ಬಿ. ಎಸ್. ನಾರಾಯಣರಾವ್
ಬಿ. ಎಸ್. ನಾರಾಯಣರಾವ್
ಬಿ. ಎಸ್. ನಾರಾಯಣರಾವ್ ರಂಗಭೂಮಿಯ ನಟ ಮತ್ತು ನಿರ್ದೇಶಕರಾಗಿ ಪ್ರಸಿದ್ಧರಾಗಿದ್ದವರು.
ನಾರಾಯಣರಾವ್ 1918ರ ಸೆಪ್ಟೆಂಬರ್ 25ರಂದು (ಕುಟುಂಬದ ಮೂಲಗಳ ಪ್ರಕಾರ ಸೆಪ್ಟೆಂಬರ್ 18ರಂದು) ಬೆಂಗಳೂರಿನಲ್ಲಿ ಜನಿಸಿದರು. ತಂದೆ ಬಿ.ವಿ.ಸುಬ್ಬರಾಯರು, ತಾಯಿ ಲಕ್ಷ್ಮಮ್ಮ. ಸುಬ್ಬರಾಯರದು ಬಹುಮುಖ ವ್ಯಕ್ತಿತ್ವ. ಸಾಹಿತ್ಯ, ಸಂಗೀತ, ವಾಣಿಜ್ಯ, ಸಾಮಾಜಿಕ ಅಭಿವೃದ್ಧಿಗಳ ಕುರಿತು ಅಪಾರ ಕಾಳಜಿ ಹೊಂದಿದ್ದರು. ರವೀಂದ್ರನಾಥ ಠಾಕೂರರು ಇವರ ಮನೆಗೆ ಬಂದಾಗ ಹಾಲು ಹಸುಳೆಗೆ ನಾರಾಯಣನೆಂದು ನಾಮಕರಣ ಮಾಡಿ ಕಲಾವಿದನಾಗು ಎಂದು ಹರಸಿದರು.
ನಾರಾಯಣರಾವ್ ಆರ್ಯ ವಿದ್ಯಾಶಾಲೆಯಲ್ಲಿದ್ದಾಗಲೇ ನಾಟಕದಲ್ಲಿ ಅಭಿನಯ ಪ್ರಾರಂಭ ಮಾಡಿದರು. ನ್ಯಾಷನಲ್ ಹೈಸ್ಕೂಲು ಸೇರಿದ ಮೇಲೆ ಹಿಂದಿ ನಾಟಕ ದುರ್ಗಾದಾಸ್‌ನಲ್ಲಿ ಪ್ರಮುಖಪಾತ್ರ ವಹಿಸಿದ್ದರು. ಕೈಲಾಸಂರವರ ಕರ್ಣ, ಅಮ್ಮಾವ್ರಗಂಡ, ಗಂಡಸ್ಕತ್ರಿ, ಹೋಂರೂಲು ಮುಂತಾದ ನಾಟಕಗಳ ನಟರಾಗಿದ್ದರು. ಕರ್ನಾಟಕ – ಹಿಂದಿ ಅಮೆಚ್ಯೂರ್ಸ್ ಸಂಸ್ಥೆ ಸ್ಥಾಪಿಸಿ ಅನಕೃರವರ ಮದುವೆಯೋ ಮನೆ ಹಾಳೋ ನಾಟಕ ಪ್ರದರ್ಶನ ಮಾಡಿದರು. ನ್ಯಾಷನಲ್ ಹೈಸ್ಕೂಲಿನ ಹಳೇವಿದ್ಯಾರ್ಥಿಸಂಘದ ಕಾರ್ಯದರ್ಶಿಯಾಗಿ ಉಂಡಾಡಿಗುಂಡ, ಬಹದ್ದೂರ್ ಗಂಡ ನಾಟಕ ಪ್ರಯೋಗ ಮಾಡಿದರು.
ನಾರಾಯಣರಾವ್ ಅವರು ಅಣ್ಣ ಬಿ.ಎಸ್.ವೆಂಕಟರಾಂರೊಡನೆ ಸ್ಥಾಪಿಸಿದ್ದು ಛಾಯಾಕಲಾವಿದರು. ಕೆಂಪೇಗೌಡ ರಸ್ತೆಯಲ್ಲಿದ್ದ ಶ್ರೀ ಥಿಯೇಟರ್ ಬಾಡಿಗೆಗೆ ಪಡೆದು ಪರ್ವತವಾಣಿಯವರ ಬಹದ್ದೂರ್ ಗಂಡ ಪ್ರದರ್ಶಿಸಿದಾಗ 175 ಪ್ರದರ್ಶನ ಕಂಡು ಜನಪ್ರಿಯಗೊಂಡಿತು. ರವಿ ಕಲಾವಿದರು ಸಂಸ್ಥೆ ಸೇರಿ ಸುಮಾರು 25 ವರ್ಷ ಉಪಾಧ್ಯಕ್ಷರ ಜವಾಬ್ದಾರಿ ಹೊತ್ತರು. ಕಾಕನಕೋಟೆಯ ಕಾಕ ಮತ್ತು ರಣಧೀರ ಕಂಠೀರವ ಇವರಿಗೆ ಪ್ರಸಿದ್ಧಿ ತಂದ ಪಾತ್ರಗಳು. ದೂರದರ್ಶನ ಮತ್ತು ಆಕಾಶವಾಣಿಯಲ್ಲಿ 25 ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ ಮತ್ತು ನಿರ್ದೇಶನ ಮಾಡಿದರು. ಡಾ. ಎಚ್.ಕೆ. ರಂಗನಾಥರ ಜಾಗೃತಭಾರತಿ, ಕೆ.ವಿ. ಅಯ್ಯರ್‌ರ ಚೇಳು ಅಜ್ಜ ಚೇಳು ಹೆಸರುಗಳಿಸಿದ ಇವರ ಇತರ ನಾಟಕಗಳು.
ನಾರಾಯಣರಾವ್ 'ಗೆಜ್ಜೆಪೂಜೆ' ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರದೊಂದಿಗೆ ಚಲನಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದರು. ನಂತರದಲ್ಲಿ ಇನ್ನಿತರ ಕೆಲವು ಚಿತ್ರಗಳಲ್ಲಿ ನಟಿಸಿದ್ದರು.
ನಾರಾಯಣರಾವ್ ಅವರಿಗೆ 1967ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸಂದಿತು. 80ರ ದಶಕದಲ್ಲಿ ನಾಟಕ ಅಕಾಡಮಿಯ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದರು.
ಬಿ. ಎಸ್. ನಾರಾಯಣರಾವ್ ಅವರು 1999ರ ಮಾರ್ಚ್ 7ರಂದು ನಿಧನರಾದರು.
On the birth anniversary of great stage artiste B. S. Narayana Rao
ಕಾಮೆಂಟ್‌ಗಳು