ಇಳಾ ಭಟ್
ಇಳಾ ಭಟ್
ಕುಟುಂಬದ ಬದುಕಿನ ಬಂಡಿಯನ್ನು ಸರಿದೂಗಿಸಲು ನಿರತ ಶ್ರಮಿಸುವ ಮಹಿಳೆಯರ ಮನಗಳನ್ನು ಒಂದಾಗಿಸಿ, ಆ ಸಂಯೋಗಕ್ಕೊಂದು ಯಶಸ್ವೀ ಸ್ವರೂಪ ಕೊಟ್ಟವರು ಇಳಾ ಭಟ್. ಅಮೆರಿಕದ ಅಧ್ಯಕ್ಷತೆಗೆ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್ '"ಇಳಾ ಭಟ್ ನನ್ನ ಆದರ್ಶ" ಎಂದು ನುಡಿಯುತ್ತಾರೆ. ಅಂತಹ ಮಹತ್ವದ ಸಾಧನೆ ಇಳಾ ಭಟ್ ಅವರದ್ದು. ಯಾವುದೇ ಭೇದಗಳಿಲ್ಲದಂತೆ ಎಲ್ಲ ರೀತಿಯ ಮಹಿಳೆಯರನ್ನೊಳಗೊಂಡ ‘ಮಹಿಳಾ ಸ್ವಯಂ ಉದ್ಯೋಗಿಗಳ ಸಂಘ’ (ಸೇವಾ) ಅನ್ನು ಅಹಮದಾಬಾದಿನಲ್ಲಿ ಸ್ಥಾಪಿಸಿ, ಅತಂತ್ರ ಹೆಣ್ಣು ಮಕ್ಕಳ ಕೈಗಳಿಗೆ ಬಹುಬಲ ತಂದುಕೊಟ್ಟವರು ಇಳಾ ಭಟ್.
ಇಳಾ ಭಟ್ ಅವರು ಅಹ್ಮದಾಬಾದಿನಲ್ಲಿ 1933ರ ಸೆಪ್ಟೆಂಬರ್ 7ರಂದು ಸುಮಂತ್ರಾಯ್ ಭಟ್ ಮತ್ತು ವನಲೀಲಾ ವ್ಯಾಸ್ ದಂಪತಿಗಳ ಪುತ್ರಿಯಾಗಿ ಜನಿಸಿದರು. ವಕೀಲರಾಗಿ ಹಾಗೂ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ಅವರ ತಂದೆ ಮಹಾತ್ಮ ಗಾಂಧಿಯವರ ಜೊತೆ ಉಪ್ಪಿನ ಸತ್ಯಾಗ್ರಹದಲ್ಲಿಯೂ ಭಾಗವಹಿಸಿದ್ದವರು. ತಾಯಿ ಪ್ರಗತಿಪರ ಮನೋಭಾವ ಹೊಂದಿದವರಾಗಿದ್ದರು.
ಇಳಾ ಭಟ್ ಕಾಲೇಜಿನಲ್ಲಿ ಓದುತ್ತಿದ್ದಾಗ ಅವರ ಸುತ್ತಣ ಜಗತ್ತಿನ ಬಗ್ಗೆ ಕಣ್ತೆರೆಸಿದವರು ಅವರ ಕಾಲೇಜಿನ ಸಹಪಾಠಿ ರಮೇಶ್. ಯುವ ಕಾಂಗ್ರೆಸ್ ಸದಸ್ಯ ಮತ್ತು ವಿದ್ಯಾರ್ಥಿ ನಾಯಕನಾಗಿದ್ದ ರಮೇಶ್ ಬಡ ಕೂಲಿಕಾರನ ಮಗನಾಗಿದ್ದು ಬಡವರ ಕಷ್ಟಗಳನ್ನು ಸ್ವಾನುಭವದಿಂದ ಕಂಡವರು. ರಮೇಶ್ ಅವರ ವೈಚಾರಿಕತೆ ಮತ್ತು ಕ್ರಿಯಾಶೀಲತೆ ಇಳಾರಿಗೆ ಮೆಚ್ಚುಗೆಯಾಗಿ ಅವರ ಬಾಳಸಂಗಾತಿಯಾದರು.
ಇಳಾ ಭಟ್ ಅವರು1955ರಲ್ಲಿ ಕಾನೂನು ವಿಭಾಗದಲ್ಲಿ ಪದವಿಯನ್ನು ಮುಗಿಸಿದ ಸಂದರ್ಭದಲ್ಲಿ, ಜವಳಿ ಶ್ರಮಿಕ ಸಂಘಟನೆಯ ಕಾನೂನು ವಿಭಾಗದಲ್ಲಿ ಕಿರಿಯ ವಕೀಲರ ಕೆಲಸ ಅವರನ್ನು ಅರಸಿ ಬಂತು. ಈ ಸಂಘಟನೆ 1920ರಲ್ಲಿ ಅನಸೂಯಬೆನ್ ಮತ್ತು ಮಹಾತ್ಮಗಾಂಧಿಯವರಿಂದ ಸ್ಥಾಪಿಸಲ್ಪಟ್ಟಿದ್ದು. ಈ ಕೆಲಸ ಮಾಡುತ್ತಿರುವ ಸಂದರ್ಭದಲ್ಲೇ ಇಳಾ ಅವರ ಮನವನ್ನು ಸ್ಪಂದಿಸಿದ್ದು ಅಲ್ಲಿನ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ, ಚಿಂದಿ ಆಯುವ ಮತ್ತು ಬಡ ಕೃಷಿಕ ಮಹಿಳೆಯರ ಸಮಸ್ಯೆಗಳು. ಆಗ ಅವರ ಕಲ್ಪನೆಯಲ್ಲಿ ಮೂಡಿ ಬಂದದ್ದು ಸ್ವಯಂ ಉದ್ಯೋಗಸ್ಥ ಮಹಿಳೆಯರನ್ನು ಸಂಘಟಿಸುವ ಯೋಜನೆ. ಇದು 1972ರ ಏಪ್ರಿಲ್‍ನಲ್ಲಿ ಸಾಕಾರಗೊಂಡು , ಇಂದು ವಿಶ್ವಪ್ರಸಿದ್ಧಿ ಪಡೆದಿರುವ ‘ಸೇವಾ’ ಜನ್ಮತಾಳಿತು. ಮುಂದೆ ಹೀಗೆ ಬೀದಿ ಬವಣೆಗಳಲ್ಲಿ ನೊಂದು ಬಳಲಿ ಜೀವನ ಸಾಗಿಸುವ ಜೀವಗಳಿಗೆ ಆಸರೆಯಾಗುವ ಸಲುವಾಗಿಯೇ ಸೇವಾ ಬ್ಯಾಂಕಿನ ಉಗಮವಾಯಿತು.
ನಗರ ಪ್ರದೇಶದ ಬಡವರ ಸಂಖ್ಯೆ ಹೆಚ್ಚಾದಂತೆ ಸೇವಾ ತನ್ನ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿಕೊಂಡಿತು. ಇಳಾ ಅವರು ಗುರುತಿಸಿದಂತೆ, ಗ್ರಾಮೀಣ ಮಹಿಳೆಯರ ಚಟುವಟಿಕೆಗಳು ಪಟ್ಟಣದ ಮಹಿಳೆಯರಿಗಿಂತ ಹೆಚ್ಚಿನವು. ಇವರ ಕಸಬುಗಳೂ ವೈವಿಧ್ಯಪೂರ್ಣ! ಮನೆಯಲ್ಲಿ ಕಸೂತಿ ಮಾಡುವವರು, ಹೊಲ ಗದ್ದೆಗಳಲ್ಲಿ ದುಡಿಯುವ ಬಡ ಮಹಿಳೆಯರು, ಅಂಟು ಕಿತ್ತು ಮಾರುವವರು, ಉಪ್ಪು ತಯಾರಿಸುವವರು - ಈ ಎಲ್ಲ ಕಸಬುದಾರರಿಗೂ, ತಮ್ಮ ಕಾಲ ಮೇಲೆ ನಿಲ್ಲಲು 'ಸೇವಾ' ಸಹಾಯ ಮಾಡಿದೆ. ಅಲ್ಲದೆ, ಮಾರುಕಟ್ಟೆಯ ಸ್ಪರ್ಧೆಯನ್ನು ಎದುರಿಸಲು, ತಲೆಯ ಮೇಲೊಂದು ಸೂರು, ಆರೋಗ್ಯ ಸೌಕರ್ಯ, ಶಿಶುಪಾಲನೆ, ವಿಮೆ ಮುಂತಾದ ಸೌಕರ್ಯವನ್ನು ಒದಗಿಸಲು 'ಸೇವಾ' ಕೆಲಸ ಮಾಡಿದೆ.
ಗುಜರಾತ್‍ನಲ್ಲಿ ಆರಂಭವಾದ ಇಳಾ ಭಟ್ ಕಟ್ಟಿದ ‘ಸೇವಾ’ ಭಾರತದಲ್ಲಿ ಮಾತ್ರವೇ ಅಲ್ಲದೆ, ವಿಶ್ವದ ಅತಿ ದೊಡ್ಡ ಮಹಿಳಾ ಸಂಘಟನೆಗಳಲ್ಲಿ ಒಂದು. ಅಸಂಘಟಿತ ಬಡ ಮಹಿಳೆಯರ ಸಲುವಾಗಿ ಇಳಾ ಭಟ್ ಮೊದಲು ‘ವಿಜಯ್’, ‘ಗೀತಾಂಜಲಿ’ ಮತ್ತು ‘ಸುಜಾತಾ’ ಎಂಬ ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ನಂತರ ಇವರೆಲ್ಲಾ ‘ಸೇವಾ’ದ ಸದಸ್ಯರಾದರು. ಇಂದು ಸುಮಾರು 800 ಸಹಕಾರಿ ಸಂಸ್ಥೆಗಳು ‘ಸೇವಾ’ದ ಸದಸ್ಯರಾದರು. ಇಂದು ಎರಡು ಮಿಲಿಯನ್ ಮಹಿಳೆಯರು ಈ ಸಂಘಟನೆಯ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ.
ಇಳಾ ಭಟ್ ಭಾರತದ ಸಂಸತ್ ಸದಸ್ಯೆಯಾಗಿದ್ದರು. ರಾಷ್ಟ್ರೀಯ ಯೋಜನಾ ಆಯೋಗದ ಸದಸ್ಯೆಯಾಗಿ ಕೆಲಸ ಮಾಡಿದ್ದರು. ವಿಶ್ವ ಮಹಿಳಾ ಬ್ಯಾಂಕಿಂಗ್ ಕಲ್ಪನೆಯನ್ನು ಹುಟ್ಟು ಹಾಕಿ, ಅದರ ಮೊದಲ ಅಧ್ಯಕ್ಷೆಯಾಗಿ ಕೆಲಸ ಮಾಡಿದರು. ಮನೆಯಿಂದ ಕೆಲಸ ಮಾಡುವ ಕಾರ್ಮಿಕರ ಅಂತರರಾಷ್ಟ್ರೀಯ ಒಕ್ಕೂಟ (ಹೋಮ್ ನೆಟ್)ದ ಅಧ್ಯಕ್ಷೆಯಾಗಿಯೂ ಕೆಲಸ ಮಾಡಿದರು. ಒಂದು ದಶಕಗಳ ಕಾಲ ರಾಕ್ ಫೆಲರ್ ಫೌಂಡೇಶನ್ನಿನ ಟ್ರಸ್ಟಿಯಾಗಿ ಕಾರ್ಯನಿರ್ವಹಿಸಿದರು. ಇಳಿವಯಸ್ಸಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ರಾಷ್ಟ್ರೀಯ ಮಂಡಳಿಯ ಸದಸ್ಯರಾಗಿ ಕೂಡ ಕೆಲಸ ಮಾಡಿದ್ದರು.
ಇಳಾ ಭಟ್ ಅವರನ್ನು ಅರಸಿ ಬಂದ ಗೌರವ ಸನ್ಮಾನಗಳು ಅನೇಕ. ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ, ರೈಟ್ ಲೈವ್ಲಿಹುಡ್ ಪ್ರಶಸ್ತಿ ಮತ್ತು ಹಾರ್ವರ್ಡ್ ಮತ್ತು ಯೇಲ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಪದ್ಮಶ್ರೀ, ಪದ್ಮಭೂಷಣ ಮುಂತಾದ ಅನೇಕ ಪ್ರತಿಷ್ಠಿತ ಗೌರವಗಳು ಅವರನ್ನು ಅರಸಿಬಂದಿವೆ.
ಅವರ ಬದುಕಿನ ಸಾಹಸದ ಆತ್ಮಕಥೆ “ವಿ ಆರ್ ಪೂರ್, ಬಟ್ ಸೋ ಮೆನಿ” ಪ್ರಸಿದ್ಧಿ ಪಡೆದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ರಮಿಕ ವರ್ಗ, ಸಹಕಾರ, ಕಿರು ಆರ್ಥಿಕ ಬೆಂಬಲ ಕ್ಷೇತ್ರ ಮುಂತಾದ ವಿಷಯಗಳಲ್ಲಿ ಇಳಾ ಭಟ್ ಅವರ ಭಾಗವಹಿಕೆ ಇತ್ತು.ಅವರು ಗುಜರಾತ್ ವಿದ್ಯಾಪೀಠದ ಉಪಕುಲಪತಿಗಳಾಗಿಯೂ ಕಾರ್ಯನಿರ್ವಹಿಸಿದ್ದರು. 'ಎಲ್ಡರ್ಸ್' ಎಂದು ಕರೆಯಲಾಗುವ ಜನಕಲ್ಯಾಣಕ್ಕಾಗಿ ಶ್ರಮಿಸುವ ವಿಶ್ವದ ಪ್ರತಿಷ್ಠಿತ ಪ್ರತಿನಿಧಿಗಳಲ್ಲಿ ಇಳಾ ಭಟ್ ಸಹಾ ಪ್ರಮುಖರಾಗಿದ್ದರು.
ಇಳಾ ಭಟ್ ಅವರು 2022ರ ನವೆಂಬರ್ 2ರಂದು ಈ ಲೋಕವನ್ನಗಲಿದರು.
On the birth anniversary of great lady Ila Bhatt, who created Self Employed Women's Association (SEWA)
ಕಾಮೆಂಟ್‌ಗಳು