ಬಾಳಪ್ಪ ಹುಕ್ಕೇರಿ
ಬಾಳಪ್ಪ ಹುಕ್ಕೇರಿ
ಬಾಳಪ್ಪ ಹುಕ್ಕೇರಿ ಅಂದರೆ ನಗುನಗುತ್ತಾ ಉತ್ಸಾಹದಿಂದ ಹಾಡುತ್ತಿದ್ದ ಆಜಾನುಬಾಹು ಸರದಾರರೊಬ್ಬರ ನೆನಪಾಗುತ್ತದೆ. ‘ಬಾರಿಸು ಕನ್ನಡ ಡಿಂಡಿಮವ ಹಾಡು’ ಅವರ ಧ್ವನಿಯಲ್ಲಿ ಪದ ಪದವೂ ತನ್ನ ಅರ್ಥ ವ್ಯಾಪ್ತಿಯನ್ನು ಹಬ್ಬಿಸುತ್ತಿದ್ದ ರೀತಿ ಅವಿಸ್ಮರಣೀಯ. “ಓದಿ ಬ್ರಾಹ್ಮಣನಾಗು, ಕಾದಿ ಕ್ಷತ್ರಿಯನಾಗೂ, ಶೂದ್ರ ವೈಶ್ಯನೆ ಆಗು ದುಡಿದು ಗಳಿಸಿ, ಏನಾದರೂ ಆಗು ನಿನ್ನೊಲವಿನಂತಾಗು, ಏನಾದರೂ ಸರಿಯೇ ಮೊದಲು ಮಾನವನಾಗು” ಎಂಬುದರ ಅನುಭಾವವನ್ನು ಲೋಕದಲ್ಲೆಲ್ಲಾ ಬಾಳಪ್ಪನವರಷ್ಟು ಹೃದಯದಾಳಕ್ಕೆ ತಂದವರು ಬೇರೊಬ್ಬರುಂಟೆ.
ಸಾವಿರ ಹಾಡಿನ ಸರದಾರರೆಂದೇ ಖ್ಯಾತಿ ಪಡೆದು, ‘ಹಾಡನ್ನು ಹರವೋಣ, ಮತ್ಸರ ಮರೆಯೋಣ’ ಎಂಬ ಧ್ಯೇಯ ವಾಕ್ಯ ಸ್ವೀಕರಿಸಿದ ಜಾನಪದ ಗೀತ ಗಾರುಡಿಗ ಬಾಳಪ್ಪ ವೀರಭದ್ರಪ್ಪ ಹುಕ್ಕೇರಿ ಕನ್ನಡ ನಾಡು ಕಂಡ ಅದ್ಭುತ ವ್ಯಕ್ತಿತ್ವಗಳಲ್ಲಿ ಒಬ್ಬರು. ಒಬ್ಬ ಹಳ್ಳಿಯ ನಿವಾಸಿ ತನ್ನ ಹಳ್ಳಿಯನ್ನು, ಹಳ್ಳಿಯ ಜನರನ್ನು ಪ್ರೀತಿಸುತ್ತಾ; ಹುಟ್ಟಿದ ಹಳ್ಳಿಯ ವ್ಯಾಮೋಹವನ್ನು ಬಿಡದೆ, ದಿಲ್ಲಿಯವರೆಗೆ ತನ್ನ ಕಾರ್ಯಕ್ಷೇತ್ರವನ್ನು ಹರಹಿಕೊಂಡ ರೀತಿ ಇತಿಹಾಸವೇ ಹುಬ್ಬೇರಿಸುವಂಥದ್ದು. ಇಷ್ಟೆಲ್ಲ ಕೀರ್ತಿ, ಯಶಸ್ಸು ಬಂದದ್ದು ಅವರ ಹಾಡುಗಾರಿಕೆಯಿಂದ. ಇಷ್ಟೊಂದು ಎತ್ತರಕ್ಕೇರಿದ್ದು, ಜೊತೆಗೆ ಆ ಹಾಡುಗಾರಿಕೆ ಬಗ್ಗೆ ಎಲ್ಲರಲ್ಲಿ ಗೌರವ ಹೆಚ್ಚುವಂತೆ ಮಾಡಿದ್ದು, ಬಾಳಪ್ಪನವರ ಮಹತ್ವದ ಸಾಧನೆ.
ಇದನ್ನೆಲ್ಲ ಗಮನಿಸಿದ ಗೊ. ರು. ಚನ್ನಬಸಪ್ಪನವರು ಹೇಳುತ್ತಾರೆ: “ಓಡಾಡಿ ಹಣ್ಣಾದವರು ಕೆಲವರು. ನಾಡಿನಾದ್ಯಂತ ಐವತ್ತು ವರ್ಷಗಳಿಂದ ಹಾಡಿದ ಬಾಳಪ್ಪ ಹುಕ್ಕೇರಿ ಅವರು ಮಾತ್ರ ಹಣ್ಣಾಗಿರಲಿಲ್ಲ. ತಮ್ಮ ಕಡೆಯುಸಿರಿನ ತನಕ ಅವರಲ್ಲಿತ್ತು ಇಪ್ಪತ್ತರ ಹರೆಯದ ಉತ್ಸಾಹ. ಮೋಜಿನ ಮಾತು, ನಗೆಯ ನುಡಿ! ಬಾಳಪ್ಪ ಓರ್ವ ಅಪರೂಪದ ಕಲಾವಿದ. ಮತ್ತೊಬ್ಬ ಬಾಳಪ್ಪನವರನ್ನು ಕಾಣುತ್ತೇವೆಂದು ಹೇಳಲಾಗದು” .
ಬಾಳಪ್ಪ ಬೆಳಗಾಂ ಜಿಲ್ಲೆಯ ಸೌದತ್ತಿ ತಾಲ್ಲೂಕಿನ ಮುರಗೋಡ ಗ್ರಾಮದಲ್ಲಿ, 1911ರ ಆಗಸ್ಟ್ 21ರಂದು ಜನಿಸಿದರು. ತಂದೆ ವೀರಭದ್ರಪ್ಪ. ತಾಯಿ ಚೆನ್ನವೀರಮ್ಮ. ತನ್ನ ಜೀವಮಾನದ ಆರು ದಶಕಗಳನ್ನು ಕಲಿತದ್ದು ಕೇವಲ ಐದನೇ ಈಯತ್ತೆವರೆಗೆ. ಬೈಲಹೊಂಗಲದಲ್ಲಿ ಜಾನ್ಸನ್ ಹೈಸ್ಕೂಲಿನಲ್ಲಿ ಮುಂದುವರಿಕೆ ಮಾಡಲು ಪ್ರಾರಂಭವೇನೋ ಮಾಡಿದರು. ಆದರೆ ಪೂರ್ಣ ಹೈಸ್ಕೂಲು ಶಿಕ್ಷಣ ಮುಗಿಸಲು ಆಗದ ಬಡತನದ ಬವಣೆ ಇವರನ್ನು ಕಾಡಿತು.
ಮುರಗೋಡದಲ್ಲಿ ಕಲಾಕಾರರ ಬೀಡೇ ಇತ್ತು. ತಾಯಿ ಜಾನಪದ ಗೀತೆ ಹಾಡುವಾಕೆ, ದೊಡ್ಡಪ್ಪನಿಗೆ ಸಂಗೀತದ ಪರಿಚಯವಿತ್ತು. ಮಗ್ಗಲು ಮನೆಯ ಶಿವಲಿಂಗಯ್ಯನವರೇ ಬಾಳಪ್ಪನಿಗೆ ಸಂಗೀತ ಹೇಳಿಕೊಟ್ಟರು. ಗಂಗಾಧರ ಕೆಲಗೇರಿಯವರು ಗುಬ್ಬಿ ನಾಟಕ ಕಂಪನಿಯ ಕಲಾವಿದರಾಗಿದ್ದರು. ಮಲ್ಲಿಕಾರ್ಜುನ ಹಣ್ಣಿಕೇರಿ ನೃತ್ಯ ಬಲ್ಲವರಾಗಿದ್ದರು. ಕೃಷ್ಣ ಪಾರಿಜಾತದ ಜೋಶಿ, ದೊಡ್ಡಾಟದ ಗುರುಪಾದಪ್ಪ ಕರ್ಜಗಿ, ಸಂಗ್ಯಾಬಾಳ್ಯಾ ಸಣ್ಣಾಟದ ಈರಪ್ಪ, ಪ್ರಸಿದ್ಧ ಲಾವಣಿಕಾರರಾದ ರಾಣು ಕುಬಣ್ಣ – ಇವರೆಲ್ಲ ಮುರಗೋಡದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯ ವಾತಾವರಣ ನಿರ್ಮಾಣ ಮಾಡಿದವರು. ಬಾಳಪ್ಪನವರ ಮೇಲೆ ಇವೆಲ್ಲ ಪ್ರಭಾವಗಳು ಸಹಜವಾಗಿಯೇ ಆಗಿದ್ದವು.
ಬಾಳಪ್ಪನವರಿಗೆ ಗಾಯನ ಪ್ರತಿಭೆ ಹುಟ್ಟಿನಿಂದಲೇ ಬಂದುದು. ತಮ್ಮ ತಾಯಿಯ ಮಡಿಲಲ್ಲೇ ಜನಪದ ಗಾಯನದ ದೀಕ್ಷೆ ಪಡೆದರು. ದೊಡ್ಡಪ್ಪನವರಾದ ಬಾಳಪ್ಪನವರೇ ಇವರ ಸಂಗೀತ ಶಿಕ್ಷಣದ ಮೊದಲ ಗುರು. ನಂತರ ಶ್ರೀ ಶಿವಲಿಂಗಯ್ಯನವರ ಹತ್ತಿರ ಸಂಗೀತದ ಅಭ್ಯಾಸ ಮಾಡಿದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹಾಡುಗಾರಿಕೆಯನ್ನೇ ಮುಂದುವರೆಸಿದ್ದರೆ ಬಾಳಪ್ಪನವರು ಒಬ್ಬ ಶ್ರೇಷ್ಠ ಶಾಸ್ತ್ರೀಯ ಸಂಗೀತಗಾರರಾಗಬಹುದಿತ್ತು. ಆದರೆ ಧಾರವಾಡದ ಮೃತ್ಯುಂಜಯ ಸ್ವಾಮಿಗಳು, ಶಿ.ಶಿ. ಬಸವನಾಳರು, ಸಿದ್ಧಯ್ಯ ಪುರಾಣಿಕರು - ಇವರೆಲ್ಲರ ಸಲಹೆಯ ಮೇರೆಗೆ ಬಾಳಪ್ಪನವರು ಲಘುಸಂಗೀತ-ಸುಗಮ ಸಂಗೀತವನ್ನು ಆಶ್ರಯಿಸಿದರು.
ಜನಪ್ರಿಯ ಸದಭಿರುಚಿಯ ಹಾಡುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಬಾಳಪ್ಪನವರಿಗೆ ಶಾಸ್ತ್ರೀಯ ಸಂಗೀತದ ಜೊತೆ ಜೊತೆಗೆ ರಂಗಗೀತೆಗಳ ಅನುಭವವೂ ಇದ್ದದ್ದು ಗಮನಾರ್ಹ. ಅದರಿಂದಲೇ ಅವರ ಗಾಯನದಲ್ಲಿ ರಂಗಗೀತೆಯ ಧಾಟಿಗಳ ಛಾಯೆ ದಟ್ಟವಾಗಿರುವುದು ಗಮನಕ್ಕೆ ಬರುತ್ತದೆ. ಜನಪದದ ವಿವಿಧ ಹಾಡುಗಳ ಧಾಟಿಗಳು-ಸೋಬಾನ, ಕುಟ್ಟುವ, ಬೀಸುವ, ಲಾವಣಿ-ಮುಂತಾದವುಗಳ ಧಾಟಿಗಳು, ಮರಾಠಿ ಅಭಂಗಗಳು, ಹಿಂದಿ ಭಜನೆಗಳು ಇವುಗಳ ಪರಿಚಯ ಇದ್ದುದರಿಂದ ಅವರ ಹಾಡುಗಾರಿಕೆಗೆ ಒಂದು ವೈಶಿಷ್ಟ್ಯತೆ ಇದ್ದುದು ಗಮನಾರ್ಹವಾಗಿದೆ. ಅವರ ದನಿಯಲ್ಲಿದ್ದ ಆಲಾಪ, ಪಲಕುಗಳು ಅವರ ಗಾಯನಕ್ಕೆ ಒಂದು ವಿಶೇಷ ಮೆರಗನ್ನು ತರುತ್ತಿದ್ದವು.
ಈ ಎಲ್ಲ ಸಂಪತ್ತುಗಳಿಂದ ಬಾಳಪ್ಪನವರು ಇಡೀ ದೇಶದ ತುಂಬ ತಮ್ಮ ಹಾಡುಗಾರಿಕೆಯಿಂದ ಪ್ರಸಿದ್ಧಿ ಪಡೆಯಲು ಸಾಧ್ಯವಾಯಿತು. ಹೀಗೆ ಒಬ್ಬ ಸುಗಮ ಸಂಗೀತಗಾರ ಇಡೀ ದೇಶದ ಮರ್ಯಾದೆಯನ್ನು ಪಡೆದದ್ದು, ಮುರಗೋಡಿನ ಮಹಾಂತರಿಂದ ದಿಲ್ಲಿಯ ರಾಷ್ಟ್ರಪತಿ, ಪ್ರಧಾನ ಮಂತ್ರಿಗಳವರೆಗೆ-ಶ್ರೋತೃಗಳ ಸಂಬಂಧ ಪಡೆದದ್ದು ಅವರ ಸಾಧನೆಯ ಮಹತ್ತನ್ನು ಹೇಳುತ್ತವೆ. ಹೀಗಾಗಿ ಬಾಳಪ್ಪನವರು ಕರ್ನಾಟಕಕ್ಕೆ ವಿಶಿಷ್ಟವಾದ ಸುಗಮ ಸಂಗೀತಗಾರರಷ್ಟೇ ಅಲ್ಲ, ಭಾರತ ಕಂಡ ಅಪರೂಪದ ಗಾಯಕರಾಗಿದ್ದರು ಎಂಬುದು ಗಮನಾರ್ಹ ಸಂಗತಿ.
ಹುಕ್ಕೇರಿ ಬಾಳಪ್ಪನವರ ನೆನಪು ಬಂದಾಗಲೆಲ್ಲ ಬಿಳಿಯ ಧೋತರ, ಬಿಳಿಯ ಅಂಗಿ, ತಲೆಯ ಮೇಲೆ ಟೊಪ್ಪಿಗೆ, ಆಜಾನುಬಾಹು ದೇಹ ನೆನಪಿಗೆ ಬರುವ ಆಕೃತಿ. ಸ್ವಲ್ಪ ವಿಶೇಷ ಕಾರ್ಯಕ್ರಮವಿದ್ದರೆ ಮೇಲೊಂದು ಕರಿಯಕೋಟು, ತಲೆಗೆ ಜರತಾರಿ ರುಮಾಲು. 1955ರಲ್ಲಿ ದೆಹಲಿಯಲ್ಲಿ ನಡೆದ ಯುವಜನ ಮೇಳಕ್ಕೆ ಹೋದ ಬಾಳಪ್ಪನವರಿಗೆ ಜವಹರಲಾಲ ನೆಹರು ಅವರ ಮನೆಯಲ್ಲಿ ಹಾಡುವ ಅವಕಾಶ ದೊರಕಿತ್ತು. ಬಾಳಪ್ಪನವರ ಗಾಯನಕ್ಕೆ ಮನಸೋತ ನೆಹರೂಜಿ ಸಂತೋಷದಲ್ಲಿ ಶಹಬ್ಬಾಶ್ ಎಂದು ಬೆನ್ನು ತಟ್ಟಿದರಂತೆ. ‘ಆ ಕೋಟು ಇನ್ನೂ ಒಗದಿಲ್ರಿ ನಾ’ ಎಂದು ಚಟಾಕಿ ಹಾರಿಸಿ ನೆಹರೂಜಿ ಅವರನ್ನು ನೆನಪಿಸಿಕೊಳ್ಳುತ್ತಿದ್ದ ಮಾತನ್ನು ಬಾಳಪ್ಪನವರ ಬಾಯಿಂದ ಕೇಳುವುದೇ’ ಅವರನ್ನು ಹತ್ತಿರದಿಂದ ಬಲ್ಲವರಿಗೆ ಖುಷಿ ಕೊಡುವಂತದ್ದಾಗಿತ್ತು.
ಪ್ರಸಿದ್ಧ ಹಾಡುಗಾರರಾದ ಬಾಳಪ್ಪ ದಿಲ್ಲಿಯ ಪ್ರಧಾನಿ, ರಾಷ್ಟ್ರಪತಿಗಳ ಮುಂದೆ ಹಾಡಿದ್ದರ ಜೊತೆಗೆ ಮೈಸೂರಿನ ಅರಸರ ದರಬಾರಿನಲ್ಲೂ ಹಾಡಿದರು. ಬಾಳಪ್ಪನವರ ಶ್ರೋತೃಗಳ ಬಳಗ ಬಹಳ ದೊಡ್ಡದು. ನೆಹರೂಜಿ, ಇಂದಿರಾಗಾಂಧಿ, ಝಕೀರ್ ಹುಸೇನ್, ರಾಜೇಂದ್ರ ಪ್ರಸಾದ್, ನಿಜಲಿಂಗಪ್ಪ ಮುಂತಾದ ಪ್ರತಿಷ್ಠಿತ ರಾಷ್ಟ್ರನಾಯಕರ ಎದುರಿಗೆ; ಕುವೆಂಪು, ಬೇಂದ್ರೆ, ಡಿ.ಎಲ್. ನರಸಿಂಹಾಚಾರ್ ಮುಂತಾದ ಶ್ರೇಷ್ಠ ಸಾಹಿತಿಗಳ ಸಮ್ಮುಖದಲ್ಲಿ ಹಾಡಿದ ಹೆಗ್ಗಳಿಕೆ ಬಾಳಪ್ಪನವರದು. ಆಕಾಶವಾಣಿ, ದೂರದರ್ಶನಗಳಲ್ಲಿ ಅವರು ಎಲ್ಲೆಲ್ಲಿಯೂ ಮೆಚ್ಚಿನವರಾಗಿ ಹೋಗಿದ್ದರು. ಆಕಾಶವಾಣಿ ದೂರದರ್ಶನಗಳಿಗಷ್ಟೇ ಅಲ್ಲದೆ, ಎಚ್.ಎಂ.ವಿ. ಗಾಗಿಯೂ ಹಾಡಿದ ಕೀರ್ತಿ ಅವರದಾಗಿತ್ತು.
ಬಾಳಪ್ಪನವರು ತಮ್ಮ ಹಾಡುಗಾರಿಕೆಯ ಪ್ರತಿಭೆಯನ್ನು ಸ್ವಾತಂತ್ಯ್ರ ಚಳುವಳಿಯ ಕಾಲಕ್ಕೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ ತೊಡಗಿಸಿದ್ದು ಒಂದು ಇತಿಹಾಸ. ಕನ್ನಡ, ಮರಾಠಿ, ಉರ್ದು, ಹಿಂದಿ-ಭಾಷೆಗಳನ್ನು ಬಲ್ಲವರಿದ್ದ ಬಾಳಪ್ಪ ಆ ಎಲ್ಲ ಭಾಷೆಗಳಲ್ಲಿ ಸ್ವಾತಂತ್ಯ್ರದ ಅರಿವನ್ನು ಹೆಚ್ಚಿಸುವ ಹಾಡುಗಳನ್ನು ಹಾಡಿದರು. ಭಾಷಣ ಮಾಡಿದರು. ಪ್ರಭಾತ ಫೇರಿ ನಡೆಸಿ ಜನರನ್ನು ಎಚ್ಚರಿಸುವ ಕೆಲಸ ಮಾಡಿದರು. ಅಸಹಕಾರ ಮತ್ತು ಕಾಯಿದೆ ಭಂಗ ಚಳುವಳಿಯ ಕಾಲಕ್ಕೆ ಈ ಎಲ್ಲ ಕೆಲಸಗಳನ್ನು ಅತ್ಯಂತ ಚುರುಕಿನಿಂದ ಮಾಡಿದ ಬಾಳಪ್ಪನವರು ಇಂಗ್ಲಿಷರ ದುಷ್ಟ ಕಣ್ಣಿಗೆ ಬಿದ್ದರು. ಪರಿಣಾಮವಾಗಿ 1930ರಲ್ಲಿ ಆರು ತಿಂಗಳ ಕಾಲ ಕಾರಾಗೃಹವಾಸವನ್ನೂ ಅನುಭವಿಸಿದರು.
ಬಾಳಪ್ಪ 1962ರ ಪಾಕಿಸ್ತಾನ-ಚೀನ ಯುದ್ಧಗಳ ಸಮಯದಲ್ಲಿ ತಮ್ಮ ಹಾಡುಗಳಿಂದ ಜನರಲ್ಲಿ ಉತ್ಸಾಹ ತುಂಬಿದರಲ್ಲದೆ, ತಮಗೆ ಬಂದ ಬೆಳ್ಳಿ-ಬಂಗಾರದ ಪದಕಗಳನ್ನು ಸೈನಿಕರ ನಿಧಿಗೆ ದಾನಮಾಡಿದ ಅಪರೂಪದ ಉದಾಹರಣೆಗಳೂ ಇದ್ದವು.
ಬಾಳಪ್ಪ 1932ರಲ್ಲಿ ಗೆಳೆಯರೊಂದಿಗೆ ಕೂಡಿ ‘ಮಹಾತ್ಮಾ ಸೇವಾ ಸಂಗೀತ ನಾಟಕ ಮಂಡಳಿ’ ಎಂಬ ಒಂದು ನಾಟಕ ಕಂಪನಿಯನ್ನೇ ತೆರೆದು ಎಂಟು ವರ್ಷಗಳ ಕಾಲ (1940ರವರೆಗೆ) ನಡೆಸಿದರು. ಆ ನಾಟಕಗಳ ಜೀವಾಳವೆಂದರೆ ಬಾಳಪ್ಪನವರ ಹಾಡುಗಾರಿಕೆ. ಹೀಗಾಗಿ ಅವೆಲ್ಲ ಗಾಯನ ಪ್ರಧಾನ ನಾಟಕಗಳು ಅರ್ಥಾತ್ ಬಾಳಪ್ಪನವರ ನಾಟಕಗಳು. ಇಲ್ಲೂ ಬಾಳಪ್ಪ ಮಾಡಿದ್ದು, ಜನರಿಗೆ ಸ್ವಾತಂತ್ಯ್ರ ಚಳುವಳಿಯ ಸಂದೇಶವನ್ನು ಬೀರುವುದೇ.
1940ರಲ್ಲಿ ನಾಟಕ ಕಂಪನಿ ಮುಚ್ಚಿತು. ಬಾಳಪ್ಪ ಛಲಗಾರರು. ಮತ್ತೆ 1941ರಿಂದ 45ರವರೆಗೆ ಇಡೀ ಭಾರತ ದೇಶದ ತುಂಬೆಲ್ಲ ಸಂಚರಿಸಿದರು. (ವಿಶೇಷವಾಗಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿ) ಲಾವಣಿ, ದೇಶಭಕ್ತಿಗೀತೆ, ಭಾವಗೀತೆಗಳನ್ನು ಹಾಡುತ್ತ ಜನರಿಗೆ ಸ್ವಾತಂತ್ಯ್ರದ ಅರಿವು ಹೆಚ್ಚಿಸುವಲ್ಲಿ ಕೆಲಸ ಮಾಡಿದರು. ಭಾರತದ ಜನಮನ ಗೆದ್ದರು.
1943ರಲ್ಲಿ ಒಂದು ಕಡೆ ಗಾಯನ ಗೋಷ್ಠಿ. ವ್ಯವಸಾಯ ಇಲಾಖೆಯ ಉಪನಿರ್ದೇಶಕರಾದ ಶ್ರೀ ವಿ .ಸಿ. ಪಾವಟೆ ಇವರ ಶ್ರೋತೃಗಳಲ್ಲಿ ಒಬ್ಬರಾಗಿದ್ದರು. ಬಾಳಪ್ಪನವರ ಜೇನ ದನಿಯ ಹಾಡಿನ ಮೋಡಿಗೆ, ಸೂಕ್ತ ವಿವರಣೆಗಳಿಗೆ ಮಾರುಹೋದ ಅವರು ವ್ಯವಸಾಯ ಇಲಾಖೆಯಲ್ಲಿ ಕ್ಷೇತ್ರಪ್ರಚಾರ ನೌಕರಿಗೆ ಬರಲು ಬಾಳಪ್ಪನವರಿಗೆ ಆಮಂತ್ರಣ ಇತ್ತರು. ಬಾಳಪ್ಪನವರು ತಮ್ಮ ಕಷ್ಟದ ದಿನಗಳಲ್ಲಿ ಸಹಾಯಕ್ಕೆ ಬಂದ ಈ ಸಣ್ಣ ನೌಕರಿಯನ್ನು ಒಲ್ಲೆ ಎನ್ನದೆ ‘ಆಗಲ್ರಿ ಸಾಹೇಬ್ರ’ ಎಂದು ನಿಷ್ಠೆಯಿಂದ ಸ್ವೀಕರಿಸಿದರು. 1943 ರಿಂಧ 1972ರವರೆಗೆ ಈ ನೌಕರಿಯಲ್ಲಿದ್ದುಕೊಂಡು ರೈತರಿಗೆ ಒಕ್ಕಲುತನ ವಿಷಯವಾದ ಬೀಜ, ಗೊಬ್ಬರ, ಆಧುನಿಕ ಕೃಷಿ ಬೇಸಾಯ ಪದ್ಧತಿಗಳನ್ನಲ್ಲದೆ, ಕುಟುಂಬ ಯೋಜನೆಯ ಕುರಿತಾದ ಹಾಡುಗಳನ್ನು ರಚಿಸಿ-ಹಾಡಿ, ತಿಳಿಸಿ ಹೇಳಿ ದೇಶದ ರೈತರ ಉದ್ಯೋಗ ಸುಧಾರಿಸಲು, ಅವರ ಕುಟುಂಬಗಳು ಸುಧಾರಿಸಲು ಸಹಾಯವಾದರು.
ಮುಂದೆ ಉತ್ತರ ಕರ್ನಾಟಕದ ಪ್ರಸಿದ್ಧ ಮಠಗಳ ಜಾತ್ರೆ, ಉತ್ಸವಗಳಲ್ಲದೆ, ಪ್ರತಿಷ್ಠಿತ ವೇದಿಕೆಗಳಿಂದ ಬಾಳಪ್ಪನವರಿಗೆ ಆಹ್ವಾನಗಳು ಬರಲಾರಂಭಿಸಿದವು. ಇಂತಹ ಪ್ರಸಂಗಗಳಲ್ಲಿ ಅವರು ಜಾನಪದ ಹಾಡುಗಳನ್ನು ವ್ಯಾಪಕವಾಗಿ ಬಳಸಲು ಪ್ರಾರಂಭಿಸಿದರು. ಜಾನಪದ ಹಾಡುಗಳನ್ನು ಹಾಡುವುದಲ್ಲದೆ, ಕನ್ನಡದ ಪ್ರಸಿದ್ಧ ಕವಿಗಳಾದ ಕುವೆಂಪು, ಬೇಂದ್ರೆ, ಕಣವಿ, ನರಸಿಂಹಸ್ವಾಮಿ, ಕಾವ್ಯಾನಂದ, ಆನಂದಕಂದ, ಶಿಶುನಾಳ ಶರೀಫ, ಕಡಕೋಳ ಮಡಿವಾಳಪ್ಪ ಮುಂತಾದರ ಪ್ರಸಿದ್ಧ ಹಾಡುಗಳನ್ನು ಹಾಡಲು ಪ್ರಾರಂಭಿಸಿದರು. ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’, ಆನಂದ ಕಂದರ ‘ಯಾತಕವ್ವ ಹುಬ್ಬಳ್ಳಿ ಧಾರವಾಡ’, ಕಾವ್ಯಾನಂದರ ‘ಮೊದಲು ಮಾನವನಾಗು’, ಬೇಂದ್ರೆಯವರ ‘ಹುಬ್ಬಳ್ಳಿಯಾಂವ’, ಕಡಕೊಳ ಮಡಿವಾಳಪ್ಪನವರ ‘ತನ್ನ ತಾ ತಿಳಿದ ಮೇಲೆ’ ಮುಂತಾದ ಹಾಡುಗಳನ್ನು ಬಾಳಪ್ಪನವರ ಬಾಯಿಯಿಂದಲೇ ಕೇಳಲೇಬೇಕೆಂಬಷ್ಟು ಪ್ರಸಿದ್ಧರಾದರು.
ದಿ. ಸಿದ್ಧರಾಮ ಜಂಬಲದಿನ್ನಿ ಮತ್ತು ರಾಜಗುರು ಅವರ ಸಮಕಾಲೀನರಾದ ಬಾಳಪ್ಪನವರು ಹಿಂದುಸ್ತಾನಿ ಸಂಗೀತಕ್ಕಿಂತಲೂ ಭಿನ್ನವಾದ ಜಾನಪದ ಧಾಟಿಗಳಿಗೆ ಹತ್ತಿರವಾದ ರೀತಿಯಲ್ಲಿ ವಚನಗಳಿಗೆ ತಮ್ಮದೇ ಆದ ಧಾಟಿಯನ್ನು ಅಳವಡಿಸಿ ಹಾಡಲು ಪ್ರಾರಂಭಿಸಿದರು. ಇದು ಬಾಳಪ್ಪನವರು ಹಾಕಿದ ಸ್ವತಂತ್ರ ಸಂಪ್ರದಾಯ. ಪ್ರಸಿದ್ಧ ಹಿಂದೂಸ್ತಾನೀ ಸಂಗೀತಗಾರರ ಜೊತೆ ಸುಗಮ ಸಂಗೀತಕ್ಕೆ ವಚನಗಳ ಹಾಡುಗಾರಿಕೆಯನ್ನು ಎಳೆತಂದದ್ದು ತೀರ ಗಮನಾರ್ಹ ಸಂಗತಿ.
ಹಾಡನ್ನೇ ತಮ್ಮ ಉಸಿರಾಗಿಸಿಕೊಂಡ ಬಾಳಪ್ಪನವರಿಗೆ ಜನ ಪ್ರೀತಿಯಿಂದ ಇಟ್ಟ ಹೆಸರುಗಳು, ಕೊಟ್ಟ ಬಿರುದುಗಳು ಅನಂತ. ಮುರಗೋಡದ ಮುಂಗೋಳಿ, ಮುರಗೋಡದ ಕಾಕಾ, ಮಾತಿನ ಕಾಕಾ, ಸಭಾ ಭೂಷಣ, ಜಾನಪದ ಜಾದೂಗಾರ, ಸಾವಿರ ಹಾಡಿನ ಸರದಾರ, ಜನಪದ ಸಾಹಿತ್ಯಾಚಾರ್ಯ, ಜನಪದ ಕಲಾನಿಧಿ, ಜನಪದ ಜ್ಯೋತಿ, ಬೆಲ್ಲದ ಮಾತಿನ ಕಂಚಿನ ಕಂಠದ ಬಾಳಪ್ಪ, ಹೊಂಗಲನಾಡಿನ ಹೆಜ್ಜೇನು, ಜೇನುದನಿಯ ಬಾಳಪ್ಪ ಹುಕ್ಕೇರಿ, ಸಂಗೀತಲೋಕದ ಧ್ರುವತಾರೆ - ಹೀಗೆ ನಾನಾ ಬಗೆಯಾಗಿ ಕರೆದು ಜನ ತಾವೇ ಖುಷಿಗೊಂಡಿದ್ದಾರೆ.
1970ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, 1980-81ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, 1982ರಲ್ಲಿ ದಕ್ಷಿಣ ಹಿಂದೂಸ್ಥಾನದ ಸಾಂಸ್ಕೃತಿಕ ಸಂಸ್ಥೆ (ತಿರುವಾಂಕೂರು-ಕೇರಳ) ಪ್ರಶಸ್ತಿ, 1986 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1989 ರಲ್ಲಿ ಮಧ್ಯಪ್ರದೇಶ ಸರ್ಕಾರದ ತುಳಸಿ ಸಮ್ಮಾನ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಬಾಳಪ್ಪನವರಿಗೆ ಸಂದಿದ್ದವು. ಬಾಳಪ್ಪನವರು ಜನಪದ ಅಕಾಡಮಿ ಸ್ಥಾಪನೆಯಾದ ಪ್ರಥಮ ಅವಧಿಗೆ ಸದಸ್ಯರಾಗಿದ್ದರು.
ಈ ಮಹಾನ್ ಸಾಧಕರಾದ ಬಾಳಪ್ಪ ಹುಕ್ಕೇರಿಯವರು 1992ರ ನವೆಂಬರ್ 15ರಂದು ಈ ಲೋಕವನ್ನಗಲಿದರು. ಗಾಯನ ಲೋಕದಲ್ಲಿ ಅವರು ಚಿರವಿರಾಜಿತರು.
On the birth anniversary of great singer Balappa Hukkeri
ಕಾಮೆಂಟ್‌ಗಳು