ಟಿ. ಆರ್. ಅನಂತರಾಮು
ಟಿ. ಆರ್. ಅನಂತರಾಮು
ಡಾ. ತಾಳಗುಂದ ರಾಮಣ್ಣ ಅನಂತರಾಮು ಅವರು ಕನ್ನಡ ಭಾಷೆಯಲ್ಲಿನ ವೈಜ್ಞಾನಿಕ ಬರವಣಿಗೆಗಳಲ್ಲಿ ಕಳೆದ 5 ದಶಕಗಳಿಗೂ ಮೀರಿ ಗಣನೀಯ ಕೃಷಿ ಮಾಡುತ್ತ ಬಂದಿದ್ದಾರೆ.
ಅನಂತರಾಮು 1949ರ ಆಗಸ್ಟ್ 30ರಂದು ಶಿರಾ ತಾಲ್ಲೂಕಿನ ತಾಳಗುಂದದಲ್ಲಿ ಜನಿಸಿದರು. 1972ರ ವರ್ಷದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಟಿ. ಆರ್ ಅನಂತರಾಮು, ಮೊದಲಿಗೆ ನಾಲ್ಕು ವರ್ಷಗಳ ಕಾಲ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜು ಮತ್ತು ಸೂರತ್ಕಲ್ಲಿನಲ್ಲಿ ಅಧ್ಯಾಪಕರಾಗಿ ಭೂ-ವಿಜ್ಞಾನವನ್ನು ಬೋಧಿಸಿ, ನಂತರದಲ್ಲಿ 31 ವರ್ಷಗಳ ಸುದೀರ್ಘ ಅವಧಿಯವರೆಗೆ ಭಾರತೀಯ ಭೂ-ವಿಜ್ಞಾನ ಸರ್ವೇಕ್ಷಣ ಸಂಸ್ಥೆಯಲ್ಲಿ ವಿಜ್ಞಾನಿಗಳಾಗಿ ಸೇವೆ ಸಲ್ಲಿಸಿ 2008ರ ವರ್ಷದಲ್ಲಿ ಸೇವೆಯಿಂದ ನಿವೃತ್ತರಾದರು. ಅವರ ವಿಜ್ಞಾನಯಾನ ಈ ವರ್ಷದಲ್ಲಿ 50 ವರ್ಷಗಳನ್ನು ಪೂರೈಸಿದೆ.
ಟಿ. ಆರ್. ಅನಂತರಾಮು ಒಬ್ಬ ಭೂವಿಜ್ಞಾನಿ, ಸಂಶೋಧಕ, ಪರಿಶೋಧಕ, ಅಂಕಣಕಾರ, ವಿಜ್ಞಾನ ಲೇಖಕರು ಮತ್ತು ಸಂಪಾದಕರು. ವಿವಿಧ ಪತ್ರಿಕೆಗಳಲ್ಲಿ ವಿಜ್ಞಾನ ಸಂಬಂಧಿತವಾದ ಸಾವಿರಕ್ಕೂ ಹೆಚ್ಚು ವಿಚಾರಪೂರ್ಣ ಲೇಖನಗಳನ್ನು ಅವರು ಬರೆದಿದ್ದಾರೆ. ಐವತ್ತಕ್ಕೂ ಹೆಚ್ಚು ಸಂಖ್ಯೆಯ ಗ್ರಂಥಗಳನ್ನು ರಚಿಸಿದ್ದಾರೆ. ಸಾಮಾನ್ಯ ಓದಿಗೆ ನಿಲುಕದ್ದು ಎನಿಸಬಹುದಾದಂತಹ ವೈಜ್ಞಾನಿಕ ಚಿಂತನೆಗಳನ್ನು ಆಸಕ್ತಿ ಹುಟ್ಟಿಸುವಂತೆ ಜನರಿಗೆ ಉಣಬಡಿಸುತ್ತಿರುವ ಟಿ.ಆರ್.ಅನಂತರಾಮು ’ಕನ್ನಡ ವಿಶ್ವಕೋಶ’, ’ಜ್ಞಾನ-ವಿಜ್ಞಾನ ಕೋಶ', 'ಕಿರಿಯರ ಕರ್ನಾಟಕ, ಕರ್ನಾಟಕ ಸಂಗಾತಿ', 'ಕರ್ನಾಟಕ ಕೋಶ’, ‘ವಿಜ್ಞಾನ-ತಂತ್ರಜ್ಞಾನ ನಿಘಂಟು’ ಮುಂತಾದ ಪರಾಮರ್ಶಿಕ ಗ್ರಂಥಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ.
'ಕನ್ನಡದಲ್ಲಿ ಭೂವಿಜ್ಞಾನ ಸಾಹಿತ್ಯ'. ’ಎಂ. ಎಸ್. ಕೃಷ್ಣನ್’, 'ಭೂಮಿಯ ಅಂತರಾಳ', ’ಬಿಸಿನೀರಿನ ಬುಗ್ಗೆಗಳು’, ’ಬದಲಾಗುತ್ತಿರುವ ಭೂಮಿ’, ’ಹಿಮದ ಸಾಮ್ರಾಜ್ಯದಲ್ಲಿ’, ’ಭೂಮಿಯ ವಯಸ್ಸು’, ’ಭೂಗರ್ಭ ಯಾತ್ರೆ’, ’ಬೆಳೆಯುತ್ತಿರುವ ಹಿಮಾಲಯ’, ’ರಾಜರ ಲೋಹ-ಲೋಹಗಳ ರಾಜ: ಚಿನ್ನ’, ’ಜ್ವಾಲಾಮುಖಿ’, ’ಪೆಡಂಭೂತಗಳು ಅಳಿದವೇಕೆ?’, ’ವಿಶ್ವವಿಖ್ಯಾತ ನೈಸರ್ಗಿಕ ವಿಕೋಪಗಳು’, 'ರತ್ನಗಳು’, ’ಭೂಕಂಪನಗಳು’, ’ಮಳೆ’, ’ಆಲ್ಫ್ರೆಡ್ ವೆಗೆನರ್ ಕನ್ನಡ ಪುಸ್ತಕ’, ’ಸಂಪನ್ಮೂಲಗಳಿಗಾಗಿ ಸಮುದ್ರ ಮಥನ’, ’ನಮ್ಮ ಜಲ ಸಂಪನ್ಮೂಲಗಳು’, ’ಪೆಡಂಭೂತಗಳು ಮಕ್ಕಳ ಸಚಿತ್ರಕೋಶ’, ’ಪ್ರಿ ಹಿಸ್ಟಾರಿಕ್ ಅನಿಮಲ್ಸ್’, ’ಕಾವೇರಿ ಹರಿದು ಬಂದು ದಾರಿ’, ’ಭೂವಿಜ್ಞಾನ’ , ’ಅಂಟಾರ್ಕ್ ಟಿಕ್ ನಿರ್ದೇಶನಾಲಯ’, ’ಚೌಚೌ ಚಾಕಿ’, ’ಕಾಲಗರ್ಭಕ್ಕೆ ಕೀಲಿಕೈ’, ’ಪ್ರಾಚೀನ ಭಾರತದಲ್ಲಿ ಲೋಹ ತಂತ್ರಜ್ಞಾನ’, ’ಪೆಟ್ರೋಲ್’ , ’ವರಾಹಮಿಹಿರ’, ’ಬಾನಂಗಳದ ಬತ್ತಳಿಕೆಯಲ್ಲಿ’, ’ತ್ರಿವಿಕ್ರಮ ಹೆಜ್ಜೆಗಳು’, ’ವಿಸ್ಮಯಗಳ ನಾಡಿನಲ್ಲಿ’, ’ಬೀರ್ಬಲ್ ಸಾಹ್ನಿ’, ’ಶಕ್ತಿಸಾರಥಿ ರಾಷ್ಟ್ರಪತಿ : ಅಬ್ದುಲ್ ಕಲಾಂ’, ’ಸೃಷ್ಟಿವಾದಿಗಳ ಮುಷ್ಟಿಯಲ್ಲಿ ಡಾರ್ವಿನ್’, ’ಕರ್ತಾರನಿಗೊಂದು ಕಿವಿಮಾತು’, ’ಪರಿಸರಸ್ಥಿತಿ ವರದಿ ಮತ್ತು ಕಾರ್ಯಯೋಜನೆ’, ’ಸರಸ್ವತೀ ನದಿ’, ’ದಿವ್ಯನೇತ್ರ’, ’ಅಮೂಲ್ಯ ರೆಡ್ಡಿ’, ’ದಣಿಯಿಲ್ಲದ ಧರಣೆ’, ’ಸುನೀತಾ ವಿಲಿಯಮ್ಸ್’(ಅನುವಾದ), ’ಪಶ್ಚಿಮಮುಖಿ’
(ಪ್ರವಾಸಕಥನ), ’ಲೋಹವಿದ್ಯಾಪಲಾರಂಗತ’ , ’ತಂತ್ರಪ್ರಪಂಚದಲ್ಲಿ ನ್ಯಾನೋ ಮಂತ್ರ’, ’ಋಷಿನಮನ’, ’ಅಂಟಾರ್ಕ್ಟಿಕ ಕಥೆ’, ’ಸರ್ ಎಂ. ವಿಶ್ವೇಶ್ವರಯ್ಯ’ : ’ಸಾಧಕನ ಹೆಜ್ಜೆಗಳು’, ’ಡಾರ್ವಿನ್ ಕಂಡ ಗಲಪಗಾಸ್ ದ್ವೀಪ’, ’ದೂರದರ್ಶಕ ಕಂಡ ವಿಶ್ವರೂಪ’, ‘ವಿಜ್ಞಾನ ಜಗತ್ತು ೨೦೧೦’, ‘ಮರ್ಫಿ ಲಾ: ಏಕೆ ಎಲ್ಲವೂ ಉಲ್ಟಾಪಲ್ಟ?’, ಪ್ರೊ.ಎಚ್. ಆರ್. ರಾಮಕೃಷ್ಣ ರಾವ್ ಜೊತೆ ಗೂಡಿ 'ಕನ್ನಡದಲ್ಲಿ ವಿಜ್ಞಾನ ಸಂವಹನೆ', ಬಿ.ಜಿ.ಎಲ್ ಸ್ವಾಮಿ ಅವರ ವಿಶಿಷ್ಟ ಬರಹಗಳ ಸಂಕಲನ 'ಮೀನಾಕ್ಷಿಯ ಸೌಗಂಧ', 'ನಮ್ಮ ದೇಹದ ವಿಜ್ಞಾನ' ಮುಂತಾದ ಅನೇಕ ಕೃತಿಗಳು ಹಾಗೂ ನಿರಂತರವಾಗಿ ಹರಿದುಬರುತ್ತಿರುವ ವಿವಿಧ ನಿಯತಕಾಲಿಕೆಗಳು ಮತ್ತು ಅಂತರಜಾಲ ಮಾಧ್ಯಮಗಳಲ್ಲಿ ಹರಿದು ಬರುತ್ತಿರುವ ಚಿಂತನ ಮತ್ತು ವಿದ್ವತ್ ಪೂರ್ಣ ಬರಹಗಳು ಅನಂತರಾಮು ಅವರಿಗಿರುವ ಆಳವಾದ ಅಧ್ಯಯನ, ಆಸಕ್ತಿ, ಪಾಂಡಿತ್ಯ ಮತ್ತು ವಿಶಾಲ ಹರವುಗಳ ದ್ಯೋತಕವಾಗಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ‘ಹಿಮದ ಸಾಮ್ರಾಜ್ಯ’, ‘ಕರ್ತಾರನಿಗೊಂದು ಕಿವಿ ಮಾತು’, ‘ಪಶ್ಚಿಮ ಮುಖಿ’ ಕೃತಿಗಳಿಗೆ ಪ್ರಶಸ್ತಿಗಳು, 'ವಿಜ್ಞಾನದ ಹೆದ್ದಾರಿಯಲ್ಲಿನ ಮಹಾತಿರುವುಗಳು' ಕೃತಿಗೆ ನವದೆಹಲಿಯ ಪ್ರಕಾಶಕರ ಒಕ್ಕೂಟದ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿನ ದತ್ತಿ ಪ್ರಶಸ್ತಿ, ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಶ್ರೇಷ್ಠ ಪುಸ್ತಕ ಪ್ರಶಸ್ತಿ, ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಶ್ರೇಷ್ಠ ಪುಸ್ತಕ ಪ್ರಶಸ್ತಿ, ವಿಜ್ಞಾನ ಶಿಕ್ಷಕರು ಮತ್ತು ಸಂವಹಕರಿಗೆ ನೀಡಲಾಗುವ ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರತಿಷ್ಠಾನ ಪ್ರಶಸ್ತಿ, ಪರಿಸರ ಸಂರಕ್ಷಣೆಗಾಗಿನ ಪತ್ರಿಕೋದ್ಯಮ ಪ್ರಶಸ್ತಿ, ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟೊರೇಟ್, ಶಿರಾ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸಿಎನ್ಆರ್ ರಾವ್ ಜೀವಮಾನ ಸಾಧನೆಯ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಅನಂತರಾಮು ಅವರಿಗೆ ಸಂದಿವೆ.
ಅನಂತರಾಮು ಅವರು ಅನೇಕ ಉಪನ್ಯಾಸ, ಕಮ್ಮಟಗಳ ನಿರ್ವಹಣೆಗಳ ಮುಖಾಂತರ ನಾಡಿನಾದ್ಯಂತ ವಿಜ್ಞಾನದ ಬರಹಗಳತ್ತ ಮತ್ತು ಚಿಂತನೆಗಳತ್ತ ಯುವ ಜನಾಂಗವನ್ನು ಪ್ರೇರೇಪಿಸುವ ಕೆಲಸ ಮಾಡುತ್ತಿದ್ದಾರೆ.
ಈ ಸರಳ ಸಜ್ಜನಿಕೆಯ ವಿದ್ವತ್ಪೂರ್ಣ ವೈಜ್ಞಾನಿಕ ಚಿಂತಕ ವಿದ್ವಾಂಸರಿಗೆ ಹುಟ್ಟುಹಬ್ಬದ ಆತ್ಮೀಯ ಶುಭ ಹಾರೈಕೆಗಳನ್ನು ಸಲ್ಲಿಸೋಣ.
Happy birthday Thalagunda Anantharamu Sir
ಕಾಮೆಂಟ್‌ಗಳು