ಚಿ. ಸು. ಕೃಷ್ಣಶೆಟ್ಟಿ
ಚಿ. ಸು. ಕೃಷ್ಣಶೆಟ್ಟಿ
ಚಿ. ಸು. ಕೃಷ್ಣಶೆಟ್ಟಿ ಅವರು ಕಲಾವಿದರು, ಕಲಾ ವಿಮರ್ಶಕರು, ಬರಹಗಾರರು, ಸಂಘಟಕರು, ಕೇಂದ್ರ ಲಲಿತ ಕಲಾ ಅಕಾಡೆಮಿ ಮತ್ತು ರಾಜ್ಯ ಲಲಿತ ಕಲಾ ಅಕಾಡೆಮಿಗಳ ಆಡಳಿತಾಧಿಕಾರಿಗಳಾಗಿ ಮತ್ತು ಅಧ್ಯಕ್ಷರಾಗಿದ್ದವರು…., ಹೀಗೆ ಬಹುಮುಖಿ ಪ್ರತಿಭೆಗಳಿಂದ ಕಲೆ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಹೆಸರಾದವರು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವಾನ್ವಿತರು.
ಕೃಷ್ಣಶೆಟ್ಟಿಯವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ 1952ರ ಆಗಸ್ಟ್ 17ರಂದು ಜನಿಸಿದರು. ತಂದೆ ಸಿ.ಪಿ. ಸುಬ್ಬಯ್ಯಶೆಟ್ಟಿ ಅವರು. ತಾಯಿ ಸರೋಜಮ್ಮನವರು.
ಕೃಷ್ಣಶೆಟ್ಟಿಯವರು ದಾವಣಗೆರೆಯ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಕ್ರಾಫ್ಟ್ ಇಂದ ಉನ್ನತ ಶ್ರೇಣಿಯಲ್ಲಿ ರಾಷ್ಟ್ರೀಯ ಡಿಪ್ಲೋಮ ಪಡೆದರು. ಮುಂದೆ ಕೇಂದ್ರ ಲಲಿತ ಕಲಾ ಅಕಾಡಮಿಯ ವಿದ್ಯಾರ್ಥಿವೇತನ ಗಳಿಸಿ ದೆಹಲಿಯ ಗಾರಿ ಸ್ಟುಡಿಯೋದಲ್ಲಿ ಸಂಶೋಧನಾತ್ಮಕ ಸಾಧನೆಗಳಿಂದ ಗ್ರಾಫಿಕ್ ಕಲೆಯಲ್ಲಿ ಪರಿಣತಿ ಪಡೆದರು. ಇದಲ್ಲದೆ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಹಾಗೂ ಭಾರತೀಯ ವಿದ್ಯಾಭವನದಿಂದ ಸಾರ್ವಜನಿಕ ಸಂಪರ್ಕ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಕೃಷ್ಣಶೆಟ್ಟಿ ಅವರು ದಾವಣಗೆರೆಯ ಸ್ಕೂಲ್ ಆಫ್ ಆರ್ಟ್ಸ್(University College Of Visual Art)ನಲ್ಲಿ ಉಪನ್ಯಾಸಕರಾಗಿ, ಪ್ರಸಿದ್ಧ ಸಂಸ್ಥೆಗಳಾದ ಕ್ಲಾರಿಯಾನ್ ಜಾಹೀರಾತು ಸಂಸ್ಥೆಯಲ್ಲಿ ಕಲಾವಿದರಾಗಿ ಮತ್ತು ಕಲಾನಿರ್ದೇಶಕರಾಗಿ, ವಿನ್ಯಾಸ್ ಜಾಹೀರಾತು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ, ಬಿಇಎಂಎಲ್ ಸಂಸ್ಥೆಯ ಪ್ರಧಾನ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾಗಿ ಹೀಗೆ ವಿವಿಧ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದವರು.
ಕೃಷ್ಣಶೆಟ್ಟಿ ಅವರು ಅಮೆರಿಕದ 'ಫೆಸ್ಟಿವಲ್ ಆಫ್ ಇಂಡಿಯಾ' ಕಲಾಮೇಳದಲ್ಲಿ 1985-86ರಲ್ಲಿ ಭಾಗವಹಿಸಿದ್ದರು. ಅಲ್ಲಿ ಪ್ರದರ್ಶನಗೊಂಡ ಇವರ ಕಲಾಕೃತಿಗಳನ್ನು ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ಲಾಸ್ ಏಂಜಲೀಸ್, ಟೆಕ್ಸಾಸ್ ಮತ್ತು ಪೆನ್ಸಿಲ್ವೇನಿಯಾ ಸೇರಿದಂತೆ ಅಮೆರಿಕದ 17 ಪ್ರಮುಖ ಗ್ಯಾಲರಿಗಳಲ್ಲಿ ಪ್ರದರ್ಶಿಸಲಾಯಿತು. 2019ರಲ್ಲಿ 3 ತಿಂಗಳ ಕಾಲ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇವರ ಏಕವ್ಯಕ್ತಿ ಪ್ರದರ್ಶನವನ್ನು ಆಯೋಜಿಸಲಾಗಿತ್ತು, ಇದು ಕಲಾವಿದರೊಬ್ಬರಿಗೆ ಸಂದ ಅಪರೂಪದ ಗೌರವವಾಗಿದೆ. 1988ರಲ್ಲಿ, ಯುನೈಟೆಡ್ ಕಿಂಗ್ಡಂನ ಮ್ಯಾಂಚೆಸ್ಟರ್ನಲ್ಲಿನ ಸಮೂಹ ಪ್ರದರ್ಶನದಲ್ಲಿ ಇವರ ಕಲೆಗಳನ್ನು ಪ್ರದರ್ಶಿಸಲಾಯಿತು. 2001 ರಲ್ಲಿ ಇವರು ಪೋಲೆಂಡ್‌ನ ಮುನ್ಸಿಪಲ್ ಗ್ಯಾಲರಿಯಲ್ಲಿ ನಡೆದ ಅಂತರರಾಷ್ಟ್ರೀಯ ಗ್ರಾಫಿಕ್ಸ್ ಪ್ರದರ್ಶನದಲ್ಲಿ ಭಾಗವಹಿಸಿದರು. 2002 ರಲ್ಲಿ ಫಿಲಿಪೈನ್ಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಪ್ರದರ್ಶನದಲ್ಲಿ ಭಾಗವಹಿಸಿದರು. ಭೋಪಾಲ್‌ನ ಭಾರತ್ ಭವನದ ಅಂತರಾಷ್ಟ್ರೀಯ ಬೈನಾಲೆಯಲ್ಲಿ ಭಾಗವಹಿಸಿದ್ದರು. 2018 ರಲ್ಲಿ ಮೊದಲ ಪ್ರಿಂಟ್ ಬಿನಾಲೆ-ಇಂಡಿಯಾದಲ್ಲಿ ಪಯೋನಿಯರ್ಸ್ ಆಫ್ ಪ್ರಿಂಟ್ ಮೇಕಿಂಗ್ ವಿಭಾಗದಲ್ಲಿ ಇವರ ಕೃತಿಗಳನ್ನು ಪ್ರದರ್ಶಿಸಲಾಯಿತು. ಇವರು ಅನೇಕ ಕೇಂದ್ರ ಲಲಿತ ಕಲಾ ಅಕಾಡೆಮಿಯ ರಾಷ್ಟ್ರೀಯ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ರಾಷ್ಟ್ರೀಯ ಕಲಾ ಮೇಳ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರದರ್ಶನಗಳು; ನವದೆಹಲಿ, ಹೈದರಾಬಾದ್, ಮದ್ರಾಸ್, ಭುವನೇಶ್ವರ್, ಬಾಂಬೆ, ಗೋವಾ, ಉದಯಪುರ, ಲಕ್ನೋ ಮತ್ತು ಇತರ ಪ್ರಮುಖ ನಗರಗಳಲ್ಲಿ ನಡೆದ ವಿವಿಧ ಸಮೂಹ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ರಾಷ್ಟ್ರಪತಿ ಭವನ (2019) ಸೇರಿದಂತೆ ಬೆಂಗಳೂರು, ಚೆನ್ನೈ, ನವದೆಹಲಿಯಲ್ಲಿ ಹದಿನೇಳು ಬಾರಿ ಏಕವ್ಯಕ್ತಿ ಪ್ರದರ್ಶನಗಳನ್ನು ನಡೆಸಿದ್ದಾರೆ 1984-85 ರಲ್ಲಿ ಕರ್ನಾಟಕ ಕಲಾ ಯಾತ್ರೆ ಪ್ರವಾಸಿ ಪ್ರದರ್ಶನದಲ್ಲಿ ಭಾಗವಹಿಸಿದರು ಮತ್ತು ಕರ್ನಾಟಕದಾದ್ಯಂತ ಪ್ರವಾಸ ಮಾಡಿದರು. ಕರ್ನಾಟಕ ಲಲಿತಕಲಾ ಅಕಾಡೆಮಿ ಕರ್ನಾಟಕದಾದ್ಯಂತ ನಡೆಸಿದ ಚಿತ್ರ ಯಾತ್ರೆ ಟ್ರಾವೆಲಿಂಗ್ ಶೋನಲ್ಲಿ ಭಾಗವಹಿಸಿದರು.
ಬೆಂಗಳೂರು ಮತ್ತು ಇತರ ಸ್ಥಳಗಳಲ್ಲಿ ವಿವಿಧ ಸಂದರ್ಭಗಳಲ್ಲಿ ಅನೇಕ ಸಮೂಹ ಪ್ರದರ್ಶನಗಳಲ್ಲಿ ಭಾಗವಹಿಸಿದರು. ಲಲಿತ ಕಲಾ ಅಕಾಡೆಮಿ ಮತ್ತು ಸಂಸ್ಕಾರ ಭಾರತಿ ಸೇರಿದಂತೆ ಅನೇಕ ಅಂತರಾಷ್ಟ್ರೀಯ ಆನ್‌ಲೈನ್ ಶೋಗಳಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರಿನ ವಿಜಯ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ 10 x 30 ಅಡಿ ವ್ಯಾಪ್ತಿಯ ಲೋಹದ ಮ್ಯೂರಲ್ ಕಲಾಕೃತಿಯನ್ನು ವಿನ್ಯಾಸಗೊಳಿಸಿದ್ದಾರೆ.
ಕೃಷ್ಣಶೆಟ್ಟಿ ಅವರು ಬರಹಗಾರರಾಗಿಯೂ ಖ್ಯಾತರು. ಪತ್ರಿಕೆಗಳಲ್ಲಿ ಅಂಕಣಗಾರರಾಗಿ ಮತ್ತು ಕಲಾ ನಿಯತಕಾಲಿಕಗಳಲ್ಲಿ ಸಂಪಾದಕರಾಗಿ ಅವರ ಬರಹಗಳು ಜನಪ್ರಿಯ. ಚಿತ್ರ-ಚಿತ್ತ(2000 ದಶಕದ ಶ್ರೇಷ್ಠಕೃತಿ ಎಂಬ ಪ್ರಶಸ್ತಿ ವಿಜೇತ ಕೃತಿ), ವರ್ಣಾವರಣ, ದೃಶ್ಯಕಲೆ ಎಂದರೇನು?
Expressionism, ಲೋಹಫಲಕ ಮಾಂತ್ರಿಕ (LP Anchan) , ಎಂಟಿವಿ ಆಚಾರ್ಯ ಯೂಸುಫ್ ಅರಕ್ಕಲ್ ಮುಂತಾದವು ಇವರ ಕೃತಿಗಳಲ್ಲಿ ಸೇರಿವೆ.
ಕೃಷ್ಣಶೆಟ್ಟಿ ಅವರು ಬೆಂಗಳೂರಿನ ದೂರದರ್ಶನಕ್ಕಾಗಿ ಚಿತ್ರಾಂತರಂಗ, ಮರೀಚಿಕೆ, ನವಿಲುಗರಿ; ಸುಪ್ರಭಾತ ವಾಹಿನಿಗಾಗಿ ಜೀವನಚಕ್ರ ಧಾರಾವಾಹಿ; ಶೈಕ್ಷಣಿಕ ಕಾರ್ಯಕ್ರಮಗಳು, ಮೈಸೂರು 'ಸಾಂಪ್ರಾದಾಯಿಕ ವರ್ಣಚಿತ್ರಕಲೆ' ಡಾಕ್ಯುಮೆಂಟರಿ ಮುಂತಾದುವನ್ನು ಮೂಡಿಸಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆಗಾಗಿ ಹಲವು ಕಿರು ಚಲನಚಿತ್ರಗಳು, ರಸಪ್ರಶ್ನೆ ಕಾರ್ಯಕ್ರಮಗಳ ನಿರ್ಮಾಣ ಮತ್ತು ನಿರ್ದೇಶನ, ಅನೇಕ ಕಲಾವಿದರ ಸಂದರ್ಶನಗಳನ್ನು ಮಾಡಿದ್ದಾರೆ.
ಮಾಸ್ಕೋದ ರಷ್ಯನ್ ಅಕಾಡೆಮಿ ಆಫ್ ಆರ್ಟ್ಸ್ ಸದಸ್ಯತ್ವ ಗೌರವ, ವಿನ್ಸೆಂಟ್ ಆರ್ಟ್ ಗ್ಯಾಲರಿಯ ವಿನ್ಸೆಂಟ್ ಗೋಗ್ ಪ್ರಶಸ್ತಿ, 2017ರ ರಾಜಾ ರವಿವರ್ಮ ಪ್ರಶಸ್ತಿ, 2020ರಲ್ಲಿ ಕರ್ನಾಟಕ ಸರ್ಕಾರದ ವೆಂಕಟಪ್ಪ ಪ್ರಶಸ್ತಿ, ರಾಜೀವ್ ಗಾಂಧೀ ರಾಷ್ಟ್ರೀಯ ರತ್ನ ಪ್ರಶಸ್ತಿ, 2003ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,, 2002ರಲ್ಲಿ ಕರ್ನಾಟಕ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ಜಾಮಿನಿ ರಾಯ್ ಜನ್ಮಶತಾಬ್ದಿ ಸರ್ಟಿಫಿಕೇಟ್ ಆಫ್ ಮೆರಿಟ್, 1987ರಲ್ಲಿ ಕೋಲ್ಲತ್ತಾದ ಪ್ರದರ್ಶನದಲ್ಲಿ ಎಂ. ಎಫ್. ಹುಸೇನ್ ನೇತೃತ್ವದ ಜ್ಯೂರಿ ಗೌರವ,
2004ರಲ್ಲಿ ಅಮೆರಿಕದಿಂದ ಅಂತಾರಾಷ್ಟ್ರೀಯ ವ್ಯಕ್ತಿ, ಸಹ್ಯಾದ್ರಿ ಪ್ರಶಸ್ತಿ, ಮೈಸೂರು ದಸರಾ ಪ್ರಶಸ್ತಿ, ಸಂಚಾರಿ ಪೋಲೀಸ್ ಪ್ರದರ್ಶನದ ಕಲಾ ಪ್ರಶಸ್ತಿ,
ಮುಂತಾದ ಅನೇಕ ಗೌರವಗಳು ಕೃಷ್ಣಶೆಟ್ಟಿ ಅವರಿಗೆ ಸಂದಿವೆ. ಕಲಾವಿಮರ್ಶಕರಾದ ಕೃಷ್ಣಶೆಟ್ಟಿ ಅವರ 'ವರ್ಣಾವರಣ’ ಕೃತಿಗೆ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನದ ದಶಕದ ಶ್ರೇಷ್ಠ ಸಾಹಿತ್ಯ ಪ್ರಶಸ್ತಿಗೆ ಸಂದಿದೆ.ಇದೇ ಕೃತಿಗೆ ಗೊರೂರು ಪ್ರಶಸ್ತಿಯೂ ಸಂದಿತ್ತು. ಬೆಂಗಳೂರಿನ ಇನ್ಸ್ಟಿಟ್ಯೂಷನ್ ಆಫ್ ಟ್ರಾನ್ಸ್ಲೇಷನ್ ಸ್ಟಡೀಸ್ ಗೌರವ, ಮಯೂರ ಪ್ರಶಸ್ತಿ, ಗದಗಿನ ಕಲಾ ಚೇತನ ಪ್ರಶಸ್ತಿ, ಉಪಾಧ್ಯಾಯ ಸಮ್ಮಾನ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸುವರ್ಣ ಕರ್ನಾಟಕ ಗೌರವ, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸುವರ್ಣ ಕರ್ನಾಟಕ ಗೌರವ, ಭಾರತ ವಿಕಾಸ ರತ್ನ ರಾಷ್ಟ್ರೀಯ ಪ್ರಶಸ್ತಿ, ಹಾಲಭಾವಿ ರಾಷ್ಟ್ರೀಯ ಗೌರವವಾದ ಕರ್ನಾಟಕ ಸರ್ಕಾರದ 'ಕುಂಚ ಕಲಾಶ್ರೀ' ಪ್ರಶಸ್ತಿ, ಕಲಾತಪಸ್ವಿ ಪ್ರಶಸ್ತಿ, ಉಜ್ಜಯಿನಿಯ ಕಲಾವೃತ್ ನ್ಯಾಸ್‍ನ ರಾಷ್ಟ್ರೀಯ ಸ್ವಸ್ತಿ ಸಮ್ಮಾನ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಚಿ. ಸು. ಕೃಷ್ಣಶೆಟ್ಟಿ ಅವರು ನವದೆಹಲಿಯ ಕೇಂದ್ರ ಲಲಿತ ಕಲಾ ಅಕಾಡೆಮಿಯ ಆಡಳಿತಾಧಕಾರಿಗಳಾಗಿ ಮತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇವರು ಕರ್ನಾಟಕ ಲಲಿತಕಲಾ ಅಕಾಡಮಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಇದಲ್ಲದೆ ಅನೇಕ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಜ್ಯೂರಿ ಸದಸ್ಯರಾಗಿ ಮತ್ತು ಮುಖ್ಯಸ್ಥರಾಗಿ, ಅನೇಕ ಕಲಾ ಸದುದ್ದೇಶಗಳ ಸಮಿತಿಯ ನೇತೃತ್ವ ವಹಿಸಿದವರಾಗಿ ಮಹತ್ವದ ಸೇವೆ ಸಲ್ಲಿಸಿದ್ದಾರೆ. ಅನೇಕ ಚಿತ್ರಕಲಾ ಪ್ರದರ್ಶನಗಳು ಮತ್ತು ಚಿತ್ರಕಲಾ ಕಲಿಕೆ ಶಿಬಿರಗಳ ಸಂಘಟನೆಗಳಿಗೆ ಕಾರಣಕರ್ತರಾಗಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲೂ ಅವರ ಸಮಾಜಮುಖಿ ಕಾರ್ಯವೈವಿಧ್ಯಗಳು ಹೆಸರಾಗಿವೆ. ಇವರ ಕಲಾಕೃತಿಗಳು ವಿಶ್ವದಾದ್ಯಂತ ಅನೇಕ ಕಲಾರಾಧಕರ ಪ್ರಸಿದ್ಧ ಸಂಗ್ರಹಗಳಲ್ಲಿ ರಾರಾಜಿಸಿವೆ.
ಹಿರಿಯರಾದ ಚಿ. ಸು. ಕೃಷ್ಣಶೆಟ್ಟಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Chi. Su. Krishna Setty, Chi Su Krishna Shetty
ಕಾಮೆಂಟ್‌ಗಳು