ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಜ್ ಕುಮಾರ್



ರಾಜ್ ಕುಮಾರ್

ಹಿಂದಿ ಚಿತ್ರರಂಗದಲ್ಲೊಬ್ಬರು ರಾಜ್ ಕುಮಾರ್ ಇದ್ದರು. ಅವರ ಗಾಂಭೀರ್ಯ ತುಂಬಿದ ಅಭಿನಯ ಇಷ್ಟವಾಗುತ್ತಿತ್ತು.

ರಾಜ್ ಕುಮಾರ್ ಅವರು 1926ರ ಅಕ್ಟೋಬರ್ 8ರಂದು ಬ್ರಿಟಿಷ್ ಆಡಳಿತದ ಬಲೂಚಿಸ್ಥಾನದಲ್ಲಿನ ಲೊರಾಲೈ ಎಂಬಲ್ಲಿ ಜನಿಸಿದರು.  ಅವರ ಮೂಲ ಹೆಸರು ಕುಲಭೂಷಣ್ ಪಂಡಿತ್. 1940ರ ದಶಕದ ಕೊನೆಯವೇಳೆಗೆ ಇವರ ಕುಟುಂಬ ಮುಂಬೈಗೆ ವಲಸೆ ಬಂತು.

1952ರಲ್ಲಿ ಚಿತ್ರರಂಗಕ್ಕೆ ಬರುವ ಮುಂಚೆ ರಾಜ್ ಕುಮಾರ್ ಮುಂಬೈನಲ್ಲಿ ಕೆಲವು ವರ್ಷ ಪೋಲಿಸ್ ಅಧಿಕಾರಿಯಾಗಿದ್ದರು. ವಿಮಾನದಲ್ಲಿ ಪಯಣಿಸುವಾಗ ಗಗನಸಖಿ ಜೆನ್ನಿಫರ್ ಎಂಬಾಕೆ ಇಷ್ಟವಾಗಿ ಆಕೆಯನ್ನು ವಿವಾಹವಾದರು. ಆಕೆ ವಿವಾಹದ ನಂತರ ಗಾಯತ್ರಿ ಎಂದು ಹೆಸರಾದರು.

ರಾಜ್ ಕುಮಾರ್ 1952ರಲ್ಲಿ ರಂಗೀಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಆಬ್ಷರ್, ಘಮಂಡ್, ಲಾಕೋಂ ಮೇ ಏಕ್ ಮುಂತಾದ ಚಿತ್ರಗಳ ನಂತರ 1957ರಲ್ಲಿ ಸೊಹ್ರಾಬ್ ಮೋದಿ ಅವರ ನೌಶೇರ್‍ವಾನ್-ಎ-ಅದಿಲ್ ಚಿತ್ರದ ರಾಜನ ಪಾತ್ರ ಅವರಿಗೆ ಪ್ರಸಿದ್ಧಿ ತಂದಿತು.  ಅದೇ ವರ್ಷ ಮದರ್ ಇಂಡಿಯಾ ಚಿತ್ರದಲ್ಲಿ ನರ್ಗೀಸ್ ಅವರೊಡನೆ ನಟಿಸಿದರು. ದಿಲೀಪ್ ಕುಮಾರ್ ಜೊತೆ ಪೈಗಾಮ್, ಶಮ್ಮಿಕಫೂರ್ ಜೊತೆ ಉಜಾಲ ಚಿತ್ರದಲ್ಲಿ ನಟಿಸಿದರು. ದಿಲ್ ಏಕ್ ಮಂದಿರ್ ಚಿತ್ರದ ಪೋಷಕ ಪಾತ್ರ ನಿರ್ವಹಣೆ ಅವರಿಗೆ ಫಿಲಂಫೇರ್ ಪ್ರಶಸ್ತಿ ತಂದಿತು. 1965ರಲ್ಲಿ  ಚಿತ್ರರಂಗದ ಬಹುತಾರಾಗಣದ 'ವಕ್ತ್' ಚಿತ್ರದಲ್ಲಿ ನಟಿಸಿದರು. ಅವರ ವಿಶಿಷ್ಟ ರೀತಿಯ ಸಂಭಾಷಣೆ ಖ್ಯಾತಿಗೊಂಡಿತು.

ರಾಜ್ ಕುಮಾರ್ ಅವರ ಇತರ ಪ್ರಸಿದ್ಧ ಚಿತ್ರಗಳಲ್ಲಿ ಹಮ್ರಾಜ್, ಹೀರ್ ರಾಂಜ್ಹಾ, ಮರ್ಯಾದಾ, ಲಾಲ್ ಪತ್ಥರ್, ಫಕೀಜಾ, ಕುದ್ರತ್, ಏಕ್ ನಯಿ ಪಹೇಲಿ, ಮರ್ತೇ ದಮ್ ತಕ್, ಮುಖದ್ದರ್ ಕಾ ಫೈಸ್ಲಾ, ಜಂಗ್ ಬಾಸ್ ಮುಂತಾದವು ಸೇರಿವೆ. 1991ರಲ್ಲಿ 32 ವರ್ಷಗಳ ನಂತರ ಮತ್ತೊಮ್ಮೆ ದಿಲೀಪ್ ಕುಮಾರ್ ಅವರೊಡನೆ 'ಸೌದಾಘರ್' ಚಿತ್ರದಲ್ಲಿ ನಟಿಸಿದರು.  ತಿರಂಗ, ಗಾಡ್ ಅಂಡ್ ಗನ್ ಅವರ ಕೊನೆಯ ಚಿತ್ರಗಳು.

ಸುಮಾರು 60 ಚಿತ್ರಗಳಲ್ಲಿ ವಿಶಿಷ್ಟ ಪಾತ್ರಗಳಲ್ಲಿ ನಟಿಸಿದ್ದ ರಾಜ್ ಕುಮಾರ್ 1996ರಲ್ಲಿ ನಿಧನರಾದರು.


On the birth anniversary of fine actor Raaj Kumar 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ