ಪುಷ್ಪಾ ಸುರೇಶ್
ಪುಷ್ಪ ಪ್ರೀತಿಯ ಮಹತ್ಸಾಧಕಿ ಪುಷ್ಪಾ ಸುರೇಶ್
“ದೂರಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು, ಮನೆಯ ಸುತ್ತ ಹೂವರಾಸಿ ಹಾಸಿರಬೇಕು” ಎಂಬ ಹಾಡನ್ನು ಪ್ರೀತಿಸಿರದ ಹೃದಯಗಳಿಲ್ಲ. ಆದರೆ ಈ ಹಾಡನ್ನು ಕೇಳಿ ಅದರ ಸುಖವನ್ನು ಕಲ್ಪಿಸಿಕೊಳ್ಳುವ ನಮ್ಮಲ್ಲಿ, ಅಂತಹದೊಂದು ಲೋಕ ರೆಡಿಮೇಡ್ ದೊರಕಬೇಕು ಎಂಬ ಕಲ್ಪನೆ ಇರುತ್ತದೆಯೇ ವಿನಃ, ಅದನ್ನು ನಾವೇ ಮಾಡಿಕೊಳ್ಳಬೇಕು ಎಂಬ ಕನಸಿರುವುದಿಲ್ಲ. ಆದರೆ ಅಂತಹ ಕನಸನ್ನು ತಮ್ಮದೇ ಸೃಜನಶೀಲ ಪರಿಶ್ರಮದಿಂದ ನನಸಾಗಿಸಿಕೊಂಡವರು ನಮ್ಮ ನಡುವೆಯೇ ಇದ್ದಾರೆ. ಅವರೇ ನಮ್ಮೆಲ್ಲರ ಆತ್ಮೀಯರಾದ ಪುಷ್ಪಾ ಸುರೇಶ್.
ನಮ್ಮ ಪುಷ್ಪಾ ಸುರೇಶ್ ಅವರ ಪುಷ್ಪ ಕ್ಷೇತ್ರದಲ್ಲಿನ ಅಗಾಧ ಸಾಧನೆ ಮತ್ತು ಅವರ ದಿನನಿತ್ಯದ ಪ್ರೀತಿ ಪೂರ್ವಕ ಪುಷ್ಪ ಪ್ರೀತಿಯ ಚಿತ್ರಗಳನ್ನು ಕಂಡಾಗಲೆಲ್ಲ, ಇದೇನಿದು ಇವರ ಹೆಸರಿಗೂ ಇವರ ಪ್ರೀತಿಗೂ ಎಂಥಾ ಅವಿನಾವ ಸಂಬಂಧ ಎಂದೆನಿಸುತ್ತದೆ. ಇಂದು ಈ ಮಹತ್ವದ ಪುಷ್ಪ ಪ್ರೀತಿ ಮತ್ತು ವಿಶ್ವದ ಪುಷ್ಪಲೋಕಕ್ಕೊಂದು ವಿಸ್ತಾರವನ್ನು ಸೃಜಿಸುತ್ತಿರುವ ಪುಷ್ಪಾ ಸುರೇಶ್ ಅವರ ಜನ್ಮದಿನ.
ಪುಷ್ಪಾ ಸುರೇಶ್ ಅವರು ಮೂಲತಃ ಶಿವಮೊಗ್ಗದ ಸಾಗರದವರು. ಚಿಕ್ಕಂದಿನಿಂದಲೂ ಸಸ್ಯ ಮತ್ತು ಹೂವುಗಳ ಲೋಕವೆಂದರೆ ಅವರಲ್ಲಿ ವಿಶೇಷ ಪ್ರೀತಿಯುಕ್ತ ಸೆಳೆತ. ಅಮ್ಮ ಮತ್ತು ಅಜ್ಜಿ ಇಬ್ಬರೂ ಮನೆಯ ಸುತ್ತಮುತ್ತ ತರಕಾರಿ ಮತ್ತು ಹೂವಿನ ಗಿಡಗಳನ್ನು ಬೆಳೆಸುವುದನ್ನು ನೋಡಿಕೊಂಡೇ ಬೆಳೆದವರು ಪುಷ್ಪಾ. ಹೀಗೆ ಹಸಿರು ಮನೆ ಮತ್ತು ಹಚ್ಚಹಸುರನ್ನೇ ಹಾಸಿ ಹೊದ್ದಿರುವ ಮಲೆನಾಡಿನಿಂದ ಬಂದ ಪುಷ್ಪಾ, ನಮ್ಮ ಬೆಂಗಳೂರು ಕಾಂಕ್ರೀಟ್ ಕಾಡನ್ನು ಮಲೆನಾಡಿನಂತಿಲ್ಲ ಎಂದು ಬಾಯ್ಮಾತಿನ ಚಪಲಕ್ಕೆ ತೆಗಳಹೋಗದೆ, ತಮ್ಮ ಮನೆಯ ಪರಿಸರದಲ್ಲೇ ಪುಟ್ಟ ಮಲೆನಾಡನ್ನು ಸೃಷ್ಟಿಸಿಕೊಂಡಿದ್ದಾರೆ.
ನಮ್ಮ ಆಂತರ್ಯದಲ್ಲಿನ ಪ್ರೀತಿ ಎಂಬ ನೆಲ ಸತ್ವಯುತವಾಗಿದ್ದರೆ ಅದು ನಾವು ಬಯಸಿದ ಏನನ್ನೂ ತನ್ನ ಬಳಿ ಬರಮಾಡಿಕೊಳ್ಳುವಷ್ಟು ಶಕ್ತಿಶಾಲಿಯಾಗಿರುತ್ತದೆ! “ದಾಸವಾಳ ಹೂವಿನ ರಾಯಭಾರಿ”ಯಂತಿರುವ ಪುಷ್ಪಾ ಅವರು, ವಿಶ್ವದೆಲ್ಲೆಡೆಗಳಿಂದ ದಾಸವಾಳ ತಳಿಗಳನ್ನು ತರಿಸಿಕೊಂಡು, ಅವುಗಳ ಗುಣಲಕ್ಷಣಗಳನ್ನು ಅಧ್ಯಯನ ಮಾಡಿ, ಅವುಗಳಿಂದ ಹೊಸದೇ ಆದ ಕಣ್ಮನ ಸೆಳೆಯುವ ಅಸಂಖ್ಯಾತ ವರ್ಣ ವೈವಿಧ್ಯ ವಿನ್ಯಾಸಗಳ ತಳಿಗಳಿಗೆ ಜನ್ಮ ನೀಡುತ್ತಾ ಬಂದಿದ್ದಾರೆ. ಪುಷ್ಪಾ ಸುರೇಶ್ ಅವರು ಹೀಗೆ ಸೃಷ್ಟಿಸಿದ 200ಕ್ಕೂ ಹೆಚ್ಚು ನವೀನ ಹೈಬ್ರಿಡ್ ತಳಿಯ ದಾಸವಾಳ ಹೂಗಳು, ಅಂತಾಷ್ಟ್ರೀಯ ದಾಸವಾಳ ಸಂಘದ ಮಾನ್ಯತೆ ಮತ್ತು ಮೆಚ್ಚುಗೆಗಳನ್ನು ಗಳಿಸಿವೆ. 2010 ವರ್ಷದಲ್ಲಿ ಅಮೆರಿಕದಲ್ಲಿ ನಡೆದ ದಾಸವಾಳ ಹೂ ಪ್ರದರ್ಶನದಲ್ಲಿ ವಿಶ್ವದೆಲ್ಲೆಡೆಯಿಂದ ಬಂದ ಸ್ಪರ್ಧಿಗಳಲ್ಲಿ ‘ಸೀಡ್ಲಿಂಗ್ ಆಫ್ ದಿ ಇಯರ್’ ಪ್ರಶಸ್ತಿಯನ್ನು ಪಡೆದ ಹಿರಿಮೆ ಇವರದ್ದು ಅಂದರೆ, ಅದರ ಹಿಂದಿರುವ ಪ್ರೀತಿ ಪರಿಶ್ರಮಗಳ ಆಳದ ಕುರಿತಾದ ಇನಿತು ಸುಳಿವು ನಮಗೆ ದಕ್ಕುತ್ತದೆ.
ಪುಷ್ಪಾ ಸುರೇಶ್ ಅವರು ದಾಸವಾಳದ ಕುರಿತಾದ ಈ ಮಹತ್ವದ ಜ್ಞಾನವನ್ನು ಕಲಿತದ್ದಾದರೂ ಹೇಗೆ? ದಶಕಗಳ ಹಿಂದೆ ದಾಸವಾಳವನ್ನು ಹೈಬ್ರಿಡ್ ಮಾಡುವುದರ ಬಗ್ಗೆ ಮಾರ್ಗದರ್ಶನ ಮಾಡಲು ಯಾರೂ ಇರಲಿಲ್ಲ. ಅಂದಿನ ದಿನದಲ್ಲಿ ಅಂತರಜಾಲದಲ್ಲಿ ಸಹಾ ಇಂದಿನ ದಿನದಂತೆ ಬೇಕಾದ ಮಾಹಿತಿ ಸಿಗುತ್ತಿರಲಿಲ್ಲ. ಆ ಸಮಯದಲ್ಲಿ ಅವರ ನೆರವಿಗೆ ಬಂದಿದ್ದು ‘ಯಾಹೂ ಚಾಟ್’ ಗ್ರೂಪುಗಳು. ಈಗಿನವರಿಗೆ ಯಾಹೂ ಚಾಟ್ ಗ್ರೂಪುಗಳ ಬಗ್ಗೆ ಹೆಚ್ಚು ಗೊತ್ತಿರಲಾರದು. ಇಂದಿನ ಫೇಸ್ಬುಕ್ ಮತ್ತು ವಾಟ್ಸಾಪ್ ಗ್ರೂಪುಗಳು ಇನ್ನೂ ಹೆಚ್ಚು ಪ್ರವರ್ಧಮಾನದಲ್ಲಿಲ್ಲದ ದಿನಗಳಲ್ಲಿ ವಿವಿಧ ಆಸಕ್ತಿ ಮತ್ತು ಕ್ಷೇತ್ರಗಳಿಗೆ ಸಂಬಂಧಿಸಿದ ಯಾಹೂ ಗ್ರೂಪುಗಳಿದ್ದು, ಆಯಾ ವಿಷಯಕ್ಕೆ ಸಂಬಂಧಿಸಿದ ಚರ್ಚೆಗಳು ಏರ್ಪಡುತ್ತಿದ್ದವು. ದಾಸವಾಳದ ಕುರಿತಾಗಿ ಚಿಕ್ಕಂದಿನಿಂದ ಮೂಡಿದ್ದ ಆಂತರ್ಯದಲ್ಲಿನ ಪ್ರೀತಿ ಪುಷ್ಪಾ ಅವರನ್ನು ಆ ಕುರಿತಾದ ಯಾಹೂ ಗ್ರೂಪಿನ ಬಳಿ ಕರೆತಂದಿತ್ತು. ಈ ಗುಂಪಿನಲ್ಲಿ ದೇಶ ವಿದೇಶಗಳಿಂದ ಬಂದ ದಾಸವಾಳ ಪರಿಣತರು ತಮ್ಮ ಪ್ರಯೋಗಗಳನ್ನು ಹಂಚಿಕೊಳ್ಳುತ್ತಿದ್ದರು. ಇಲ್ಲಿ ಸಿಕ್ಕವರೇ ಪುಷ್ಪಾ ಅವರ ಗುರುಗಳಾದರು. ಇಲ್ಲೇ ಅವರಿಗೆ ಅಂತಾರಾಷ್ಟ್ರೀಯ ದಾಸವಾಳ ಸಂಘದ ಕುರಿತು ಹೆಚ್ಚು ಹೆಚ್ಚು ತಿಳಿದು ಬಂದಿದ್ದು.
ದಾಸವಾಳದ ಹೂವಿನ ಸಂಘಗಳಲ್ಲಿನ ಒಂದು ನಿಯಮದ ಪ್ರಕಾರ, ಸಂಘದ ಸದಸ್ಯರು ತಾವು ಸೃಷ್ಟಿಸಿದ ಹೊಸ ದಾಸವಾಳದ ತಳಿಗೆ ತಾವೇ ಹೆಸರು ನೀಡಬೇಕು. ಹೂವಿನ ಗುಣಲಕ್ಷಣ, ಸ್ವಭಾವ, ಬಣ್ಣ ಮುಂತಾದ ಮಾಹಿತಿಗಳನ್ನಾಧರಿಸಿ ಪುಷ್ಪಾ ಅವರು ತಮ್ಮ 200ಕ್ಕೂ ಹೆಚ್ಚಿನ ಹೈಬ್ರಿಡ್ ದಾಸವಾಳ ಹೂಗಳಿಗೆ ನಾಮಕರಣ ಮಾಡಿದ್ದಾರೆ. ಉದಾಹರಣೆಗೆ ಹೇಳುವುದಾದರೆ ಅಮೆರಿಕದ ದಾಸವಾಳ ಪರಿಣಿತರಾದ ಬಾಬ್ ಕ್ಯಾರೆನ್ ಅವರು ತಮ್ಮ ಕಲಿಕೆಗೆ ನೀಡಿದ ಗೌರವಾರ್ಥ ಒಂದು ದಾಸವಾಳದ ಹೂವಿಗೆ ಅವರ ಹೆಸರನ್ನೇ ಕೊಟ್ಟಿದ್ದಾರೆ. ಸದಾ ಬಾಡಿರುವಂತೆ ನಾಚಿ ತಲೆತಗ್ಗಿಸಿರುವ ಮದುಮಗಳ ಹಾಗೆ ಭಾವನೆ ನೀಡುವ ಒಂದು ದಾಸವಾಳಕ್ಕೆ ‘ಇಂಡಿಯನ್ ಬ್ರೈಡ್’ ಎಂದು ನಾಮಕರಣ ಮಾಡಿದ್ದಾರೆ.
ಇದನ್ನೆಲ್ಲಾ ಓದುತ್ತಿದ್ದರೆ, ಇದೇನು ಮಂತ್ರ ಹೇಳಿದರೆ ಹೂ ಬಿಡುತ್ತದೆ ಎಂಬಷ್ಟು ಈ ಕೆಲಸ ಸಲೀಸು ಎಂದು ಭಾವಿಸಬೇಕಿಲ್ಲ. ಬೀಜ ಮೊಳಕೆಯೊಡೆದು ಹೂ ಬಿಡುವುದಕ್ಕೆ ಸುಮಾರು ಎಂಟು ತಿಂಗಳಿಂದ ಮೂರು ವರ್ಷಗಳವರೆಗೆ ಸಮಯ ಬೇಡುತ್ತದೆ. ಹೀಗಾಗಿ ಈ ಕೆಲಸ ಅತ್ಯಂತ ತಾಳ್ಮೆಯುತ ಪಾಲನೆ ಮತ್ತು ಪರಿಶ್ರಮವನ್ನು ಬೇಡುವಂತದ್ದು. ಮೊತ್ತ ಮೊದಲ ಬಾರಿ ತಮ್ಮ ಪ್ರಯೋಗ ಯಶಸ್ವಿಯಾಗಿ ಹೊಬಿಟ್ಟ ಘಳಿಗೆ ಇನ್ನೂ ಪುಷ್ಪಾ ಅವರ ಮನದಲ್ಲಿ ಹಸಿರಾಗಿದೆ. ಈ ಪರಿ ತಾಳ್ಮೆ ಬೇಡುವ ಈ ಹವ್ಯಾಸ ಎಲ್ಲಾ ಬಾರಿಯೂ ಯಶಸ್ವಿಯಾಗುವುದಿಲ್ಲ. ನೂರರಲ್ಲಿ ಫಲ ಕೊಡೋದು ಬರೀ ಮೂರೋ ನಾಲ್ಕೋ ದಾಸವಾಳ ಹೂಗಳಷ್ಟೇ. ಕ್ರಿಮಿಗಳ ಕಾಟ, ವೈರಸ್ ಮುಂತಾದ ಸವಾಲುಗಳು ಇದ್ದಿದ್ದೇ. ಸ್ವಂತ ಮಗನಿಗೇ ಊಟ ಬಡಿಸುವಷ್ಟು ಪ್ರೀತಿಯಿಂದ ತಾವು ಬೆಳೆಸಿದ ಅಷ್ಟೂ ಗಿಡಗಳಿಗೆ ಪುಷ್ಪಾ ಅವರು ಸ್ವತಃ ನೀರುಣಿಸುತ್ತಾರೆ. ಬೇರೆ ಯಾರಿಗೂ ಅವಕಾಶ ಕೊಡುವುದಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಇತರರಿಗೆ ಅವಕಾಶ!
ಹೈಬ್ರಿಡ್ ದಾಸವಾಳಗಳ ಜಗತ್ತಿನಲ್ಲಿ ಅಮೆರಿಕದ “ಬ್ಯಾರಿ ಶೂಟರ್” ಅತ್ಯಂತ ದೊಡ್ಡ ಹೆಸರು. ಬಿಗ್ ಹೈಬ್ರಿಡೈಝರ್ ಎಂದೇ ಪ್ರಖ್ಯಾತರಾಗಿದ್ದ ಈ ಹಿರಿಯರು ಪುಷ್ಪಾ ಅವರ ಏನೇ ಪ್ರಶ್ನೆ- ಅನುಮಾನಗಳಿದ್ದರೂ ಒಡನೆಯೇ ಪರಿಹರಿಸಿಬಿಡುತ್ತಿದ್ದರು. ಪುಷ್ಪಾ ಅವರ ಕೆಲಸದ ಕುರಿತು ಅಪಾರ ಮೆಚ್ಚುಗೆ ಹೊಂದಿದ್ದ ಬ್ಯಾರಿ ಶೂಟರ್ ಅವರು 22 ಜೂನ್ 2014ರಲ್ಲಿ ನಿಧನರಾದರು. ತಾನು ಕಣ್ಣುಚ್ಚುತ್ತೇನೆಂದು ಮುಂಚೆಯೇ ಅರಿವಿತ್ತೇನೋ ಎಂಬಂತೆ ಈ ಹಿರಿಯರು, ತಮ್ಮ ನಿಧಾನಕ್ಕೆ ಕೆಲ ತಿಂಗಳುಗಳ ಹಿಂದೆ ಅವರು “ಐ ಆ್ಯಮ್ ಗಿವಿಂಗ್ ಎವರಿಥಿಂಗ್ ಟು ಯೂ’ ಅಂತ ಹೇಳಿ ತಾವು ಸಂಗ್ರಹಿಸಿಟ್ಟಿದ್ದ ಅಷ್ಟೂ ದಾಸವಾಳ ಬೀಜಗಳನ್ನು ಪುಷ್ಪಾ ಅವರಿಗೆ ಕಳುಹಿಸಿಕೊಟ್ಟಿದ್ದರು. “ಅವುಗಳಿಗೆಲ್ಲಾ ಬೆಲೆ ಕಟ್ಟಲಾಗದು. ಜೀವಮಾನದ ಶ್ರಮ ಅದು. ಅದಕ್ಕಿಂತ ದೊಡ್ಡ ಪ್ರಶಸ್ತಿ, ಬಿರುದು, ಬಾವಲಿ ಏನಿದೆ? ಅವರೆಲ್ಲೋ ಇದ್ದವರು, ನಾನು ಜಗತ್ತಿನ ಇನ್ನೊಂದು ಬದಿಯಲ್ಲಿದ್ದವಳು. ಅವರಿಗೆ ನನ್ನಲ್ಲಿ ಏಕೆ ಅಷ್ಟು ವಿಶ್ವಾಸವೋ ನಾ ಕಾಣೆ! ದಾಸವಾಳದ ಆಸಕ್ತಿ ನನ್ನನ್ನು ಜಗತ್ತಿನ ಮೂಲೆಗೆ ಕೊಂಡೊಯ್ಯುತ್ತದೆ, ನೂರಾರು ಜನರನ್ನು ಪರಿಚಯಿಸುತ್ತದೆ ಎಂದೆಲ್ಲಾ ಎಣಿಸಿರಲಿಲ್ಲ.” ಹೀಗೆ ಪುಷ್ಪಾ ಅವರು ತಮ್ಮ ವಿಶಾಲ ವಿಸ್ತೃತ ದಾಸವಾಳ ವಿಶ್ವದ ಕತೆಯನ್ನು ತೆರೆದಿಡುತ್ತಾರೆ.
ವಿಶ್ವಮಟ್ಟದ ಅತ್ಯುತ್ತಮ ಹೂವಿನ ಪ್ರಭೇದಗಳನ್ನು ಸೃಷ್ಟಿಸಬೇಕು. ಜೊತೆ ಜೊತೆಯಲ್ಲಿಯೇ ಸಾವಯವ ಕೃಷಿ ಮತ್ತು ಮರ ನೆಡುವ ಕೆಲಸ ಮಾಡಬೇಕು ಹೀಗೆ ಹಲವಾರು ಕನಸುಗಳನ್ನು ಹೊತ್ತ ಪುಷ್ಪಾ ಸುರೇಶ್ ಅವರ ಕಂಗಳಲ್ಲಿ ಅದನ್ನು ಮಾಡುತ್ತಾ ಹೋಗುತ್ತೇನೆ ಎಂಬ ಮಿಂಚಿದೆ. ಅದನ್ನು ಅವರು ನಿರಂತರ ಸಾಧಿಸುತ್ತಾ ಹೋಗುತ್ತಾರೆ ಎಂಬುದರಲ್ಲಿ ಸಂದೇಹವೇ ಇಲ್ಲ.
ಪುಷ್ಪಾ ಅವರೇ, ಈ ವಿಶ್ವವಿಶಾಲತೆಯ ಪುಷ್ಪ ಪ್ರೇಮವನ್ನು ಹೊಂದಿರುವ ನಿಮ್ಮ ಸಾಧನೆ ನಮ್ಮೆಲ್ಲರ ಹೆಮ್ಮೆ. ಈ ನಮ್ಮ ಹೆಮ್ಮೆ ಇನ್ನೂ ಹೆಚ್ಚು ಹೆಚ್ಚಾಗುತ್ತದೆ, ನೀವು ನಮ್ಮೆಲ್ಲರನ್ನೂ ಮತ್ತು ವಿಶ್ವದೆಲ್ಲೆಡೆಯ ಜನರನ್ನೂ ಇನ್ನೂ ಹೆಚ್ಚು ಪ್ರೇರಿಸುತ್ತಿರುತ್ತೀರಿ ಎಂದು ಆಶಿಸುತ್ತಾ ನಿಮಗೆ ಇನ್ನೂ ಹೆಚ್ಚು ಬೆಂಬಲ, ಪ್ರೋತ್ಸಾಹ, ಮನ್ನಣೆಗಳು ಹೆಚ್ಚು ಹೆಚ್ಚು ದೊರಕಲಿ, ನಿಮ್ಮ ಬದುಕು ಭವ್ಯವಾಗಿರಲಿ ಎಂದು ನಿಮ್ಮ ಈ ಜನ್ಮದಿನದಂದು ಆತ್ಮೀಯವಾಗಿ ಶುಭಹಾರೈಸುವ ಗೌರವ ನಮ್ಮದಾಗಿದೆ. ನಮಸ್ಕಾರ.
On the birth day of our Pushpa Suresh who is known for developing vast number of hibiscus varieties
ಕಾಮೆಂಟ್‌ಗಳು