ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋಪಾಲಕೃಷ್ಣರಾವ್


 ಕೆ. ಗೋಪಾಲಕೃಷ್ಣರಾವ್


ಕೆ. ಗೋಪಾಲಕೃಷ್ಣರಾವ್ ನವೋದಯ ಕಥೆಗಾರರಲ್ಲಿ ಒಬ್ಬರಾಗಿ ಮತ್ತು ಕನ್ನಡಕ್ಕಾಗಿ ದುಡಿದ ಮಹನೀಯರಲ್ಲಿ ಒಬ್ಬರೆನಿಸಿದ್ದಾರೆ. 

ಗೋಪಾಲಕೃಷ್ಣರಾಯರು 1906ರ ಆಗಸ್ಟ್‌ 9ರಂದು ದೇವನಹಳ್ಳಿ ತಾಲ್ಲೂಕಿನ ಕೊಡಗೇನ ಹಳ್ಳಿಯಲ್ಲಿ ಜನಿಸಿದರು. ತಂದೆ ನಂಜುಂಡಯ್ಯ.  ತಾಯಿ ಸುಬ್ಬಮ್ಮ. ಬೆಂಗಳೂರಿನ ನ್ಯಾಷನಲ್‌ ಹೈಸ್ಕೂಲಿನಲ್ಲಿ ಓದಿ,  ನಂತರ ಸೆಂಟ್ರಲ್‌ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. 

ಗೋಪಾಲಕೃಷ್ಣರಾಯರು ವಿದ್ಯಾರ್ಥಿ ದೆಸೆಯಿಂದಲೇ ಕೈಲಾಸಂ ಪ್ರಭಾವದಿಂದ ನಾಟಕಗಳತ್ತ ಮತ್ತು ಮಾಸ್ತಿಯವರ ಕಥೆಗಳ ಪ್ರಭಾವದಿಂದ ಕಥೆಗಳತ್ತ ಮನಸ್ಸನ್ನು ಹರಿಸಿದರು. ಇವರು ಪ್ರಾರಂಭದ ದಿನಗಳಲ್ಲಿ ಇಂಗ್ಲಿಷ್‌ನಲ್ಲಿ ಕವನಗಳನ್ನು ಬರೆಯುತ್ತಿದ್ದರು. 
'ಶ್ರೀರಾಮ ವಿಜಯ ಸಂಘ’ ಎಂಬ ಒಂದು ಸಂಘವನ್ನು ಪ್ರಾರಂಭಿಸಿ ಅದರ ಕಾರ್ಯದರ್ಶಿಗಳಾದರು. ಇಂಜಿನಿಯರಿಂಗ್‌ ಇಲಾಖೆಯಲ್ಲಿದ್ದು ನಿವೃತ್ತರಾಗಿದ್ದ ಎ. ಶೇಷಪ್ಪ, ಎಚ್‌.ಎನ್‌. ಸುಬ್ಬರಾವ್‌ , ನ್ಯಾಷನಲ್‌ ಹೈಸ್ಕೂಲಿನಲ್ಲಿ ಗಣಿತದ ಅಧ್ಯಾಪಕರಾಗಿದ್ದ ಎಚ್‌.ಎಸ್‌. ಶಿವರಾಮಯ್ಯ ಮುಂತಾದ ಹಿರಿಯರು ಈ ಸಂಘದ ಸದಸ್ಯರಾಗಿದ್ದರ ಜೊತೆಗೆ ಇವರಿಗಿಂತ ಒಂದು ವರ್ಷ ಕಿರಿಯರಾದ ತ.ಸು. ಶಾಮರಾಯರೂ ಸದಸ್ಯರಾಗಿದ್ದರು.  ಇವರ ಇಂಗ್ಲಿಷ್ ಕವಿತೆಗಳನ್ನು ಓದಿದ ತ.ಸು.ಶಾಮರಾಯರು ‘ನೀವೇಕೆ ಕನ್ನಡದಲ್ಲಿ ಬರೆಯಬಾರದು?’ ಎಂದಾಗ, ಮುಂದಿನವಾರ ಸಭೆ ಸೇರಿದಾಗ ದೇವರ ಸ್ತುತಿ ರೂಪದ ಪದ್ಯ ಓದಿ ನಂತರ ‘ಕಮಲೆಯ ಹುಚ್ಚು’ ಎಂಬ ಕವನವನ್ನು ಓದಿದರು. ಈ ಕವನವು ನಂತರ ಬೆನಗಲ್‌ ರಾಮರಾವ್‌ ಮತ್ತು ಪಂಜೆ ಮಂಗೇಶರಾಯರ ಸಂಪಾದಕತ್ವದಲ್ಲಿ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಸುವಾಸಿನಿ’ ಪತ್ರಿಕೆಯಲ್ಲಿ ಪ್ರಕಟವಾಯಿತು. ಹೀಗೆ ಇವರ ಸಾಹಿತ್ಯ ರಚನೆಗೆ ಪ್ರೋತ್ಸಾಹ ನೀಡಿದವರು ತೀ.ನಂ.ಶ್ರೀ, ಎಂ.ವಿ. ಸೀತಾರಾಮಯ್ಯ, ತ.ಸು.ಶಾಮರಾವ್ ಮುಂತಾದವರು. ಇವರೇ ಸ್ಥಾಪಿಸಿದ್ದ ‘ಶ್ರೀರಾಮ ವಿಜಯ ಸಂಘ’ದ ಮೂಲಕ ಹಲವಾರು ಬಾರಿ ಕತೆಗಾರರ ಸಮ್ಮೇಳನಗಳನ್ನು ನಡೆಸಿದ್ದಲ್ಲದೆ ತಾವಿದ್ದ ಗಾಂಧಿ ಬಜಾರಿನ ದಕ್ಷಿಣದ ಮೂಲೆಯಲ್ಲಿದ್ದ ಒಂದಂಕಣದ ಮನೆಯ ದಿವಾನ ಖಾನೆಯಾನ್ನೇ  ಸಾಹಿತ್ಯ ಕೃತಿ ವಾಚನಗಳ ತಾಣ‍ವನ್ನಾಗಿ ಮಾಡಿ ಸಾಹಿತ್ಯಾಭಿಮಾನಿಗಳು ತುಂಬಿ ತುಳುಕುವಂತೆ ಮಾಡಿದ್ದರು. ಪು.ತಿ. ನರಸಿಂಹಾಚಾರ್ಯರು ತಮ್ಮ ‘ಅಹಲ್ಯಾ’ ಗೀತರೂಪಕವನ್ನೂ ಮೊದಲ ಸಲ ಓದಿದ್ದು ಈ ದಿವಾನಖಾನೆಯಲ್ಲೆ. 

ಎಂಟ್ರೆನ್ಸ್‌ ವ್ಯಾಸಂಗಮಾಡುತ್ತಿದ್ದಾಗ ಪ್ರತಿದಿನ ಮುಂದಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ ಗೋಪಾಲಕೃಷ್ಣರಾಯರು ಒಮ್ಮೆ ಹಿಂದಿನ ಬೆಂಚಿನಲ್ಲಿ ಕುಳಿತು ಪಾಠವನ್ನು ಲೆಕ್ಕಿಸದೆ ಏನೋ ಬರೆಯತೊಡಗಿದ್ದರು. ಪಾಠಮಾಡುತ್ತಿದ್ದ ಸಿ. ರಾಮರಾಯರು ‘ಏನು ಮಾಡುತ್ತಿದ್ದಿಯಾ?’ ಎಂದು ಕೇಳಿದಾಗ ‘ಕತೆ ಬರೆಯುತ್ತಿದ್ದೇನೆ ಸರ್’ ಎಂದು ಧೈರ್ಯದಿಂದಲೇ ಉತ್ತರಿಸಿ ಬರೆದ ಕಥೆಯನ್ನು ಅವರ ಕೈಗಿತ್ತರು. ಪಾಠದ ನಡುವ ಕಥೆ ಬರೆಯುತ್ತಿದ್ದಾನಲ್ಲ ಎಂದು ದಂಡಿಸದ ಶಿಕ್ಷಕರು, ಹುಡುಗನ ಕಥೆಗಾರಿಕೆಯನ್ನು ಓದಿ ಮೆಚ್ಚಿ ಅಭಿನಂದಿಸಿದ್ದಲ್ಲದೆ, ಬರೆದಿದ್ದ ‘ಶ್ರೀನಿವಾಸನ ಸ್ನೇಹಿತ’ ಎಂಬ ಕತೆಯನ್ನು ಶಾಲೆಯ ಪತ್ರಿಕೆಯಲ್ಲೂ ಪ್ರಕಟಿಸಿ, ಹವ್ಯಾಸವನ್ನು ಮುಂದುವರೆಸುವಂತೆ ಪ್ರೋತ್ಸಾಹಿಸಿದರು. 

ಗೋಪಾಲಕೃಷ್ಣರಾಯರು ಪದವಿ ಗಳಿಸಿದ ನಂತರ ಉದ್ಯೋಗಕ್ಕಾಗಿ ಸೇರಿದ್ದು ಅಠಾರ ಕಚೇರಿಯಲ್ಲಿ ಗುಮಾಸ್ತರಾಗಿ. ನಂತರ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ಮುಖ್ಯಮಂತ್ರಿಗಳಾಗಿದ್ದ ಕೆ. ಹನುಮಂತಯ್ಯನವರ ಆಪ್ತಕಾರ್ಯದರ್ಶಿಯಾಗಿಯೂ ಕೆಲಕಾಲ ಕಾರ್ಯನಿರ್ವಹಿಸಿದರು. ಅವರಲ್ಲಿದ್ದ ಸವಿನೆನಪಿಗಾಗಿ ಬರೆದ ಕವನಗಳನ್ನು ಸೇರಿಸಿ ‘ಕುಮಾರಕೃಪ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದರು. ನಂತರ ಇವರು ಬರೆದ ಹಲವಾರು ಕವನಗಳು ಜೀವನ ಪತ್ರಿಕೆಯಲ್ಲಿಯೂ ಪ್ರಕಟಗೊಂಡವು. 

ಗೋಪಾಲಕೃಷ್ಣರಾಯರು ಸಂಪಾದಿಸಿ ಪ್ರಕಟಿಸಿದ ಗದ್ಯ ಕೃತಿ ‘ಆಧುನಿಕ ಗದ್ಯ ಸಾಹಿತ್ಯ’. ಇವರು ಬರೆದ ಹಲವಾರು ಕಥೆಗಳು ಉಡುಗೊರೆ, ಬಂಗಾರದ ಡಾಬು, ನಟಿ, ಆಯ್ದ ಹತ್ತುಕಥೆಗಳು, ಸೋತು ಗೆದ್ದವರು, ರಾಜಾಯಿ, ಮುಂತಾದ ಸಂಕಲನಗಳಲ್ಲಿ ಸೇರಿವೆ. ಕೆನ್ಸಿಂಗ್‌ಟನ್‌ ಪಾರ್ಕ್ ಮತ್ತು ಹರಿದಾಸ ಸಾಹಿತ್ಯ ಎಂಬವು ಇವರ ಎರಡು ಪ್ರಬಂಧ ಸಂಕಲನಗಳು. ಕೈಲಾಸಂ ರವರಿಂದ ಪ್ರೇರಿತರಾಗಿ ಆಸೆ-ನಿರಾಸೆ, ಕನ್ಯಾರ್ಥಿ, ಸಾಕುಕೂಸು, ರುಗ್ಣಕಯ್ಯೆ, ಚಿರಸಮಸ್ಯೆ, ಅಪರಾಧಿ, ಕವಿಕುಟೀರ, ಪಾರ್ಕಿನ ಲಚುಮಿ ಮುಂತಾದ ಏಳುನಾಟಕಗಳನ್ನೂ ರಚಿಸಿದರು. ಇವರು ಬರೆದ ‘ಡಾ. ಸುಶೀಲಾ ಸಂಕೇತ್‌’ ಮತ್ತು ‘ಶ್ರೀಧರ ಕವಿ’ ಎಂಬ ಎರಡು ಕಥೆಗಳು ಹಾಗೂ ಸೋದರಿಯರು ಎಂಬ ನಾಟಕವು ಇಂಗ್ಲಿಷ್‌ ಭಾಷೆಗೂ ‘ಏನಿದು ಹುಚ್ಚು’ ಎಂಬ ಕತೆಯು ಹಿಂದಿ ಭಾಷೆಗೂ ಅನುವಾಗೊಂಡವು. 1967ರಲ್ಲಿ ನಡೆದ ಇವರ ಷಷ್ಟ್ಯಬ್ದಿ ಕಾರ್ಯಕ್ರಮದಲ್ಲಿ ‘ಗೀತೆಗಳು’ ಎಂಬ 60 ಕವನಗಳ ಸಂಕಲನವನ್ನು ಪ್ರಕಟಿಸಿದರು. 

ಗೋಪಾಲಕೃಷ್ಣರಾಯರ ಕಾರ್ಯಚಟುವಟಿಕೆಗಳು ಸೆಂಟ್ರಲ್‌ ಕಾಲೇಜಿನ ಕರ್ನಾಟಕ ಸಂಘದಿಂದ ಪ್ರಾರಂಭವಾಯಿತು.  ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಇವರ ಸೇವೆ  ಎರಡು ಬಾರಿ (1947-48 ಮತ್ತು 1956-61)  ಸಂದಿದ್ದವು. ಮಾಸ್ತಿಯವರ ‘ಜೀವನ’ ಪತ್ರಿಕೆಯ ಸಂಪಾದಕರಾಗಿ (1965) ಕಾರ್ಯನಿರ್ವಹಿಸಿದ್ದಲ್ಲದೆ,  ಧಾರವಾಡದಲ್ಲಿ ದ.ರಾ. ಬೇಂದ್ರೆ, ವಿ.ಕೃ. ಗೋಕಾಕ್‌, ರಂ.ಶ್ರೀ ಮುಗಳಿಯವರ ಸಂಪಾದಕತ್ವದಲ್ಲಿ ಹೊರತಂದ ಮಾಸಪತ್ರಿಕೆ, ಮೈಸೂರು ವಾಣಿಜ್ಯ ಸಂಘದವರು ಪ್ರಕಟಿಸುತ್ತಿದ್ದ ಇಂಗ್ಲಿಷ್‌ ಆವೃತ್ತಿ ಮೈಸೂರು ಕಾಮರ್ಸ್ ಪತ್ರಿಕೆ ಮುಂತಾದವುಗಳಲ್ಲಿ ಸಹಸಂಪಾದಕರಾಗಿ ದುಡಿದರು.  ಹಲವಾರು ಸಾಹಿತ್ಯ ಸಂಘ-ಸಂಸ್ಥೆಗಳ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 

ಗೋಪಾಲಕೃಷ್ಣರಾಯರ ಪತ್ನಿ ಸುಶೀಲಮ್ಮನವರು. ಋಜುಸ್ವಭಾವದ, ಸಾತ್ವಿಕಗುಣದ, ದೈವಭೀರು. ‘ಶ್ರೀಗುರುಚರಿತೆ’ಯನ್ನು ರಚಿಸಿದ ಲೇಖಕಿ. ಸಂಗೀತ, ಕಾವ್ಯವಾಚನ, ಭಜನೆ, ನಾಟಕ, ಸಾಹಿತ್ಯ ಗೋಷ್ಠಿಗಳಲ್ಲಿ ಆಸಕ್ತರಾಗಿದ್ದ ಗೋಪಾಲಕೃಷ್ಣರಾಯರಲ್ಲಿ ಅಧ್ಯಾತ್ಮಿಕ ಭಾವವು ಬೆಳೆಯ ತೊಡಗಿದ್ದನ್ನು ಅವರ ‘ದರ್ಶನ’ ಮತ್ತು ‘ದಿವ್ಯ ಜ್ಯೋತಿ’ ಮುಂತಾದ ಕವನಗಳಲ್ಲಿ ಗುರುತಿಸಬಹುದಾಗಿದೆ. 

ಸದಾ ಸಾಹಿತ್ಯ ಚಟುವಟಿಕೆಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದ ಗೋಪಾಲಕೃಷ್ಣರಾಯರು 1967ರ ಅಕ್ಟೋಬರ್ 8ರಂದು ಈ ಲೋಕವನ್ನಗಲಿದರು.

ಗೋಪಾಲಕೃಷ್ಣರಾಯರ ಮಗಳು ಜಾನಕಿ ಶ್ರೀನಿವಾಸ್‌ವರು ಡಾ. ರಮೇಶ್ ಕಾಮತ್‌ರವರ ಅಧ್ಯಕ್ಷತೆಯಲ್ಲಿ ಗೋಪಾಲಕೃಷ್ಣರಾವ್ ಪ್ರತಿಷ್ಠಾನ ಸ್ಥಾಪಿಸಿದರು.   ಆ ಮೂಲಕ ಕೆನ್ಸಿಂಗ್‌ಟನ್‌ ಪಾರ್ಕ್ (ತನು-ಮನ ಪ್ರಕಾಶನ, ಮೈಸೂರು), ಸಮಗ್ರಕಥೆಗಳು (ವಸಂತ ಪ್ರಕಾಶನ, ಬೆಂಗಳೂರು), ಸಮಗ್ರ ಏಕಾಂಕ ನಾಟಕಗಳು (ತುಲನಪ್ರಕಾಶನ, ಬೆಂಗಳೂರು) ಪುನರ್ ಮುದ್ರಣಗೊಂಡವು.  

ಗೋಪಾಲಕೃಷ್ಣರಾಯರ  ನೆನಪಿಗಾಗಿ ‘ಮಾಸದ ನೆನಪು’ ಸಂಸ್ಮರಣ ಗ್ರಂಥವು 2012ರಲ್ಲಿ ಪ್ರಕಟಗೊಂಡಿತು.

On the birthday anniversary of great scholar, writer and organizer K. Gopalakrishna Rao 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ