ಶ್ಯಾಮ್ ಮುಖರ್ಜಿ
ಶ್ಯಾಮ್ ಪ್ರಸಾದ್ ಮುಖರ್ಜಿ
ಶ್ಯಾಮ್ ಪ್ರಸಾದ್ ಮುಖರ್ಜಿ ವಿದ್ವಾಂಸರಾಗಿ, ರಾಜನೀತಿಜ್ಞರಾಗಿ ಮತ್ತು ಮಹತ್ವದ ಸಂಸದೀಯ ಪಟುವಾಗಿ ಮತ್ತು ಹೋರಾಟಗಾರರಾಗಿ ಹೆಸರಾಗಿದ್ದಾರೆ.
ಸ್ವತಂತ್ರ ಭಾರತದಲ್ಲಿ ಕೈಗಾರಿಕಾ ಮತ್ತು ವಸತಿ ಮಂತ್ರಿಗಳಾಗಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಪ್ರಧಾನಿ ನೆಹರೂ ಅವರ ಸಂಪುಟದ ಪಾಕಿಸ್ಥಾನದ ಜೊತೆಗಿನ ಹೊಂದಾಣಿಕೆ ಒಪ್ಪಂದಗಳ ಕುರಿತಾಗಿನ ಭಿನ್ನಾಭಿಪ್ರಾಯಗಳಿಂದ, ಕೇಂದ್ರ ಸಂಪುಟದಿಂದ ಮತ್ತು ಕಾಂಗ್ರೆಸ್ನಿಂದ ಹೊರ ಬಂದು 'ಭಾರತೀಯ ಜನಸಂಘ'ವನ್ನು ಸ್ಥಾಪಿಸಿದರು. ಮುಂದೆ ಇದೇ ಭಾರತೀಯ ಜನತಾಪಕ್ಷವಾಗಿ ರೂಪಾಂತರಗೊಂಡಿತು.
ಶ್ಯಾಮ್ ಪ್ರಸಾದ್ ಮುಖರ್ಜಿ 1901ರ ಜುಲೈ 6ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಇವರ ತಂದೆ ಅಶುತೋಷ್ ಮುಖರ್ಜಿ ಕೋಲ್ಕತ್ತ ಹೈಕೋರ್ಟಿನಲ್ಲಿ ನ್ಯಾಯಾಧೀಶರಾಗಿದ್ದರಲ್ಲದೆ, ಕೋಲ್ಕತ್ತ ವಿಶ್ವವಿದ್ಯಾಲಯದ ಉಪಕುಲಪತಿಗಳೂ ಆಗಿದ್ದರು. ಉಜ್ವಲ ಪ್ರತಿಭೆಯಿಂದ ಉತ್ತಮ ವಿದ್ಯಾರ್ಥಿ ಎಂಬ ಗೌರವಕ್ಕೆ ಪಾತ್ರರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಬಿಎ, ಎಂಎ ಮತ್ತು ಬಿಎಲ್ ಪದವಿಗಳನ್ನು ಉನ್ನತ ಶ್ರೇಣಿಯಲ್ಲಿ ಗಳಿಸಿದರು.
ಶ್ಯಾಮ್ ಪ್ರಸಾದ್ ಮುಖರ್ಜಿಯವರು ವಿಶ್ವ ವಿದ್ಯಾಲಯದ ಸೆನೆಟ್ ಹಾಗು ಸಿಂಡೀಕೆಟ್ಗಳಿಗೆ 1924ರಲ್ಲಿ ಚುನಾಯಿತರಾದರು. ಅದೇ ಸಮಯದಲ್ಲಿ ಕೋಲ್ಕತ್ತಾ ನ್ಯಾಯಾಲಯದಲ್ಲಿ ವಕೀಲರಾಗಿಯೂ ನೋಂದಾಯಿಸಿಕೊಂಡರು. 1926ರಲ್ಲಿ ಇಂಗ್ಲೆಂಡಿಗೆ ತೆರಳಿ ಲಿಂಕನ್ ಇನ್ ಅಲ್ಲಿ ಓದಿ ಇಂಗ್ಲಿಷ್ ಬಾರ್ (ಕಾನೂನು ಪಂಡಿತರ) ಸಮುದಾಯಕ್ಕೆ ಆಹ್ವಾನಿತರಾದರು.
ಶ್ಯಾಮ್ ಪ್ರಸಾದ್ ಮುಖರ್ಜಿ 33ರ ಅತ್ಯಂತ ಕಿರಿಯ ವಯಸ್ಸಿನಲ್ಲೇ ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾಗಿ 1934ರಲ್ಲಿ ನೇಮಕಗೊಂಡರು. 1938ರಲ್ಲಿ ಕೋಲ್ಕತ್ತಾ ವಿಶ್ಚವಿದ್ಯಾಲಯವು ಅವರಿಗೆ ಡಿ.ಲಿಟ್ ಗೌರವವನ್ನು ಪ್ರದಾನ ಮಾಡಿತು.
ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿ ಬಂಗವಾಣಿ, ಕ್ಯಾಪಿಟಲ್ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದರು. 1940ರಲ್ಲಿ ನ್ಯಾಷನಲಿಸ್ಟ್ ಎಂಬ ಸ್ವಂತ ಪತ್ರಿಕೆ ಪ್ರಾರಂಭಿಸಿದರು.
ಶ್ಯಾಮ್ ಪ್ರಸಾದ್ ಮುಖರ್ಜಿ 1929ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೂಲಕ ಬಂಗಾಳದ ವಿಧಾನಸಭೆಯನ್ನು ಪ್ರವೇಶಿಸಿದರು. ಕಾಂಗ್ರೆಸ್ಸು ವಿಧಾನಸಭೆಯನ್ನು ಬಹಿಷ್ಕರಿಸಿದ ಕಾರಣ, ಮುಂದಿನ ವರ್ಷದಲ್ಲೇ ಕಾಂಗ್ರೆಸ್ನಿಂದ ಹೊರಬಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಸಾಧಿಸಿದರು. 1937ರಲ್ಲಿ ಪುನಃ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದರು.
ಶ್ಯಾಮ್ ಪ್ರಸಾದ್ ಮುಖರ್ಜಿಯವರು 1941-42ರಲ್ಲಿ ಎ.ಕೆ. ಫಜುಲ್ ಹಕ್ ಅವರ ಮಿತ್ರ ಪಕ್ಷಗಳ ಒಕ್ಕೂಟ ಸರ್ಕಾರದ ಸಂಪುಟದಲ್ಲಿ ವಿತ್ತ ಮಂತ್ರಿಗಳಾದರು. ಬ್ರಿಟಿಷ್ ಆಡಳಿತ ಅವರ ಚಲನವಲನಗಳ ಮೇಲೆ ವಿಪರೀತ ನಿರ್ಬಂಧ ಹೇರಿ ಮಿದ್ನಾಪುರದಲ್ಲಿನ ಪ್ರವಾಹ ಪೀಡಿತ ಪ್ರದೇಶದಲ್ಲಿ ಕೆಲಸ ಮಾಡಲಿಕ್ಕೂ ಬಿಡಲಿಲ್ಲ.
ಶ್ಯಾಮ್ ಪ್ರಸಾದ್ ಮುಖರ್ಜಿ 1942ರಲ್ಲಿ ಬ್ರಿಟಿಷ್ ಸರ್ಕಾರದ ನೀತಿಗಳನ್ನು ವಿರೋಧಿಸಿ ಅಧಿಕಾರದಿಂದ ಹೊರಬಂದು, ಮಹಾಬೋಧಿ ಸೊಸೈಟಿ, ರಾಮಕೃಷ್ಣ ಮಿಷನ್ ಮತ್ತು ಮರ್ವಾರಿ ಸಂಘಗಳ ಜೊತೆಗೂಡಿ ಮಿದ್ನಾಪುರದಲ್ಲಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ನೆರವು ಕಲ್ಪಿಸಲು ಹಗಲಿರುಳೂ ಶ್ರಮಿಸಿದರು. 1946ರಲ್ಲಿ ಕಾನಸ್ಟಿಟ್ಯುಯೆಂಟ್ ಅಸೆಂಬ್ಲಿ ಆಫ್ ಇಂಡಿಯಾಗೆ ಆಯ್ಕೆಯಾದರು.
1939ರಿಂದ ಹಿಂದೂ ಮಹಾಸಭಾದ ನಾಯಕರಾದ ಶ್ಯಾಮ್ ಪ್ರಸಾದ್ ಮುಖರ್ಜಿಯವರು 1943ರಿಂದ 1946ವರೆಗಿನ ಅವಧಿಯಲ್ಲಿ ಅಖಿಲ ಭಾರತೀಯ ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದರು.
ಭಾರತದ ವಿಭಜನೆಯ ಕುರಿತಾದ ಪರಿಸ್ಥಿತಿ ಇದ್ದ ನಿಟ್ಟಿನಲ್ಲಿ, ಹಿಂದೂಗಳು ಹೆಚ್ಚಾಗಿರುವ ಪ್ರದೇಶಗಳು ಪೂರ್ವ ಪಾಕಿಸ್ಥಾನಕ್ಕೆ ಸೇರಿಹೋಗದಂತೆ ಬಂಗಾಳವನ್ನು ವಿಭಜಿಸಬೇಕು ಎಂದು ಶ್ಯಾಮ್ ಪ್ರಸಾದ್ ಮುಖರ್ಜಿ ಒತ್ತಾಯಿಸಿದರು. ಇಲ್ಲದಿದ್ದಲ್ಲಿ ಇಡೀ ಬಂಗಾಳವೇ ಪೂರ್ವ ಪಾಕಿಸ್ಥಾನದ ಭಾಗವಾಗಿ ಹೋಗುತ್ತಿತ್ತು. ಪಶ್ಚಿಮ ಬಂಗಾಳದ ನೋಖಾಲಿಯಲ್ಲಿ ಮುಸ್ಲಿಂ ಲೀಗ್ ಪ್ರೇರಿತರಿಂದ ನಡೆದ ಹಿಂದೂಗಳ ಹತ್ಯಾಖಾಂಡದಿಂದ ನೊಂದಿದ್ದ ಅವರು ಬಹುಸಂಖ್ಯಾತ ಮುಸ್ಲಿಮ್ ಸಂಘಟನೆಗಳ ಹಿಂಸಾತ್ಮಕ ದಾಳಿಯಿಂದ ಹಿಂದೂಗಳ ರಕ್ಷಣೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು.
ಶ್ಯಾಮ್ ಪ್ರಸಾದ್ ಮುಖರ್ಜಿಯವರು 1947ರಲ್ಲಿ ರಚನೆಯಾದ ರಾಷ್ಟ್ರೀಯ ಸರ್ಕಾರದಲ್ಲಿ ಪ್ರಥಮ ಕೈಗಾರಿಕಾ ಮತ್ತು ವಾಣಿಜ್ಯ ಮಂತ್ರಿಗಳಾಗಿದ್ದರು.
ಮಹಾತ್ಮ ಗಾಂಧಿ ಅವರ ಕೊಲೆಯಾದ ನಂತರದಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಹಿಂದೂ ಮಹಾಸಭಾದೊಂದಿಗೆ ಭಿನಭಿಪ್ರಾಯ ತಳೆದರಲ್ಲದೆ, ಮಹಾಸಭಾವು ರಾಜಕೀಯ ಚಟುವಟಿಕೆಗಳಿಂದ ಮುಕ್ತವಾಗಿರಬೇಕೆಂದು ಕರೆಕೊಟ್ಟರು. ಮಹಾಸಭಾವು ಹಾಗೆ ಮಾಡಿದ ನಂತರದಲ್ಲಿ ಡಿಸೆಂಬರ್ 1948ರಲ್ಲಿ ಅದರಿಂದ ಹೊರಬಂದರು.
ಶ್ಯಾಮ್ ಪ್ರಸಾದ್ ಮುಖರ್ಜಿಅವರು ನೆಹರೂ ಸರ್ಕಾರವು ಭಾರತ ಮತ್ತು ಪಾಕಿಸ್ಥಾನಗಳಲ್ಲಿ ಅಲ್ಪಸಂಖ್ಯಾತರಿಗೆ ತಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳುವುದಕ್ಕೆ ಅವಕಾಶ ನೀಡುವ ಕುರಿತು, 1950ರಲ್ಲಿ ಲಿಯಾಕತ್ ಅಲಿ ಖಾನ್ ಒಂದಿಗೆ ಮಾಡಿಕೊಂಡ ಒಪ್ಪಂದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದರಿಂದ ಆ ದೇಶದಲ್ಲಿನ ಹಿಂದೂಗಳು ಅಲ್ಲಿನ ಮುಸ್ಲಿಂ ಜನಾಂಗದ ಹಿಡಿತದಲ್ಲಿ ಕೀಳಾಗಿ ಬದುಕುವ ಹಾಗೆ ಆಸ್ಪದವಾಯ್ತು ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು. ಹೀಗಾಗಿ ಅವರು 1950ರ ಕೊನೆಯಲ್ಲಿ ತಮ್ಮ ಮಂತ್ರಿ ಪದವಿ ತ್ಯಜಿಸಿದರು.
ಶ್ಯಾಮ್ ಪ್ರಸಾದ್ ಮುಖರ್ಜಿಯವರು 1951ರಲ್ಲಿ 'ಭಾರತೀಯ ಜನಸಂಘ'ವನ್ನು ಸ್ಥಾಪಿಸಿ ಅದರ ಸಂಸ್ಥಾಪಕ ಅಧ್ಯಕ್ಷರಾದರು. 1952ರ ಪಾರ್ಲಿಮೆಂಟರಿ ಚುನಾವಣೆಗಳಲ್ಲಿ ಮುಖರ್ಜಿ ಅವರನ್ನೊಳಗೊಂಡಂತೆ ಆ ಪಕ್ಷದ ಮೂರು ಅಭ್ಯರ್ಥಿಗಳು ಚುನಾಯಿತರಾದರು. ಮುಖರ್ಜಿ ಅವರು ಪಾರ್ಲಿಂಮೆಟಿನ ಒಳಗೆ ಹಲವು ಮಿತ್ರ ಪಕ್ಷಗಳ ಅಭ್ಯರ್ಥಿಗಳನ್ನೊಳಗೊಂಡ ನ್ಯಾಶನಲ್ ಡೆಮೊಕ್ರೆಟಿಕ್ ಪಾರ್ಟಿ ಒಕ್ಕೂಟ ಸ್ಥಾಪಿಸಿದರು. ಇದರಲ್ಲಿ 32 ಲೋಕಸಭಾ ಸದಸ್ಯರು ಮತ್ತು 10 ರಾಜ್ಯಸಭಾ ಸದಸ್ಯರಿದ್ದರು.
ಶ್ಯಾಮ್ ಪ್ರಸಾದ್ ಮುಖರ್ಜಿ 1952ರಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಭಾರತ ಸರ್ಕಾರದ ಆರ್ಟಿಕಲ್ 370 ವಿಧಿಯನ್ನು ಕಟುವಾಗಿ ವಿರೋಧಿಸಿದರು. ಇದು ಭಾರತದ ಸಮಗ್ರತೆಗೆ ಧಕ್ಕೆ ಎಂದು ಬಲವಾಗಿ ಪ್ರತಿಪಾದಿಸಿದರು. ಈ ಕಾನೂನನ್ನು ತೆಗೆಯಬೇಕೆಂದು ಸತ್ಯಾಗ್ರಹ ಹೂಡಿದರು.
ಕಾಶ್ಮೀರದ ನಿವಾಸಿಗಳು ಗುರುತಿನ ಚೀಟಿ ಹೊಂದಿರುವುದು ಅವಶ್ಯ ಎಂಬ ಸರ್ಕಾರಿ ಕಾಯಿದೆಯನ್ನು ವಿರೋಧಿಸಲು
1953ರ ಮೇ 11ರಂದು ಜಮ್ಮು ಕಾಶ್ಮೀರಕ್ಕೆ ಸತ್ಯಾಗ್ರಹಕ್ಕಾಗಿ ತೆರಳುವಾಗ ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ಅನುಮತಿ ನಿರಾಕರಿಸಲಾಯಿತು. ಅವರು ಮುನ್ನಡೆದಾಗ ಲಖಾನ್ಪುರದಲ್ಲಿ ಬಂಧಿಸಲಾಯಿತು.
ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಹೋರಾಟದ ಫಲವಾಗಿ ಗುರುತಿನ ಚೀಟಿ ಕಾನೂನು ತೆರವುಗೊಂಡಿತಾದರೂ, ಮುಖರ್ಜಿಯವರು ಬಂಧನದಲ್ಲಿರುವಾಗಲೇ 1953ರ ಜೂನ್ 23ರಂದು ನಿಗೂಢ ರೀತಿಯಲ್ಲಿ ಸಾವಿಗೀಡಾದರು.
2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಆರ್ಟಿಕಲ್ 370 ವಿಧಿಯನ್ನು ರದ್ದುಪಡಿಸುವ ವಿಧೇಯಕವನ್ನು ಅಂಗೀಕರಿಸುವುದರ ಮೂಲಕ ಈ ಮಹಾನ್ ನೇತಾರರ ಕನಸನ್ನು ನೆರವೇರಿಸಿದೆ.
On the birth anniversary of Shyam Prasad Mukherjee
ಕಾಮೆಂಟ್‌ಗಳು