ಎಸ್. ಡಿ. ಬರ್ಮನ್
ಎಸ್. ಡಿ. ಬರ್ಮನ್
ಎಸ್. ಡಿ. ಬರ್ಮನ್ ಚಲನಚಿತ್ರರಂಗ ಕಂಡ ಮಹಾನ್ ಸಂಗೀತ ಸಂಯೋಜಕರಲ್ಲಿ ಪ್ರಮುಖರು. ಇವರ ಪುತ್ರರಾದ ಆರ್. ಡಿ. ಬರ್ಮನ್ ಸಹಾ ಮಹಾನ್ ಪ್ರತಿಭೆಯಾಗಿ ಚಿತ್ರರಂಗಕ್ಕೆ ಕಾಂತಿ ತಂದವರು.
ಸಚಿನ್ ದೇವ್ ಬರ್ಮನ್ 1906ರ ಅಕ್ಟೋಬರ್ 1ರಂದು ಈಗ ಬಾಂಗ್ಲಾದೇಶದಲ್ಲಿರುವ ಕೊಮಿಲ್ಲಾ ಎಂಬಲ್ಲಿ ಜನಿಸಿದರು. ಇವರ ಕುಟುಂಬದವರು ತ್ರಿಪುರಾ ರಾಜಕುಟುಂಬಕ್ಕೆ ಸೇರಿದವರು. ತಂದೆ ರಾಜಕುಮಾರ ನಬದ್ವೀಪ್‌ಚಂದ್ರ ದೇವ್ ಬರ್ಮನ್. ತಾಯಿ ಮಣಿಪುರದ ರಾಜಕುಮಾರಿ ನಿರ್ಮಲಾ ದೇವಿ.
ಸಚಿನ್ ದೇವ್ ಬರ್ಮನ್ ಕೊಲ್ಕೊತ್ತಾ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಪಡೆದರು. ಪ್ರಸಿದ್ಧ ಸಂಗೀತಗಾರರಾದ ಕೆ. ಸಿ. ಡೇ ಅವರ ಮಾರ್ಗದರ್ಶನದಲ್ಲಿ 1925ರಿಂದ 1930ರವರೆಗೆ ಸಂಗೀತ ಕಲಿಕೆಯನ್ನು ಆರಂಭಿಸಿದರು. 1932ರಲ್ಲಿ, ತಮಗಿಂತ ಕೇವಲ ಮೂರು ವರ್ಷಗಳಷ್ಟು ಹಿರಿಯರಾಗಿದ್ದ ಭೀಷ್ಮದೇವ್ ಚಟ್ಟೋಪಾಧ್ಯಾಯರವರಿಂದ ಸಂಗೀತ ಶಿಕ್ಷಣವನ್ನು ಪಡೆದರು. ನಂತರ ಸಾರಂಗಿ ವಾದಕ ಕಹೀಫಾ ಬಾದಲ್ ಖಾನ್, ಹಾಗೂ ಉಸ್ತಾದ್ ಅಲ್ಲಾವುದ್ದೀನ್ ಖಾನ್‌ರಿಂದಲೂ ಅವರಿಗೆ ತರಬೇತಿ ದೊರೆಯಿತು. ಬಂಗಾಳದ ಖ್ಯಾತ ಕವಿ, ಪ್ರಶಸ್ತಿ ವಿಜೇತರಾದ ಕಾಜಿ ನಜ್ರುಲ್ ಇಸ್ಲಾಂ ಕೂಡಾ ಅಗರ್ತಲಾದಲ್ಲಿನ ಸಚಿನ್‌ರವರ ಕುಟುಂಬದ ಮನೆಯಾದ ಕೊಮಿಲ್ಲಾ ಹೌಸ್‌ನಲ್ಲಿ ಒಂದಷ್ಟು ಕಾಲ ಇದ್ದರು.
ಸಚಿನ್ ದೇವ್ ಬರ್ಮನ್ 1932ರಲ್ಲಿ ಕೊಲ್ಕೊತ್ತಾ ರೇಡಿಯೋ ಕೇಂದ್ರದಲ್ಲಿ ಓರ್ವ ರೇಡಿಯೋ ಗಾಯಕರಾಗಿ ತಮ್ಮ ಕಾರ್ಯ ಆರಂಭಿಸಿದರು. ಅಲ್ಲಿ ಅವರು ಆರಂಭದಲ್ಲಿ ಪ್ರಸ್ತುತಪಡಿಸಿದ ಗಾಯನವು ಬಂಗಾಳಿ ಜಾನಪದ ಸಂಗೀತವನ್ನು ಆಧರಿಸಿತ್ತು,. ಕೆಲವೇ ದಿನಗಳಲ್ಲಿ ಅವರು ಜಾನಪದ ಮತ್ತು ಲಘು ಶಾಸ್ತ್ರೀಯ ಸಂಗೀತದಲ್ಲಿ ಕೀರ್ತಿಯನ್ನು ಗಳಿಸಿದರು. ಹಾಗಾಗಿ ಅವರ ಚಲನಚಿತ್ರ ಸಂಗೀತ ಸಂಯೋಜನೆಗಳಲ್ಲಿಯೂ ಜಾನಪದ ಸಿರಿವಂತಿಕೆಯ ಸೊಬಗಿದೆ. ಬಾಂಗ್ಲಾದೇಶದ ಬಂಗಾಳಿ, ಭಟಿಯಾಲಿ, ಸಾರಿ ಮತ್ತು ಧಮೈಲ್ ಜಾನಪದ ಸಂಪ್ರದಾಯಗಳಿಗೆ ಸೇರಿದ ಜಾನಪದ ರಾಗಗಳು ಅವರ ಸಂಗೀತ ಸಂಯೋಜನೆಗಳಲ್ಲಿವೆ ಎಂಬುದು ಗಮನಾರ್ಹವಾಗಿದೆ.
1932ರ ಇದೇ ಕಾಲಾವಧಿಯಲ್ಲಿ ಸಚಿನ್ ದೇವ್ ಬರ್ಮನ್ ಅವರ ಮೊದಲ ಧ್ವನಿಮುದ್ರಿಕೆಯೂ ಹೊರಬಂತು. ಹಿಂದೂಸ್ತಾನ್ ರೆಕಾರ್ಡ್ಸ್ ಕಂಪನಿ ಹೊರತಂದ "ಖಮಾಜ್" ಶೀರ್ಷಿಕೆಯಲ್ಲಿ ಹೊರಹೊಮ್ಮಿದ ಲಘುಶಾಸ್ತ್ರೀಯ ಧಾಟಿಯಲ್ಲಿನ 'ಏ ಪಥೇರಿ ಆಜ್ ಎಸೊ ಪ್ರಿಯೋ' ಮತ್ತು ಜಾನಪದ ಶೈಲಿಯ 'ದಕ್ಲೆ ಕೋಕಿಲ್ ರೋಜ್ ಬಿಹಾನೆ' ಗೀತೆಗಳು ಬಹುಜನಪ್ರಿಯಗೊಂಡವು. ಇದರ ನಂತರದ ದಶಕದಲ್ಲಿ ಓರ್ವ ಗಾಯಕನಾಗಿ ಉತ್ತುಂಗಕ್ಕೇರಿದ ಬರ್ಮನ್ ಬಂಗಾಳಿ ಭಾಷೆಯಲ್ಲಿ 131 ಗೀತೆಗಳನ್ನು ಧ್ವನಿಮುದ್ರಿಸಿದರು. ಹಿಮಾಂಮ್ಷು ದತ್ತ, ಆರ್ ಸಿ ಬೊರಾಲ್, ನಜ್ರುಲ್ ಇಸ್ಲಾಂ ಮತ್ತು ಶೈಲೇಶ್ ದಾಸ್ ಗುಪ್ತಾರಂತಹ ಸಂಯೋಜಕರಿಗಾಗಿ ಹಾಡಿದರು.
ಸಚಿನ್ ದೇವ್ ಬರ್ಮನ್ 1934ರಲ್ಲಿ, ಅಲಹಾಬಾದ್ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಿ, ತಮ್ಮ ಬಂಗಾಳಿ ಠುಮ್ರಿಯನ್ನು ಪ್ರಸ್ತುತ ಪಡಿಸಿದರು. ಆ ವರ್ಷದಲ್ಲಿಯೇ ಕೊಲ್ಕೊತ್ತಾದಲ್ಲಿ ನಡೆದ ಬಂಗಾಳ ಸಂಗೀತ ಸಮ್ಮೇಳನದಲ್ಲೂ ಹಾಡಿದರು. ರವೀಂದ್ರನಾಥ ಠಾಗೂರರು ಈ ಸಮ್ಮೇಳನ ಉದ್ಘಾಟಿಸಿದ್ದರು. ಆ ಸಮಾರಂಭದಲ್ಲಿ ಅವರಿಗೆ ಬಂಗಾರದ ಪದಕವನ್ನು ನೀಡಲಾಯಿತು.
ಬರ್ಮನ್ ಅವರು ಶಾಂತಿನಿಕೇತನದಲ್ಲಿ ಓರ್ವ ಸಂಗೀತ ವಿದ್ಯಾರ್ಥಿನಿಯಾಗಿದ್ದ ಮೀರಾ ದಾಸ್‌ಗುಪ್ತಾ ಅವರನ್ನು ತಮ್ಮ ರಾಜಮನೆತನದ ವಿರೋಧಗಳ ನಡುವೆಯೂ ಪ್ರೇಮಿಸಿ ವಿವಾಹವಾದರು. ಅದಕ್ಕಾಗಿ ರಾಜಮನೆತನಗಳ ಆಸ್ತಿ ಕೈತಪ್ಪಿದ್ದಕ್ಕೂ ಚಿಂತಿಸಲಿಲ್ಲ.
ಸಚಿನ್ ದೇವ್ ಬರ್ಮನ್ ಸೆಲಿಮಾ (1934) ಎಂಬ ಉರ್ದು ಚಲನಚಿತ್ರದಲ್ಲಿ ಗಾಯಕನ ಪಾತ್ರ ನಿರ್ವಹಿಸಿದ್ದರು. ಧೀರೇನ್ ಗಂಗೂಲಿಯವರ ಬಿದ್ರೋಹಿ (1935) ಎಂಬ ಚಲನಚಿತ್ರದಲ್ಲಿಯೂ ಅವರು ಕಾಣಿಸಿಕೊಂಡರು.
ಸಚಿನ್ ದೇವ್ ಬರ್ಮನ್ ಓರ್ವ ಸಂಗೀತ ಸಂಯೋಜಕರಾಗಿ ಸತಿ ತೀರ್ಥ ಮತ್ತು ಜನನಿ ಎಂಬ ಬಂಗಾಳಿ ನಾಟಕಗಳಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು, 1937ರಲ್ಲಿ ಬಂದ ರಾಜ್‌ಗೀ ಎಂಬ ಚಲನಚಿತ್ರದಲ್ಲಿ ತಮ್ಮ ಮೊದಲ ಸಂಗೀತ ಸಂಯೋಜನೆಯನ್ನು ನೀಡಿದರು. ಅವರ ಎರಡನೇ ಚಲನಚಿತ್ರವಾದ ರಾಜ್‌ಕುಮಾರರ್ ನಿರ್ಬಾಶನ್ (1940) ಜನಪ್ರಿಯ ಯಶಸ್ಸನ್ನು ದಾಖಲಿಸಿದ ನಂತರ, ಜೆವಾನ್ ಸಂಗಿನಿ, ಪ್ರತಿಶೋಧ್ (1941), ಅಭೋಯೆರ್ ಬಿಯೆ (1942), ಮತ್ತು ಚದ್ದೋಬೆಶಿ (1944) ಇವೇ ಮೊದಲಾದ ಪ್ರಸಿದ್ಧ ಬಂಗಾಳಿ ಚಲನಚಿತ್ರಗಳಲ್ಲಿ ಸಂಗೀತ ನೀಡಿದರು. 1944ರಲ್ಲಿ ಮುಂಬೈಗೆ ತೆರಳಿದ ನಂತರವೂ ಬಂಗಾಳಿ ಚಿತ್ರರಂಗದಲ್ಲಿ ಸಂಗೀತ ನೀಡುವುದನ್ನು ಅವರು ಮುಂದುವರಿಸಿದರು.
ಸಚಿನ್ ದೇವ್ ಬರ್ಮನ್ ಚಲನಚಿತ್ರ ಹಿನ್ನೆಲೆಗಾಯಕರಾಗುವ ಯತ್ನವನ್ನು ಯಹೂದಿ ಕಿ ಲಡ್ಕಿ (1933) ಚಿತ್ರದಲ್ಲಿ ಕೈಗೊಂಡರಾದರೂ, ಅವನ್ನು ತಿರಸ್ಕರಿಸಿ ಅದೇ ಹಾಡುಗಳನ್ನು ಪಹಾರಿ ಸನ್ಯಾಲ್‌ರಿಂದ ಮತ್ತೊಮ್ಮೆ ಹಾಡಿಸಲಾಯಿತು. ಸಾಂಝೆರ್ ಪಿಡಿಮ್ (1935) ಎಂಬ ಚಲನಚಿತ್ರವು ಅವರು ಹಾಡಿದ ಮೊದಲ ಚಲನಚಿತ್ರವೆನಿಸಿತು.
1944ರಲ್ಲಿ, ಫಿಲ್ಮಿಸ್ತಾನ್ ಚಿತ್ರನಿರ್ಮಾಣ ಸಂಸ್ಥೆಯ ಶಶಿಧರ್ ಮುಖರ್ಜಿಯವರ ಆಹ್ವಾನದ ಮೇರೆಗೆ ಎಸ್ ಡಿ ಬರ್ಮನ್ ಮುಂಬೈಗೆ ಬಂದರು. ಅಶೋಕ್ ಕುಮಾರ್ ಪ್ರಮುಖ ತಾರಾಗಣದಲ್ಲಿದ್ದ ಶಿಕಾರಿ (1946) ಮತ್ತು ಆಠ್ ದಿನ್ ಎಂಬ ಎರಡು ಚಿತ್ರಗಳಿಗೆ ಸಂಗೀತ ಒದಗಿಸಲು ಮುಖರ್ಜಿ ಬರ್ಮನ್ ಅವರನ್ನು ಕೇಳಿಕೊಂಡರು. ಆದರೆ ಫಿಲ್ಮಿಸ್ತಾನ್ ಕಂಪನಿಯ ದೋ ಭಾಯಿ (1947) ಚಿತ್ರದೊಂದಿಗೆ ಅವರಿಗೆ ಮೊದಲ ಯಶಸ್ವೀ ಪ್ರವೇಶ ದೊರಕಿತು. ಗೀತಾ ದತ್ ಹಾಡಿದ 'ಮೇರಾ ಸುಂದರ್ ಸಪ್ನಾ ಬೀತ್ ಗಯಾ' ಎಂಬ ಗೀತೆಯು ಬಹುಪ್ರಸಿದ್ಧವಾಯಿತು. 1949ರಲ್ಲಿ, ಫಿಲ್ಮಿಸ್ತಾನ್ ಕಂಪನಿಯೊಂದಿಗಿನ ಅವರ ಮತ್ತೊಂದು ಅತಿದೊಡ್ಡ ಜನಪ್ರಿಯ ಯಶಸ್ಸಿನ ಚಿತ್ರವಾದ ಶಬ್ನಮ್ ಬಿಡುಗಡೆಯಾಯಿತು; ಶಂಶದ್ ಬೇಗಮ್ ಹಾಡಿದ 'ಯೆಹ್ ದುನಿಯಾ ರೂಪ್ ಕಿ ಚೋರ್' ಎಂಬ ಜನಪ್ರಿಯ ಯಶಸ್ಸಿನ ಗೀತೆಯಿಂದಾಗಿ ಆ ಚಿತ್ರವು ವಿಶೇಷವಾಗಿ ಗಮನಾರ್ಹವಾಗಿತ್ತು.
1950ರ ದಶಕದಲ್ಲಿ ಐಹಿಕ ವಿಷಯಗಳಿಗೆ ಹೆಚ್ಚು ಗಮನ ಕೊಡುವ ಮುಂಬೈ ಪ್ರವೃತ್ತಿಯಿಂದಾಗಿ ಭ್ರಮನಿರಸನಗೊಂಡ ಎಸ್. ಡಿ. ಬರ್ಮನ್, ಅಶೋಕ್ ಕುಮಾರ್ ಪ್ರಧಾನ ತಾರಾಗಣದಲ್ಲಿದ್ದ ಮಶಾಲ್ (1950) ಎಂಬ ಚಿತ್ರವನ್ನು ಅಪೂರ್ಣವಾಗಿರುವಂತೆಯೇ ಬಿಟ್ಟು ಕೊಲ್ಕೊತ್ತಾದೆಡೆಗಿನ ರೈಲು ಹತ್ತಲು ನಿರ್ಧರಿಸಿದರು. ಅದೃಷ್ಟವಶಾತ್, ಹಾಗೆ ಮಾಡುವುದರಿಂದ ಅವರನ್ನು ತಡೆಯಲಾಯಿತು. 1950ರ ದಶಕದಲ್ಲಿ, ದೇವಾನಂದ್ ಅವರ ನವಕೇತನ್ ಪ್ರೊಡಕ್ಷನ್ಸ್ ಜೊತೆಯಲ್ಲಿ ಕೈಜೋಡಿಸಿದ ಎಸ್. ಡಿ. ಬರ್ಮನ್, ಟ್ಯಾಕ್ಸಿ ಡ್ರೈವರ್ (1954), ಮುನಿಮ್‌ಜಿ (1955), ಪೇಯಿಂಗ್ ಗೆಸ್ಟ್ (1957), ನೌ ದೋ ಗ್ಯಾರಾ (1957) ಮತ್ತು ಕಾಲಾಪಾನಿ (1958) ಇವೇ ಮೊದಲಾದ ಯಶಸ್ಸುಗಳನ್ನು ಸೃಷ್ಟಿಸಿದರು. ಮೊಹಮ್ಮದ್ ರಫಿ ಮತ್ತು ಕಿಶೋರ್ ಕುಮಾರ್‌ರಿಂದ ಹಾಡಲ್ಪಟ್ಟ ಈ ಗೀತೆಗಳು ಅಪಾರವಾಗಿ ಜನಪ್ರಿಯವಾದವು. ದೇವ್ ಆನಂದ್‌ರವರ ನವ್‌ಕೇತನ್ ನಿರ್ಮಾಣ ಕಂಪನಿಯ ಅಫ್ಸರ್ (1950) ಎಂಬ ಮೊದಲ ಚಲನಚಿತ್ರಕ್ಕೆ ಬರ್ಮನ್ ಸಂಗೀತ ಸಂಯೋಜಿಸಿದರು. ಕಂಪನಿಯ ಎರಡನೇ ಚಲನಚಿತ್ರವಾದ ಬಾಝಿ (1951) ಕಂಡ ಯಶಸ್ಸಿನಿಂದಾಗಿ ಬರ್ಮನ್ ಉತ್ತುಂಗಕ್ಕೇರಿದರು. ಜೊತೆಗೆ ನವ್‌ಕೇತನ್ ಸಂಸ್ಥೆ ಮತ್ತು ದೇವ್ ಆನಂದ್ ಜೊತೆಗಿನ ಒಂದು ಸುದೀರ್ಘ ಸಂಬಂಧವು ನಿರಂತರ ಮುಂದುವರೆಯಿತು. 'ಬಾಝಿ' ಚಿತ್ರದ ತೀವ್ರಗತಿಯ ಸಂಗೀತ ಸಂಯೋಜನೆಯು ಅಂದಿನ ದಿನಗಳಲ್ಲಿ ಭಾವುಕ ಗಾಯನಕ್ಕೆ ಹೆಸರಾಗಿದ್ದ ಗೀತಾ ದತ್ ಅವರ ಗಾಯನದ ಮತ್ತೊಂದು ಮಗ್ಗುಲನ್ನು ಹೊರಹೊಮ್ಮಿಸಿತು. ಆಕೆಯ ಧ್ವನಿಯಲ್ಲಿ ಮೂಡಿದ "ತದ್‌ಬೀರ್ ಸೆ ಬಿಗ್‌ಡೀ ಹುಯಿ ತಕ್‌ದೀರ್" ಗೀತೆ ವಿಶೇಷವೆನಿಸಿತು. 'ಜಾಲ್' ಚಿತ್ರದಲ್ಲಿ ಹೇಮಂತ್ ಕುಮಾರ್ ಹಾಡಿರುವ 'ಯೆ ರಾತ್ ಯೆ ಚಾಂದ್‌ನಿ' ಗೀತೆಯು ಒಂದು ಶ್ರೇಷ್ಠಗೀತೆ ಎನಿಸಿತು. ಲತಾ ಮಂಗೇಶ್ಕರ್ ಅವರೊಡನೆ ಹೊಂದಾಣಿಕೆ ಆಗದಿದ್ದ ಸಂದರ್ಭದಲ್ಲಿ ಆಶಾ ಭೋಸ್ಲೆ ಅವರಿಗೆ ಅದ್ಭುತ ಅವಕಾಶಗಳನ್ನು ನೀಡಿದರು.
ಗುರುದತ್ ನಿರ್ದೇಶನದ ಮೇರುಕೃತಿಗಳಾದ ಪ್ಯಾಸಾ ಮತ್ತು ಕಾಗಜ್ ಕೆ ಫೂಲ್, ಚಿತ್ರಗಳಿಗೂ ಸಚಿನ್ ದೇವ್ ಬರ್ಮನ್ ಸಂಗೀತ ನೀಡಿದರು. ದೇವ್‌ದಾಸ್, ಹೌಸ್ ನಂ. 44, ಫಂತೂಷ್, ಸೋಲ್ವಾ ಸಾಲ್, ಬಿಮಲ್ ರಾಯ್‌ರವರ ಸುಜಾತಾ, ಕಿಶೋರ್ ಕುಮಾರ್ ನಿರ್ಮಾಣದ ಚಲ್ತಿ ಕಾ ನಾಮ್ ಗಾಡಿ, ಬಂಬಯಿ ಕಾ ಬಾಬು, ತೇರೆ ಘರ್ ಕೆ ಸಾಮ್‌ನೆ, ಬಂಧಿನಿ, ತೀನ್ ದೇವಿಯಾ, ಗೈಡ್, ಜ್ಯುವೆಲ್ ಥೀಫ್, ಆರಾಧನಾ, ತೇರೆ ಮೇರೆ ಸಪ್ನೆ, ಶರ್ಮಿಲೀ, ಅಭಿಮಾನ್, ಪ್ರೇಮ್ ನಗರ್, ಸಗೀನಾ, ಚುಪ್ಕೆ ಚುಪ್ಕೆ, ಮಿಲಿ ಹೀಗೆ ಅವರ ಸಂಗೀತದ ಚಿತ್ರಗಳು ಒಂದಕ್ಕಿಂತ ಒಂದು ಅಮೋಘ ಅನಿಸಿದವು.
'ಬಂಧಿನಿ' ಚಿತ್ರದಲ್ಲಿನ ‘ಓರೆ ಮಾಝೀ ಮೆರೆ ಸಜನ್ ಹೈ ಉಸ್ ಪಾರ್’ ಗೀತೆ, ಗೈಡ್ ಚಿತ್ರದಲ್ಲಿನ ‘ವಹಾಂ ಕೌನ್ ಹೈ ತೇರಾ' ಗೀತೆ ಮತ್ತು ಆರಾಧನಾ ಚಿತ್ರದಲ್ಲಿನ ‘ಸಫಲ್ ಹೋಗಿ ತೇರಿ' ಗೀತೆಗಳು ಸಚಿನ್ ದೇವ್ ಬರ್ಮನ್ ಅವರ ಭಾವಪೂರ್ಣ ಗಾಯನಕ್ಕೆ ಹೆಸರಾಗಿವೆ. 'ಸಫಲ್ ಹೋಗಿ ತೇರಿ ಆರಾಧನಾ' ಗೀತೆಗಾಗಿ 1970ರ ವರ್ಷದ ಅತ್ಯುತ್ತಮ ಹಿನ್ನೆಲೆ ಗಾಯಕನಿಗೆ ಮೀಸಲಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಅವರು ಸ್ವೀಕರಿಸಿದರು.
ಸಚಿನ್ ತೆಂಡೂಲ್ಕರ್ ಅವರ ತಾತ, ಸಚಿನ್ ದೇವ್ ಬರ್ಮನ್ ಅವರ ಬಗ್ಗೆ ಎಷ್ಟು ಅಭಿಮಾನಿ ಆಗಿದ್ದರೆಂದರೆ ತಮ್ಮ ಮೊಮ್ಮಗನಿಗೆ ಸಚಿನ್ ಎಂದು ಹೆಸರಿಟ್ಟರು.
ಸಚಿನ್ ದೇವ್ ಬರ್ಮನ್ ಅವರಿಗೆ
ಕೊಲ್ಕೊತ್ತಾದಲ್ಲಿ 1934ರಲ್ಲಿ ನಡೆದ ಬಂಗಾಳ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಬಂಗಾರದ ಪದಕ, 1958ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಗೌರವ, ಏಷ್ಯಾ ಫಿಲ್ಮ್ ಸೊಸೈಟಿ ಪ್ರಶಸ್ತಿ, 1969ರಲ್ಲಿ ಪದ್ಮಶ್ರೀ, 1970ರಲ್ಲಿ ಆರಾಧನಾ ಚಿತ್ರದಲ್ಲಿನ 'ಸಫಲ್ ಹೋಗಿ ತೇರಿ' ಗೀತೆಗೆ ಶ್ರೇಷ್ಠ ಹಿನ್ನೆಲೆ ಗಾಯಕ ರಾಷ್ಟ್ರೀಯ ಪ್ರಶಸ್ತಿ, 1974ರಲ್ಲಿ 'ಜಿಂದಗಿ ಜಿಂದಗಿ' ಚಿತ್ರದ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಜಾನಪದ ಸಂಗೀತದ ಕುರಿತಾದ ಅಂತರರಾಷ್ಟ್ರೀಯ ಜ್ಯೂರಿಯ ಗೌರವ ಅಲ್ಲದೆ ಹಲವಾರು ಫಿಲಂಫೇರ್ ಮತ್ತಿತರ ಗೌರವಗಳು ಸಂದವು.
ಮಿಲಿ ಚಲನಚಿತ್ರಕ್ಕಾಗಿ ಬಡಿ ಸೂನಿ ಸೂನಿ ಎಂಬ ಗೀತೆಯನ್ನು ಧ್ವನಿಮುದ್ರಿಸಿದ ಕೆಲಹೊತ್ತಿನಲ್ಲಿಯೇ ಎಸ್. ಡಿ. ಬರ್ಮನ್ ಪ್ರಜ್ಞಾಹೀನರಾದರು. 1975ರ ಅಕ್ಟೋಬರ್ 31ರಂದು ಮುಂಬೈನಲ್ಲಿ ನಿಧನರಾದರು.
On the birth anniversary of great music director Sachin Dev Burman
ಕಾಮೆಂಟ್‌ಗಳು