ನ್ಯೂಯಾರ್ಕ್ ಟೈಮ್ಸ್
ನ್ಯೂಯಾರ್ಕ್ ಟೈಮ್ಸ್
ಅಮೆರಿಕ ಸಂಯುಕ್ತ ಸಂಸ್ಥಾನಗಳ ನ್ಯೂಯಾರ್ಕ್ ನಗರದಿಂದ ಪ್ರಕಟವಾಗುತ್ತಿರುವ ಒಂದು ದಿನ ಪತ್ರಿಕೆ.
ಹತ್ತೊಂಬತ್ತನೆಯ ಶತಮಾನದ ಅಮೆರಿಕನ್ ಪೆನಿ ಪತ್ರಿಕೋದ್ಯಮ ರಂಗದಲ್ಲಿ ಟೈಮ್ಸ್ ತಡವಾಗಿ ಅಡಿಯಿಟ್ಟರೂ ಒಂದು ಹೊಸ ಶಕೆಯನ್ನೇ ಆರಂಭಿಸಿತು. ನಿಷ್ಪಕ್ಷಪಾತ, ವಸ್ತುನಿಷ್ಠ ಹಾಗೂ ಕರಾರುವಾಕ್ಕಾದ ಸುದ್ದಿಗಳನ್ನು ಓದುಗರಿಗೆ ಒದಗಿಸುವ ಸದುದ್ದೇಶದಿಂದ ಪ್ರಾರಂಭಿಸಲಾದ ಈ ಪತ್ರಿಕೆ, ಪತ್ರಿಕಾ ಪ್ರಪಂಚದಲ್ಲಿ ಸುದ್ದಿ ವಿಶ್ಲೇಷಣೆಯ ಒಂದು ಹೊಸ ಪ್ರಕಾರವನ್ನೇ ಜನಪ್ರಿಯಗೊಳಿಸಿತು.
ರಿಪಬ್ಲಿಕನ್ ರಾಜಕಾರಣಿ ಹಾಗೂ ಪತ್ರಕರ್ತ ಹೆನ್ರಿ ಜಾರ್ವಿಸ್ ರೇಮಾಂಡ್ (1870-1869), ಜಾರ್ಜ್ ಜೋನ್ಸ್ (1811-1891) ಮತ್ತು ಎಡ್ವರ್ಡ್ ಬಿ. ವೆಸ್ಲಿ ಇವರು 1851ರ ಸೆಪ್ಟೆಂಬರ್ 1ರಂದು ಈ ಪತ್ರಿಕೆಯನ್ನು ಸ್ಥಾಪಿಸಿದರು. ಆರಂಭದಲ್ಲಿ ಇದಕ್ಕೆ ನ್ಯೂಯಾರ್ಕ್ ಡೇಲೀ ಟೈಮ್ಸ್ ಎಂಬ ಹೆಸರಿತ್ತು. 1857ರಲ್ಲಿ ನ್ಯೂ ಯಾರ್ಕ್ ಟೈಮ್ಸ್ ಎಂಬ ಹೆಸರು ನೀಡಲಾಯಿತು. ಪತ್ರಿಕೆಯ ಪ್ರಥಮ ಸಂಪಾದಕ ಹೆನ್ರಿ ರೇಮಾಂಡ್ ಈ ಪತ್ರಿಕೆಯನ್ನು ಇಂಗ್ಲೆಂಡಿನ ಲಂಡನ್ ಟೈಮ್ಸ್ ಮಾದರಿಯಲ್ಲಿ ರೂಪಿಸಿದರು. ಆ ಕಾಲದ ಪೆನಿ ಪತ್ರಿಕೆಗಳ ಹಾವಳಿ ಹಾಗೂ ಪ್ರಚೋದನಶೀಲ ಪತ್ರಿಕಾನೀತಿಗೆ ಭಿನ್ನವಾಗಿ, ಜವಾಬ್ದಾರಿಯಿಂದ ಕೂಡಿದ ಆರೋಗ್ಯಕರ ಸಂಪಾದಕೀಯ ಮಾರ್ಗವನ್ನು ಈ ಪತ್ರಿಕೆ ಅನುಸರಿಸಿತು.
ಪ್ರಾರಂಭದ ವರ್ಷಗಳಲ್ಲಿ ಇದರ ಆರ್ಥಿಕ ಸ್ಥಿತಿ ಸುಭದ್ರವಾಗಿರಲಿಲ್ಲ. ರೇಮಾಂಡ್‍ನ ಮರಣಾನಂತರ ಅಡಾಲ್ಫ್ ಸೈಮನ್ ಓಕ್ಸ್ (1858-1935) ಟೈಮ್ಸ್ ಮಾಲೀಕರಾದರು. 1896ರಲ್ಲಿ ಕೇವಲ 9,000 ಪ್ರಸಾರವಿದ್ದ ಟೈಮ್ಸ್ 1934ರ ಹೊತ್ತಿಗೆ 4,66,000 ಕ್ಕೆ ಏರುವಂತೆ ಮಾಡಿದ್ದು ಓಕ್ಸ್ ಸಾಧನೆ. ಟೈಮ್ಸ್ ಸರ್ವಾಂಗೀಣ ಸಂಪಾದಕೀಯ ವಿಭಾಗದ ಶ್ರೀಮಂತಿಕೆಗೆ ಶ್ರಮಿಸಿದವರಲ್ಲಿ ಕಾರ್ ವಿ. ವ್ಯಾನ್ ಪ್ರಮುಖರು. ಇವರು ಬಹಳ ಕಾಲ ನಿರ್ವಾಹಕ ಸಂಪಾದಕರಾಗಿದ್ದರು.
ಪಕ್ಷಪಾತವಿಲ್ಲದೆ, ನಿರ್ಭಯವಾಗಿ, ಪ್ರಕಟಣೆಗೆ ಅರ್ಹವಾದ ಎಲ್ಲ ಸುದ್ದಿಗಳನ್ನು ಪ್ರಕಟಿಸುವ ಧ್ಯೇಯ ಹೊಂದಿರುವ ಟೈಮ್ಸ್ ಐತಿಹಾಸಿಕ ದಾಖಲೆಗಳ ಪತ್ರಿಕೆ ಎಂಬ ಕೀರ್ತಿ ಪಡೆದಿದೆ. ಅಮೆರಿಕದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹಾಗೂ ನಾಗರಿಕ ಹಕ್ಕುಗಳ ರಕ್ಷಣೆಯ ಹೋರಾಟದಲ್ಲಿ ಇದು ಪ್ರಮುಖ ಪಾತ್ರವಹಿಸಿತು. ವಿಯೆಟ್ನಾಮ್ ಸಮರಕ್ಕೆ ಸಂಬಂಧಿಸಿದಂತೆ (1971) ಅಮೆರಿಕ ಸರ್ಕಾರದ ಅಕೃತ್ಯಗಳನ್ನು ಟೈಮ್ಸ್ ಬಯಲಿಗೆಳೆಯಿತು. ಸರ್ಕಾರದ ನ್ಯಾಯ ಶಾಖೆ ಇದರ ಪ್ರಕಟಣೆಯನ್ನು ನಿಷೇಧಿಸಿ ತಡೆ ಆಜ್ಞೆ ನೀಡಿತು. ಪತ್ರಿಕಾ ಸ್ವಾತಂತ್ರ್ಯಕ್ಕೆ ಮಾರಕವಾಗಿದ್ದ ಈ ಆಜ್ಞೆ ಹಾಗೂ ವಾಟರ್‍ಗೇಟ್ ಹಗರಣದಲ್ಲೂ ಟೈಮ್ಸ್ ವಹಿಸಿದ ಪಾತ್ರ ಗಮನಾರ್ಹ. ಟೈಮ್ಸ್
ಪತ್ರಿಕೆಯ ಅಸೀಮ ಸಾರ್ವಜನಿಕ ಸೇವೆಯ ನೆನಪಿಗಾಗಿ ಅಮೆರಿಕದ ಪ್ರತಿಷ್ಠಿತ ಪುಲಿಟ್ಜರ್ ಬಂಗಾರ ಪದಕವನ್ನು ನೀಡಲಾಯಿತು. ಟೈಮ್ಸ್‍ನ ಅನೇಕ ಕೆಲಸಗಾರರು ತಮ್ಮ ಕ್ಷೇತ್ರಗಳಲ್ಲಿಯ ವಿಶಿಷ್ಟಸಾಧನೆ ಸೇವೆಗಳಿಗೆ ಅನೇಕ ಬಾರಿ ಪುಲಿಟ್ಜರ್ ಬಹುಮಾನಗಳನ್ನು ಗಳಿಸಿದ್ದಾರೆ.
ಟೈಮ್ಸ್ ಒಡೆತನದಲ್ಲಿ ನ್ಯೂ ಯಾರ್ಕ್ ಟೈಮ್ಸ್ ಇಂಡೆಕ್ಸ್, ಟೈಮ್ಸ್ ಇನ್‍ಫರ್ಮೆಷನ್ ಬ್ಯಾಂಕ್ ಮತ್ತು ನ್ಯೂಯಾರ್ಕ್ ಟೈಮ್ಸ್ ಬುಕ್ ಸಪ್ಲಿಮೆಂಟ್ ಎಂಬ ಉಪಯುಕ್ತ ವಿಭಾಗಗಳಿವೆ.
ಸ್ವತಂತ್ರ ರಾಜಕೀಯ ಧೋರಣೆಯ ಈ ಪತ್ರಿಕೆ ಅಡಾಲ್ಫ್ ಸೈಮನ್ ಓಕ್ ಅವರ ಮೊಮ್ಮಗ, ಆರ್ಥರ್ ಓಕ್ಸ್ ಸುಲ್ಜರ್‍ಬರ್ಗರ್ ಅವರು ಪತ್ರಿಕೆಯ ಆಡಳಿತ ವ್ಯವಸ್ಥೆಯಲ್ಲಿ ಹಾಗೂ ಮುದ್ರಣದಲ್ಲಿ ಪತ್ರಿಕೆಯ 1970ರಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಿದರು. ಉಪಗ್ರಹ ಬಳಸಿ ರಾಷ್ಟ್ರದ ನಾನಾ ಭಾಗಗಳಲ್ಲಿ ಏಕಕಾಲದ ಪತ್ರಿಕೆ ಮುದ್ರಿಸಿ ಪ್ರಕಟಿಸುವ ಮೂಲಕ ಇದನ್ನು ರಾಷ್ಟ್ರೀಯ ಪತ್ರಿಕೆಯನ್ನಾಗಿ ಮಾಡಿದರು.
ಮಾಹಿತಿ ಆಧಾರ: ಮೈಸೂರು ವಿಶ್ವಕೋಶ
On the day New York Times started publishing
ಕಾಮೆಂಟ್‌ಗಳು