ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬ.ನ.ಸುಂದರರಾವ್


ಬ. ನ. ಸುಂದರರಾವ್

ಬ. ನ. ಸುಂದರರಾವ್ 'ವನವಿಹಾರಿ' ಕಾವ್ಯನಾಮದಿಂದ ಹೆಸರಾಗಿದ್ದವರು. ಅವರೊಬ್ಬ ಮಹತ್ವದ ಇತಿಹಾಸ ತಜ್ಞರೂ ಆಗಿದ್ದರು. 

ಸುಂದರರಾವ್  ಬೆಂಗಳೂರಿನ ವರ್ತೂರಿನಲ್ಲಿ 1918ರ ಮಾರ್ಚ್ 26ರಂದು ಜನಿಸಿದರು. ತಂದೆ ನರಸಿಂಹ ಮೂರ್ತಿ.  ತಾಯಿ ವಸಂತಲಕ್ಷ್ಮಮ್ಮ. ಇವರ ತಾತ ರಾಮಣ್ಣನವರು ಸಂಸ್ಕೃತ, ಕನ್ನಡ, ತೆಲುಗು ಭಾಷೆಯಲ್ಲಿ ಪ್ರಕಾಂಡ ಪಂಡಿತರಾಗಿದ್ದರು. ತಂದೆ ನರಸಿಂಹ ಮೂರ್ತಿಯವರು ಮಾಸ್ತಿಯವರ ಪರಮ ಶಿಷ್ಯರಾಗಿದ್ದರು. ಹೀಗೆ ಬ.ನ. ಸುಂದರರಾಯರಿಗೆ ಕನ್ನಡ ಸಾಹಿತ್ಯ  ವಂಶ ಪಾರಂಪರ‍್ಯ ವರದಾನವಾಗಿತ್ತು. ವರ್ತೂರಿನಲ್ಲಿ ಪ್ರಾಥಮಿಕ ಶಿಕ್ಷಣ ನಡೆಸಿದ ರಾಯರು ಇಮ್ಮಡಿ ಹಳ್ಳಿಯ ಶಂಕರನಾರಾಯಣರ ಬಳಿ ಮಾಧ್ಯಮಿಕ ಶಾಲೆಯಲ್ಲಿ ಓದಿದರು.  ಹೈಸ್ಕೂಲು ಓದಿದ್ದು ಮಾಗಡಿಯಲ್ಲಿ. ನಂತರ ಕಾಲೇಜಿಗೆ ನ್ಯಾಷನಲ್ ವಿದ್ಯಾ ಸಂಸ್ಥೆ ಸೇರಿದರು. ಬ. ನ. ಸುಂದರರಾವ್ ಕಾಲೇಜಿನಲ್ಲಿದ್ದಾಗಲೇ ಸಾಹಿತ್ಯ ರಚನೆ ಮಾಡಿದರು. ಅಂತರ ಕಾಲೇಜಿನ ಸ್ಪರ್ಧೆ, ಚರ್ಚಾಕೂಟಗಳಲ್ಲಿ ಅವರಿಗೆ ಮೊದಲ ಬಹುಮಾನ ಕಟ್ಟಿಟ್ಟ ಬುತ್ತಿ ಎನಿಸಿತ್ತು. 

ಬ. ನ. ಸುಂದರರಾವ್ ವ್ಯಾಸಂಗ ಮುಗಿಸಿದ ನಂತರ ಕೆಲಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿದರು.  ನಂತರ ಮೈಸೂರು ಸರಕಾರದ ವಿದ್ಯುಚ್ಛಕ್ತಿ ಮಂಡಲಿಯಲ್ಲಿ ಲೆಕ್ಕ ತನಿಕಾಧಿಕಾರಿಯಾದರು. 

ಸುಂದರರಾಯರು ಅಂದಿನ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿದ್ದ ಕೆ. ಎನ್. ಕಿಣಿಯವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ರಚಿಸಿದ ಶಿಕ್ಷಣಗ್ರಂಥ “ನಮ್ಮ ವಿದ್ಯಾಭ್ಯಾಸ” ಇಂದಿಗೂ ಉಪಾಧ್ಯಾಯರಿಗೆ ಅತ್ಯುತ್ತಮ ಕೈಪಿಡಿ ಎನಿಸಿದೆ. ಅವರು ಉತ್ತಮ ಸಂಶೋಧಕರು. ಬೆಂಗಳೂರಿನ ಇತಿಹಾಸದ ಬಗ್ಗೆ ಸಚಿವಾಲಯ ಕ್ಲಬ್‌ನಲ್ಲಿ ಸತತ ಮೂರು ವರ್ಷ ಭಾಷಣ ಮಾಡಿದರು. ಹೀಗೆ ರಚಿಸಿದ ಸಂಶೋಧನಾ ಗ್ರಂಥ ಸುಮಾರು ೭೦೦ ಪುಟದ ‘ಬೆಂಗಳೂರು ಇತಿಹಾಸ.’ ಇದು ಅಂದಿನ ಕಾಲದ ಬೆಂಗಳೂರಿನ ಬಗ್ಗೆ ಸಮಗ್ರ ಮಾಹಿತಿಯ ಉದ್ಗ್ರಂಥ.

ಸುಂದರರಾಯರು ರಚಿಸಿದ ಕೃತಿಗಳು ವೈವಿಧ್ಯಪೂರ್ಣ. ಸೈನ್ಯದ ಅನುಭವದ ಕೃತಿ ಭಾರತ ಪಾಕ್ ಸಮರ ಇತಿಹಾಸ, ಬಾಂಗ್ಲೋದಯ, ಯುದ್ಧದ ಹಡಗು ಹಾಗೂ ಸೈನಿಕ. ಗ್ರಾಮ ಜೀವನಕ್ಕೆ ಸಂಬಂಧಿಸಿದ ಕೃತಿಗಳು ಸುಗ್ಗಿಯ ಕತೆಗಳು, ಯೋಜನೆಯ ಕತೆಗಳು. ಮಕ್ಕಳಿಗಾಗಿ ಬರೆದದ್ದು ಆಯ್ದ ಐದು ಕಥೆಗಳು, ಮಂತ್ರಿ ಅಪ್ಪಾಜಿ, ಮಾನಿಟರ್ ಮಾಧು. ನರಹರಿ ಶಾಸ್ತ್ರಿಗಳು, ಚ.ವಾಸುದೇವಯ್ಯನವರು, ಕರ್ನಾಟಕ ವೀರಯೋಧರು ಮುಂತಾದವು ಜೀವನ ಚರಿತ್ರೆಗಳು. ಕಂದನ ಕಹಳೆ, ಸಂಧ್ಯಾವಿಹಾರ ಕವಿತಾ ಸಂಕಲನಗಳು. ಇದಲ್ಲದೆ ಬೆಂಗಳೂರಿನ ಭವ್ಯಕತೆ, ಚಲೋ ಮೈಸೂರು, ಚಲೋ ಹೈದರಾಬಾದ್, ರಸಿಕ ಕವಿ ಜಗನ್ನಾಥ ಮುಂತಾದ ಅನೇಕ ಕೃತಿಗಳನ್ನು ಪ್ರಕಟಿಸಿದ್ದರು.

ಬ. ನ. ಸುಂದರರಾಯರು 1986ರ ಅಕ್ಟೋಬರ್ 8ರಂದು ನಿಧನರಾದರು. 

Ba. Na.  Sundara Rao, 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ