ಸೂ. ಸುಬ್ರಹ್ಮಣ್ಯ
ಸೂ. ಸುಬ್ರಹ್ಮಣ್ಯ
ಸೂ. ಸುಬ್ರಹ್ಮಣ್ಯ ಮಕ್ಕಳ ಸಾಹಿತ್ಯದಲ್ಲಿ ಸಾಧನೆ ಮಾಡಿದವರು.
ಸೂ. ಸುಬ್ರಹ್ಮಣ್ಯ ಅವರು 1935ರ ಜೂನ್ 5ರಂದು ಜನಿಸಿದರು. ಅವರು ಮೂಲತಃ ತುಮಕೂರು ಜಿಲ್ಲೆಯವರು. ತಂದೆ
ಎಸ್. ಸೂರ್ಯನಾರಾಯಣರಾವ್. ತಾಯಿ- ಕನಕಲಕ್ಷ್ಮಮ್ಮ. ಪ್ರಾಥಮಿಕ ಶಿಕ್ಷಣವನ್ನು ಶ್ರೀರಂಗಪಟ್ಟಣ ಹಾಗೂ ಚೆನ್ನಪಟ್ಟಣದಲ್ಲಿ ಪಡೆದು ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್ಸಿ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಎಡ್ ಹಾಗೂ ಎಂ.ಎ. ಪದವಿಗಳನ್ನು ಪಡೆದರು.
ಸುಬ್ರಮಣ್ಯ ರಿಸರ್ವ್ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿದರು. ಕಚೇರಿಯಲ್ಲಿ ಕನ್ನಡದ ವಾತಾವರಣವನ್ನು ಮೂಡಿಸಲು ಕನ್ನಡ ಸಂಘವನ್ನು ಸ್ಥಾಪಿಸಿದರು.
ಸುಬ್ರಮಣ್ಯ ಅವರು ಪಂಜೆ ಮಂಗೇಶರಾವ್, ಹೊಯ್ಸಳ, ತೋನ್ಸೆ ಮಂಗೇಶರಾಯರು, ಮಚ್ಚಿಮಲೆ ಶಂಕರನಾರಾಯಣರಾಯರು, ರಾಜರತ್ನಂ ಮುಂತಾದವರ ಪ್ರಭಾವದಿಂದ ಮಕ್ಕಳ ಸಾಹಿತ್ಯ ರಚಿಸಿದರು. ಫ್ರಾನ್ಸಿನಲ್ಲಿ ನ್ಯಾಷನಲ್ ರಿಸರ್ಚ್ ಸೊಸೈಟಿ ಫಾರ್ ಚಿಲ್ಡನ್ಸ್ ಲಿಟರೇಚರ್ (1983) ಆಯೋಜಿಸಿದ್ದ ಸಮ್ಮೇಳನದಲ್ಲಿ ಹಾಗೂ ಜರ್ಮನಿಯಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ‘ಕನ್ನಡ ಮಕ್ಕಳ ಸಾಹಿತ್ಯದ ಮೇಲೆ ಭಾರತದ ಪ್ರಾಚೀನ ಸಾಹಿತ್ಯದ ಪ್ರಭಾವ’ ಎಂಬ ಪ್ರಬಂಧವನ್ನು ಮಂಡಿಸಿದ್ದರು. ‘ಕನ್ನಡ ವಿಜ್ಞಾನ ಪರಿಷತ್ತು’ ಸ್ಥಾಪಿಸಿ, ಅದರ ಸ್ಥಾಪಕ ಕಾರ‍್ಯದರ್ಶಿಯಾಗಿದ್ದರು.
ಸುಬ್ರಮಣ್ಯ ಅವರು ರಚಿಸಿದ ‘ರಕ್ತದ ಕಥೆ’ ನಾಟಕದಲ್ಲಿ ಬಿಳಿಯ ರಕ್ತ ಕಣಗಳು, ಕೆಂಪು ರಕ್ತ ಕಣಗಳು, ಪ್ಲಾಟ್ ಲೆಟ್ಸ್ ಪಾತ್ರರೂಪದಲ್ಲಿ ಮಾತನಾಡುತ್ತವೆ. ಇದನ್ನು ನೋಡಿದ ಮಕ್ಕಳಿಗೆ ರಕ್ತದ ಮಹತ್ವವನ್ನು ಅರಿಯಲು ಸಹಕಾರಿಯಾಗುತ್ತದೆ. ಇವರ ಇತರ ಕೃತಿಗಳಲ್ಲಿ ನಮ್ಮ ಸೂರ್ಯ, ಶಬ್ದಸಾಗರದಲ್ಲಿ ಮತ್ತು ನಕ್ಷತ್ರ ನಕ್ಕಿತು, ಅದೃಷ್ಟವೇ, ಅನ್ವೇಷಣಯೇ?, ಮೇಘನಾದ ಸಹಾ, ಪ್ರಾಣಿಗಳ ಮೋಜು, ಅಲೆಗ್ಸಾಂಡರ್ ಪ್ಲೆಮಿಂಗ್, ಧೂಮಕೇತು, ಪೆನಿಸಿಲನ್, ಆಲ್ಬರ್ಟ್ ಐನ್ ಸ್ಟೈನ್, ವಿಸ್ಮಯಕರ ವಿಜ್ಞಾನ, ಮಾಲಿನ್ಯ, ಈ ನಮ್ಮ ಜಗತ್ತು, ಇಂಗ್ಲಿಷಿನಲ್ಲಿ ‘ದಿ ರೆಡ್ ರಿವರ್ ಆಫ್ ಲೈಫ್’ ಮುಂತಾದವು ಸೇರಿವೆ. ಆಲ್ ಫ್ರೆಡ್ ನೊಬೆಲ್, ಜಗದೀಶ ಚಂದ್ರಬೋಸ್, ಆಚಾರ‍್ಯ ಪ್ರಫುಲ್ಲ ಚಂದ್ರ ರಾಯ್, ಅಲೆಕ್ಸಾಂಡರ್ ಫ್ಲೆಮಿಂಗ್ ಹೀಗೆ ವಿಜ್ಞಾನಿಗಳ ಜೀವನ ಚರಿತ್ರೆ ರಚಿಸಿದ್ದರು. ಬಿಳಲುಗಳು( ಪ್ರಬಂಧಗಳು), ಹಣ್ಣಾಗದ ಹೂ (ಕಥಾ ಸಂಕಲನ), ಸಾಕೋದ್ನರಿ ತಾತಾ (ನಾಟಕ), ಕಣ್ಣುಗಳು (ರೇಡಿಯೋ ನಾಟಕ), ಸೀಕರಣೆ (ಸಂಕೀರ್ಣ) ಕೃತಿಗಳಲ್ಲದೆ ಬಿ. ಜಿ. ಎಲ್ ಸ್ವಾಮಿಯವರ ಸಂಸ್ಮರಣೆ ಗ್ರಂಥ ‘ಸ್ವಾಮಿಯಾನ’, ಪ್ರೊ. ಜಿ. ವೆಂಕಟಸುಬ್ಬಯ್ಯನವರ ಅಭಿನಂದನ ಗ್ರಂಥ ‘ಚಿರಂಜೀವಿ’ ಮತ್ತು ಹಾಸ್ಯ ಸಾಹಿತಿ ಟಿ. ಸುನಂದಮ್ಮನವರ ಅಭಿನಂದನ ಗ್ರಂಥ ‘ಸುನಂದಾಭಿನಂದನ’ ಗ್ರಂಥಗಳನ್ನು ಸಂಪಾದಿಸಿದ್ದರು.
ಪ್ಯಾರಿಸ್ಸಿನ ಅಂತಾರಾಷ್ತ್ರೀಯ ಮಕ್ಕಳ ಸಾಹಿತ್ಯ ಸಂಶೋಧನ ಸಂಸ್ಥೆ, ಭಾರತೀಯ ಜಿಯಾಲಾಜಿಕಲ್ ಸೊಸ್ಯೆಟಿಯ ಫೆಲೊ ಆಗಿ ಕಾರ‍್ಯ ನಿರ್ವಹಿಸಿದ ಸೂ. ಸುಬ್ರಹ್ಮಣ್ಯ ಅವರಿಗೆ ‘ರಕ್ತದ ಕಥೆ’ ಕೃತಿಗೆ ಮದರಾಸಿನ ಭಾಷಾಪುಸ್ತಕ ಸಂಸ್ಥೆಯಿಂದ ಪ್ರಶಸ್ತಿ (1965), ನಮ್ಮ ಸೂರ‍್ಯ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1970), ‘ಶಬ್ದ ಸಾಗರದಲ್ಲಿ’ ಕೃತಿಗೆ ಎನ್.ಸಿ. ಇ. ಆರ್. ಟಿ. ಮಕ್ಕಳ ಸಾಹಿತ್ಯ ಸ್ಪರ್ಧೆಯಲ್ಲಿ ಕರ್ನಾಟಕ ಸರಕಾರದ ಬಹುಮಾನ ಮತ್ತು ‘ನಕ್ಷತ್ರ ನಕ್ಕಿತು ಕೃತಿಗೆ ಕಾವ್ಯಾನಂದ ಪುರಸ್ಕಾರ ಮುಂತಾದ ಪ್ರಶಸ್ತಿ ಗೌರವಗಳು ಸಂದಿದ್ದವು.
ಸೂ. ಸುಬ್ರಹ್ಮಣ್ಯ 15.11.2021ರಂದು ನಿಧನರಾದರು.
Respects to departed soul writer S. Subrahmanya
ಕಾಮೆಂಟ್‌ಗಳು