ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮದನ್ ಲಾಲ್ ಧಿಂಗ್ರ


ಮದನ್ ಲಾಲ್ ಧಿಂಗ್ರ

ಭಾರತ ದೇಶಕ್ಕೋಸ್ಕರ ಹೋರಾಡಿದ ಮಹಾನ್ ವ್ಯಕ್ತಿ ಮದನ್ ಲಾಲ್ ಧಿಂಗ್ರ.  ಬಹುಶಃ ಬ್ರಿಟಿಷರ ನೆಲವಾದ ಇಂಗ್ಲೆಂಡಿನಲ್ಲಿ  ಮರಣ ದಂಡನೆಗೆ ಗುರಿಯಾದ ಮೊದಲ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಮದನ್ ಲಾಲ್ ಧಿಂಗ್ರ. 

ಮದನ್ ಲಾಲ್ ಧಿಂಗ್ರರು ಮನಸ್ಸು ಮಾಡಿದ್ದರೆ ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಜೀವಿಸಬಹುದಾಗಿತ್ತು.  1883ರ  ಫೆಬ್ರುವರಿ 18ರಂದು ಅಮೃತಸರದಲ್ಲಿ ಜನಿಸಿದ ಧಿಂಗ್ರ ಅವರದ್ದು  ಅತ್ಯಂತ  ಶ್ರೀಮಂತ ಕುಟುಂಬ.  ಅವರ ತಂದೆ ದಿತ್ತ ಮಲ್ ಸರ್ಕಾರಿ ಹಿರಿಯ ವೈದ್ಯರಾಗಿದ್ದವರು.   ಅಮೃತಸರದಲ್ಲಿ ಅವರ ಅಧಿಪತ್ಯದಲ್ಲಿ 21 ದೊಡ್ಡ ಮನೆಗಳು, 6 ಶ್ರೀಮಂತ ಬಂಗಲೆಗಳಿದ್ದುವಂತೆ.  ಮುಂದೆ ದತ್ತ ಮಲ್ ಅವರು ಈಗಿನ ಪಾಕಿಸ್ತಾನದಲ್ಲಿರುವ ಸಹಿವಾಲ್ ಎಂಬ ಗ್ರಾಮಕ್ಕೆ 1850ರಲ್ಲಿ ವಲಸೆ ಬಂದರು.  ಅಲ್ಲಿಯೂ ಅವರಿಗೆ ಪೂರ್ವಾರ್ಜಿತವಾಗಿ ಬಂದ ಅಪಾರ ಭೂಮಿ  ಮತ್ತು ಶ್ರೀಮಂತ ಬಂಗಲೆಗಳಿದ್ದವು.  ಅಂದಿನ ದಿನಗಳಲ್ಲಿ ರಾಜರುಗಳ ಬಳಿಯೂ ಇಲ್ಲದಿದ್ದಂತಹ  ಶ್ರೀಮಂತ ಕಾರು ಮತ್ತಿತರ ಭವ್ಯ  ಶ್ರೀಮಂತಿಕೆ ಅವರ ಬಳಿ ಇತ್ತು.     ಬ್ರಿಟಿಷ್ ಸರ್ಕಾರ ಅವರನ್ನು  ರಾಜ್ ಸಾಹೇಬ್ ಎಂದೇ ಗೌರವಿಸುತ್ತಿತ್ತು.  ಅವರಿಗೆ ಏಳು ಗಂಡು ಮಕ್ಕಳು ಮತ್ತು ಒಬ್ಬ ಪುತ್ರಿ ಇದ್ದರು.  ಮೂರು ಗಂಡು ಮಕ್ಕಳು ವೈದ್ಯರಾದರೆ, ಮೂರು ಮಕ್ಕಳು ಬ್ಯಾರಿಸ್ಟರ್ ಪದವಿ ಪಡೆದವರು. ಇನ್ನೊಬ್ಬ ಪುತ್ರ ಮಾತ್ರ ಅಪವಾದ......    

ಆತನೇ ಕ್ರಾಂತಿಕಾರಿಯಾದ ಮದನ್ ಲಾಲ್ ಧಿಂಗ್ರ.  ತನ್ನ ಓದಿನ ದಿನಗಳಲ್ಲಿ ಮದನ್ ಲಾಲ್ ಧಿಂಗ್ರ,  ಲಾಲಾ ಲಜಪತ್ ರಾಯ್ ಮತ್ತು ಭಗತ್ ಸಿಂಗ್ ಅವರ ಚಿಕ್ಕಪ್ಪ ಅಜಿತ್ ಸಿಂಗ್ ಅವರುಗಳು  ಸಂಘಟಿಸಿದ್ದ ‘ಪಗ್ಡಿ ಸಂಬಾಲ್ ಜತ್ತ’ ಎಂಬ ಚಳವಳಿಯಲ್ಲಿ ಪಾಲ್ಗೊಂಡು ಅದಕ್ಕಾಗಿ ದೈಹಿಕವಾಗಿ ಶ್ರಮಿಸಿದರು.  ಭಾರತೀಯ ಬಡತನ ಮತ್ತು ಕ್ಷಾಮದ ಪರಿಸ್ಥಿತಿಯ ಕುರಿತಾಗಿನ ತೀವ್ರವಾದ ಅಧ್ಯಯನವನ್ನು ಧಿಂಗ್ರ ಕೈಗೊಂಡರು.  ಸ್ವದೇಶಿ ಚಳುವಳಿಗೆ ಬದ್ಧನಾಗಿ ಲಾಹೋರಿನ ಕಾಲೇಜಿನ ದಿನಗಳಲ್ಲಿ ಬ್ರಿಟಿಷ್ ಸರ್ಕಾರ ವಿದೇಶಿ ಬಟ್ಟೆಯಲ್ಲಿ ತಯಾರಿಸಿದ ಕೋಟು ಧರಿಸಬೇಕೆಂದು ವಿಧಿಸಿದ್ದ ಶಿಸ್ತನ್ನು ವಿರೋಧಿಸಿ ಕಾಲೇಜಿನಿಂದಲೂ ಹೊರಹಾಕಲ್ಪಟ್ಟರು.  ಬ್ರಿಟಿಷರು ಕಾಲ್ಕಾ ಎಂಬಲ್ಲಿ ನಡೆಸುತ್ತಿದ್ದ ಕುದುರೆಗಾಡಿ ವ್ಯವಸ್ಥೆಯ  ‘ಟಾಂಗಾ ಸರ್ವಿಸ್’ ಸಂಸ್ಥೆಯಲ್ಲಿ ಗುಮಾಸ್ತರಾದರು.  ಅಲ್ಲಿಯೂ  ಕಾರ್ಮಿಕರ ಸಂಘಟನೆ ಮಾಡಲು ಹೋಗಿ ಕೆಲಸ ಕೆಲಸ ಕಳೆದುಕೊಂಡರು. ಕೆಲವೊಂದು ಕಾಲ ಮುಂಬೈನಲ್ಲಿ ಅಲ್ಲಿ ಇಲ್ಲಿ ಕೆಲಸ ಮಾಡಿ ತನ್ನ ಹಿರಿಯ ಸೋದರ ಡಾಕ್ಟರ್ ಬಿಹಾರಿ ಲಾಲ್ ಅವರ ಮಾತಿಗೆ ಗೌರವ ಕೊಟ್ಟು ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೊರಟರು.  

ಇಂಗ್ಲೆಂಡಿಗೆ ಬಂದ ಧಿಂಗ್ರ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ತೊಡಗಿದರಾದರೂ,  ಶೀಘ್ರದಲ್ಲಿ ಸ್ವಾತಂತ್ರ್ಯ ಚಳವಳಿಗೆ ಇಳಿದುಬಿಟ್ಟರು.  ಶ್ಯಾಮ್ಜಿ ಕೃಷ್ಣ ವರ್ಮ  ಮತ್ತು ವೀರ ಸಾವರ್ಕರ್ ಅವರ ಪ್ರಭಾವ ಧಿಂಗ್ರ ಅವರನ್ನು ಸೆಳೆದುಬಿಟ್ಟಿತು.  ಒಂದೇ ವಯಸ್ಸಿನವರಾದ ಶ್ಯಾಮ್ಜಿ ಕೃಷ್ಣ ವರ್ಮ ಮತ್ತು ಧಿಂಗ್ರ,  ಜೊತೆ ಜೊತೆಯಾಗಿ ಸ್ವಾತಂತ್ರ್ಯ ಕಾರ್ಯಗಳಲ್ಲಿ ತೊಡಗಿದ್ದರು.  ಆದರೆ ಬ್ರಿಟಿಷ್ ಸರ್ಕಾರದ ಕಿರುಕಳ ಹೆಚ್ಚಾಗಿ ಶ್ಯಾಮ್ಜಿ ವರ್ಮ ಪ್ಯಾರಿಸ್ಸಿಗೆ ವಲಸೆ ಹೋಗಬೇಕಾಯಿತು.  ಇತ್ತ ವೀರ ಸಾವರ್ಕರ್ ಅವರಿಂದ ಪ್ರೋತ್ಸಾಹಿತರಾದ ಧಿಂಗ್ರ ಇಂಗ್ಲೆಂಡಿನಲ್ಲಿ ಭಾರತೀಯರನ್ನು ಗುಪ್ತಚರರಾಗಿ ಬಳಸುವುದರಲ್ಲಿ ನಿಷ್ಣಾತರಾಗಿದ್ದ ಸರ್ ವಿಲಿಯಮ್ ಹಟ್ಟ್ ಕರ್ಜನ್ ವೈಲಿ ಎಂಬ ಅಧಿಕಾರಿಯನ್ನು  ಗುಂಡಿಕ್ಕೆ ಕೊಂದರು.  

ಸುಮಾರು ಒಂದೂವರೆ ತಿಂಗಳುಗಳ ಕಾಲ ವಿಚಾರಣೆಯ ನಂತರ 1909ರ ಆಗಸ್ಟ್ 17ರಂದು, 26ರ ಹರೆಯದ ಧಿಂಗ್ರರನ್ನು ಗಲ್ಲಿಗೇರಿಸಲಾಯಿತು.  ಭಗತ್ ಸಿಂಗರು ಭಾರತದ ಕ್ರಾಂತಿಕಾರಿಗಳ ಕುರಿತಾದ ಬರಹದಲ್ಲಿ ಮದನ್ ಲಾಲ್ ಧಿಂಗ್ರರನ್ನು ಗೌರವಪೂರ್ವಕವಾಗಿ ಸ್ಮರಿಸಿದ್ದಾರೆ.   

ಈ ಮಹಾನ್ ಭಾರತ ಮಾತೆಯ ಪುತ್ರನಿಗೆ ನಮನ 🌷🙏🌷

On the day our greatest freedom fighter Madan Lal Dhingra  gave life to our country...

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ