ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾಲತಿ ಹೊಳ್ಳ


 ಮಾಲತಿ ಹೊಳ್ಳ


ಆಗ ಆ ಮಗುವಿಗೆ ಇನ್ನೂ ಒಂದೇ ವರ್ಷ.  ಪೋಲಿಯೋ ಆಕ್ರಮಿಸಿಬಿಟ್ಟಿತು.  ಮುಂದೆ ಆಕೆಯ ಭವಿಷ್ಯಚಕ್ರ, ಚಕ್ರಗಳ ಮೇಲಿನ ಕುರ್ಚಿಯ ಮೇಗಡೆಗೆ ವಿಧಿತವಾಗಿಬಿಟ್ಟಿತು.   ಕಾಲಿರುವ ನಾವುಗಳು ಸಾಧಿಸಿರುವುದಾದರೂ ಏನು!  ನಮ್ಮ ಮಾಲತಿ ಹೊಳ್ಳ ಅವರನ್ನು ನೋಡಿ ಕಾಲುಗಳಿಲ್ಲದೆ 300ಕ್ಕೂ ಹೆಚ್ಚು  ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ.  ಅವುಗಳಲ್ಲಿ ಪ್ಯಾರಾಲಿಂಪಿಕ್ಸ್ ಸ್ವರ್ಣ ಪದಕ ಕೂಡಾ ಒಂದು.  

ಮಾಲತಿ ಅವರು ಹುಟ್ಟಿದ್ದು 1958ರ ಜುಲೈ 6ರಂದು.  ಅವರಿಗೆ ಪೋಲಿಯೋ ಆಕ್ರಮಿಸಿದ ನಂತರದಲ್ಲಿ ಅವರು ಹಲವಾರು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿದ್ದಾರೆ.  ಹದಿನೈದು ವರ್ಷಗಳ ಕಾಲ ಚನ್ನೈನಲ್ಲಿ ಮೂಳೆ ಚಿಕಿತ್ಸಾಲಯಗಳಿಗೆ ಅಲೆದಿದ್ದಾರೆ.  32 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ.  

ನಾವು ಒಂದು ಸಣ್ಣ ನೋವಾದರೂ, ‘ಅಯ್ಯೋ ದೇವರೇ, ಇದಕ್ಕೆ ಬಿಡುಗಡೆಯೇ ಇಲ್ಲವೇ, ನನಗೇ ಯಾಕೆ ಈ ಶಿಕ್ಷೆ ಎನ್ನುತ್ತೇವಲ್ಲವೇ?”  ಮಾಲತಿ ಅವರು ಉತ್ತರಗಳನ್ನು ಅರಸಿದವರು.  ಪ್ರಶ್ನೆಗಳ ಹಿಂದೆ ಹೋದವರಲ್ಲ.  ಅವರು ತಮ್ಮ ನೋವುಗಳ ನಿವಾರಣೆಗೆ  ಔಷದಿಗಳಿಗೆ ಪರ್ಯಾಯವಾಗಿ ಕ್ರೀಡೆಯನ್ನು ಬಳಸಲು ನಿರ್ಧರಿಸಿದರು.   ಹಾಗಂದ್ರೆ ಏನು?  ಕ್ರೀಡೆಯಲ್ಲಿ ಭಾಗವಹಿಸೋದು ಅಂದ್ರೆ ದೈಹಿಕವಾಗಿ ಕಷ್ಟ ಆಗೋಲ್ವಾ?  ಅವರು ತಮ್ಮ ಬದುಕನ್ನೇ ಒಂದು ಅನುಭಾವ ಮಾಡಿಕೊಂಡವರು.  ಹಾಗಾಗಿ ಈ ವಿಚಾರವನ್ನು ಮನಮುಟ್ಟುವಂತೆ ಹೇಳುತ್ತಾರೆ: “ಬದುಕಿನಲ್ಲಿ ಯಶಸ್ಸಿನ ಹಾದಿ ಸಿಗಬೇಕಾದ್ರೆ ಸಾಕಷ್ಟು ಶ್ರಮ ಪಡಬೇಕು.  ನಮ್ಮ ದೇಹಕ್ಕೆ ಸಿಗುವ ಪ್ರತಿಯೊಂದು ಕಷ್ಟವೂ ನಮ್ಮನ್ನು ಮತ್ತಷ್ಟು ಬಲಿಷ್ಟಗೊಳಿಸುತ್ತೆ.  ಹಾಗಾಗಿಯೇ ದೈಹಿಕ ಅಸಮರ್ಥತೆಯ ನಡುವೆಯೂ ನಾನು ಕ್ರೀಡೆಯನ್ನು ಆಯ್ಕೆಮಾಡಿಕೊಂಡೆ” ಅಂತ.  ಅವರು ನಮ್ಮಂತೆ ಸಾಮಾನ್ಯರಲ್ಲ ಹಾಗಾಗಿಯೇ ಅವರ ಜೀವನ ಚರಿತ್ರೆಯ ಹೆಸರು ‘ಬೇರೆಯದೇ ಆದ ಚೈತನ್ಯ’ ಎಂದು ಕನ್ನಡದಲ್ಲಿ ಹೇಳಬಹುದಾದಂತಹ ಇಂಗ್ಲಿಷ್ ಭಾಷಾ ಕೃತಿ ‘A Different Spirit’.   

ಈ ‘ಡಿಫ್ರೆಂಟ್ ಸ್ಪಿರಿಟ್’ ಮಾಲತಿ ಹೇಳುತ್ತಾರೆ, “ನಾನು ಪುಟ್ಟವಳಿದ್ದಾಗ, ಮನೆಯ ಹಿತ್ತಲಿನಲ್ಲಿ ಉದುರಿದ ಮಾವಿನ ಕಾಯಿಗಳನ್ನು ಅರಸಲು ಓಡುತ್ತಿದ್ದ ಮಕ್ಕಳಲ್ಲಿ ನಾನೇ ಮೊದಲಿಗಳಾಗಬೇಕೆಂದು ಬಯಸುತ್ತಿದ್ದೆ.  ಹಕ್ಕಿಗಳಂತೆ ಭಯವಿಲ್ಲದೆ ಒಂದೆಡೆಯಿಂದ ಮತ್ತೊಂದೆಡೆಗೆ ಹಾರಬೇಕೆಂಬುದು ನನ್ನ ಆಸೆ ಆಗಿತ್ತು.  ಬೆಳೆದು ದೊಡ್ಡವಳಾಗುತ್ತಿದ್ದಂತೆ ‘ಓ ನಾನು ಓಡಬೇಕಾದಲ್ಲಿ ನನಗೆ ಕಾಲುಗಳಿರಬೇಕಿತ್ತು, ಹಾರಬೇಕಾದರೆ ರೆಕ್ಕೆಗಳಿರಬೇಕಿತ್ತು ಎಂಬ ಸತ್ಯ ಅರಿವಿಗೆ ಬಂತು.  ನೋವನುಂಡೆ, ಆದರೆ ಬಿಟ್ಟುಬಿಡಲಿಲ್ಲ.  ನನಗೆ ತಿಳಿದಿತ್ತು, ಒಂದು ದಿನ, ನಾನು ಓಡಿಯೇ ಓಡ್ತೀನಿ ಅಂತ...” 

ಪ್ರಾಮಾಣಿಕವಾಗಿ ಹೇಳ್ಬೇಕು ಅಂದ್ರೆ ನನಗೂ ಓಡಬೇಕು ಅನ್ನಿಸ್ತಾ ಇದೆ.  ಕಾಲೂ ಇದೆ.  ಹೆಚ್ಚು ದೂರ ಓಡ್ತೀನಿ ಎಂಬ ನಂಬಿಕೆ ಇಲ್ಲ.  ಈ ವಿಚಾರವನ್ನು ಒಂದು ಕ್ಷಣ ಅವಲೋಕಿಸಿದಾಗ ಮಾಲತಿ ಹೊಳ್ಳ ಅವರು ಹೇಳಿದ  ಮಾತು ನೆನಪಾಗ್ತಾ ಇದೆ “ದೇಹದ ಅಂಗದಲ್ಲುಂಟಾಗುವ ವಿಕಲತೆಗಿಂತ ನಮ್ಮಲ್ಲಿರುವ ಕೀಳರಿಮೆಯೇ ದೊಡ್ಡ ಅಂಗವಿಕಲತೆ” ಅಂತ.   ಅವರು ಇನ್ನೂ ಹೇಳ್ತಾರೆ, “ನಾವೆಲ್ಲಾ ವಿಭಿನ್ನರು ನಿಜ.  ಅಂತೆಯೇ, ನಮ್ಮ ಬದುಕು ಕೂಡಾ ವಿಭಿನ್ನತೆಯಲ್ಲಿ ಹೊಳೆಯುವ ಉದಾಹರಣೆಯಾಗಿ ಕಂಗೊಳಿಸಬೇಕು” ಅಂತ .  ಎಷ್ಟು ಮಹತ್ವದ  ಮಾತು ಅಲ್ವ.

ಈ ಸಮಾಜದಲ್ಲಿರುವ ಅಸಮಾನತೆಗಳ ಅಟ್ಟಹಾಸದ ಕಾರಣದಿಂದಾಗಿ ಅಂಗವಿಕಲರು ಬಹಳ ಕಷ್ಟ ಅನುಭವಿಸಬೇಕಾದ ಪರಿಸ್ಥಿತಿಯನ್ನು ಹೇಳುವ ಮಾಲತಿ ಹೊಳ್ಳ ಅವರು “ನಮಗೆ ಬೇಕಿರುವುದು ಈ ಸಮಾಜದ ಕರುಣೆ ಅಲ್ಲ, ನಾವೂ ಸಾಧಿಸಬಲ್ಲೆವು ಎಂದು ಸಿದ್ಧಪಡಿಸಿ ತೋರಿಸುವುದಕ್ಕೆ ಬೇಕಾದ ಸಹಾನುಭೂತಿ ಮಾತ್ರ” ಎಂಬುದನ್ನು ಖಡಾಖಂಡಿತವಾಗಿ ಹೇಳುತ್ತಾರೆ.

ಮಾಲತಿ ಹೊಳ್ಳ ಅವರು ಬರೀ ಕ್ರೀಡಾಪಟು ಮಾತ್ರವಲ್ಲ.  ಅವರು ಸಿಂಡಿಕೇಟ್ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ಹುದ್ದೆ ನಿರ್ವಹಿಸಿದವರು.  ಇದೆಲ್ಲದಕ್ಕಿಂತ ಮಹತ್ತಾದ ಕೆಲಸವಾಗಿ  “ಮಾತೃ ಫೌಂಡೇಶನ್” ಅಂತ ಪ್ರಾರಂಭ ಮಾಡಿ ಅಂಗವಿಕಲ ಮಕ್ಕಳಿಗೆ ಆಶ್ರಯಕೊಟ್ಟು ಅವರನ್ನು ಸ್ವಾವಲಂಭಿಗಳನ್ನಾಗಿ ಮಾಡಲಿಕ್ಕೆ ಪಣತೊಟ್ಟಿದ್ದಾರೆ.  “ಗ್ರಾಮೀಣ ಪ್ರದೇಶಗಳಲ್ಲಿ ಅಂಗವಿಕಲತೆಯಿಂದ ಬಳಲುತ್ತಾ ವೈದ್ಯಕೀಯ ಸಹಾಯಗಳಿಲ್ಲದೆ ಸೊರಗುತ್ತಿರುವ ಮಕ್ಕಳಿಗೆ ಆಶ್ರಯ ಮತ್ತು ಬೆಂಬಲ ನೀಡೋದು ನನ್ನ ಗುರಿ” ಅಂತಾರೆ ಈ ವಿಶಾಲ ಹೃದಯಿ ಮಾಲತಿ ಹೊಳ್ಳ ಅವರು.  

ಅವರ ಪುಸ್ತಕದಲ್ಲಿ ಅವರು ಅಂಗವಿಕಲರಾದಾಗ ಭಾವನೆಗಳನ್ನು ಸರಿಯಾಗಿ ಅರ್ಥೈಸದಿದ್ದ ಹಿರಿಯರು, ಭಾರತದಲ್ಲಿ ಅಂಗವಿಕಲರಿಗೆ ಸರಿಯಾಗಿ ಸಿಗದ ವೈದ್ಯಕೀಯ ಶುಶ್ರೂಷೆ ಇತ್ಯಾದಿಗಳ ಮೇಲೆ ಬೆಳಕು ಚೆಲ್ಲುವ ಹಲವಾರು ವಿಷಯಗಳಿವೆ.  ಇವೆಲ್ಲವುಗಳಿಂದ ಸ್ವಯಂ ನಲುಗಿದರೂ ವಿಶ್ವಾಸ ಕಳೆದುಕೊಳ್ಳದೆ ಪದ್ಮಶ್ರೀ, ಅರ್ಜುನ, ಏಕಲವ್ಯ ಪ್ರಶಸ್ತಿಗಳು, ವಿಶ್ವವಿದ್ಯಾಲಯದ ಡಾಕ್ಟರೇಟ್ ಮುಂತಾದ ಗಣ್ಯ ಪ್ರಶಸ್ತಿಗಳನ್ನು ಯೋಗ್ಯರಾಗಿ ಅಲಂಕರಿಸುವಂತೆ ಬೆಳೆದ ಈ ಮಹಾನ್ ಸಾಧಕಿಯ ಬೆಳವಣಿಗೆ ಪ್ರಶಂಸನೀಯವಾದುದು.

ಮಾಲತಿ ಹೊಳ್ಳ ಅವರೆ, ನಾವು ನಿಮ್ಮ ಅಪಾರ ಸಾಧನೆಗಾಗಿ ನಿಮಗೆ ಪ್ರಣಾಮಗಳನ್ನು ಸಲ್ಲಿಸಬಯಸ್ತೇವೆ.  ನಿಮ್ಮ ಬದುಕು, ಸಾಧನೆ ಇವೆರಡೂ ನಮಗೆ ಸ್ಪೂರ್ತಿಯಾಗಿದೆ.  ನಿಮ್ಮ ಬದುಕು, ಸಾಧನೆಗಳು ನಿರಂತರವಾಗಿ ಪ್ರಜ್ವಲಿಸ್ತಾ ಇರಲಿ.  ನಿಮ್ಮ ಬದುಕು ಸಂತಸಪೂರ್ಣವಾಗಿರಲಿ ಅಂತ ನಮ್ಮ ತುಂಬು ಹೃದಯದ ಹಾರೈಕೆ.

Happy birthday Malathi Holla Madam

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ