ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿದ್ಧರಾಮ ಜಂಬಲದಿನ್ನಿ

 


ಸಿದ್ಧರಾಮ ಜಂಬಲದಿನ್ನಿ

ಸಿದ್ಧರಾಮ ಜಂಬಲದಿನ್ನಿ ಹಿಂದೂಸ್ತಾನಿ ಸಂಗೀತ ಲೋಕದ ಮಹಾನ್‌ ಗಾಯಕರಲ್ಲೊಬ್ಬರು.

ಸಿದ್ಧರಾಮ ಜಂಬಲದಿನ್ನಿಯವರು 1918ರ ಸೆಪ್ಟೆಂಬರ್ 20ರ ದಿನದಂದು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಜಂಬಲದಿನ್ನಿಯಲ್ಲಿ ಜನ್ಮತಾಳಿದರು. ಅವರ ತಂದೆ ಚನ್ನಬಸವಪ್ಪನವರು ಮತ್ತು ತಾಯಿ ಅವ್ವಮ್ಮನವರು. ಅವರದ್ದು ಕಲಾವಿದರ ಮನೆತನ. 

ನಿಜಗುಣೆಪ್ಪನವರಿಂದ ಎರಡು ವರ್ಷ ಸಂಗೀತ ಕಲಿತ ಸಿದ್ಧರಾಮರು ಮುಂದೆ  ಪಂಚಾಕ್ಷರಿ ಗವಾಯಿಗಳ ಶಿಷ್ಯತ್ವವನ್ನು ಪಡೆದರು.  ಹಾಡುಗಾರಿಕೆಯ ಜೊತೆಗೆ ತಬಲ, ಹಾರ್ಮೋನಿಯಂ ಕಲಿಕೆಯನ್ನೂ ಮಾಡಿದರು. ಸಂಚಾರಿ ಸಂಗೀತ ಶಾಲೆಯ ಗದಿಗೆಪ್ಪನವರೊಡನೆ ಬಿಜಾಪುರ, ಧಾರವಾಡ, ದಾವಣಗೆರೆ ಸುತ್ತಿ  ಸಂಗೀತದ ಅಪಾರ ಅನುಭವ ಪಡೆದರು.

ಸಿದ್ಧರಾಮ ಜಂಬಲದಿನ್ನಿಯವರು ಗೊಬ್ಬೂರು ಶರಣಯ್ಯನವರ ನಾಟಕ ಕಂಪನಿಯಲ್ಲಿ ಗಾಯಕ ಮತ್ತು ನಟರಾಗಿ ಸೇರ್ಪಡೆಗೊಂಡರು.  ಅಲ್ಲಿನ ಹೇಮರೆಡ್ಡಿ ಮಲ್ಲಮ್ಮ ನಾಟಕದ ಮಲ್ಲಿಕಾರ್ಜುನ ಪಾತ್ರದಿಂದ ಅವರಿಗೆ ಅಪಾರ ಖ್ಯಾತಿ ದೊರೆತಿತು. ಏಣಗಿ ಬಾಳಪ್ಪನವರ ಕಲಾವೈಭವ ನಾಟ್ಯ ಸಂಘದ ವಧು-ವರ ನಾಟಕಕ್ಕೆ ಸಹಾ ಅವರು ಸಂಗೀತ ಸಂಯೋಜನೆ ಮಾಡಿದ್ದರು.  

ಸಿದ್ದರಾಮ ಜಂಬಲದಿನ್ನಿಯವರು ಮಲ್ಲಿಕಾರ್ಜುನ ಮನಸೂರರೊಂದಿಗೆ ಭಾರತಾದ್ಯಂತ ಸಂಚರಿಸಿ  ಅನೇಕ  ಸಂಗೀತ ಕಾರ್ಯಕ್ರಮಗಳನ್ನು ನೀಡಿದರು.  ಆಕಾಶವಾಣಿಯ ರಾಷ್ಟ್ರೀಯ ಜಾಲದಲ್ಲಿ ನೀಡಿದ  ಗುರು ಶಿಷ್ಯ ಪರಂಪರೆಯ ಗಾಯನಗಳು ಪ್ರಸಿದ್ಧಗೊಂಡವು. ಅವರ ಧ್ವನಿಯಲ್ಲಿ   ವಚನ ಗಾಯನಕ್ಕೆ ಹೊಸ ಆಯಾಮ ದೊರೆತಿತು.  ಇವುಗಳ ಜೊತೆಗೆ ರಗಳೆ, ಭಾವಗೀತೆ, ಸುಪ್ರಭಾತ, ದಾಸರ ಪದಗಳೂ ಇವರ ಸಿರಿಕಂಠದಿಂದ ಹರಿದು ಬಂದವು. ಎಚ್‌.ಎಂ.ವಿ. ಕಂಪನಿಯಿಂದ ಇವರ ಅನೇಕ ಧ್ವನಿಮುದ್ರಿಕೆಗಳು ಮೂಡಿಬಂದವು. ಮಲ್ಲಿಕಾರ್ಜುನ ಮನಸೂರರೊಂದಿಗೆ ಮೃತ್ಯುಂಜಯ ಸುಪ್ರಭಾತವೇ ಅಲ್ಲದೆ “ನುಡಿಯು ಕನ್ನಡ, ನಡೆಯು ಕನ್ನಡ, ಅಳಿಸಂಕುಲವೇ ಮಾಮರವೇ, ಬಾ ಬಸವರಾಜ” ಮುಂತಾದ ಹಾಡುಗಳಿಗೆ ಸಹಾ ಅವರು ಧ್ವನಿ ನೀಡಿದರು.

ಹೈದರಾಬಾದ್‌ ವೀರಶೈವ ಸಭಾದಿಂದ ಸಂಗೀತ ಸುಧಾಕರ, ಕರ್ನಾಟಕ ಸಾಹಿತ್ಯ ಆಕಾಡೆಮಿಯ ಗಮಕ ಕಲಾನಿಧಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಕರ್ನಾಟಕ ಕಲಾತಿಲಕ ಮುಂತಾದ ಅನೇಕ ಗೌರವಗಳು ಸಿದ್ಧರಾಮ ಜಂಬಲದಿನ್ನಿಯವರಿಗೆ ಸಂದವು.   ರಾಯಚೂರಿನ ಕಲಾಮಂದಿರಕ್ಕೆ ‘ಸಿದ್ಧರಾಮ ಜಂಬಲದಿನ್ನಿ ಕಲಾಮಂದಿರ’ ಎಂಬ ಹೆಸರನ್ನಿರಿಸಲಾಗಿದೆ.

ಈ ಮಹಾನ್ ಸಾಧಕರು 1988 ವರ್ಷದ ಕೊನೆಯ ದಿನವಾದ ಡಿಸೆಂಬರ್ 31ರಂದು ಈ ಲೋಕವನ್ನಗಲಿದರು.  ಅವರ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಪ್ರತೀ ವರ್ಷ ರಾಯಚೂರಿನಲ್ಲಿ ಸಂಗೀತ ಸಮ್ಮೇಳನ ಹಾಗೂ ಕಾರ್ಯಕ್ರಮಗಳು ವಿಜ್ರಂಭಣೆಯಿಂದ ನೆರವೇರುತ್ತಿವೆ.  ಸಿದ್ಧರಾಮ ಜಂಬಲದಿನ್ನಿಯವರು ಸಂಗೀತ ಲೋಕದ ಮಹಾನ್ ತಾರೆಯಾಗಿ ಚಿರಸ್ಮರಣೀಯರಾಗಿದ್ದಾರೆ.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

On the birth anniversary of great musician Siddharama Jambaladinni 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ