ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಟಿ. ಎಸ್. ಸತ್ಯವತಿ


 ಟಿ. ಎಸ್. ಸತ್ಯವತಿ


ಡಾ. ಟಿ. ಎಸ್. ಸತ್ಯವತಿ ಅವರು ಕರ್ನಾಟಕ ಸಂಗೀತ, ಸಂಸ್ಕೃತ ಮತ್ತು ಸಾಂಸ್ಕೃತಿಕ   ಲೋಕದಲ್ಲಿ ಪ್ರಸಿದ್ಧರಾಗಿದ್ದಾರೆ.  

ವಿದುಷಿ ಸತ್ಯವತಿ 1954ರ ಸೆಪ್ಟೆಂಬರ್ 26ರಂದು ಟಿ. ಎಸ್. ಶ್ರೀನಿವಾಸಮೂರ್ತಿ ಮತ್ತು ರಂಗಲಕ್ಷ್ಮಿ ಅವರ ಸುಪುತ್ರಿಯಾಗಿ ಜನಿಸಿದರು.  ಸತ್ಯವತಿ ಅವರು ಸಂಗೀತದಲ್ಲಿ ಸಾಧನೆ ಮಾತ್ರವಲ್ಲದೆ, ಸಂಸ್ಕೃತ ಸಾಹಿತ್ಯದ ವಿದ್ವಾಂಸರಾಗಿದ್ದು ಸಂಸ್ಕೃತದಲ್ಲಿ ಎಂ. ಎ, ಎಂ. ಫಿಲ್, ಮತ್ತು ಪಿಎಚ್. ಡಿ. ಸಾಧನೆಗಳನ್ನು ಮಾಡಿದ್ದು, ಬೆಂಗಳೂರಿನ ವಿದ್ಯಾವರ್ಧಕ ಸಂಘದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂರು ದಶಕಗಳಿಗೂ  ಹೆಚ್ಚುಕಾಲ  ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ.  

ಕರ್ನಾಟಕ ಕಲಾಶ್ರೀ ವಿದುಷಿ ವಸಂತ ಮಾಧವಿ ಅವರಿಂದ ಮತ್ತು ಪದ್ಮಭೂಷಣ ಆರ್. ಕೆ. ಶ್ರೀಕಂಠನ್ ಅವರಿಂದ ಸಂಗೀತ ಗಾಯನ ಶಿಕ್ಷಣವನ್ನು ಪಡೆದ ಸತ್ಯವತಿ ಅವರು, ಸಂಗೀತ ಕಲಾರತ್ನ ಬಿ. ವಿ. ಕೆ ಶಾಸ್ತ್ರಿ ಅವರಿಂದ ಸಂಗೀತ ಶಾಸ್ತ್ರ ಶಿಕ್ಷಣವನ್ನೂ ಮತ್ತು ಸಂಗೀತ ಕಲಾರತ್ನ ವಿದ್ವಾನ್ ಬೆಂಗಳೂರು ಕೆ. ವೆಂಕಟರಾಮ್ ಅವರಿಂದ ಮೃದಂಗ ವಾದನವನ್ನೂ ಅಭ್ಯಾಸ ಮಾಡಿದ್ದಾರೆ.  

ಸತ್ಯವತಿಯವರು ಕೇವಲ ಎರಡು ವರ್ಷದ ಮಗುವಾಗಿರುವಾಗಲೇ ಮೈಸೂರಿನ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಅವರ ಸಮ್ಮುಖದಲ್ಲಿ ಗಾಯನಕ್ಕಾಗಿ ಪ್ರಶಂಸೆ ಪಡೆದ ವಿಶಿಷ್ಟ ಪ್ರತಿಭೆ.  ಅವರು ತಮ್ಮ ಹದಿನಾರನೆಯ ವಯಸ್ಸಿನಲ್ಲಿ ಕರ್ನಾಟಕ ಗಾನಕಲಾ ಪರಿಷತ್ತಿನಲ್ಲಿ ಮೊದಲ ಸಭಾ ಕಚೇರಿ ನಡೆಸಿದರು.  ದೇಶದ ವಿವಿಧ ವೇದಿಕೆಗಳಲ್ಲಿ ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟಿರುವುದರ ಜೊತೆಗೆ ಸಾರ್ಕ್ ಶೃಂಗ ಸಭೆ 1985, ಅಕ್ಕ ವಿಶ್ವ ಸಮ್ಮೇಳನಗಳೂ ಸೇರಿದಂತೆ ವಿವಿಧ ರಾಷ್ಟ್ರಗಳ ಹಲವಾರು ವೇದಿಕೆಗಳಲ್ಲೂ ಅವರು ತಮ್ಮ ಸಂಗೀತ ರಸದೌತಣವನ್ನು ಶ್ರೋತೃಗಳಿಗೆ ನೀಡಿದ್ದಾರೆ.

ಗಾಯನ ಕಾರ್ಯಕ್ರಮಗಳಷ್ಟೇ ಅಲ್ಲದೆ ಸತ್ಯವತಿ ಅವರು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಉಪನ್ಯಾಸ ಪ್ರಾತ್ಯಕ್ಷಿಕೆಗಳನ್ನು ನೀಡುತ್ತಾ ಬಂದಿದ್ದಾರೆ.  ಅನೇಕ ವಾಗ್ಗೇಯಕಾರರು, ದಾಸರು, ಕವಿಗಳ ಕುರಿತಾಗಿ ಅವರು ನಡೆಸಿಕೊಡುತ್ತಿರುವ ವಿಶೇಷ ಕಾರ್ಯಗಾರಗಳು ವಿಶ್ವದಾದ್ಯಂತ ಪ್ರಶಂಸೆ ಪಡೆದಿವೆ.   ಅತ್ಯಂತ ಕ್ಲಿಷ್ಟವಾದ 'ರಾಗಮಾಲಿಕಾ ತಾಳಾವಧಾನ' ಪಲ್ಲವಿಗಳ ರಚನೆ, ಗಾಯನ ಮತ್ತು ಪ್ರಾತ್ಯಕ್ಷಿಕೆಗಳನ್ನೂ ಅವರು  ನಿರ್ವಹಿಸಿದ್ದಾರೆ.  ಆಕಾಶವಾಣಿ, ದೂರದರ್ಶನಗಳಲ್ಲಿ ಹಲವಾರು ಕಾರ್ಯಕ್ರಮಗಳ ನಿರ್ದೇಶನ ಮಾಡಿದ್ದಾರೆ.  ದಕ್ಷ ಯಜ್ಞ, ಗೀತ ಗೋವಿಂದ, ಅಭಿಜ್ಞಾನ ಶಾಕುಂತಲ ಮುಂತಾದ ಅನೇಕ ನೃತ್ಯ ರೂಪಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.   ಅವರ ಅನೇಕ ಸಂಗೀತದ ಡಿಸ್ಕುಗಳು ಬಿಡುಗಡೆಯಾಗಿವೆ.  ಅನೇಕ ವಿದ್ವತ್ಪೂರ್ಣ ಲೇಖನಗಳನ್ನೂ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ.  ಹಲವಾರು ವಿದಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಕಲಾವಿದರಾಗಿ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.  ಈಗಾಗಲೇ ಅನೇಕ ವೇದಿಕೆಗಳಿಂದ ಕಾರ್ಯಕ್ರಮಗಳನ್ನು ನೀಡುತ್ತಿರುವ ಅವರ ಅನೇಕ ಮಂದಿ ಶಿಷ್ಯರು ನಾಡಿಗೆ ಹೆಮ್ಮೆ ತಂದಿದ್ದಾರೆ.  

ಸತ್ಯವತಿ ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಹರಿದಾಸ ಹಾಗೂ ವಚನಗಳ ಧ್ವನಿ ಸುರುಳಿಗಳ ನಿರ್ದೇಶಕರಾಗಿ, ಇಂದಿರಾ ಗಾಂಧೀ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ ಸಂಘಟನೆಯ ದಕ್ಷಿಣ ವಲಯದ ಸಂಪನ್ಮೂಲ ವ್ಯಕ್ತಿಯಾಗಿ, ಬೆಂಗಳೂರು ವಿಶ್ವವಿದ್ಯಾಲಯದ ಬೋರ್ಡ್ ಆಫ್ ಸ್ಟಡೀಸ್ನ ಸದಸ್ಯೆಯಾಗಿ, ಬೆಂಗಳೂರು ವಿಶ್ವವಿದ್ಯಾಲಯದ BOE ವಿಭಾಗದ ಅಧ್ಯಕ್ಷರಾಗಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಶಾಸನ ಸಮಿತಿಯ ಸದಸ್ಯೆಯಾಗಿ, ದಿಶಾ ವ್ಯಕ್ತಿತ್ವ ವಿಕಸನ ಕೇಂದ್ರದ ಮಾರ್ಗದರ್ಶನ ಸಮಿತಿ ಸದಸ್ಯೆಯಾಗಿ, ಕರ್ನಾಟಕದ ವಿವಿದ ವಿಶ್ವ ವಿದ್ಯಾಲಯಗಳ ಸಂಪನ್ಮೂಲ ವ್ಯಕ್ತಿಯಾಗಿ ಹೀಗೆ ವಿವಿದ ಜವಾಬ್ಧಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದಾರೆ.  

ಭಾರತಿಯ ವಿದ್ಯಾ ಭವನವು ಸತ್ಯವತಿ ಅವರ “ಚತುಃಷಷ್ಟಿ ಕಲೆ” ಗ್ರಂಥವನ್ನು ಪ್ರಕಟಿಸಿದೆ.  ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಅವರು ಪಠ್ಯ ಪುಸ್ತಕ ರಚನೆ ಮಾಡಿದ್ದಾರೆ.  ಇಂದಿರಾ ಗಾಂಧೀ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯಕ್ಕೆ ಅವರು  ಸಂಸ್ಕೃತ – ಸಂಸ್ಕೃತಿ ಸರಣಿ ಕಾರ್ಯಕ್ರಮ ನಿರ್ವಹಣೆ ಮಾಡಿದ್ದಾರೆ.  ಇಂಡಿಯಾ ಫೌಂಡೆಶನ್ ಫಾರ್ ದಿ ಆರ್ಟ್ಸ್ ಪ್ರಾಯೋಜನೆಯಲ್ಲಿ ‘ಅನನ್ಯ’ ಸಂಸ್ಥೆಗಾಗಿ 21 ಕಂತುಗಳಲ್ಲಿ 'ಹಾಡು ಹಕ್ಕಿ'  ಎಂಬ ಮಕ್ಕಳಿಗಾಗಿನ ಶಾಸ್ತ್ರೀಯ ಸಂಗೀತಾಭಿರುಚಿ ಕಾರ್ಯಕ್ರಮದ ನಿರ್ದೇಶನ ಹಾಗೂ ನಿರ್ವಹಣೆ ಮಾಡಿದ್ದಾರೆ.  

ಸಂಗೀತ, ಸಂಸ್ಕೃತ ಮತ್ತು  ಸಂಸ್ಕೃತೀ ಸಾಧಕರಾದ ಟಿ. ಎಸ್. ಸತ್ಯವತಿ ಅವರಿಗೆ ಹಿಂದೆ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಿಂದ ಮೂರು ಬಾರಿ ಅತ್ಯುತ್ತಮ ಯುವ ಗಾಯಕಿ ಪ್ರಶಸ್ತಿ ಸಂದಿತ್ತು.   ಕರ್ನಾಟಕ ಗಾನಕಲಾ ಪರಿಷತ್ತಿನ ‘ಗಾನಕಲಾಶ್ರೀ’ ಪ್ರಶಸ್ತಿ, ಅನನ್ಯ ಪುರಸ್ಕಾರ; ಗಾನವಿಶಾರದೆ, ನಾದಜ್ಯೋತಿ, ಗಾನಚತುರ್ದಂಡೀ, ಸಂಗೀತ ಸರಸ್ವತಿ ಕರ್ನಾಟಕ ಸಂಗೀತ ಕಲಾರತ್ನ ಮುಂತಾದ ಅನೇಕ  ಬಿರುದುಗಳು; ಇಸ್ಕಾನ್ ಮತ್ತು ಆವಣಿ ಶಂಕರ ಮಠದ ಆಸ್ಥಾನ ವಿದುಷಿ ಗೌರವ  ಮುಂತಾದ ಹಲವಾರು ಗೌರವಗಳು ಅವರಿಗೆ ಸಂದಿವೆ.  

ಡಾ. ಟಿ. ಎಸ್. ಸತ್ಯವತಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.

On the birth day of our great musician, musicologist and scholar Dr. T. S. Sathyavathi 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ