ಸುಬ್ರಹ್ಮಣ್ಯ ಭಾರತಿ
ಸುಬ್ರಹ್ಮಣ್ಯ ಭಾರತಿ
ಸುಬ್ರಹ್ಮಣ್ಯ ಭಾರತಿ ಕವಿಯಾಗಿ, ದೇಶಭಕ್ತರಾಗಿ, ಸಮಾಜಸುಧಾರಕರಾಗಿ, ತತ್ತ್ವಶಾಸ್ತ್ರಜ್ಞರಾಗಿ, ಪತ್ರಿಕೋದ್ಯಮಿಯಾಗಿ ಪ್ರಸಿದ್ಧರಾಗಿದ್ದಾರೆ. ಅವರು ರಾಷ್ಟ್ರೀಯ ಭಾವೈ ಕ್ಯದ ಹರಿಕಾರರಾಗಿ, ಜಾತ್ಯತೀತ ಸಮಾನತೆಯ ಆಧಾರದ ಮೇಲೆ ರಾಷ್ಟ್ರ ಜೀವನದ ಕನಸುಕಂಡವರು.
ಸುಬ್ರಹ್ಮಣ್ಯರು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಎಟ್ಟಯಪುರಮಿನಲ್ಲಿ 1882ರ ಡಿಸೆಂಬರ್ 11ರಂದು ಜನಿಸಿದರು. ತಂದೆ ಚಿನ್ನಸ್ವಾಮಿ ಅಯ್ಯರ್. ತಾಯಿ ಲಕ್ಷ್ಮೀ ಅಮ್ಮಾಳ್. ಐದನೆಯ ವರ್ಷದಲ್ಲಿ ತಾಯಿಯನ್ನು ಕಳೆದುಕೊಂಡರು.
ಏಳನೆಯ ವಯಸ್ಸಿಗಾಗಲೇ ಆಶುಕವಿತೆ ಕಟ್ಟುತ್ತಿದ್ದ ಸುಬ್ರಹ್ಮಣ್ಯರು ಎಟ್ಟಯಪುರಮ್ ರಾಜನಿಂದ ಭಾರತಿ ಎಂಬ ಬಿರುದು ಪಡೆದರು. ತಿರುನಲ್ವೇಲಿಯ ಹಿಂದೂ ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಏಳುವರ್ಷದ ಚೆಲ್ಲಮ್ಮಾಳ್ ಎಂಬ ಬಾಲಿಕೆಯೊಂದಿಗೆ ವಿವಾಹವಾಯಿತು (1897). 1898ರಲ್ಲಿ ಇವರ ತಂದೆ ಕಾಲವಾದುದರಿಂದ ಸಮೀಪದ ಬಂಧು ಕುಪ್ಪಮ್ಮಾಳ್ ಎಂಬವರ ಆಶ್ರಯ ಪಡೆದರು. ಅವರ ಪ್ರೋತ್ಸಾಹದಿಂದ ಕಾಶಿಯ ಹಿಂದೂ ಕಾಲೇಜಿನಲ್ಲಿ ಮೆಟ್ರಿಕ್ಯುಲೇಶನ್ ಮಾಡಿ 1902ರಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದ ಪದವಿಪೂರ್ವ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ಅಲ್ಲಿ ಭಾರತಿಯವರು ಸಂಸ್ಕೃತ ಮತ್ತು ಹಿಂದಿ ಕಲಿತರು. ಎಟ್ಟಯಪುರಮ್ ರಾಜನ ಅಪೇಕ್ಷೆಯಂತೆ ಅಲಹಾಬಾದಿನಿಂದ ಹಿಂದೆ ಬಂದವರು ಸ್ವಲ್ಪ ಕಾಲ ಆ ರಾಜನ ಆಸ್ಥಾನ ಕವಿಯಾಗಿದ್ದರು. ಮುಂದೆ ಮದರಾಸಿಗೆ ಬಂದು ಸುದೇಶ ಮಿತ್ರನ್ ದಿನ ಪತ್ರಿಕೆಯ ಉಪಸಂಪಾದಕರಾಗಿಯೂ, ಚಕ್ರವರ್ತಿನಿ ಮಾಸ ಪತ್ರಿಕೆಯ ಗೌರವ ಸಂಪಾದಕರಾಗಿಯೂ ಕೆಲಸ ಮಾಡಿದರು.
1905ರಲ್ಲಿ ರಾಜಕೀಯ ಪ್ರವೇಶಿಸಿದ ಸುಬ್ರಹ್ಮಣ್ಯ ಭಾರತಿ ಕಲ್ಕತ್ತದಲ್ಲಿ ದಾದಾಬಾಯಿ ನೌರೋಜಿ ಅವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಮಹಾಸಭೆಯಲ್ಲಿ ಭಾಗವಹಿಸಿದರು. ಅಲ್ಲಿ ಸೋದರಿ ನಿವೇದಿತಾರನ್ನು ಭೇಟಿಯಾಗಿ ಅವರನ್ನು ತಮ್ಮ ಜ್ಞಾನಗುರುವಾಗಿ ಸ್ವೀಕರಿಸಿದರು. ಅಲ್ಲಿಂದ ಹಿಂದಿರುಗಿದ ಭಾರತಿಯವರು 1907ರಲ್ಲಿ ಇಂಡಿಯಾ ಎಂಬ ತಮಿಳು ವಾರಪತ್ರಿಕೆಯನ್ನೂ , ಬಾಲ ಭಾರತಮ್ ಎಂಬ ಆಂಗ್ಲವಾರ ಪತ್ರಿಕೆಯನ್ನೂ ಆರಂಭಿಸಿದರು. ಅದೇವರ್ಷ ಸೂರತ್‍ನಲ್ಲಿ ಲೋಕಮಾನ್ಯ ತಿಲಕ್, ಅರವಿಂದರು, ಲಾಲಾ ಲಜಪತರಾಯ್ ಮೊದಲಾದವರನ್ನು ಭೇಟಿಯಾದರು.
1908ರಲ್ಲಿ ಸುಬ್ರಹ್ಮಣ್ಯ ಭಾರತಿ ಅವರ ಮೊದಲ ಕವನ ಸಂಕಲನ 'ಸ್ವದೇಶಗೀತಂಗಳ್' ಹಾಗೂ 1909ರಲ್ಲಿ ಅವರ ಎರಡನೆಯ ಕವನ ಸಂಕಲನ 'ಜನ್ಮಭೂಮಿ' ಪ್ರಕಟವಾದುವು. ವಿಜಯ ಎಂಬ ದಿನಪತ್ರಿಕೆ, ಸೂರ್ಯೋದಯ ಎಂಬ ತಮಿಳುವಾರಪತ್ರಿಕೆ ಮತ್ತು ಕರ್ಮಯೋಗಿ ಎಂಬ ಇಂಗ್ಲಿಷ್ ಪತ್ರಿಕೆ ನಡೆಸುತ್ತಿದ್ದರು. ಚಿತ್ರಾವಳಿ ಎಂಬ ತಮಿಳು ಮತ್ತು ಆಂಗ್ಲ ಭಾಷೆಗಳ ಕಾರ್ಟೂನು ಪತ್ರಿಕೆಗಳನ್ನು ತರಲು ಯತ್ನಿಸಿದರು. ಉಗ್ರವಾದಿಗಳ ಮುಖವಾಣಿಯಾಗಿದ್ದ ಭಾರತ ಎಂಬ ಪತ್ರಿಕೆಯ ಸಂಪಾದಕರಾಗಿದ್ದ ಇವರ ಮೇಲೆ ಪೊಲೀಸರ ಕಣ್ಣುಬಿತ್ತು. ಬಂಧನದಿಂದ ತಪ್ಪಿಸಿಕೊಳ್ಳಲು ತಮಗೆ ಮನಸ್ಸಿಲ್ಲದಿದ್ದರೂ ಗೆಳೆಯರ ಒತ್ತಾಯದಿಂದ ಫ್ರೆಂಚ್ ಆಡಳಿತದ ಪಾಂಡಿಚೆರಿಗೆ ತಲೆಮರೆಸಿಕೊಂಡು ಹೋದರು. ಅಲ್ಲಿ ಅರವಿಂದರ ಹಾಗೂ ವಿ.ವಿ.ಎಸ್. ಅಯ್ಯರ್ ಅವರ ಸಾನ್ನಿಧ್ಯದಿಂದ ಬದುಕಿನ ಹೊಸ ಘಟ್ಟ ತಲಪಿದರು. ಅಧ್ಯಯನ, ಚಿಂತನ, ಬರವಣಿಗೆ ಇವು ಇವರ ಬದುಕನ್ನು ತುಂಬಿದವು. ಅಲ್ಲಿದ್ದ ಅವಧಿ ಭಾರತಿ ಅವರ ಅತ್ಯಂತ ಸೃಜನಶೀಲಕಾಲ. ತಮ್ಮ ಪ್ರಥಮ ಕೃತಿಗಳನ್ನು ಅವರು ಅಲ್ಲಿಯೇ ರಚಿಸಿದರು. ಭಗವದ್ಗೀತೆಯನ್ನು ತಮಿಳಿಗೆ ಭಾಷಾಂತರಿಸಿದರು. ಕಣ್ಣನ್ ಪ್ಪಾಟ್ಟು, ಕಯಿಲ್‍ಪ್ಪಾಟ್ಟು, ಪಾಂಚಾಲಿ ಶಪಥಮ್ ಮುಂತಾದ ಕೃತಿಗಳು ಈ ಕಾಲದಲ್ಲೇ ಹೊರಬಂದವು. ಇವರ ದೇಶಭಕ್ತಿ ಗೀತೆಗಳ ಸಂಕಲನ ಮಾತಾ ಮಣಿ ವಾಚಕಮ್, ದಕ್ಷಿಣ ಆಫ್ರಿಕಾದ ನೆಟಾಲಿನಲ್ಲಿ ಪ್ರಕಟವಾಯಿತು. 1918ರಲ್ಲಿ ಪಾಂಡಿಚೆರಿಯಿಂದ ಬರುತ್ತಿದ್ದಾಗ ಬಂಧಿತರಾಗಿ ಕಡಲೂರಿನ ಸೆರೆಮನೆ ಸೇರಿದರು. ಬಿಡುಗಡೆಯ ಅನಂತರ ಮದರಾಸಿಗೆ ಮರಳಿದರು. ಈ ಮಧ್ಯೆ ಭಾರತಿ ಅವರು ಮಹಾತ್ಮಗಾಂಧಿ, ರಾಜಾಜಿ ಮೊದಲಾದ ರಾಜಕೀಯ ನಾಯಕರನ್ನು ಭೇಟಿ ಮಾಡಿದರು. 1920ರಲ್ಲಿ ಮತ್ತೆ ಸ್ವದೇಶ ಮಿತ್ರನ್ ಪತ್ರಿಕೆಯ ಉಪ ಸಂಪಾದಕರಾದರು.
ಆಧುನಿಕ ತಮಿಳು ಸಾಹಿತ್ಯದಮೇಲೆ ಗಾಢ ಪ್ರಭಾವ ಬೀರಿದ ಭಾರತಿ ಅವರ ಕೃತಿಗಳು ಸ್ವಾತಂತ್ರ್ಯ ಸಂಗ್ರಾಮಕ್ಕೆ ಶಕ್ತಿ ಉತ್ಸಾಹ ನೀಡಿದುವು. ಇವರು ಸ್ವಾತಂತ್ರ್ಯಪ್ರಿಯ ಕವಿ. ವೈಯಕ್ತಿಕ ಸ್ವಾತಂತ್ರ್ಯ, ರಾಷ್ಟ್ರೀಯ ಸ್ವಾತಂತ್ರ್ಯ ಪ್ರಪಂಚ ಸೋದರತೆ - ಇವು ಇವರ ಕೃತಿಗಳ ಪ್ರಧಾನಗುರಿ. ಸಮಾಜದ ಒಳಿತಿಗಾಗಿ ರಚಿಸಿದ ಇವರ ಕವನಗಳಲ್ಲಿ ಜಾತಿಭೇದವನ್ನು ವಿರೋಧಿಸುವ ಮತ್ತು ಮೂಢನಂಬಿಕೆಗಳನ್ನು ಎದುರಿಸುವ ಮನೋಭಾವ ಕಂಡುಬರುತ್ತದೆ. ದೇಶಾಭಿಮಾನ ಹಾಗೂ ರಾಷ್ಟ್ರೈಕ್ಯ ಭಾವನೆ ಮೂಡಿಸುವ, ಸ್ತ್ರೀಸ್ವಾತಂತ್ರ್ಯ ಮತ್ತು ತಾಯ್ನುಡಿಯ ಮಹತ್ತ್ವ ತಿಳಿಸುವ ಅನೇಕ ಉತ್ತಮ ಕವನಗಳನ್ನು ಭಾರತಿ ರಚಿಸಿದ್ದಾರೆ. ಭಾರತಿಯವರು ಒಟ್ಟು 108 ಲೇಖನ, 42 ಕಥೆ, ಸುಮಾರು 300 ಕವನ ಹಾಗೂ ಪಾಂಚಾಲಿ ಶಪಥಂ ಎಂಬ ಕಥನ ಕವನ ರಚಿಸಿದ್ದಾರೆ. ಇವರ ಕವಿತೆಗಳನ್ನು ದೇಶಪ್ರೇಮಯುತವಾದವು ಹಾಗೂ ಭಕ್ತಿಯುತವಾದವು ಎಂದು ಎರಡು ಭಾಗ ಮಾಡಬಹುದು. ಈ ಭಾಗಗಳಿಗೆ ಸೇರದ ಸಂಕೀರ್ಣ ಸ್ವರೂಪದ ಕವಿತೆಗಳೂ ನೀಳ್ಗವಿತೆಗಳೂ ಸಾಕಷ್ಟಿವೆ. ಕೃಷ್ಣನನ್ನು ಗೆಳೆಯ, ತಾಯಿ, ತಂದೆ, ಸೇವಕ, ರಾಜ, ವಿದ್ಯಾರ್ಥಿ, ಪ್ರಿಯ, ಪ್ರೇಯಸಿ, ಗುರು ಇತ್ಯಾದಿಯಾಗಿ ವರ್ಣಿಸುವ ಕಣ್ಣನ್ ಪಾಟ್ಟು, ದ್ರೌಪದಿಯನ್ನು ಕುರಿತ ಐದು ಸರ್ಗ ಪಾಂಚಾಲಿ ಶಪಥಮ್ ಇವರ ಕೃತಿಗಳಲ್ಲಿ ಪ್ರಮುಖವಾದವು. ಅಲ್ಲದೆ ಗದ್ಯ ಬರೆಹಗಳು, ಗದ್ಯ ಗೀತೆಗಳು, ಅನುವಾದಗಳು ಇವೆ. ತಮಿಳು ಜನಪದದಲ್ಲಿ ಪ್ರಸಿದ್ಧವಾದ ನೊಂಡಿಚ್ಚಿಂದು, ಕಾವಡಿಚ್ಚಿಂದು ಮೊದಲಾದ ಸರಳ ಛಂಧೋರೂಪಗಳಲ್ಲಿ ಕಾವ್ಯ ರಚಿಸಿ ತಮಿಳು ಸಾಹಿತ್ಯವನ್ನು ಜನ ಸಾಮಾನ್ಯರಿಗೂ ಎಟುಕುವಂತೆ ಮಾಡಿದರು.
1921 ಜುಲೈ ತಿಂಗಳಿನಲ್ಲಿ ಮದರಾಸಿನ ತಿರುವಲ್ಲಿಕ್ಕೇನಿಯ ಪಾರ್ಥಸಾರಥಿ ದೇವಸ್ಥಾನದ ಆನೆಯ ಹೊಡೆತದಿಂದ ಗಾಯಗೊಂಡ ಸುಬ್ರಮಣ್ಯ ಭಾರತಿ ಅದೇ ವರ್ಷ ಸೆಪ್ಟೆಂಬರ್ ತಿಂಗಳ 11ರಂದು ತಮ್ಮ 39ನೆಯ ವಯಸ್ಸಿನಲ್ಲಿ ಮೃತ್ಯುವಿಗೆ ಈಡಾದರು.
ಭಾರತೀಯಾರ್ ಎಂದು ಪ್ರಸಿದ್ಧ ಹೆಸರಾದ ಸುಬ್ರಹ್ಮಣ್ಯ ಭಾರತಿ ಅವರ ಶತಮಾನೋತ್ಸವವನ್ನು 1982ರ ಡಿಸಂಬರಿನಿಂದ ಆರಂಭಿಸಿ ವರ್ಷವಿಡೀ ಆಚರಿಸಲಾಯಿತು.
On birth anniversary of great poet, social reformer and freedom fighter Subrahmanya Bharati 🌷🙏🌷
ಕಾಮೆಂಟ್‌ಗಳು