಡ.  ಈಕೆ ಅವೆಲ್ಲವನ್ನೂ ಪಡೆದುಕೊಂಡು ಬದುಕಲು ಕೋರ್ಟಿನ ಮೆಟ್ಟಿಲೇರಬೇಕಾಯಿತು. ಇಷ್ಟೆಲ್ಲಾ ಜಂಜಾಟಗಳಿಂದ ಹೊರ ಬರುವ ಹೊತ್ತಿಗೆ ಈಕೆಯ ಜೀವವನ್ನು ನುಂಗಿಹಾಕಲು  ಕ್ಯಾನ್ಸರ್ ಕಾದುಕುಳಿತಿತ್ತು. ತಮ್ಮ ಕೊನೆಯ ಕಾಲ ಸನ್ನಿಹಿತ ಎಂಬುದನ್ನರಿತ ಶ್ರೀವಿದ್ಯಾ ತಮ್ಮ ಎಲ್ಲಾ ಆಸ್ತಿಯನ್ನು ತಮ್ಮ ಮನೆಯ ಕೆಲಸಗಾರರಿಗೆ ಹಾಗೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬರೆದರು.

ಚಲನಚಿತ್ರರಂಗ ಕಂಡ ಮಹಾನ್ ಪ್ರತಿಭೆ ಶ್ರೀವಿದ್ಯಾ 2006ರ ಅಕ್ಟೋಬರ್ 19ರಂದು ಈ ಲೋಕವನ್ನಗಲಿದರು. ಅವರ ಸರಳ ಸುಂದರ ಶಾಂತ ಮುಖಾರವಿಂದ ನೆನಪಿನಲ್ಲಿ ಉಳಿಯುವಂತದ್ದು.

On the birth anniversary of great actress Srividya



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ