ಪಂಡಿತ್ ಜಸರಾಜ್
ಪಂಡಿತ್ ಜಸರಾಜ್
ಪಂಡಿತ್ ಜಸರಾಜ್ 1930ರ ಜನವರಿ 28ರಂದು ಜನಿಸಿದರು. ಇವರು ಸಣ್ಣವರಿದ್ದಾಗಲೇ ತಂದೆ ಹಠಾತ್ ತೀರಿಕೊಂಡರು. ಹೊಟ್ಟೆಪಾಡಿಗೆ ತಬಲಾ ಆಯ್ದುಕೊಂಡರು. ಅಣ್ಣ ಹಾಡುತ್ತಿದ್ದರೆ, ಇವರು ತಬಲಾ ಸಾಥ್ ನೀಡುತ್ತಿದ್ದರು. ಒಂದು ದಿನ ಹಿರಿಯ ಸಂಗೀತ ವಿದ್ವಾಂಸರೊಬ್ಬರು ಇವರಿಗೆ ಬೈದರು: "ಅದೇನು ಸತ್ತ ಪ್ರಾಣಿಯ ಚರ್ಮವನ್ನು ಹಾಗೆ ಬಡೀತಿಯಾ? ನಿನಗೆ ಸಂಗೀತದ ಸೂಕ್ಷ್ಮ ಸ್ವಲ್ಪವೂ ಗೊತ್ತಿಲ್ಲ”. ಅಂದೇ ನಿರ್ಧರಿಸಿದರು, "ಇನ್ನು ಮುಂದೆ ತಬಲಾ ಮುಟ್ಟುವುದಿಲ್ಲ, ಬರೀ ಹಾಡುತ್ತೇನೆ" ಎಂದು. ಸುಮಾರು 10 ವರ್ಷ ಅಣ್ಣ ತಮ್ಮ ಜೊತೆಯಾಗಿ ಹಾಡಿದರು. ಒಂದು ದಿನ ಇವರಣ್ಣ ಪಂಡಿತ್ ಮಣಿರಾಮ್‌ಜೀ ಅವರ ಧ್ವನಿ ನಿಂತುಹೋಯಿತು. ಅವರು ಜಸರಾಜ್ ಅವರ ಗುರುವೂ ಹೌದು. ಕುಟುಂಬ ಉಪವಾಸ ಬಿತ್ತು. ಸಾನಂದ್‌ನ ಮಹಾರಾಜ ಜೈವಂತ್ ಸಿಂಗರು ಇವರ ಕುಟುಂಬದ ಪೋಷಣೆಯ ಜವಾಬ್ದಾರಿ ವಹಿಸಿಕೊಂಡರು. ಮಹಾರಾಜರು ಕಾಳಿ ಉಪಾಸಕರು. ಇನ್ನು ಮುಂದೆ ಮಣಿರಾಮ್‌ಜೀ ಭಜನೆಯನ್ನು ಮಾತ್ರ ಹಾಡುವುದಾದರೆ ಕಾಳಿ ದೇವಸ್ಥಾನದಲ್ಲಿ ಧ್ವನಿ ಮರಳಿ ಸಿಗುತ್ತದೆ ಎಂದರು. ಅಣ್ಣ ಮಣಿರಾಮ್‌ಜೀ ಒಪ್ಪಿಕೊಂಡರು. ಮೊದಲೇ ನಿಗದಿಪಡಿಸಿದ್ದ ಒಂದು ಮಧ್ಯರಾತ್ರಿ ಇವರು, ಇವರಣ್ಣ ಮತ್ತು ಮಹಾರಾಜರು ದೇವಸ್ಥಾನದಲ್ಲಿ ಸೇರಿದರು. ಆಮೇಲೆ ಅಣ್ಣ ಇವರಿಗೆ ಹೇಳಿದ ಪ್ರಕಾರ, ಗರ್ಭಗುಡಿಯಿಂದ ಒಂದು ಧ್ವನಿ ಇವರ ಜೊತೆ ದೇಶ್ ರಾಗವನ್ನು ಅವರ ಅಣ್ಣನಿಂದ ಹಾಡಿಸಿತಂತೆ. ಹಾಗೇ ಧ್ವನಿ ಮರಳಿತಂತೆ. ಅದಾದ ಮೇಲೆ ಬೆಳಗಿನ ಜಾವದವರೆಗೂ ಅಣ್ಣ ಮಣಿರಾಮ್‌ಜೀ ಹಾಡುತ್ತಲೇ ಇದ್ದರು.
ಮಹಾರಾಜರು ಜಸರಾಜ್ ಅವರಿಗೂ ಸಂಗೀತದ ಸೂಕ್ಷ್ಮಗಳನ್ನು ನಿಧಾನವಾಗಿ ಅರ್ಥ ಮಾಡಿಕೊಳ್ಳಲು ಪ್ರೋತ್ಸಾಹಿಸಿದರು. ಅವರ ಜೊತೆ ಕವಿತಾ ವಾಚನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಸಂಗೀತಗಾರರ ಸಭೆಯಿದ್ದಾಗ ಜಸರಾಜ್ ಅವರನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಳ್ಳುತ್ತಿದ್ದರು.
ಜಸರಾಜರು ಶಾಲೆಗೆ ಹೋಗಿ ಓದಿದವರಲ್ಲ. ಸೋಮ್ ತಿವಾರಿ ಎಂಬ ಹೆಣ್ಣುಮಗಳು ಇವರಿಗೆ ಗುರುವೂ ಶಿಷ್ಯೆಯೂ ಆದರು. ಆಕೆ ಎಂ.ಎ ಗೋಲ್ಡ್ ಮೆಡಲಿಸ್ಟ್. ಆಕೆಗೆ ಜಸರಾಜ್ ಹಾಡಲು ಕಲಿಸಿದರು. ಆಕೆ ಇವರಿಗೆ ಓದು ಬರಹ ಕಲಿಸಿದರು. ಆಕೆ ಜಸರಾಜರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ವಹಿಸಿದ ಪಾತ್ರ ಮಹತ್ವದ್ದು. ಇವರ ಅಣ್ಣ ಅದೆಷ್ಟೇ ಸಿಡುಕಿದರೂ ಯಾವಾಗಲೂ ಅಣ್ಣನ ಜೊತೆಗಿರುವಂತೆ ಆಕೆ ಹೇಳುತ್ತಿದ್ದರು. "ನೀನಿನ್ನೂ ಸಣ್ಣವನು. ನೋಡಲು ಚೆನ್ನಾಗಿದ್ದೀಯ. ಕೊಲ್ಕತಾ ಶಹರದಲ್ಲಿ ಹಾಳಾಗಲು ಬೇಕಾದಷ್ಟು ದಾರಿಗಳಿವೆ. ಅವುಗಳಿಗೆ ಸೋಲಬೇಡ. ಅಣ್ಣನ ಜೊತೆಗಿರು. ಪ್ರತಿದಿನ ತಪ್ಪದೆ ರಿಯಾಜ್ ಮಾಡು..." ಇದು ಆಕೆ ಹೆಳುತ್ತಿದ್ದ ಉಪದೇಶ.
ಒಂದು ದಿನ ಜಸರಾಜ್ ಮನೆಗೆ ತಡವಾಗಿ ಬಂದರು. ಗುರುವಾಗಿದ್ದ ಸೋಮ್ ಅವರ ಷರತ್ತಿನ ಪ್ರಕಾರ ರಾತ್ರಿ 10ರೊಳಗೆ ಇವರು ಮನೆಯಲ್ಲಿರಬೇಕಿತ್ತು. ಆವತ್ತು ಒಂದು ತಾಸು ತಡವಾಗಿ ಬಂದರು. ಇವರ ತಪ್ಪಿಗೆ ಆವತ್ತೇ ಆಕೆ ಒಂದು ಆಣೆ ಮಾಡಿಸಿಕೊಂಡರು - “ಜಸರಾಜರಿಗೆ 30 ಆಗುವವರೆಗೆ ಟೀ ಕುಡಿಯುವಂತಿಲ್ಲ, 40 ಆಗುವವರೆಗೆ ಸಿಗರೇಟು ಸೇದುವಂತಿಲ್ಲ, 50 ತುಂಬುವವರೆಗೆ ಮದ್ಯಪಾನ ಮಾಡುವಂತಿಲ್ಲ... ಮತ್ತು ಒಂದು ದಿನವೂ ರಿಯಾಜ್ ತಪ್ಪಿಸುವಂತಿಲ್ಲ! “. ಆಕೆ ಜಸರಾಜರು ದಾರಿ ತಪ್ಪುವುದನ್ನು ತಪ್ಪಿಸಿದರು. ಅನೇಕ ಸಂದರ್ಭಗಳಲ್ಲಿ ಇವರನ್ನು ಕಾಪಾಡಿದರು. ಮುಂದೆ ಬಹುವರ್ಷ ಸೋಮ್ ಅವರು ಜಸರಾಜ್ ಅವರ ಪ್ರೀತಿಯ ‘ಅಮ್ಮ'ನಾಗಿ ಇವರ ಜೊತೆಗೇ ಇದ್ದರು.
ರೇಡಿಯೋ ಕಲಾವಿದರಾಗಿದ್ದ ಜಸರಾಜ್ 1954ರಲ್ಲಿ ಕೊಲ್ಕತಾದಲ್ಲಿ ಖ್ಯಾತ ಗಾಯಕಿ ಕೇಸರ ಬಾಯಿಯವರ ಸಂಗೀತ ಕಛೇರಿಗೆ ಹೋಗಿದ್ದರು. ದುರದೃಷ್ಟವಶಾತ್ ಟಿಕೆಟ್ ಕಳೆದುಕೊಂಡುಬಿಟ್ಟರು. ಜನಪ್ರಿಯ ರೇಡಿಯೋ ಗಾಯಕರಾಗಿದ್ದ ಇವರಿಗೇನೂ ಕಛೇರಿಗೆ ಪ್ರವೇಶ ಪಡೆಯುವುದು ಕಷ್ಟವಲ್ಲ ಎಂದುಕೊಂಡಿದ್ದರು. ಆದರೆ, ಯಾರಿಗೂ ಇವರ ಗುರುತೇ ಸಿಗಲಿಲ್ಲ. ಅಷ್ಟೇ ಅಲ್ಲ, ಇವರಿಗೆ ಅವಮಾನ ಮಾಡಿ ವಾಪಸ್ ಕಳಿಸಿದರು. ಕೊನೆಗೆ ಸೋಮ್ ಮತ್ತು ಖ್ಯಾತ ಗಾಯಕ ಎ. ಕಣಾಜಿ ಅವರು ಇವರನ್ನು ಒಳಗೆ ಕರೆದುಕೊಂಡು ಹೋಗಿ ಸಮಾಧಾನ ಮಾಡಿದರು- "ಒಂದು ದಿನ ಬರುತ್ತದೆ, ಆವತ್ತು ಸ್ವತಃ ಕೇಸರಬಾಯಿ ನಿನ್ನ ಹಾಡು ಕೇಳುತ್ತಾರೆ' ಎಂದರು.
ಇದಾದ ಬಹಳ ವರ್ಷಗಳ ನಂತರ ವಿಧಿ ಜಸರಾಜ್ ಅವರನ್ನೂ ಕೇಸರಬಾಯಿ ಅವರನ್ನೂ ವಿಚಿತ್ರ ಸನ್ನಿವೇಶದಲ್ಲಿ ಒಂದು ಕಡೆ ಸೇರಿಸಿತು. 1970ರಲ್ಲಿ ಒಂದು ಸಂಘದವರು ಕೇಸರಬಾಯಿ ಮತ್ತು ಮೋಘುಬಾಯಿ ಕುರ್ಡಿಕರ್ ಅವರಿಗೆ ಸನ್ಮಾನ ಮಾಡಲು ಜಸರಾಜ್ ಅವರನ್ನು ಕರೆದಿದ್ದರು. ಇವರಿಗೆ ರೈಲು ತಪ್ಪಿ ಹೋಯಿತು. ಅಕ್ಷರಶಃ ಹಳಿ ಪಕ್ಕದಲ್ಲಿ ಓಡುತ್ತಲೇ ಗ್ರಾಂಟ್ ರೋಡ್ ನಿಲ್ದಾಣದಿಂದ ಗಿರ್ಗಾಮ್ ಸಾಹಿತ್ಯ ಸಂಘಕ್ಕೆ ಹೋದರು. ಬಹಳ ತಡವಾಗಿತ್ತು. ಸಾವಿರಾರು ಜನ ಸೇರಿದ್ದರು. ಸಮಾರಂಭ ಇನ್ನೇನು ಮುಗಿಯುವುದರಲ್ಲಿತ್ತು. ವಾಚ್‌ಮನ್ ಗೌರವಪೂರ್ವಕವಾಗಿ ಒಳಗೆ ಕರೆದುಕೊಂಡು ಹೋದರು. ಇವರ ಆಶ್ಚರ್ಯಕ್ಕೆ ಮೈಕ್‌ನಲ್ಲಿ ಇವರು ಬಂದಿರುವುದನ್ನು ಅನೌನ್ಸ್ ಮಾಡಿಬಿಟ್ಟರು. ಜನರು ಭರ್ಜರಿ ಚಪ್ಪಾಳೆ ಹೊಡೆದರು. "ಆವತ್ತು ನನಗೆ ಬಿದ್ದ ಚಪ್ಪಾಳೆ ಮುಂದೆ ನನ್ನ ಒಂದೇ ಒಂದು ಸಂಗೀತ ಕಛೇರಿಗೂ ಸಿಕ್ಕಿಲ್ಲ" ಎನ್ನುತ್ತಿದ್ದರು ಜಸರಾಜ್. ಕೇಸರಬಾಯಿಯವರು ಜಸರಾಜ್ ಅವರನ್ನು ಗುರುತಿಸಿದ್ದಷ್ಟೇ ಅಲ್ಲ, ಇವರಿಗೆ ಬೈಯುವುದನ್ನು ಬಿಟ್ಟು ಕೆನ್ನೆ ಹಿಡಿದು ಮುಖ ಎತ್ತಿ, ಜೀವಮಾನದಲ್ಲಿ ಮರೆಯದಂತಹ ಮೆಚ್ಚುಗೆ ವ್ಯಕ್ತಪಡಿಸಿದರು- "ಪಂಡಿತ್, ನಿನ್ನ ಧ್ವನಿ ಅದ್ಭುತವಾಗಿದೆ. ತುಂಬಾ ಚೆನ್ನಾಗಿ ಹಾಡ್ತೀಯ" ಎಂದರು. ಬಹುಶಃ ರೇಡಿಯೋದಲ್ಲಿ ಅವರು ಜಸರಾಜ್ ಅವರ ಸಂಗೀತ ಕೇಳಿದ್ದರು.
ಒಮ್ಮೆ ರಿಷಿ ವ್ಯಾಲಿಯಲ್ಲಿ ಹಾಡಲು ಮಹಾನ್ ತತ್ವಶಾಸ್ತ್ರಜ್ಞ ಜೆ.ಕೃಷ್ಣಮೂರ್ತಿ ಅವರು ಜಸರಾಜ್ ಅವರನ್ನು ಕರೆಸಿದ್ದರು. ನೀವು ಹಾಡುವಾಗ ಅವರು ಮಧ್ಯದಲ್ಲೇ ಎದ್ದುಹೋದರೆ ಬೇಸರ ಮಾಡಿಕೊಳ್ಳಬಾರದೆಂದು ಮೊದಲೇ ಇವರಿಗೆ ವ್ಯವಸ್ಥಾಪಕರು ಹೇಳಿದ್ದರು. ಅದಕ್ಕೆ ಜಸರಾಜ್ ಮಾನಸಿಕವಾಗಿ ಸಿದ್ಧರಾಗಿದ್ದರು. ಸುಮಾರು ಒಂದೂವರೆ ತಾಸು ಹಾಡಿದರೂ ಅವರು ಕುಳಿತೇ ಇದ್ದರು. ನಂತರ ಎದ್ದುಹೋದರು. ಸ್ವಲ್ಪ ಸಮಯದ ನಂತರ ಇವರ ಪಕ್ಕದಲ್ಲಿದ್ದ ಹಾರ್ಮೋನಿಯಂ ವಾದಕ ಅಪ್ಪಾ ಜಲಗಾಂವಕರ್ ಕುಳಿತಲ್ಲೇ ಕೊಸರಾಡತೊಡಗಿದರು. ಅವರದು ದೊಡ್ಡ ದೇಹ. ಜಾಗ ಇಕ್ಕಟ್ಟಾಯಿತೇನೋ ಎಂದು ಜಸರಾಜ್ ಪಕ್ಕಕ್ಕೆ ಸರಿದುಕೊಂಡರು. ಆಮೇಲೆ ಅವರು ತಮ್ಮ ಗಮನ ಸೆಳೆಯಲು ಹಾಗೆ ಮಾಡುತ್ತಿದ್ದಾರೆಂದು ಜಸರಾಜ್ ಅವರಿಗೆ ತಿಳಿಯಿತು. ಕಣ್‌ಸನ್ನೆಯಲ್ಲೇ ಕಂಬದ ಕಡೆ ತೋರಿಸಿದರು. ಅಲ್ಲಿ ಕೃಷ್ಣಮೂರ್ತಿಯವರು ಕಂಬಕ್ಕೆ ಒರಗಿ ನಿಂತು ಆಲಿಸುತ್ತಿದ್ದರು. ಜಸರಾಜ್ ಹಾಡುತ್ತಲೇ ಹೋದರು. ಅವರು ಮತ್ತೆ ಬಂದು ಕುಳಿತರು. ಜಸರಾಜರು ಕಛೇರಿ ಮುಗಿಸುವುದಕ್ಕಿಂತ ಮುಂಚೆ ಸಂಸ್ಕೃತದಲ್ಲಿ ಏನಾದರೂ ಹಾಡಲು ಹೇಳಿದರು. ಹಾಡಿದರು. ಮುಗಿದ ಮೇಲೆ ಅವರ ಕಾಲಿಗೆರಗಲು ಹೋದರು. ತಬ್ಬಿಕೊಂಡು, "ನಿಮ್ಮ ಜಾಗ ಇಲ್ಲಿದೆ” ಎಂದು ಎದೆ ಮುಟ್ಟಿಕೊಂಡರು ಮಹಾನ್ ದಾರ್ಶನಿಕ ಜೆ. ಕೃಷ್ಣಮೂರ್ತಿ.
ಜಸರಾಜ್ ಒಂದು ದಿನ ಗಂಗಾನದಿಯ ದಡದಲ್ಲಿ ಕುಳಿತು ನೀರಿನ ನಿನಾದ ಆಲಿಸುತ್ತಿದ್ದರು. ಆವತ್ತು ಕೇಳಿದ ಜುಳುಜುಳುವಿನಲ್ಲಿ ಇವರಿಗೊಂದು ನೈಸರ್ಗಿಕ ಗಮಕದ ಬೋಧೆಯಾಯಿತು. ಅಂದಿನಿಂದ ಇವರ ಗಾಯನದ ಶೈಲಿ ನದಿಯ ಹರಿಯುವಿಕೆಯಂತಾಯಿತು. ಜಸರಾಜ್ ಅವರ ಪ್ರಕಾರ, "ಸಂಗೀತ ನಮ್ಮ ಸುಪ್ತ ಪ್ರಜ್ಞೆಯ ಆಳದಲ್ಲಿರುತ್ತದೆ. ಅದನ್ನು ಆಲಿಸಲು ಆಳ ಸಮುದ್ರದ ಸಂಪೂರ್ಣ ನಿಶ್ಶಬ್ದವನ್ನು ಅನುಭವಿಸಬೇಕು. ಅದರ ಬಗ್ಗೆ ಮಾತನಾಡಲಾಗದು". ಅನೇಕ ಸಲ ಕನಸಿನಲ್ಲಿ ಜಸರಾಜರಿಗೆ ಸಂಗೀತದ ಸಲಹೆಗಳು ಸಿಕ್ಕಿದ್ದವು. ಆಗ ಇವರು ಉಚ್ಚರಿಸಿದ ಶಬ್ದಗಳನ್ನು ಬರೆದುಕೊಳ್ಳಲು ಇವರ ಹೆಂಡತಿ ಮಧುರಾ ಎದ್ದು ಕುಳಿತಿದ್ದುದಿತ್ತು. ಸಂಗೀತದ ವಿಷಯದಲ್ಲಿ ಜಸರಾಜ್ ಅವರ ಜ್ಞಾಪಕ ಶಕ್ತಿ ಅದ್ಭುತವಾದುದಾಗಿತ್ತು. ಅವರು ಯಾವಾಗ ಬೇಕಾದರೂ ತಮ್ಮ ಎಲ್ಲಾ ಕನಸುಗಳನ್ನು ನೆನಪು ಮಾಡಿಕೊಳ್ಳಬಲ್ಲವರಾಗಿದ್ದರು.
ಪಂಡಿತ್ ಜಸರಾಜ್ 2020ರ ಇದೇ ದಿನವಾದ ಆಗಸ್ಟ್ 17ರಂದು ಈ ನಿಧನರಾದರು. ಸುತ್ತಲ ಪರಿಸರದಿಂದ ಮುಕ್ತಗೊಳಿಸಿಕೊಳ್ಳಲು ಜಸರಾಜ್ ಅವರು ಯಾವಾಗಲೂ ಓಂಕಾರದಿಂದ ಹಾಡಲು ಶುರುಮಾಡುತ್ತಿದ್ದರು. ಮೊದಲ ಕೆಲ ಕ್ಷಣಗಳು ಕಷ್ಟಕರವಾದರೂ, ಪ್ರಾರ್ಥನೆಯ ನಂತರವಷ್ಟೇ ಸ್ವರದಲ್ಲಿ ಒಂದಾಗುತ್ತಿದ್ದರು. ಜಸರಾಜ್ ಹೇಳುತ್ತಿದ್ದರು, "ನನಗನ್ನಿಸುತ್ತದೆ, ನಮ್ಮ ಜೀವಿತಾವಧಿಯಲ್ಲಿ ಸಂಗೀತದಲ್ಲಿ ಪರಿಪೂರ್ಣತೆ ಸಾಧಿಸಲು ಸಾಧ್ಯವಿಲ್ಲ. ಪ್ರತಿ ಜನ್ಮದಲ್ಲೂ ನೀವು ಹಿಂದಿನ ಜನ್ಮದಲ್ಲಿ ಬಿಟ್ಟ ಹಂತದಿಂದ ಮುಂದುವರೆಯುತ್ತೀರಿ. ಒಮ್ಮೆ ಇದು ಅರ್ಥವಾದರೆ ಸಂಗೀತಕ್ಕೆ ವಯಸ್ಸಿನ ಭೇದವಿಲ್ಲ ಎಂಬುದು ತಿಳಿಯುತ್ತದೆ. ಸಂಗೀತಯಾತ್ರೆಗೆ ಸಾವು ಯಾವ ರೀತಿಯಲ್ಲೂ ಅಂತ್ಯವಲ್ಲ”. ಜಸರಾಜ್ ಅವರ ಈ ಮಾತುಗಳು ಅವರ ಸಂಸ್ಮರಣಾ ದಿನವಾದ ಇಂದು ಇನ್ನಿಲ್ಲದಂತೆ ನೆನಪಾಗುತ್ತಿವೆ. ಅವರ ಹಾಡುಗಳನ್ನು ಆಗಾಗ ಧ್ಯಾನದ ರೂಪದಲ್ಲಿ ಅನುಭಾವಿಸುತ್ತಿದ್ದ ನನಗೆ ಅವರು ನನ್ನಲ್ಲೇ ಒಂದು ಅಂತರ್ಧ್ವನಿಯೇನೋ ಎಂಬಷ್ಟು ಆಪ್ತತೆ ಬೆಳೆಸಿದೆ.
ಜಸರಾಜ್ ಅವರ ಸಂಗೀತವನ್ನು ನೇರವಾಗಿ ಮತ್ತು ಶ್ರವ್ಯ ಮಾಧ್ಯಮದಲ್ಲಿ ಕೇಳುತ್ತಿದ್ದರೆ ಅದೆಂತದ್ದೋ ಅವಿಸ್ಮರಣೀಯ ಆನಂದ. ಕೆಲವೇ ವರ್ಷದ ಹಿಂದೆ ದಸರೆಯ ಸಂದರ್ಭದಲ್ಲಿ ಮೈಸೂರಿನ ಅರಮನೆ ಆವರಣದಲ್ಲಿ ಈ ಮಹನೀಯರ ಗಾಯನ ಸವಿಯನ್ನು ಸವಿಯುವ ಸೌಭಾಗ್ಯ ನನಗೂ ಸಂದಿತ್ತು. ವಿಶ್ವದೆಲ್ಲೆಡೆ ನಿನಾದಿಸುವ ಪಂಡಿತ್ ಜಸರಾಜ್ ಅವರ ಸಂಗೀತದ ಸೇವೆಗಾಗಿ ಪದ್ಮವಿಭೂಷಣವೂ ಸೇರಿದಂತೆ ಅನೇಕ ಗೌರವಗಳು ಅರಸಿ ಬಂದಿದ್ದವು.
ಈ ಮಹನೀಯರು ಮತ್ತು ಅವರ ಗಾನವನ್ನು ಅನುಭವಿಸಿದ ಹೃದಯ ಅವರು ಇಲ್ಲವೆಂದು ಒಪ್ಪುತ್ತಿಲ್ಲ. ಇಲ್ಲ, ಅವರು ನನ್ನೊಳಗೆಲ್ಲೋ ಸಂಗೀತದ ಪ್ರೀತಿಯಾಗಿ ಅಮರವಾಗಿ ಇದ್ದಾರೆ.
ಜಯಂತಿ ತೇ ಸುಕೃತಿನೋ
ರಸಸಿದ್ಧಾಃ ಕವೀಶ್ವರಾಃ |
ನಾಸ್ತಿ ಯೇಷಾಂ ಯಶಃಕಾಯೇ
ಜರಾಮರಣಜಂ ಭಯಮ್ ||
“ಶಾಸ್ತ್ರೀಯ ಧರ್ಮಾನುಷ್ಠಾನಗಳಿಂದ ಪುಣ್ಯಶಾಲಿಗಳಾದ ಕವಿಶ್ರೇಷ್ಠರು, ವಿದ್ವಾಂಸರು, ರಸಸಿದ್ಧರೆನಿಸುವವರು ಲೋಕದಲ್ಲಿ ಶ್ರೇಷ್ಠರಾಗಿರುತ್ತಾರೆ. ಅವರುಗಳ ಕೀರ್ತಿಯೆಂಬ ಶರೀರದಲ್ಲಿ ಮುಪ್ಪು, ಸಾವುಗಳಿಂದಾಗುವ ಭಯವೆಂಬುದು ಇರುವುದೇ ಇಲ್ಲ.”
On Remembrance Day of Pandit Jasraj
ಕಾಮೆಂಟ್‌ಗಳು