ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಾರೆನ್ ಬಫೆಟ್


 ವಾರೆನ್ ಬಫೆಟ್ 

ವಿಶ್ವದ ಮಹಾನ್ ಶ್ರೀಮಂತ, ಶ್ರೇಷ್ಠ ಹೂಡಿಕೆದಾರರಾಗಿದ್ದು ಮುಂದೆ ಮಹಾನ್ ದಾನಿಯಾಗಿ ರೂಪುಗೊಂಡವರು  ವಾರೆನ್ ಬಫೆಟ್.

ವಾರೆನ್ ಬಫೆಟ್  1930ರ ಆಗಸ್ಟ್ 30ರಂದು ಜನಿಸಿದರು.  ಪುಟ್ಟ ವಯಸ್ಸಿನಲ್ಲೇ ಕೋಕಾ ಕೋಲಾ ಕ್ಯಾನುಗಳನ್ನು ಲಾಭಕ್ಕೆ ಮಾರಿ, ಪೇಪರ್ ಹಾಕಿ ದುಡ್ಡು ಮಾಡಿ, ವಿಶ್ವದ ಹಣಕಾಸೆಂಬ ಮಾಯೆಯ ಲೋಕದಲ್ಲಿ ನಿರಂತರವಾಗಿ ಎಂಟು ದಶಕಗಳಿಗೂ ಹೆಚ್ಚು ಕಾಲ ಶ್ರೇಷ್ಠ ಹೂಡಿಕೆದಾರನಾಗಿಯೇ ಉಳಿದ ಈ ವಿಸ್ಮಯಕಾರಿ ಉದ್ಯಮಿಯ ಬಗ್ಗೆ ಲಕ್ಷಾಂತರ ಗ್ರಂಥಗಳೇ ಮೂಡಿ ಬಿಟ್ಟಿವೆ.  ಇವೆಲ್ಲದರ ನಡುವೆ ಆತ ತಾನು ಎಂದೋ ಕೊಂಡ ಹಳೆಯ ಮನೆಯಲ್ಲೇ ವಾಸವಾಗಿದ್ದಾರೆ.  ಮೊಬೈಲು, ಹಾಳು ಮೂಳು ಇತ್ಯಾದಿ ಉಪಯೋಗಿಸುವುದಿಲ್ಲ. ತಮ್ಮ ಕಾರನ್ನು ತಾವೇ ನಡೆಸುತ್ತಾರೆ.  ಮನೆಯಲ್ಲಿ ಆಳು ಕಾಳುಗಳ ಬಾಬತ್ತಿಲ್ಲ.   ಅವರಷ್ಟು ಸಮರ್ಥವಾಗಿ ವ್ಯಾಪಾರೀ ಉದ್ಯಮಗಳ ಜಾತಕವಾದ 'ಬ್ಯಾಲೆನ್ಸ್ ಷೀಟ್'ಗಳನ್ನು ಓದುವವರು ಮತ್ತೊಬ್ಬರಿಲ್ಲ.   2008ರ ವರ್ಷದಲ್ಲಿ  ವಿಶ್ವದಲ್ಲೇ  ಅತ್ಯಂತ  ಶ್ರೀಮಂತರೆನಿಸಿದ್ದ  ಈತ  ತಮ್ಮ ಬಹುಪಾಲು  ಶ್ರೀಮಂತಿಕೆಯನ್ನು  ಸಮಾಜಸೇವೆಗೆ  ಕೊಟ್ಟನಂತರವೂ  ಈಗಲೂ   145 ಬಿಲಿಯನ್  ಡಾಲರ್  ಮೌಲ್ಯವುಳ್ಳ  ವಿಶ್ವದ   ಮಹಾನ್  ಶ್ರೀಮಂತರಲ್ಲೊಬ್ಬರಾಗಿದ್ದಾರೆ. ಅವರು ಸ್ಥಾಪಿಸಿ ಮುನ್ನಡೆಸುತ್ತಿರುವ ಸಂಸ್ಥೆಯ ಹೆಸರು ಬರ್ಕ್‍ಶೈರ್ ಹಾಥವೇ.

ವಾರೆನ್ ಬಫೆಟ್ ಕೆಲವು   ವರ್ಷದ ಹಿಂದೆ  ಹೇಳಿದ ಒಂದು ಮಾತು ನೆನಪಾಗುತ್ತದೆ.  "ನನ್ನ ಮಕ್ಕಳಿಗೆ ಏನನ್ನೂ ಮಾಡಲಿಚ್ಚಿಸಿದರೂ ಅದಕ್ಕೆ ಬೇಕಾಗುವಷ್ಟು ಹಣವನ್ನು ನಾನು ಮುಡಿಪಾಗಿಡಬಯಸುತ್ತೇನೆ.  ಆದರೆ ಅವರಿಗೆ ಏನನ್ನೂ ಮಾಡದೆ ಇದ್ದು ಬಿಡೋಣ ಎಂದೆನಿಸುವ  ಕ್ಷುದ್ರ ರೀತಿಯ  ಬದುಕಿಗೆ ಮಾತ್ರ  ನಾನು ಕಾಸು ಕೊಡಲು ತಯಾರಿಲ್ಲ".  ಹಣ ಗಳಿಸಿದವನಿಗೆ ಮಾತ್ರ ಹಣದ ಬೆಲೆ ಗೊತ್ತಿರುತ್ತದೇನೋ.  ಇತ್ತೀಚಿನ ವರ್ಷಗಳಲ್ಲಿ ಈ ಮಹಾನ್ ಶ್ರೀಮಂತ ತಮ್ಮ ಬಹುತೇಕ ಸಂಪತ್ತನ್ನು ಮತ್ತೊಬ್ಬ ಮಹಾನ್ ಶ್ರೀಮಂತ ಬಿಲ್ ಗೇಟ್ಸ್ ಸ್ಥಾಪಿಸಿದ ಗೇಟ್ಸ್ ಮಿಲಿಂದ ಫೌಂಡೇಷನ್ನಿಗೆ ಬರೆದುಕೊಟ್ಟರು.   ವಾರೆನ್ ಬಫೆಟ್, ಬಿಲ್ ಗೇಟ್ಸ್  ಮತ್ತು  ಫೇಸ್ಬುಕ್ ನಿಮಾತೃ ಮಾರ್ಕ್  ಜೂಕರ್  ಬರ್ಗ್ ತಮ್ಮ  ಗಳಿಕೆಯಲ್ಲಿ  ಕಡೇ ಪಕ್ಷ  ತಮ್ಮ ಸಂಪತ್ತಿನ ಶೇಕಡಾ  50ರಷ್ಟನ್ನು  ಸಮಾಜಕ್ಕೆ  ಕೊಡುಗೆಯಾಗುವ  ನೀಡುವ  ‘ಗಿವಿಂಗ್  ಪ್ಲೆಡ್ಜ್’ ಒಡಂಬಡಿಕೆಗೆ ಸಹಿ ಹಾಕಿದ್ದು, ಇದು  ವಿಶ್ವದ ಇತರ  ಸಂಪತ್ಭರಿತ ವ್ಯಕ್ತಿಗಳನ್ನು ಈ ನಿಟ್ಟಿನಲ್ಲಿ ಪ್ರೇರಿಸುವ  ಉದ್ದೇಶವನ್ನು ಹೊಂದಿದೆ.  ವೈಯಕ್ತಿಕವಾಗಿ  ಬಫೆಟ್  ತಮ್ಮ ಶೇಕಡಾ  99ರಷ್ಟೂ  ಸಂಪತ್ತನ್ನೂ  ಸಮಾಜಕ್ಕೆ  ಮೀಸಲಿರಿಸುವುದಾಗಿ  ಘೋಷಿಸಿದ್ದಾರೆ.  ಇವಿಷ್ಟೇ  ಅಲ್ಲದೆ  ಪರಮಾಣು  ಭೀತಿ ನಿವಾರಣೆ,  ಹೆಣ್ಣು ಮಕ್ಕಳ  ಕ್ಷೇಮಾಭಿವೃದ್ಧಿಯಂತಹ  ಮಹತ್ವದ  ಧ್ಯೇಯಗಳಿಗಾಗಿ  ಸಹಾ  ಹಣಸಂಗ್ರಹ  ಮಾಡಿಕೊಟ್ಟಿದ್ದಾರೆ.  

ವಾರೆನ್ ಬಫೆಟ್ ಅವರಿಗೀಗ 94 ವರ್ಷ.

On the birthday of investor, business tycoon, and philanthropist Warren Edward Buffet 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ