ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರ. ಗೋ. ಕುಲಕರ್ಣಿ



ಪ್ರ. ಗೋ. ಕುಲಕರ್ಣಿ


ಪ್ರಹ್ಲಾದ ಗೋವಿಂದ ಕುಲಕರ್ಣಿಯವರು ಮಹಾನ್ ವ್ಯಾಕರಣ‍ ವಿದ್ವಾಂಸರಾಗಿ ಮತ್ತು ಶಾಸ್ತ್ರೀಯ ಗ್ರಂಥ ರಚನಕಾರರಾಗಿ ಪ್ರಸಿದ್ಧರಾಗಿದ್ದಾರೆ.

ಪ್ರ. ಗೋ. ಕುಲಕರ್ಣಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಭಾಗೋಜಿ ಕೊಪ್ಪದ ಮನೆತನದಲ್ಲಿ 1902ರ ಜುಲೈ 17ರಂದು ಜನಿಸಿದರು. ತಂದೆ ಗೋವಿಂದ, ತಾಯಿ ರಂಗಕ್ಕ. 

ಕುಲಕರ್ಣಿ ಅವರ ಕುಟುಂಬವು ಅತ್ಯಂತ ಕಡುಕಷ್ಟದ ಸ್ಥಿತಿಯಲ್ಲಿದ್ದುದರಿಂದ ಇವರ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದವರು, ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಸೋದರಮಾವ ನಾರಾಯಣ ಪಾಟೀಲರು. ಪ್ರಾಥಮಿಕ ಶಾಲಾ ಶಿಕ್ಷಣ ಪಡೆದ ನಂತರ ಸೋದರಮಾವನಂತೆ ಶಿಕ್ಷಕರಾಗಬೇಕೆಂಬ ಆಸೆಯಿದ್ದರೂ ಧಾರವಾಡಕ್ಕೆ ಹೋಗಿ ಶಿಕ್ಷಕರ ತರಬೇತಿ ಪಡೆಯಲಾಗದೆ ಮನೆಯಲ್ಲಿಯೇ ಕುಳಿತು ಕಾಲವನ್ನು ಅಪವ್ಯಯಮಾಡದೆ ಕುಮಾರವ್ಯಾಸನ ಭಾರತ ಕಥಾಮಂಜರಿ, ಲಕ್ಷ್ಮೀಶನ ಜೈಮಿನಿ ಭಾರತ ಮತ್ತು ಕೇಶಿರಾಜನ ಶಬ್ದಮಣಿ ದರ್ಪಣ ಮುಂತಾದವುಗಳ ಅಧ್ಯಯನದಲ್ಲಿ ತೊಡಗಿದರು. ಕೆಲವರ್ಷಗಳ ನಂತರ (1919ರಲ್ಲಿ) ಧಾರವಾಡಕ್ಕೆ ತೆರಳಿ ಶಿಕ್ಷಕರ ತರಬೇತಿ  ಪಡೆದನಂತರ ಬೆಳಗಾವಿ ಜಿಲ್ಲೆಯ ಆಥಣಿ ತಾಲ್ಲೂಕಿನ ಹಲ್ಯಾಳದಲ್ಲಿ ಶಿಕ್ಷಕರಾಗಿ ನೇಮಕಗೊಂಡರು. 

ಧಾರವಾಡದಲ್ಲಿದ್ದಾಗ ಭಾಷೆ ಮತ್ತು ವ್ಯಾಕರಣ ಕಲಿಯಲು ಪ್ರೇರೇಪಿಸಿದವರು ಶಿಕ್ಷಕರಾಗಿದ್ದ ಪಂಡಿತ ಮಹದೇವ ಪ್ರಭಾಕರ ಪೂಜಾರರು. ಇದರಿಂದ ಕಾಲ್ಡವೆಲ್ ಅವರ 'ಕಂಪಾರೆಟಿವ್ ಗ್ರಾಮರ್ ಆಫ್ ದ್ರವಿಡಿಯನ್ ಲ್ಯಾಂಗ್ವೇಜಸ್’ ಗ್ರಂಥವನ್ನು ಆಳವಾಗಿ ಅಭ್ಯಸಿಸಿದರು. ಆಲೂರು ವೆಂಕಟರಾಯರ 'ಜಯಕರ್ನಾಟಕ' ಪತ್ರಿಕೆಗೆ ಹಲವಾರು ಲೇಖನಗಳನ್ನು ಬರೆದರು. ಮರಾಠಿ ಭಾಷೆಯ ವಿಷ್ಣುಶಾಸ್ತ್ರಿ ಚಿಪಳೂಣಕರರ ‘ನಿಬಂಧಮಾಲಾ’ ಮತ್ತು ಮೋರೋ  ಕೇಶವ ದಾಮ್ಲೆಯವರ ‘ಶಾಸ್ತ್ರೀಯ ಮರಾಠೀ ವ್ಯಾಕರಣ’ ಗ್ರಂಥಗಳನ್ನು ಆಳವಾಗಿ ಅಭ್ಯಸಿಸಿದನಂತರ ಕನ್ನಡ ಬರವಣಿಗೆಗೂ ಒಂದು ದಾರಿ ತೋರಿದಂತಾಗಿ ‘ನಾಣ್ಣುಡಿ’, ಕರ್ನಾಟಕ ಛಂದ:ಶಾಸ್ತ್ರ ಮತ್ತು ಕರ್ನಾಟಕ 
ಭಾಷಾಶಾಸ್ತ್ರ ಮುಂತಾದ ಗ್ರಂಥಗಳನ್ನು ರಚಿಸಿದರು. ‘ನಾಣ್ಣುಡಿ’ ಎಂಬ ಕಿರು ಹೊತ್ತಿಗೆಯಲ್ಲಿ ನಾಣ್ಣುಡಿಯ ಹಿನ್ನೆಲೆ, ಹುಟ್ಟು ಬೆಳವಣಿಗೆ, ರೂಪ ನಿಷ್ಪತ್ತಿ ಮತ್ತು ಅವುಗಳ ಮಹತ್ವದ ಬಗ್ಗೆ ಚರ್ಚಿಸಿದ್ದಾರೆ. ನಂತರ ಕರ್ನಾಟಕ ಛಂದ:ಶಾಸ್ತ್ರ ಮತ್ತು ಕರ್ನಾಟಕ ಭಾಷಾಶಾಸ್ತ್ರವನ್ನು ವಿಸ್ತರಿಸಿ ಭಾರತೀಯ ಛಂದ:ಶಾಸ್ತ್ರ ಮತ್ತು ಕನ್ನಡ ಭಾಷೆಯ ಚರಿತ್ರೆ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದರು. 

ಕನ್ನಡ ಭಾಷೆಯ ಚರಿತ್ರೆಯು ಕನ್ನಡ ಭಾಷೆಯನ್ನು ಅಭ್ಯಸಿಸುವವರಿಗೆ ಅತ್ಯಮೂಲ್ಯ ಗ್ರಂಥವಾಗಿದ್ದು ಇದರಲ್ಲಿ ಕನ್ನಡ ಪದ ವ್ಯುತ್ಪತ್ತಿ,  ಭಾಷೆಯ ಬೆಳವಣಿಗೆ, ಕನ್ನಡ ಸಾಹಿತ್ಯ ರಚನಾಕಾಲ, ಲಿಪಿಯ ಬೆಳವಣಿಗೆಗಳಲ್ಲದೆ ಕೇಶಿರಾಜನ ಶಬ್ದಮಣಿ ದರ್ಪಣ, ನಾಗವರ್ಮನ ಶಬ್ದ ಸ್ಮೃತಿ ಮತ್ತು ಭಟ್ಟಾಕಳಂಕನ ಶಬ್ದಾನುಶಾಸನ ಮುಂತಾದವುಗಳಲ್ಲಿ ನಿರೂಪಿತವಾಗಿರುವ ಕನ್ನಡ ವ್ಯಾಕರಣ ವಿವರಣೆ, ಕನ್ನಡ ವಾಕ್ಯರಚನೆ, ಕನ್ನಡ ಕೊಡುಗೆ, ಭಾರತೀಯ ವರ್ಣಮಾಲೆಯ ಬೆಳವಣಿಗೆ ಮುಂತಾದವುಗಳನ್ನು ಐದು ಭಾಗಗಳಲ್ಲಿ ಚರ್ಚಿಸಿದ್ದಾರೆ. ಭಾರತೀಯ ಛಂದ:ಶಾಸ್ತ್ರವನ್ನು ವಿವರಿಸುವಾಗ ಸಂಸ್ಕೃತ, ಪ್ರಾಕೃತ, ತೆಲುಗು, ತಮಿಳು ಪದ್ಯಗಳನ್ನು ಬಳಸಿಕೊಂಡು ಗದ್ಯ-ಪದ್ಯ, ಪದ-ಪಾದ….ಛಂದಗಳು, ಛಂದೋರೂಪಗಳು, ವೈದಿಕ ಛಂದಸ್ಸಿನ ಸ್ವರೂಪ ಮುಂತಾದವುಗಳನ್ನು ಏಳು ಭಾಗಗಳಲ್ಲಿ ವಿವರಿಸಿದ್ದಾರೆ. 

ಪ್ರಾಥಮಿಕ ಶಾಲೆಯ ಮಕ್ಕಳ ಮಧ್ಯೆಯೇ ಬೆಳೆದ ಕುಲಕರ್ಣಿಯವರು ಮಕ್ಕಳ ಮನಸ್ಸನ್ನರಿತು ಮಕ್ಕಳ ಸಾಹಿತ್ಯವನ್ನು ರಚಿಸಿದ್ದಾರೆ. ಕಿಟ್ಟು ಬೆಟ್ಟ ಹತ್ತಿದ, ರಾಜಾಹರಪಾಲ, ಪೌರಾಣಿಕ ಕತೆಗಳು ಮುಂತಾದ ಸಾಮಾನ್ಯ ಪುಸ್ತಕಗಳಲ್ಲದೆ ಸುಲಭ ಪಾಠಗಳು, ವಿವಿಧ ಜನಾಂಗಗಳು ಮತ್ತು ಸಾಮಾನ್ಯ ಜ್ಞಾನ, ವಿವಿಧ ಜನಾಂಗಗಳು – ಹಿಂದೂಸ್ತಾನ, ಭೂಗೋಳ ಪರಿಚಯ, ವಿವಿಧ ಸರಕುಗಳು, ಪ್ರಾಚೀನ ಜಗತ್ತು, ಬೆಳಗಾವಿ ಜಿಲ್ಲೆಯ ಸಾಮಾನ್ಯ ಪರಿಚಯ, ವಿಜಾಪುರ ಜಿಲ್ಲೆಯ ಸಾಮಾನ್ಯ ಪರಿಚಯ ಮುಂತಾದ ಹಲವಾರು ಪಠ್ಯ ಪುಸ್ತಕಗಳನ್ನು ರಚಿಸಿದ್ದರು. ಇದಲ್ಲದೆ ಬೆಳಗಾವಿ ಜಿಲ್ಲೆಯಲ್ಲಿ 1980ರಲ್ಲಿ ಬಸವರಾಜ ಕಟ್ಟೀಮನಿಯವರ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಮಧುರ ವೇಣು’ ಎಂಬ ಸಂಸ್ಮರಣ ಗ್ರಂಥದಲ್ಲಿ ಬೆಳಗಾವಿಯ ಪರಿಪೂರ್ಣ ಚಿತ್ರಣ ಕೊಡುವ ಲೇಖನ ಬರೆದಿದ್ದಾರೆ.  

ಭಾಷೆಗಳ ಬಗೆಗಿರುವ ಆಳವಾದ ಜ್ಞಾನ, ಕನ್ನಡ ಭಾಷೆಯು ಇತರ ಭಾಷೆಗಳಂತೆ ಸಮೃದ್ಧವಾಗಿ ಬೆಳೆಯ ಬೇಕೆನ್ನುವ ಕಳಕಳಿ ಹೊಂದಿದ್ದ ಕುಲಕರ್ಣಿಯವರು 1986 ವರ್ಷದಲ್ಲಿ ಈ ಲೋಕವನ್ನಗಲಿದರು.

On the birth anniversary of great scholar Prahlada Govinda Kulkarni 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ