ನೃತ್ಯಗುರು ನರ್ಮದ
ನೃತ್ಯಗುರು ನರ್ಮದ
ನರ್ಮದ ಅವರು ಮಹಾನ್ ನೃತ್ಯಕಲಾವಿದರ ಗುರುಗಳಾಗಿ ಪ್ರಸಿದ್ಧರು.
ನರ್ಮದ ಅವರು 1942ರ ಸೆಪ್ಟೆಂಬರ್ 22ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಪ್ರಸಿದ್ಧ ವೈದ್ಯರಾಗಿದ್ದ ಡಾ. ಕೆ. ರಾಮರಾವ್. ತಾಯಿ ವೀಣಾ ವಿದುಷಿ ಶಕುಂತಲಾಬಾಯಿ. ನರ್ಮದ ಅವರು ಓದಿದ್ದು ಬಿ.ಎಸ್ಸಿ,.
ಬಾಲಕಿಯಾಗಿದ್ದ ಮಗಳು ನರ್ಮದಳ ಲಯಬದ್ದ ನಡಿಗೆಯನ್ನು ನೋಡಿದ ತಾಯಿ ಶಕುಂತಲಾಬಾಯಿ ಅವರು ನೃತ್ಯ ಕಲಿಯಲು ಪ್ರೇರೇಪಿಸಿದರು. ಹೀಗೆ ಸನಾತನ ಕಲಾಕ್ಷೇತ್ರದ ವಿ.ಎಸ್. ಕೌಶಿಕ್‌ರಿಂದ ಆರನೇ ವಯಸ್ಸಿನಿಂದಲೇ ನೃತ್ಯ ಶಿಕ್ಷಣ ಆರಂಭವಾಯಿತು. ನಂತರ ಕಿಟ್ಟಪ್ಪ ಪಿಳ್ಳೆಯವರ ಬಳಿ 18ವರ್ಷಗಳ ಸುದೀರ್ಘ ಕಾಲ ಪಂದನಲ್ಲೂರು ಮತ್ತು ತಂಜಾವೂರು ಶೈಲಿ ನೃತ್ಯಾಭ್ಯಾಸ ನಡೆಯಿತು.
ಹನ್ನೊಂದನೆ ವಯಸ್ಸಿಗೆ ನರ್ಮದ ಅವರ ರಂಗಪ್ರವೇಶ ಏರ್ಪಟ್ಟಿತು. ವಿಶೇಷವೆಂದರೆ ರಂಗಪ್ರವೇಶ ಎರಡು ದಿನಗಳ ಸಮಾರಂಭವಾಯಿತು. ಸಂಬಂಧಿಗಳಿಗೆ ಒಂದುದಿನ. ತಂದೆಯವ ವೈದ್ಯಮಿತ್ರರಿಗೆ ಮತ್ತೊಂದು ದಿನ.
ನರ್ಮದ ಅವರು ವೈದ್ಯಕೀಯ ಸಮ್ಮೇಳನಗಳಲ್ಲಿ ಹಲವಾರು ಬಾರಿ ನೃತ್ಯ ಪ್ರದರ್ಶನ ನೀಡಿದರು. ಜಯಚಾಮರಾಜ ಒಡೆಯರ್ ಅವರ ಮುಂದೆ ನೃತ್ಯ ಪ್ರದರ್ಶಿಸಿದಾಗ ಬಂಗಾರದ ಪದಕ ಸಂದಿತು. ದೇವಾಲಯ ನೃತ್ಯ ಪದ್ಧತಿಯ ನವ ಸಂಧಿ ನೃತ್ಯದಲ್ಲಿ ಪ್ರಾವೀಣ್ಯತೆ ಸಾಧಿಸಿದರು. ಮದರಾಸಿನ ಇಸೈ ಸಂಘದಲ್ಲಿ ಪ್ರದರ್ಶಿಸಿ ಜನ ಮೆಚ್ಚುಗೆ ಗಳಿಸಿದರು.
ನರ್ಮದ ಅವರು ತಾಯಿಯ ಹೆಸರಿನಲ್ಲಿ ‘ಶಕುಂತಲಾ ನೃತ್ಯಾಲಯ’ ಪ್ರಾರಂಭ ಮಾಡಿದರು. ಮಂಜುಭಾರ್ಗವಿ, ಲಕ್ಷ್ಮೀ ಗೋಪಾಲಸ್ವಾಮಿ, ನಿರುಪಮಾ ರಾಜೇಂದ್ರ, ಮಾಲತಿ ಅಯ್ಯಂಗಾರ್, ಸತ್ಯನಾರಾಯಣ ರಾಜು, ಪ್ರವೀಣ್, ಅನುರಾಧಾ ವಿಕ್ರಾಂತ್ ಮುಂತಾದ ಅನೇಕ ಪ್ರಸಿದ್ಧ ಕಲಾವಿದರಿಗೆ ಗುರುವಾದರು.
ನರ್ಮದ ಕಲಾವಿದೆಯಾಗಿ, ನೃತ್ಯ ಶಿಕ್ಷಕಿಯಾಗಿ ಅಮೆರಿಕಾ ಯಾತ್ರೆ ಮಾಡಿದರು. ಹಲವಾರುಬಾರಿ ವಿದೇಶ ಪ್ರವಾಸ ಮಾಡಿದರು. ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡಿದರು.
ಕೇಂದ್ರ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ನೃತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರದ ಪ್ರತಿಷ್ಠಿತ ಶಾಂತಲಾ ಪ್ರಶಸ್ತಿ, ಮದರಾಸಿನ ಮ್ಯೂಸಿಕ್‌ಅಕಾಡಮಿಯ ವರ್ಷದ ಅತ್ಯುತ್ತಮ ನೃತ್ಯಗುರು ಪ್ರಶಸ್ತಿ, ಕ್ಯಾಲಿಫೋರ್ನಿಯಾದ ಕರ್ನಾಟಕ ಕಲ್ಚರಲ್ ಅಸೋಸಿಯೇಷನ್ನಿನ ಬೆಸ್ಟೋ ಅವಾರ್ಡ್ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು, ನರ್ಮದ ಅವರಿಗೆ ಸಂದಿದ್ದವು.
ನಾಟ್ಯಗುರು ನರ್ಮದ ಅವರು 2007ರ ಮಾರ್ಚ್ 30ರಂದು ಈ ಲೋಕವನ್ನಗಲಿದರು.
On the birth anniversary of great Nrithya Guru Narmada
ಕಾಮೆಂಟ್‌ಗಳು