ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗಂಗಾ ಪಾದೇಕಲ್


 ಗಂಗಾ ಪಾದೇಕಲ್


ಹಿರಿಯ ಬರಹಗಾರ್ತಿ ಗಂಗಾ ಪಾದೇಕಲ್ ಕತೆ ಮತ್ತು ಕಾದಂಬರಿ ಬರಹಗಳಲ್ಲಿ ಹೆಸರಾದವರು.

ಗಂಗಾ ಪಾದೇಕಲ್ ಅವರ ಮೂಲ ಹೆಸರು ಗಂಗಾರತ್ನ.  ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ 1948ರ ಸೆಪ್ಟಂಬರ್ 1ರಂದು ಜನಿಸಿದರು. ತಂದೆ ಮುಳಿಯ ಕೇಶವಭಟ್ಟರು ಚಿನ್ನ ಬೆಳ್ಳಿ ವ್ಯಾಪಾರಸ್ಥರಾದರೂ ಆರ್ಥಿಕ ಸ್ಥಿತಿ ಅಷ್ಟೇನೂ ಉತ್ತಮವಿರದ ಕುಟುಂಬ. ತಾಯಿ ಸರಸ್ವತಿ. 

ಗಂಗಾ ಪಾದೇಕಲ್ ಅವರು ಓದಿದ್ದು ಏಳನೆಯ ತರಗತಿಯವರೆಗೆ ಮಾತ್ರಾ. ಅಜ್ಜಿ ಮೂಕಾಂಬಿಕ ಅವರಿಗೆ ಓದು ಬರಹ ಜ್ಞಾನವಿಲ್ಲದಿದ್ದರೂ  ಹಾಡುಗಳನ್ನು  ರಚಿಸುವ ಶಕ್ತಿಯಿತ್ತು. ಹೀಗೆ ಧ್ರುವಚರಿತ್ರೆ, ಹರಿಲೀಲಾಮೃತ, ದ್ರೌಪದಿ ವಸ್ತ್ರಾಪಹರಣ ಮುಂತಾದವುಗಳನ್ನು ಅವರು ಹೇಳಿದಾಗ ಅದನ್ನು ಇವರ ತಂದೆ ಬರಹರೂಪಕ್ಕೆ ತಂದರು. ಅಜ್ಜಿ ರಚಿಸುತ್ತಿದ್ದ ಈ  ಕೃತಿಗಳಿಗೆ ಇವರ ತಾಯಿ ರಾಗ ಸಂಯೋಜಿಸಿದ್ದರು.  ಇವುಗಳ ಜೊತೆಗೆ ಮನೆಗೆ ಆಗಾಗ್ಗೆ ಬರುತ್ತಿದ್ದ ಚಂದಮಾಮ, ಬಾಲಮಿತ್ರ, ನವಭಾರತ, ಕಸ್ತೂರಿ ಮುಂತಾದ ಪತ್ರಿಕೆಗಳನ್ನು ಓದುತ್ತಾ ಕಥಾನಕ ಆಸಕ್ತಿ ರೂಢಿಸಿಕೊಂಡ ಗಂಗಾ ಅವರಲ್ಲಿ ಸಾಹಿತ್ಯಾಸಕ್ತಿ ಚಿಗುರುತ್ತಿತ್ತು. ಅಣ್ಣ ತರಿಸುತ್ತಿದ್ದ ಠಾಗೋರ್, ಶರತ್‌ಚಂದ್ರ ಚಟರ್ಜಿ, ಗಳಗನಾಥರ ಕಾದಂಬರಿಗಳನ್ನೂ ಓದಿ ಮನೆಯಲ್ಲಿ ನಡೆಸುತ್ತಿದ್ದ ಚರ್ಚೆ, ಇವು ಇವರ ಸಾಹಿತ್ಯಾಸಕ್ತಿಯನ್ನು ಉದ್ದೀಪನಗೊಳಿಸುವಲ್ಲಿ ಸಹಾಯಕವಾಗಿದ್ದವು.  ಗಂಗಾ ಪಾದೇಕಲ್ ಅವರಿಗೆ ಮದುವೆಯಾದಾಗ ಮನೆಯಲ್ಲಿ ಚಿಗುರಿದ್ದ ಸಾಹಿತ್ಯಸಕ್ತಿಗೂ ತಡೆಬಿತ್ತು.  ಅವಿಭಕ್ತ ಕುಟುಂಬದ ಸೊಸೆಯಾಗಿ ಹೋದಾಗ ಮನೆಕೆಲಸವಲ್ಲದೆ ಮತ್ತೊಂದಕ್ಕೂ ಯೋಚಿಸಲಾಗದಷ್ಟು ಬಿಡುವಿಲ್ಲದ ಸತತ ದುಡಿತ ಅವರ ಮೇಲೆ ಬಂತು. 

ಮುಂದೆ ತಂದೆ, ತಾಯಿ, ಅಣ್ಣ ಹಾಗೂ 35ರ ಪ್ರಾಯದಲ್ಲಿಯೇ ಪತಿ ಗೋವಿಂದ ಭಟ್ಟರನ್ನು ಕಳಕೊಂಡು ಇಬ್ಬರು ಎಳೆಯ ಹೆಣ್ಣುಮಕ್ಕಳೊಂದಿಗೆ ಬದುಕು ಕಟ್ಟಿಕೊಂಡ ಈ ಧೀಮಂತಿನಿ ಗಂಗಾ ಪಾದೇಕಲ್ ಅವರಿಗೆ  ಸಂಗಾತಿಯಾಗಿ ಇದ್ದದ್ದು ಸಾಹಿತ್ಯದ ಓದು ಮತ್ತು ಬರವಣಿಗೆ.

ಗಂಗಾ ಪಾದೇಕಲ್ ಅವರು ಒಮ್ಮೆ ಪುತ್ತೂರಿನ ನರ್ಸಿಂಗ್‌ ಹೋಂನಲ್ಲಿ ಕಂಡ ದೃಶ್ಯವೇ ಇವರ 'ಜಾನಕಿಯ ಡೈರಿಯ ಕೆಲವು ಪುಟಗಳು' ಕಥಾವಸ್ತುವಾಗಿ ಮೂಡಿತು. ಶಿಶುಹತ್ಯೆಯ ನಂತರ ತಾಯಿಗೊದಗಿದ ದುರವಸ್ಥೆಯ ಯಥಾ ಚಿತ್ರಣದ ಈ ಕಥೆಯು ಸುಧಾ ವಾರಪತ್ರಿಕೆಯಲ್ಲಿ ಪ್ರಕಟಗೊಂಡಾಗ ಬಾಳಿನಲ್ಲಿ ಕಂಡ ನೋವುಗಳಿಗೆ ಅಕ್ಷರ ರೂಪಕೊಟ್ಟು ಬರೆಯಬಹುದೆನ್ನುವ ಆತ್ಮವಿಶ್ವಾಸ ಇವರಲ್ಲಿ ಬೆಳೆಯಿತು.  ನಂತರ ಮಂಗಳೂರು ಆಕಾಶವಾಣಿಯಲ್ಲಿದ ಜಯಶ್ರೀ ಅವರಿಗೆ ಇವರನ್ನು  ಮನೋರಮ ಎಂ.ಭಟ್‌ ಅವರು ಪರಿಚಯಿಸಿದಾಗ, ಹಲವಾರು ಕಥೆಗಳು ಪ್ರಸಾರಗೊಂಡು ಕತೆಗಾರ್ತಿಯೊಬ್ಬರ ಉದಯವಾಗಿತ್ತು. ಹೀಗೆ ಗಂಗಾ ಪಾದೇಕಲ್ ಅವರು ಬರೆದ ಕಥೆಗಳ ಪ್ರಥಮ ಕಥಾ ಸಂಕಲನ ‘ಪುಲಪೇಡಿ ಮತ್ತು ಇತರ ಕಥೆಗಳು’ 1982ರಲ್ಲಿ ಪ್ರಕಟಗೊಂಡಿತು. ನಂತರ ಇವರು ಬರೆದ ‘ಹೊನ್ನಳ್ಳಿಯಲ್ಲೊಮ್ಮೆ' ಕಾದಂಬರಿಯನ್ನು ಐ.ಬಿ.ಎಚ್‌. ಪ್ರಕಾಶನದವರು ಪ್ರಕಟಿಸಿದರು. 

ಗಂಗಾ ಪಾದೆಕಲ್ ಅವರು ಹಲವಾರು ಲೇಖಕಿಯರ ಸ್ನೇಹಭಾವದಿಂದ ಮಂಗಳೂರಿನಲ್ಲಿ ‘ಕರಾವಳಿ ಲೇಖಕಿಯರ ವಾಚಕಿಯರ ಸಂಘ’ವನ್ನು ಕಟ್ಟಿದರು. ಶೋಷಣೆಗೆ ಗುರಿಯಾಗುವವಳು ಸಾಮಾನ್ಯವಾಗಿ ಹೆಣ್ಣು ಎಂಬುದು ಪ್ರಚಲಿತವಿರುವ ಸಂಗತಿಯಾದರೂ ಗಂಡಸು ಕೂಡಾ ಹೇಗೆ ಶೋಷಣೆಯ ಬಲೆಗೆ ಸಿಕ್ಕಿ ಬೀಳುತ್ತಾನೆನ್ನುವುದನ್ನು ಮೂಡಿಸುವ  ಇವರ ಕತೆ ‘ಹೆಜ್ಜೆಮೂಡದ ಹಾದಿಯಲ್ಲಿ’.  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತವಿದ್ದ ‘ಪ್ರೇತಕ್ಕೆ ಕೂರುವ ಪದ್ಧತಿ’. ಯಾರಾದರು ಸತ್ತರೆ ಸೂತಕಶುದ್ಧಿಯ  11 ಮತ್ತು 12ನೆಯ ದಿನ ಸತ್ತವನ ಪ್ರೇತವನ್ನೂ ಬದುಕಿರುವವನೊಬ್ಬನ ಮೇಲೆ ಆಹ್ವಾನಿಸಿ, ಷೋಡಶೋಪಚಾರಗಳಿಂದ ತೃಪ್ತಿಪಡಿಸಿ ದಾನ, ದಕ್ಷಿಣೆ ನೀಡಿ, ಅವನ ಬಾಯಿಂದ ತೃಪ್ತಿಯಾಯಿತೆಂದು ಹೇಳಿಸುವ ಕ್ರಿಯೆಯ ಕಥೆಯಿದು.  ಈ ರೀತಿ ಪ್ರೇತಕ್ಕೆ ಕೂರುವವರೂ ದಟ್ಟ ದರಿದ್ರರೇ! ಇದು ಸಂಪ್ರದಾಯದ ಹೆಸರಿನಲ್ಲಿ ಬಡವರನ್ನು ಶೋಷಿಸುವ ಪರಿ.  ‘ಹೆಜ್ಜೆ ಮೂಡದ ಹಾದಿಯಲ್ಲಿ’ ತುಷಾರ ಮಾಸ ಪತ್ರಿಕೆಯಲ್ಲಿ ಪ್ರಕಟಗೊಂಡಾಗ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದು ಚರ್ಚೆಗೆ ಹಾದಿಮಾಡಿಕೊಟ್ಟಿತು. 

ಗಂಗಾ ಪಾದೆಕಲ್ ಅವರ ಕಾದಂಬರಿಗಳಲ್ಲಿ ಹೊನ್ನಳ್ಳಿಯಲ್ಲೊಮ್ಮೆ, ಸೆರೆಯಿಂದ ಹೊರಗೆ, ಪಯಣದ ಹಾದಿಯಲ್ಲಿ, ಮೌನರಾಗಗಳು, ಬಂಗಾರದ ಜಿಂಕೆಯ ಹಿಂದೆ, ಇನ್ನೊಂದು ಅಧ್ಯಾಯ, ಕನಕಾಂಬರಿ, ಮೂರು ಕಿರು ಕಾದಂಬರಿಗಳು, ಅದೃಷ್ಟರೇಖೆ ಮುಂತಾದವು ಸೇರಿವೆ.

ಗಂಗಾ ಪಾದೆಕಲ್ ಅವರ ಕಥಾಸಂಕಲನಗಳಲ್ಲಿ ಪುಲಪೇಡಿ ಮತ್ತು ಇತರ ಕಥೆಗಳು, ಹೆಜ್ಜೆಮೂಡದ ಹಾದಿಯಲ್ಲಿ, ಹೊಸಹೆಜ್ಜೆ, ಚಿನ್ನದ ಸೂಜಿ, ವಾಸ್ತವ, ಕ್ಷಮಯಾಧರಿತ್ರಿ ಮೊದಲಾದವುಗಳಲ್ಲದೆ ಸಮಗ್ರ ಕಥೆಗಳ ಭಾಗ 1, 2 ಮತ್ತು 3 ಕೂಡಾ ಪ್ರಕಟವಾಗಿದೆ. 

ಮೇಲ್ಕಂಡ ಕೃತಿಗಳಲ್ಲದೆ ಗಂಗಾ ಪಾದೆಕಲ್ ಅವರು ಕರ್ನಾಟಕ ಸಾಹಿತ್ಯ ಅಕಾಡಮಿಗಾಗಿ ಸಂಪಾದಿಸಿದ  ‘ಆಯ್ದ ಸಣ್ಣ ಕಥೆಗಳು’ (ಕಥಾಸಂಕಲನ),  ಚಂದ್ರ ಭಾಗಿ ರೈ ಬದುಕು-ಬರಹ, ಮುಳಿಯ  ಮೂಕಾಂಬಿಕ ಹಾಗೂ ಮುಳಿಯ  ಕೃಷ್ಣಭಟ್ಟರ ಬದುಕು-ಬರಹ (ಪ್ರತಿಬಿಂಬ-ವ್ಯಕ್ತಿಚಿತ್ರ) ಪ್ರಕಟವಾಗಿವೆ. 

ಗಂಗಾ ಪಾದೆಕಲ್ ಅವರ ಸೆರೆಯಿಂದ ಹೊರಗೆ ಕಾದಂಬರಿಗೆ ಮಲ್ಲಿಕಾ ಪ್ರಶಸ್ತಿ, ಇನ್ನೊಂದು ಅಧ್ಯಾಯ ಕಾದಂಬರಿಗೆ ವನಿತಾ ಕಾದಂಬರಿ ಸ್ಪರ್ಧಾ ಬಹುಮಾನ ಮತ್ತು ಬೇಲಾಡಿ ಮಾರಣ್ಣ ಮಾಡ ಸ್ಮಾರಕ ಪ್ರಶಸ್ತಿಗಳು ಸಂದಿರುವುದಲ್ಲದೆ ಹಲವಾರು ಸಣ್ಣ ಕಥೆಗಳು ಇಂಗ್ಲಿಷ್‌, ತೆಲುಗು, ಹಿಂದಿ ಭಾಷೆಗೂ ಅನುವಾದಗೊಂಡಿವೆ. ‘ಪುಲಪೇಡಿ’ ಕಥೆಯಾಧಾರಿತ ರೇಡಿಯೋ ನಾಟಕಕ್ಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮೊದಲ ಬಹುಮಾನ, ಲೇಖಕಿಯರ ಸಂಘದ ಎಚ್. ವಿ. ಸಾವಿತ್ರಮ್ಮ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಹಲವಾರು ಬಾರಿ ಪತ್ರಿಕೆಗಳ ಕಥಾ ಸ್ಪರ್ಧೆಯಲ್ಲಿ ಬಹುಮಾನ, ತಾಲ್ಲೂಕು ಮತ್ತು ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಸನ್ಮಾನಗಳು ಸಂದಿವೆ.

ಗಂಗಾ ಪಾದೇಕಲ್‌ ಅವರ ಸಾಹಿತ್ಯದ ಕುರಿತು ಎಂ.ಫಿಲ್‌, ಪಿಎಚ್‌.ಡಿ. ಅಧ್ಯಯನಗಳು ನಡೆದಿವೆ. ಮಕ್ಕಳಾದ ಸವಿತಾ ಮತ್ತು ಅರುಣಾ ಸರಸ್ವತಿ ಗಂಗಾ ಪಾದೇಕಲ್‌ ಅವರ ಜೀವನ ಸಂಜೆಗೆ ಆಸರೆಯಾಗಿದ್ದಾರೆ.

“ನನ್ನ ಮೊದಲ ಮತ್ತು ಕೊನೆಯ ಆದ್ಯತೆ ಪುಸ್ತಕ’ ಎಂದು ಹೇಳುವ ಗಂಗಾ ಪಾದೇಕಲ್‌ ಅವರು, ತಮ್ಮ ಬದುಕಿನ ಸ್ವಾನುಭವವನ್ನು ಬರೆದಿಡುತ್ತಿದ್ದಾರೆ. 

ಈ ಹಿರಿಯರಿಗೆ ಜನ್ಮದಿನ ಶುಭಹಾರೈಕೆಗಳೊಂದಿಗಿನ ನಮನಗಳು.

On the birthday of senior novelist Ganga Padekal

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ