ಬಿಲ್ ಗೇಟ್ಸ್
ಬಿಲ್ ಗೇಟ್ಸ್
ಬಿಲ್ ಗೇಟ್ಸ್ ಈ ಲೋಕದವರ ಬದುಕಿನ ರೀತಿಯನ್ನು ಬದಲಿಸಿದ ಮಹತ್ವದ ವ್ಯಕ್ತಿಗಳಲ್ಲಿ ಒಬ್ಬರು.
ಅಕ್ಟೋಬರ್ 28 ಬಿಲ್ ಗೇಟ್ಸ್ ಜನ್ಮದಿನ.
ನನಗಂತೂ ಬಿಲ್ ಗೇಟ್ಸ್ ತಂದ ಬದಲಾವಣೆ ಮರೆಯಲಾಗದ್ದು. ಅಂದಿನ ದಿನಗಳಲ್ಲಿ ಹಲವಾರು ಸಣ್ಣ ಹಾಳೆ ಜೊತೆ ಕಾರ್ಬನ್ ಕಾಪಿಗಳನ್ನು ಇಟ್ಟು ಬೆರಳಚ್ಚು ಯಂತ್ರದಲ್ಲಿ ಬಲವೆಲ್ಲಾ ಬಿಟ್ಟು ಕುಟ್ಟುತ್ತಿದ್ದುದು, ದೊಡ್ಡ ದೊಡ್ಡ ರಿಜಿಸ್ಟರುಗಳಲ್ಲಿ ಕಚೇರಿಗಳಲ್ಲಿ ಲೆಕ್ಕ ಬರೆಯುತ್ತಿದ್ದುದು ನೆನಪಾಗುತ್ತದೆ.
1984ರ ಆಸು ಪಾಸು, ಇದ್ದಕ್ಕಿದ್ದಂತೆ ನಮ್ಮ ಕಚೇರಿಯಲ್ಲಿ ಕಂಪ್ಯೂಟರ್ ಬಂತು. ಅಂದಿನ ಟೈಪ್ ರೈಟರ್ ಜೊತೆ ಹೆಣಗಿದ್ದ ನಮಗೆ ಈ ಕಂಪ್ಯೂಟರ್ ಕೀಲಿಮಣೆಯಲ್ಲಿ ಟೈಪ್ ಮಾಡಿದ ಅನುಭವ ಮರೆಯಲಾಗದ್ದು. ಎಷ್ಟು ಮೃದುವಾದ ಸ್ಪರ್ಶ. ಮುದ್ದು ಹುಡುಗಿಯ ಕೆನ್ನೆ ಮುಟ್ಟಿದಂತೆ! ಅಹಾ. ಆ ಹಿತವಾದ ಅನುಭವ ಮರೆಯಲಾಗದ್ದು.
ಅದೇನು ಪ್ರೀತಿ ಹುಟ್ಟಿತೋ! ಟೈಪ್ ಮಾಡಿ ಲೆಕ್ಕ ಬರೆಯುತ್ತಿದ್ದವನಿಗೆ ಕಂಪ್ಯೂಟರ್ ಜೊತೆಗಿನ ಬದುಕು ಇಷ್ಟವಾಗಿ ಕಂಪ್ಯೂಟರ್ ಪ್ರೋಗ್ರಾಮಿಂಗ್ ಹಾದಿಯಲ್ಲಿ ನಡೆಯತೊಡಗಿದೆ. ಹಾಗಾಗಿ ಬಿಲ್ ಗೇಟ್ಸ್ ಅಂದರೆ ಒಂದು ರೀತಿಯ ಪ್ರೀತಿ. ಆ ಡಾಸು, ವಿಂಡೋಸು, ಸುಲಲಿತ ಕೀ ಬೋರ್ಡು, ಮೌಸು ಇವೆಲ್ಲಾ ನಮ್ಮ ಮುಂದೆ ತಂದಿಟ್ಟು ನಮ್ಮ ಬದುಕಿನ ರೀತಿಯನ್ನೇ ಬದಲಿಸಿದ ಈ ಹರಿಕಾರನನ್ನು ಕೊಂಡಾಡದೆ ಇರಲು ಹೇಗೆ ತಾನೇ ಸಾಧ್ಯ. ಈತನ ಕೊಡುಗೆಯಿಂದ ತಾನೇ ಇಂದು ನಮ್ಮ ಬೆಂಗಳೂರು ಮತ್ತು ದೇಶದ ಇತರ ಭಾಗದ ಹುಡುಗರು ಭರವಸೆಯ ಹುದ್ದೆಗಳನ್ನು ಕಾಣಲು ತೊಡಗಿದ್ದು! (ಜೊತೆಗೆ ಲೋಕದ ಜನ ಎಲ್ಲ ಕೆಲಸ ಬಿಟ್ಟು ಕಂಪ್ಯೂಟರ್ರು ಮೊಬೈಲು ಅಂತ ಮುಳುಗಿರೋದು ಕೂಡ 😊)
ನಮ್ಮ ಕಾಲದ ಇಬ್ಬರು ಮಹಾನ್ ಯುವಕರಲ್ಲಿ ಒಬ್ಬ ಬಿಲ್ ಗೇಟ್ಸ್ ಮತ್ತೊಬ್ಬ ಕೆಲವು ವರ್ಷದ ಹಿಂದೆ ಈ ಲೋಕವನ್ನಗಲಿದ ಸ್ಟೀವ್ ಜಾಬ್ಸ್ . ಇವರು ನಮ್ಮ ಬದುಕಿನ ರೀತಿಯನ್ನು ಬದಲಿಸಿದ ಮಹತ್ವದ ಹುಡುಗರು ಎಂದು ನನ್ನ ಅಭಿಪ್ರಾಯ. ಇದೇ ಕಾಲದಲ್ಲಿ ಅನೇಕ ಕ್ಷೇತ್ರಗಳಲ್ಲಿ ಅನೇಕರು ಅನೇಕ ಸಾಧನೆ ಮಾಡಿದ್ದಾರೆ. ಆದರೆ, ಈ ಹುಡುಗರು ತಮ್ಮ ಆಕಾಂಕ್ಷೆಯಿಂದ ಮತ್ತು ಸೃಜನಶೀಲ ಮನದಿಂದ ಪ್ರಪಂಚದ ಬದುಕಿನ ರೀತಿಯನ್ನು ಬದಲಿಸಿದ್ದು ಮಾತ್ರ ನಿಜ. ತಮ್ಮ ಕನಸುಗಳನ್ನು ಮಾರಿದ ಈ ಸುಂದರ ಹುಡುಗರು, ಲೋಕಿಗರ ಕನಸುಗಳಿಗೂ ರೆಕ್ಕೆಪುಕ್ಕಗಳನ್ನು ಕೊಟ್ಟವರು.
ಬಿಲ್ ಗೇಟ್ಸ್ ಜೀವನದ ಪ್ರಾರಂಭಿಕ ಚರಿತ್ರೆಯಾದ 'ಮೇಕಿಂಗ್ ಆಫ್ ದಿ ಮೈಕ್ರೋಸಾಫ್ಟ್' ಪುಸ್ತಕದ ಪ್ರಾರಂಭಿಕ ಪುಟದಲ್ಲಿ ಆತನ ಕಾರ್ಯದರ್ಶಿಯಾದ ಮಿರಿಯಂ ಲೋಬೋ ಹೇಳುವ ಮಾತು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿದೆ. ಆಕೆ ಹೇಳುತ್ತಾಳೆ, "ಒಬ್ಬ ವ್ಯಕ್ತಿ ಉತ್ತುಂಗಕ್ಕೆ ಬರುವುದು ಎಷ್ಟು ಮುಖ್ಯವೋ, ಆ ಉತ್ತುಂಗತೆಯನ್ನು ನಿರಂತರವಾಗಿ ಕಾಯ್ದು ಕೊಳ್ಳುವುದು ಅದಕ್ಕಿಂತ ಮುಖ್ಯ. ಈ ನಿಟ್ಟಿನಲ್ಲಿ ಬಿಲ್ ಗೇಟ್ಸ್ ಅತ್ಯಂತ ಮಹತ್ವದ ವ್ಯಕ್ತಿ". (ಇದೇ ಸಂದರ್ಭದಲ್ಲಿ ಅಂದಿನ ಬಿಲ್ ಗೇಟ್ಸ್ ಕನಸಿನ ಜೊತೆಗಾರ ದಿವಂಗತ ಪಾಲ್ ಅಲೆನ್ ಅವರನ್ನು ಕೂಡಾ ನೆನೆಯುತ್ತೇನೆ).
ತಾನು ಸಾಧಿಸಿದ ಆಕಾಂಕ್ಷೆಗಳು, ಬೆಳೆಸಿದ ವ್ಯಾಪಾರ, ಬೆಳೆಸಿದ ಐಶ್ವರ್ಯ ಮತ್ತು ಅದನ್ನು ವಿನಿಯೋಗಿಸುತ್ತಿರುವ ಔದಾರ್ಯ ಇವೆಲ್ಲದರಲ್ಲೂ ಆತ ಉತ್ತುಂಗನೇ. ಮತ್ತೊಬ್ಬ ಮಹಾನ್ ಬುದ್ಧಿವಂತ ಶ್ರೀಮಂತ ವ್ಯಾಪಾರಸ್ಥ ವಾರೆನ್ ಬಫ್ಫೆಟ್ ಅವರು ತಮ್ಮ ಮಹತ್ ಐಶ್ವರ್ಯವನ್ನು ಬಿಲ್ ಗೇಟ್ಸ್ ಅವರ ಲೋಕ ಹಿತರಕ್ಷಣೆಯ ಉದ್ದೇಶಕ್ಕಾಗಿ ನೀಡಿದಾಗ ಹೇಳಿದ ಮಾತು ಮನನೀಯ, "ಈತನಿಗಿಂತ ಹಣದ ಸಮರ್ಥ ನಿರ್ವಹಣಾ ವ್ಯಕ್ತಿ ಇನ್ನೆಲ್ಲಿ ಸಿಗಬೇಕು!".
ಈ ಮಧ್ಯೆ ಕಳೆದ ವರ್ಷದಲ್ಲಿ ಒಂದು ವಿಚಾರ ನನ್ನಲ್ಲಿ ಗಂಭೀರವಾಗಿ ಕಾಡುತ್ತಿದೆ. ಮನುಷ್ಯ ಎಷ್ಟೊಂದು ಸಾಧಿಸಿದ್ದರೂ ಅವನ ಬದುಕಿನಲ್ಲೂ ಸಣ್ಣ ಪುಟ್ಟ ನೋವು ಮತ್ತು ಬಿರುಕುಗಳು ಕಾಡುವುದೇಕೆ ಅಂತ! ಈ ಬದುಕಿನ ಪರಿಯೇ ವಿಚಿತ್ರ. ಯಾರನ್ನೂ ನೆಮ್ಮದಿಯಾಗಿರಿಸಿರುವುದಿಲ್ಲ😔
ನಮ್ಮ ಕಾಲಮಾನದ ಅತ್ಯಂತ ಮಹಾನ್ ಕನಸುಗಾರ, ತನ್ನ ಕನಸುಗಳ ಮೂಲಕ ಲೋಕದ ಜನರ ಬದುಕಿನ ಮುಚ್ಚಿದ ಬದುಕಿಗಳಿಗೆ ಹೊಸ ಬಗೆಯ ಗೇಟುಗಳನ್ನು ನಿರ್ಮಿಸಿದ ಈ ಗೇಟ್ ಅವರಿಗೆ ಸಾಟಿ ಉಂಟೆ. 'ನೀನು ಎಲ್ಲರಿಗೂ ನಮ್ಮವನೇ ಆದ ಗೆಳೆಯ'. ನಿನ್ನಂತಹವರು ಇನ್ನೂ ಹೆಚ್ಚು ಹೆಚ್ಚಾಗಿ ಈ ವಿಶ್ವದಲ್ಲಿ ಉದಯಿಸುತ್ತಿರಲಿ. ನಿನ್ನ ಉತ್ತಮ ಕೆಲಸಗಳು ನಿರಂತರವಾಗಿ ಮುಂದುವರೆಯುತ್ತಿರಲಿ.
On the birth day of Bill Gates who opened the gates of changes to our world
ಕಾಮೆಂಟ್ಗಳು