ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಲಿಯಮ್ ಬೆಂಟಿಂಕ್


 ಲಾರ್ಡ್ ವಿಲಿಯಮ್ ಬೆಂಟಿಂಕ್


ನಾನು ಶಾಲೆಯಲ್ಲಿ ಚರಿತ್ರೆಯನ್ನು ಓದಿದ ದಿನಗಳಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ಒಳ್ಳೆಯ ಕೆಲಸ ಮಾಡಿದವನೆಂಬ ಹೆಸರು ನೆನಪಿರುವುದು ಲಾರ್ಡ್ ವಿಲಿಯಮ್ ಬೆಂಟಿಂಕ್.  ಒಳ್ಳೆಯ ಕೆಲಸ ಯಾರು ಮಾಡಿದ್ದರೂ ಯಾವ ತಾಯಿಯು ಹಡೆದ ಮಕ್ಕಳಾದರೂ ನೆನೆಯಬೇಕು.  ಸತಿ ಸಹಗಮನ ಪದ್ದತಿ, ಬಾಲ್ಯ ವಿವಾಹ ಪದ್ದತಿ ಮತ್ತು ಶಿಶುಹತ್ಯೆಗಳ ಬಗ್ಗೆ ಕಾನೂನು ಮಾಡಿದ ಈತನ ಹೃದಯ ದೊಡ್ಡದು ಎಂದು ನನ್ನ ಅನಿಸಿಕೆ.  ಹಾಗೆಂದು ಆತ ಮಾಡಿದ್ದೆಲ್ಲ ಶ್ರೇಷ್ಠ, ನಾವು ಬ್ರಿಟಿಷ್ ಆಡಳಿತದ ಪರ ಎಂದಲ್ಲ.

ಬೆಂಟಿಂಕ್, ಲಾರ್ಡ್ ವಿಲಿಯಮ್ ಭಾರತದ ಪ್ರಥಮ ಬ್ರಿಟಿಷ್ ಗವರ್ನರ್ ಜನರಲ್. ಈತ ಬ್ರಿಟಿಷ್ ಪ್ರಧಾನ ಮಂತ್ರಿಯಾಗಿದ್ದ ಪೋರ್ಟ್‍ಲೆಂಡಿನ 3ನೆಯ ಡ್ಯೂಕ್ ಮಿಲಿಯಮ್ ಹೆನ್ರಿ ಕ್ಯಾವೆಂಡಿಸನ ಎರಡನೆಯ ಮಗನಾಗಿ 1774 ಸೆಪ್ಟೆಂಬರ್ 14ರಲ್ಲಿ ಜನಿಸಿದ. 

ಬೆಂಟಿಂಕ್ 17ನೆಯ ವರ್ಷದಲ್ಲಿ ಸೈನ್ಯವನ್ನು ಸೇರಿ 1794ರ ವೇಳೆಗೆ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೇರಿದ. ಶ್ರೀಮಂತ ಮನೆತನದಲ್ಲಿ ಜನಿಸಿದ್ದ ಇವನು ಉತ್ತಮ ದರ್ಜೆಯ ಯುವ ಅಧಿಕಾರಿಯಾಗಿ ಹೆಸರು ಪಡೆದ. 1803ರಲ್ಲಿ ಮದರಾಸು ಪ್ರಾಂತ್ಯದ ಗವರ್ನರ್ ಆಗಿ ಈತ ಭಾರತಕ್ಕೆ ಬಂದ.  ಮದರಾಸಿನ ಗವರ್ನರ್ ಆಗಿದ್ದ ಕಾಲದಲ್ಲಿ ಬೆಂಟಿಂಕ್ ಕೌನ್ಸಿಲ್‍ನೊಡನೆ (ಮಂತ್ರಾಲೋಚನಾ ಸಭೆ) ಒಮ್ಮತ ಹೊಂದಿರಲಿಲ್ಲ. ಇದಲ್ಲದೆ ವೆಲ್ಲೂರಿನಲ್ಲಿ ಸೈನಿಕರ ದಂಗೆ ನಡೆಯಿತು (1806). ಈ ಕಾರಣದಿಂದ ಬೆಂಟಿಂಕನನ್ನು ಇಂಗ್ಲೆಂಡಿಗೆ 1807ರಲ್ಲಿ ವಾಪಸ್ಸು ಕರೆಸಿಕೊಳ್ಳಲಾಯಿತು.

ಬೆಂಟಿಂಕ್ 1827ರಲ್ಲಿ ಬಂಗಾಳದ ಗವರ್ನರ್ ಜನರಲ್ ಆಗಿ ನೇಮಿತವಾಗಿ ಭಾರತಕ್ಕೆ ಮತ್ತೆ ಬಂದು 1828 ಜುಲೈನಲ್ಲಿ ಅಧಿಕಾರ ವಹಿಸಿಕೊಂಡ. ಮುಂದೆ ಬೆಂಟಿಂಕ್ ತನ್ನ ಆಡಳಿತ ಕಾಲದಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದ. ಯುದ್ಧಗಳಿಂದಾಗಿ ಕಂಪೆನಿಯ ಭಂಡಾರ ಬರಿದಾಗಿತ್ತು. ಆದ್ದರಿಂದ ಲೋಕಸೇವಾ ವಿಭಾಗದ ಮತ್ತು ಸೈನಿಕ ವಿಭಾಗದ ವೆಚ್ಚವನ್ನು ಕಡಿಮೆಮಾಡಲು ಕ್ರಮ ಕೈಗೊಂಡ. 1765ರಲ್ಲಿ ಕ್ಲೈವ್ ಜಾರಿಗೆ ತಂದಿದ್ದ ಡಬ್ಬಲ್ ಬಾಟಾ ಪದ್ಧತಿಯನ್ನು ರದ್ದುಗೊಳಿಸಿದ. ಇದರಿಂದ ಕೋಪಗೊಂಡ ಸೈನಿಕರು ದಂಗೆಯೆದ್ದಾಗ ಅವರನ್ನು ಹತ್ತಿಕ್ಕಿದ. ಕಂದಾಯದಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಹಣ ಬರುವಂತೆ ಮಾಡಿದ. ಅಫೀಮು ವ್ಯಾಪಾರದ ಮೇಲೆ ಹೆಚ್ಚು ತೆರಿಗೆ ಹಾಕಿದ. 

ಬೆಂಟಿಂಕ್ ಆಡಳಿತದಲ್ಲಿ ಮಿತವ್ಯಯವನ್ನು ಸಾಧಿಸುವುದಕ್ಕೋಸ್ಕರ ಭಾರತೀಯರನ್ನು ಸರ್ಕಾರಿ ಹುದ್ದೆಗಳಿಗೆ ನೇಮಿಸಿದ. ಈ ಬಗೆಯ ಆರ್ಥಿಕ ಸುಧಾರಣೆಗಳಿಂದ ಸರ್ಕಾರದ ಹಣಕಾಸಿನ ಪರಿಸ್ಥಿತಿ ಸುಧಾರಿಸಿತು.
ಕಾರ್ನ್‍ವಾಲೀಸನ ಕಾಲದಲ್ಲಿ ಸ್ಥಾಪಿತವಾಗಿದ್ದ ಪ್ರಾಂತೀಯ ಅಪೀಲು ಕೋರ್ಟುಗಳನ್ನು ಮತ್ತು ಸಕ್ರ್ಯೂಟ್ ಕೋರ್ಟ್‍ಗಳನ್ನು ಬೆಂಟಿಂಕ್ ರದ್ದುಗೊಳಿಸಿದ. ಈ ಕೋರ್ಟ್‍ಗಳಲ್ಲಿದ್ದ ನ್ಯಾಯಾಧೀಶರು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸದೆ ಇದ್ದುದರಿಂದ ಅವನ್ನು ಮುಚ್ಚಿಸಿದ. ಉಳಿದ ನ್ಯಾಯಾಲಯಗಳಲ್ಲಿ ಬೆಂಟಿಂಕ್ ಭಾರತೀಯರನ್ನು ನ್ಯಾಯಧೀಶರನ್ನಾಗಿ ನೇಮಿಸಿ ಅವರ ಸಂಬಳವನ್ನು ಹೆಚ್ಚಿಸಿದ. ಕೋರ್ಟಿನ ವ್ಯವಹಾರಗಳನ್ನು ದೇಶೀಯ ಭಾಷೆಯಲ್ಲಿಯೇ ನಡೆಸಬಹುದೆಂದು ಬೆಂಟಿಂಕ್ ಆಜ್ಞೆ ಹೊರಡಿಸಿದ.

ಬೆಂಟಿಂಕ್‍ನ ಸಾಮಾಜಿಕ ಸುಧಾರಣೆಗಳಲ್ಲಿ ಪ್ರಥಮವಾದದ್ದು ಬಹುಕಾಲದಿಂದ ರೂಢಿಯಲ್ಲಿದ್ದ ಸಹಗಮನ ಪದ್ಧತಿಯನ್ನು ಕೊನೆಗಾಣಿಸಿದ್ದು.  1829ರಲ್ಲಿ ಶಾಸನದ ಮೂಲಕ ಆಜ್ಞೆ ಹೊರಡಿಸಿ ಅದನ್ನು ಉಲ್ಲಂಘಿಸಿದರೆ ಕಠಿಣ ಶಿಕ್ಷೆ ವಿಧಿಸುವುದಾಗಿ ತಿಳಿಸಿದ. ಈ ಸುಧಾರಣೆಯ ಯಶಸ್ಸಿಗೆ ಬಂಗಾಳದ ಹಿಂದೂ ಸಮಾಜ ಸುಧಾರಕ ರಾಜಾ ರಾಮ್ ಮೋಹನ್‍ರಾಯ್ ಮತ್ತು ದ್ವಾರಕನಾಥ ಟಾಗೂರರೂ ಕೂಡ ಕಾರಣರಾಗಿದ್ದು ಅವರು ಬೆಂಟಿಂಕನಿಗೆ ಬೆಂಬಲ ನೀಡಿದರು. 

ಬೆಂಟಿಂಕ್ ಬಾಲ್ಯ ವಿವಾಹ ಮತ್ತು ಶಿಶುಹತ್ಯೆಯನ್ನು ನಿಲ್ಲಿಸಿದ. ಈ ಎಲ್ಲ ಸುಧಾರಣೆಗಳು ಅವನ ಕಾಲಕ್ಕೆ ಕ್ರಾಂತಿಕಾರಕ ಸುಧಾರಣೆಗಳಾಗಿದ್ದವೆನ್ನಬಹುದು. ಇದಲ್ಲದೆ ಪ್ರಯಾಣಿಕರಿಗೆ ಕಂಟಕಪ್ರಾಯರಾಗಿದ್ದ ಠಕ್ಕರನ್ನು ದರೋಡೆಕೋರರನ್ನೂ ನಿರ್ಮೂಲನ ಮಾಡಲು ಕ್ರಮಕೈಗೊಂಡು 1829-35 ಅವಧಿಯಲ್ಲಿ ಸುಮಾರು 2000 ಠಕ್ಕರನ್ನು ಹಿಡಿದು ಗಲ್ಲಿಗೇರಿಸಿದ. ತಾವಾಗಿಯೇ ಶರಣಾಗತರಾದ ಠಕ್ಕರಿಗೆ ಜೀವನ ಸೌಲಭ್ಯಗಳನ್ನು ಕೊಡಲಾಯಿತು. ಠಕ್ಕರನ್ನು ಅಡಗಿಸುವ ಕಾರ್ಯದಲ್ಲಿ ಸರ್ ವಿಲಿಯಮ್ ಸ್ಲೀಮನ್ ಎಂಬುವನು ಪ್ರಧಾನ ಪಾತ್ರ ವಹಿಸಿದ್ದ.

ಶಿಕ್ಷಣ ಪದ್ಧತಿಯಲ್ಲಿಯೂ ಬೆಂಟಿಂಕ್ ಅನೇಕ ಸುಧಾರಣೆ ಮಾಡಿದ. ಉದ್ದಾಮ ಪಂಡಿತನೂ ಶಿಕ್ಷಣ ಮಂಡಲಿಯ ಆಧ್ಯಕ್ಷನೂ ಆಗಿದ್ದ ಮೆಕಾಲೆ ಆಂಗ್ಲ ಭಾಷೆಯನ್ನೇ ಪ್ರೌಢ ಶಿಕ್ಷಣ ಪದ್ಧತಿಯಲ್ಲಿ ಮಾಧ್ಯಮವಾಗಿ ಮಾಡಬೇಕೆಂದು 1835ರ ವರದಿಯಲ್ಲಿ ಸೂಚಿಸಿದ. ಮೆಕಾಲೆಯ ಅಭಿಪ್ರಾಯಕ್ಕೆ ಬೆಂಟಿಂಕ್ ಅನುಮೋದನೆ ನೀಡಿ 1835 ಮಾರ್ಚ್ 7ರಂದು ಒಂದು ನಿರ್ಣಯ ತಂದು ಅದರ ಮೂಲಕ ಭಾರತದ ಆಡಳಿತ ಭಾಷೆಯೂ ಮತ್ತು ಶಿಕ್ಷಣ ಮಾಧ್ಯಮವೂ ಆಂಗ್ಲಭಾಷೆ ಆಗಿರಬೇಕೆಂದು ಆಜ್ಞೆ ಹೊರಡಿಸಿದ. ಕ್ರಿಶ್ಚಿಯನ್ ಪಾದ್ರಿಗಳು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಇಂಗ್ಲಿಷ್ ಭಾಷೆಯ ಮೂಲಕ ಶಿಕ್ಷಣ ಕೊಡಲು ಪ್ರಾರಂಭಿಸಿದರು. 

ರಾಜಾರಾಮ್‍ಮೋಹನ್‍ರಾಯ್ ಮೊದಲಾದ ಭಾರತೀಯ ವಿದ್ವಾಂಸರು ಇಂಗ್ಲಿಷ್ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದರು. ಇಂಗ್ಲಿಷ್ ಸಾಹಿತ್ಯ ಮತ್ತು ವಿಜ್ಞಾನಕ್ಕೆ ಹೆಚ್ಚು ಆದ್ಯತೆ ನೀಡಲಾಯಿತು. 1835ರಲ್ಲಿ ಕಲ್ಕತ್ತೆಯಲ್ಲಿ ಮೆಡಿಕಲ್ ಕಾಲೇಜನ್ನು ಸ್ಥಾಪಿಸಲಾಯಿತು.

ವಿದೇಶಾಂಗ ವ್ಯವಹಾರಗಳಲ್ಲೂ ದೇಶೀಯ ರಾಜರುಗಳ ಸಂಬಂಧಗಳಲ್ಲೂ ಇನ್ನೊಬ್ಬರ ವಿಷಯದಲ್ಲಿ ಪ್ರವೇಶಿಸದಂತೆ ಬೆಂಟಿಂಕ್ ಎಚ್ಚರಿಕೆ ವಹಿಸಿದ್ದ. ಆದರೆ ಈ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಷ್ಟು ಭಾರತದ ರಾಜಕೀಯ ಪರಿಸ್ಥಿತಿ ಅನುಕೂಲವಾಗಿರಲಿಲ್ಲ. ಬೆಂಟಿಂಕ್ ಶಾಂತಿಪ್ರೇಮಿಯಾಗಿದ್ದ. ಆದರೂ ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಕೆಲವು ವಿಷಯಗಳಲ್ಲಿ ತಲೆಹಾಕಬೇಕಾಯಿತು. ಇವನು ಸಿಂಧ್‍ನ ಅಮೀರರೊಂದಿಗೆ ಸಿಖ್ಖರ ದೊರೆ ರಣಜಿತ್‍ಸಿಂಗನೊಂದಿಗೂ ಕೆಲವು ಒಪ್ಪಂದ ಮಾಡಿಕೊಂಡ. ಇವು ಏಷ್ಯದಲ್ಲಿ ತಮ್ಮ ಪ್ರಭಾವ ಬೀರಿ ವಾಯವ್ಯ ಸರಹದ್ದಿನ ಕಡೆಯಿಂದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಂಭವಿಸಬಹುದಾಗಿದ್ದ ರಷ್ಯನರ ತೊಂದರೆಯನ್ನು ತಡೆ ಹಿಡಿಯುವುದಕ್ಕೋಸ್ಕರ ಮಾಡಿಕೊಂಡಂಥವು. 

ಬ್ರಿಟಿಷರ ರಕ್ಷಣೆಯನ್ನು ಪಡೆದಿದ್ದ ರಾಜ್ಯಗಳ ಆಂತರಿಕ ವಿಷಯಗಳಲ್ಲಿ ಬೆಂಟಿಂಕ್ ಪ್ರವೇಶಿಸದೆ ದೂರವಿರಲು ಪ್ರಯತ್ನಪಟ್ಟರೂ ಕೆಲವು ರಾಜ್ಯಗಳ ದುರಾಡಳಿತದಿಂದ ಮಧ್ಯ ಪ್ರವೇಶಿಸಲೇ ಬೇಕಾಯಿತು. ಮೈಸೂರಿನ ರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ ಆಡಳಿತ ಅಸಮರ್ಪಕವಾಗಿದೆಯೆಂದು ಬೆಂಟಿಂಕ್ 1831ರಲ್ಲಿ ತಾನೇ ಮೈಸೂರಿನ ಆಡಳಿತ ವಹಿಸಿಕೊಂಡು ರಾಜರನ್ನು ನಿವೃತ್ತಿಗೊಳಿಸಿದ. ಬಂಗಾಳದ ಈಶಾನ್ಯಕ್ಕಿರುವ ಕಟಕ್ ರಾಜ್ಯವನ್ನು ಅಲ್ಲಿಯ ಜನಗಳ ಆಸೆಯಂತೆ ಬ್ರಿಟಿಷ್ ರಾಜ್ಯಕ್ಕೆ ಸೇರಿಸಿಕೊಂಡ (1832). ನಿರಂಕುಶಾಧಿಕಾರಿಯಂತೆ ವರ್ತಿಸಿದ್ದ ಕೊಡಗಿನ ರಾಜನನ್ನು ಸಿಂಹಾಸನದಿಂದಿಳಿಸಿ ಆ ರಾಜ್ಯವನ್ನು ಬ್ರಿಟಿಷರ ಅಧೀನಕ್ಕೊಳಪಡುವಂತೆ ಮಾಡಿದ (1834).

ಬೆಂಟಿಂಕ್‍ನ ಕಾಲದಲ್ಲೇ 1833ರ ಕಂಪೆನಿಯ ಹೊಸ ಕಾಯಿದೆಗಳನ್ನು ಬ್ರಿಟಿಷ್ ಪಾರ್ಲಿಮೆಂಟ್ ಅನುಮೋದಿಸಿತು. ಇದರಿಂದಾಗಿ ಹೊಸ ಬಗೆಯ ವಿದ್ಯಾಭ್ಯಾಸ ಕ್ರಮ ಜಾರಿಗೆ ಬಂತು. ಯಾವ ಭಾರತೀಯನಾಗಲಿ, ರಾಜನಾಗಲಿ ಅವನ ಜಾತಿ, ಹುಟ್ಟು, ಸ್ಥಳ, ಧರ್ಮ ಮತ್ತು ವರ್ಣಗಳೇ ಮೊದಲಾದ ಕಾರಣಗಳಿಂದ ಸರ್ಕಾರದ ಹುದ್ದೆಗಳನ್ನು ಹೊಂದಿರಲು ಅನರ್ಹನನ್ನಾಗಿ ಮಾಡಕೂಡದೆಂದು ಆಜ್ಞೆ ಮಾಡಿತು. ಈ ಕಾಯಿದೆಯಿಂದಾಗಿ ಕಂಪೆನಿ ಬ್ರಿಟಿಷ್ ಪಾರ್ಲಿಮೆಂಟ್ ಸಭೆಗೆ ಅಧೀನವಾದ ಆಡಳಿತ ಸಂಸ್ಥೆಯಂತೆ ಕೆಲಸ ನಿರ್ವಹಿಸಬೇಕಾಯಿತು. ಇನ್ನು ಮುಂದೆ ಬಂಗಾಳದ ಗವರ್ನರ್ ಜನರಲ್ ಎಂಬುದಕ್ಕೆ ಬದಲಾಗಿ ಭಾರತದ ಗವರ್ನರ್ ಜನರಲ್ ಎಂಬುದಾಗಿ ಕರೆಯಬೇಕೆಂದು ಈ ಕಾಯಿದೆ ಸ್ಪಷ್ಟಪಡಿಸಿತು. ಇಲ್ಲಿಯ ತನಕ ಮುಂಬಯಿ, ಮದರಾಸು ಮತ್ತು ಕಲ್ಕತ್ತ ಪ್ರೆಸಿಡೆನ್ಸಿಗಳು ಮಾತ್ರ ಇದ್ದುವು. 1833ರ ಕಾಯಿದೆಯಿಂದಾಗಿ ಆಗ್ರಾವನ್ನೊಳಗೊಂಡ ನಾಲ್ಕನೆಯ ಪ್ರೆಸಿಡೆನ್ಸಿ ಸ್ಥಾಪಿತವಾಯಿತು. ಈ ಪ್ರೆಸಿಡೆನ್ಸಿಯ ಮೇಲ್ವಿಚಾರಣೆಗೆ ಒಬ್ಬ ಲೆಫ್ಟಿನೆಂಟ್ ಗವರ್ನರನನ್ನು ನೇಮಿಸಲಾಯಿತು. 

ಗವರ್ನರ್ ಜನರಲ್ ಆಗಿ ಏಳು ವರ್ಷಗಳ ಕಾಲ ಆಳ್ವಿಕೆ ನಡೆಸಿದ ಅನಂತರ ಬೆಂಟಿಂಕ್ ತನ್ನ ಪದವಿಗೆ ರಾಜೀನಾಮೆ ನೀಡಿ 1835 ಮಾರ್ಚಿಯಲ್ಲಿ ಭಾರತದಿಂದ ಹೊರಟು ಹೋದ. 1839 ಜೂನ್ 17ರಂದು ಪ್ಯಾರಿಸ್ ನಗರದಲ್ಲಿ ನಿಧನನಾದ. 

On the birth anniversary of Lord William Bentinck known for reforms such as abolishing sati, suppressing female infanticide and human sacrifice

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ