ಪ್ರೇಮಚಂದ್
ಪ್ರೇಮಚಂದ್
ಮುನ್ಷಿ ಪ್ರೇಮಚಂದರು ಭಾರತೀಯ ಸಾಹಿತ್ಯ ಲೋಕದಲ್ಲಿ ಮಹಾನ್ ಹೆಸರು. ಅವರ ಗೋದಾನ್, ಶತರಂಜ್ ಕೇ ಖಿಲಾಡಿ, ಕೃಷ್ಣ, ವರದಾನ್, ಸೋನೆ ಕೆ ವತನ್ ಮುಂತಾದ ಕಥೆ - ಕಾದಂಬರಿಗಳು ಸಾಹಿತ್ಯ ಲೋಕದ ಅನರ್ಘ್ಯ ರತ್ನಗಳ ಸಾಲಿನಲ್ಲಿ ಚಿರವಿರಾಜಮಾನವಾದಂತಹವು. ಕನ್ನಡವನ್ನೂ ಒಳಗೊಂಡಂತೆ ಪ್ರೇಮಚಂದರ ಕೃತಿಗಳು ವಿಶ್ವದೆಲ್ಲೆಡೆಯ ಭಾಷೆಗಳಿಗೆ ತರ್ಜುಮೆಗೊಂಡು ಅಪಾರ ಜನಸ್ತೋಮದ ಮನಸೂರೆಗೊಂಡಿವೆ.
ಪ್ರೇಮಚಂದರು ಬನಾರಸ್ಸಿಗೆ ನಾಲ್ಕು ಮೈಲಿ ದೂರದ ಲಮಹಿ ಎಂಬ ಗ್ರಾಮದಲ್ಲಿ 1880ರ ಜುಲೈ 31ರಂದು ಜನಿಸಿದರು. ತಂದೆ ಅಜಾಯಬ್ ಲಾಲ ಮತ್ತು ತಾಯಿ ಆನಂದಿದೇವಿ. ಪ್ರೇಮಚಂದರ ಹುಟ್ಟು ಹೆಸರು ಧನಪತ್ ರಾಯ್. ಮುಂದೆ ಸರ್ಕಾರಿ ನೌಕರಿ ಸೇರಿದಾಗ ನವಾಬ್ ರಾಯ್ ಎಂಬ ಹೆಸರಿನಿಂದ ಬರೆಯಲಾರಂಭಿಸಿದರು. ಸರ್ಕಾರ ಅವರ ಮೊಟ್ಟ ಮೊದಲ ಕಥಾ ಸಂಗ್ರಹ ‘ಸಾಜಿ ವತನ್’ ಅನ್ನು ಮುಟ್ಟುಗೋಲು ಹಾಕಿಕೊಂಡಾಗ ಈ ಹೆಸರನ್ನು ಬಿಟ್ಟು, ಅಲ್ಲಿಂದ ಮುಂದೆ ‘ಪ್ರೇಮಚಂದ್’ ಎಂಬ ಹೆಸರಿನಲ್ಲಿ ತಾವು ಬರೆದ ಸಾಹಿತ್ಯವನ್ನು ಪ್ರಕಟಿಸತೊಡಗಿದರು.
ಪ್ರೇಮಚಂದರ ತಂದೆ ಅಂಚೆ ಕಚೇರಿಯ ಸಾಮಾನ್ಯ ಗುಮಾಸ್ತ ಹುದ್ದೆಯಲ್ಲಿದ್ದರು. ಹೀಗಾಗಿ ಬಾಲ್ಯದ ದಿನಗಳು ತುಂಬಾ ಬಡತನದಲ್ಲಿಯೇ ಕಳೆದವು. ತಮ್ಮ ಒಂಭತ್ತನೆಯ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡರು. ತಂದೆ ಮರುವಿವಾಹವಾಗಿದ್ದರಿಂದ ಅವರಿಗೆ ಮಲತಾಯಿಯೊಡನೆ ಬದುಕು ಸವಿಯಾದುದಾಗಿರಲಿಲ್ಲ. ಪ್ರೀತಿಯ ಅಭಾವ ಮತ್ತು ಆರ್ಥಿಕ ದುಸ್ಥಿತಿಯಿಂದಾಗಿ ಒಂಟಿತನದ ಅನಾಥಭಾವವನ್ನು ಅನುಭವಿಸಬೇಕಾಗಿ ಬಂದದ್ದರಿಂದಲೋ ಏನೋ ಇವರ ಮನಸ್ಸು ಪುಸ್ತಕಗಳತ್ತ ಹರಿಯಿತು. ಚಿಕ್ಕಂದಿನಲ್ಲಿಯೇ ಕೈಗೆ ಸಿಕ್ಕಿದ ಪುಸ್ತಗಳನ್ನೆಲ್ಲಾ ಓದುವುದು, ಚಿಂತನ – ಮಂಥನ ನಡೆಸುವುದು ಇವರ ಪರಿಪಾಠವಾಗಿತ್ತು. ಹದಿನಾರನೆಯ ವಯಸ್ಸಿನಲ್ಲಿ ತಂದೆಯೂ ನಿಧನರಾದರು. ಪ್ರೇಮಚಂದರು ಪ್ರೌಢವಯಸ್ಸಿಗೆ ಬರುವ ಹೊತ್ತಿಗೆ ಸಾಕಷ್ಟು ಓದಿಕೊಂಡಿದ್ದರು.
ಪ್ರೇಮಚಂದರು ತಮ್ಮ ಬದುಕಿನ ಸಂಘರ್ಷದ ಮಧ್ಯೆ ಸೆಣಸಾಡುತ್ತಲೇ ಬನಾರಸ್ಸಿನಲ್ಲಿ ಮೆಟ್ರಿಕ್ ಪರೀಕ್ಷೆ ಪಾಸು ಮಾಡಿಕೊಂಡು 1899ರಲ್ಲಿ ಒಂದು ಮಿಷಿನರಿ ಶಾಲೆಯಲ್ಲಿ 18ರೂಪಾಯಿಗಳ ಸಂಬಳಕ್ಕೆ ಅಧ್ಯಾಪಕರಾಗಿ ಸೇರಿಕೊಂಡರು. ಮುಂದೆ ಪ್ರಯಾಗ ವಿಶ್ವವಿದ್ಯಾಲಯದಿಂದ ಬಿ.ಎ ಪರೀಕ್ಷೆಯನ್ನೂ ಪಾಸುಮಾಡಿದರು. ಪ್ರೇಮಚಂದರು ತಾವು 15 ವರ್ಷದವರಿದ್ದಾಗ ಮೊದಲ ವಿವಾಹ ಮಾಡಿಕೊಂಡರು. ಈ ವೈವಾಹಿಕ ಸಂಬಂಧ ಅವರ ಮನೋವೃತ್ತಿಗೆ ಹೊಂದಾಣಿಕೆಯಾಗಲಿಲ್ಲವಾಗಿ, 1916ರ ವರ್ಷದಲ್ಲಿ ಸ್ವಇಚ್ಛೆಯಿಂದ ಬಾಲವಿಧವೆ ಶಿವರಾಣಿ ದೇವಿಯವರನ್ನು ವಿವಾಹ ಮಾಡಿಕೊಂಡರು.
ಪ್ರೇಮಚಂದರು ಸಾಹಿತ್ಯ ರಚಿಸಿದ್ದು ಇಪ್ಪತ್ತನೆಯ ಶತಮಾನದ ಪ್ರಾರಂಭ ಕಾಲದಲ್ಲಿ. ಈಗ ನಾವಿರುವುದು ಇಪ್ಪತೊಂದನೆಯ ಶತಮಾನದಲ್ಲಿ. ಹೀಗಿದ್ದೂ ಅವರ ಕಥೆಗಳು ಎಲ್ಲ ಕಾಲಪ್ರವಾಹಗಳನ್ನೂ ದಾಟಿ ಉಳಿದು ನಿಂತಿವೆ. ತಮ್ಮ ಕಾಲದ ಹಾಗೂ ನಂತರದ ಬಹುತೇಕ ಕಥೆಗಾರರ ಮೇಲೆ ಅವರ ಪ್ರಭಾವ ನಿರಂತರವಾಗಿ ಮೂಡಿಬಂದಿರುವುದನ್ನು ನಾವು ಗುರುತಿಸಬಹುದು. ಸಾಹಿತ್ಯವನ್ನು ಮನರಂಜನೆಯ ಮಟ್ಟದಿಂದ ಮೇಲೆತ್ತಿ, ಈ ಬದುಕಿನ ಹಲವು ಸಮಸ್ಯೆಗಳಾದ ಪರಾಧೀನತೆ; ಜಮೀನ್ದಾರರು, ಬಂಡವಾಳಗಾರರು ಹಾಗೂ ಅಧಿಕಾರಿಗಳಿಂದ ಉಂಟಾದ ರೈತರ ಶೋಷಣೆ; ಬಡತನ, ನಿರಕ್ಷರತೆ, ವರದಕ್ಷಿಣೆ, ಮನೆ ಮತ್ತು ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನ, ವೇಶ್ಯೆಯರ ಬದುಕು, ವೃದ್ಧರ ವಿವಾಹ, ವಿಧವೆಯರ ಸಮಸ್ಯೆ, ಅಸ್ಪೃಶ್ಯತೆ – ಇವೇ ಮುಂತಾದವುಗಳನ್ನು ಸೇರಿದಂತೆ ಮಧ್ಯಮವರ್ಗದ ನೂರು ನೋವುಗಳನ್ನು, ಸಾವಿರ ಪಾಡುಗಳನ್ನು ಕುರಿತು ಚಿಂತಿಸಿ ಅಭಿವ್ಯಕ್ತಿಸಿದ್ದು ಪ್ರೇಮಚಂದರ ವಿಶಿಷ್ಟತೆಯಾಗಿವೆ. ಇವೇ ಇವರ ಸಾಹಿತ್ಯದ ಮೂಲ ದ್ರವ್ಯಗಳೂ ಹೌದು. ಬರೆಯುವಲ್ಲಿನ ಅವರ ಬದ್ಧತೆ ಅಪಾರವಾದದ್ದು. ಬರೆಯದಿದ್ದರೆ ತಾನು ಬದುಕುವುದೇ ಇಲ್ಲವೇನೋ ಎಂಬಷ್ಟರಮಟ್ಟಿಗೆ ಸಾಹಿತ್ಯರಚನೆ ಅವರ ಬದುಕಿನ ಅವಿಭಾಜ್ಯ ಅಂಗವಾಗಿಹೋಗಿತ್ತು.
ಮಹಾತ್ಮ ಗಾಂಧಿಯವರನ್ನು ಮೊದಲ ಬಾರಿಗೆ ಕಂಡ ಅನುಭವದ ಬಗ್ಗೆ ಪ್ರೇಮಚಂದರು ಹೇಳುತ್ತಾರೆ: “ಮಹಾತ್ಮರ ದರ್ಶನ ಎಂಥ ಪವಾಡಮಾಡಿತೆಂದರೆ ನನ್ನಂಥ ಮೃತಪ್ರಾಯ ವ್ಯಕ್ತಿಯೂ ಎಚ್ಚರಗೊಂಡ. ಆದಾದ ಎರಡು ದಿನಗಳಲ್ಲೇ ನಾನು ಇಪ್ಪತ್ತು ವರ್ಷಗಳಿಂದ ಮಾಡುತ್ತಿದ್ದ ನೌಕರಿಗೆ ರಾಜಿನಾಮೆ ಕೊಟ್ಟೆ”. ಹೀಗೆ ಗಾಂಧೀ ದರ್ಶನ ಅವರ ಮೇಲೆ ಅಪಾರ ಪ್ರಭಾವ ಬೀರಿತು. ಹೀಗಿದ್ದಾಗ್ಯೂ ಅವರು ‘ಗೋದಾನ’, ‘ಮಂಗಳಸೂತ್ರ’ ಮುಂತಾದ ಕಥೆಗಳನ್ನು ಬರೆಯುವ ವೇಳೆಗೆ ಅವರಲ್ಲಿ ಕ್ರಾಂತಿಕಾರಕ ಸಾಮಾಜಿಕ ಪರಿವರ್ತನೆಯ ನಿಲುವುಗಳು ಹೆಚ್ಚು ಹೆಚ್ಚು ಅಭಿವ್ಯಕ್ತಿಗೊಂಡಿವೆ.
ಪ್ರೇಮಚಂದರು ರಚಿಸಿರುವ ವಿಫುಲವಾದ ಸಾಹಿತ್ಯವನ್ನು ನೋಡಿದರೆ ಒಬ್ಬ ವ್ಯಕ್ತಿ ತನ್ನ ಅಲ್ಪ ಜೀವಿತಾವಧಿಯಲ್ಲಿ ಇಷ್ಟೊಂದು ಕೆಲಸಮಾಡಿರುವುದು ಪವಾಡ ಎಂದೆನಿಸದಿರದು. ಮೊದಲು ಬೇರೆ-ಬೇರೆ ಹೆಸರಿನ ಸಂಕಲನಗಳಲ್ಲಿ ಸೇರಿ ಆಮೇಲೆ ‘ಮಾನಸ ಸರೋವರ’ ಹಾಗೂ ‘ಗುಪ್ತಧನ್’ ಸಂಪುಟಗಳಲ್ಲಿ ಸಮಗ್ರವಾಗಿ ಪ್ರಕಟವಾಗಿರುವ ಅವರ ಇನ್ನೂರ ಎಪ್ಪತ್ತು ಕತೆಗಳು, ಹನ್ನೊಂದು ಕಾದಂಬರಿಗಳು, ನಾಟಕ, ವಿಮರ್ಶೆ, ಪ್ರಬಂಧ, ಅನುವಾದ, ಸಂಪಾದಕೀಯಗಳು, ಭಾಷಣಗಳು, ಶಿಶುಸಾಹಿತ್ಯ ಹಾಗೂ ಇನ್ನಿತರ ಬರಹಗಳು ಅವರ ಅಸಾಧಾರಣವಾದ ಸೃಜನಶೀಲತೆಗೆ ಜೀವಂತ ಸಾಕ್ಷಿಯಾಗಿವೆ. ಅವರ ಕಾಲಾನಂತರದಲ್ಲಿ ಅವರ ಇನ್ನಿತರ ಅಪ್ರಕಟಿತ ಬರಹಗಳೂ ಸಾಕಷ್ಟು ಬೆಳಕು ಕಂಡಿವೆ.
ಹಿಂದಿಯಲ್ಲಿ ಪ್ರೇಮಚಂದರು ‘ಕಾದಂಬರಿ ಸಾಮ್ರಾಟ’ರೆಂದೇ ಪ್ರಸಿದ್ಧರಾಗಿದ್ದಾರೆ. ಇದು ಸಂಖ್ಯೆಯ ದೃಷ್ಟಿಯಿಂದ ಅನ್ವಯವಾಗದೆ, ಸಮಕಾಲೀನ ಹಾಗೂ ಭವಿಷ್ಯದ ಬದುಕನ್ನು ಗಾಢವಾಗಿ ಪ್ರಭಾವಗೊಳಿಸಿದರೆಂಬ ನಿಟ್ಟಿನಿಂದ ಅಭಿವ್ಯಕ್ತಿತವಾದ ಗೌರವವೆನಿಸಿದೆ. ಪ್ರೇಮಚಂದರ ಹನ್ನೊಂದು ಕಾದಂಬರಿಗಳೆಂದರೆ ‘ಸೇವಾಸದನ್’, ‘ವರದಾನ್’, ‘ಪ್ರೇಮಾಶ್ರಮ್’, ‘ರಂಗಭೂಮಿ’, ‘ಕಾಯಾಕಲ್ಪ್’, ‘ನಿರ್ಮಲಾ’, ‘ಪ್ರತಿಜ್ಞಾ’, ‘ಗಬನ್’, ‘ಕರ್ಮಭೂಮಿ’, ‘ಗೋದಾನ್’ ಮತ್ತು ‘ಮಂಗಳಸೂತ್ರ’.
ಇಷ್ಟೆಲ್ಲಾ ಮಾಡಿದರೂ ಪ್ರೇಮಚಂದರು ತಾವು ಪತ್ರಿಕೆ ತರಬೇಕು, ಮುದ್ರಣಾಲಯ ಮಾಡಬೇಕು ಎಂಬ ಸಾಹಿತ್ಯಕ ಆಸಕ್ತಿಗಳಲ್ಲಿ ತಮ್ಮ ಹಣವನ್ನೆಲ್ಲಾ ಕಳೆದುಕೊಂಡು ಜೀವನಪೂರ್ತಿ ಬಡತನ ಮತ್ತು ಸಾಲದ ಬಾಧೆಗಳಲ್ಲಿಯೇ ಒದ್ದಾಡಿದರು. ಪ್ರೇಮಚಂದರ ಬದುಕಿನ ಬಗೆಗೆ ಅವರ ಸ್ವಯಂ ಮಾತುಗಳು ಇಂತಿವೆ: “ಬದುಕು ನನಗೆ ಸದಾ ಕೆಲಸವನ್ನು ಕೊಟ್ಟಿದೆ. ಕೆಲಸ-ಕೆಲಸ-ಕೆಲಸ. ನಾನು ಸರ್ಕಾರಿ ನೌಕರಿಯಲ್ಲಿದ್ದಾಗಲೂ ನನ್ನೆಲ್ಲ ಸಮಯವನ್ನು ಸಾಹಿತ್ಯಕ್ಕಾಗಿ ನೀಡುತ್ತಿದ್ದೆ. ಕೆಲಸ ಮಾಡುವುದರಲ್ಲಿ ನನಗೆ ಸಂತೋಷ ಸಿಗುತ್ತದೆ. ಹಣದ ತೊಂದರೆ ಬಂದಾಗ ಕೊಂಚ ನೈರಾಶ್ಯ ಭಾವ ಆವರಿಸುತ್ತದೆ ಎಂಬುದನ್ನು ಬಿಟ್ಟರೆ ನಾನು ಹೇಗಿದ್ದೇನೋ ಅದರಲ್ಲಿಯೇ ಸಂತೃಪ್ತನಾಗಿದ್ದೇನೆ. ನಾನು ಮಾಡಿದ್ದಕ್ಕಿಂತ ಹೆಚ್ಚು ನನಗೆ ಸಿಕ್ಕಿದೆ. ಆರ್ಥಿಕವಾಗಿ ನಾನು ಸಂಪನ್ನನಲ್ಲ. ವ್ಯವಹಾರ ನನಗೆ ಗೊತ್ತಿಲ್ಲ ಮತ್ತು ತೊಂದರೆಗಳಿಂದ ನನಗೆ ಎಂದೂ ಬಿಡುಗಡೆ ಸಿಗಲಿಲ್ಲ. ನಾನು ಎಂದೂ ಪತ್ರಕರ್ತನಾಗಿರಲಿಲ್ಲ. ಆದರೆ ಪರಿಸ್ಥಿತಿಗಳು ನನ್ನನ್ನು ಒತ್ತಾಯದಿಂದ ಪತ್ರಕರ್ತನನ್ನಾಗಿ ಮಾಡಿದವು. ನಾನು ಸಾಹಿತ್ಯದಲ್ಲಿ ಸಂಪಾದಿಸಿದ್ದ – ಅದು ಹೆಚ್ಚೇನಿಲ್ಲ – ಎಲ್ಲವನ್ನೂ ಪತ್ರಿಕೋದ್ಯಮದಲ್ಲಿ ಕಳೆದುಕೊಂಡೆ”.
ಇಷ್ಟಿದ್ದರೂ ಪ್ರೆಮಚಂದರು ಕೀರ್ತಿ ಹಣಗಳಿಕೆಯ ಸಣ್ಣತನಗಳಿಗೆ ಎಂದೂ ಮಾರುಹೋಗಲಿಲ್ಲ. ಬ್ರಿಟಿಷ್ ಸರ್ಕಾರ ಪ್ರಶಸ್ತಿ ಕೊಡಲು ಬಂದಾಗ, ಅದು ತಮ್ಮ ಸ್ವಾತಂತ್ರವನ್ನು ಕಸಿದುಕೊಳ್ಳುತ್ತದೆ ಎಂಬ ಕಾರಣಕ್ಕಾಗಿ ಅದನ್ನು ತಿರಸ್ಕರಿಸಿದರು. ಸಮಾಜದ ಮಾನವೀಯ ಮೌಲ್ಯಗಳೇ ಅವರ ಚಿಂತನೆಯ ಆಳದಲ್ಲಿ ಪ್ರವಹಿಸುತ್ತಿತ್ತು.
ಹೀಗೆ ಮಾನವ ಜನಾಂಗದ ಸರ್ವತೋಮುಖ ವಿಕಸನದ ಚಿಂತನೆಗಳಲ್ಲಿ ಪ್ರೇಮಚಂದ್ ತಮ್ಮನ್ನು ತಾವು ತೇಯ್ದುಕೊಂಡರು. 1936ರ ಅಕ್ಟೋಬರ್ 8ರಂದು ಪ್ರೇಮಚಂದ್ ನಿಧನರಾದಾಗ ಅವರಿಗಿನ್ನೂ 56 ವರ್ಷ ವಯಸ್ಸು. ಅವರು ಬಡವರನ್ನು ದಲಿತರನ್ನು ತಮ್ಮ ಕೃತಿಗಳಲ್ಲಿ ಚಿತ್ರಿಸಿದ್ದು ಮಾತ್ರವಲ್ಲ, ಸ್ವಯಂ ತಾವೂ ಕೊನೆಯವರೆಗೂ ಕಡುಬಡತನದಲ್ಲಿಯೇ ಜೀವಿಸಿದರು. ಆದರೆ ಅದು ಆರ್ಥಿಕತೆಯ ವಿಚಾರದಲ್ಲಿನ ಮಾತ್ರ. ವೈಚಾರಿಕತೆಯ ಆಳದ ನಿಟ್ಟಿನಲ್ಲಿ ಹೇಳುವುದೇ ಆದಲ್ಲಿ, ಪ್ರೇಮಚಂದರು ತಮ್ಮ ಕಾಯಕವೆಂಬ ಕೃತಿಗಳ ಮೂಲಕ ಅಪಾರ ಶ್ರೀಮಂತಿಕೆಯನ್ನು ಈ ಲೋಕಕ್ಕೆ ಬಿಟ್ಟುಹೋಗಿದ್ದಾರೆ. ಈ ಮಹಾನ್ ಚೇತನಕ್ಕೆ ನಮ್ಮ ನಮನ.
On the birth anniversary of great writer Premchand
ಕಾಮೆಂಟ್‌ಗಳು