ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಉತ್ತರಕಾಂಡ


ಶ್ರೀ ರಾಮಾಯಣ: ಉತ್ತರಕಾಂಡ
(ನಮ್ಮ ತಂದೆ ಪಂಡಿತ ತಿರು ಶ್ರೀನಿವಾಸಾಚಾರ್ ಅವರು ಬರೆದ 'ಸಂಗ್ರಹ ರಾಮಾಯಣ' ಕೃತಿಯಿಂದ)

ಹಿಮೆ ಪುಲಸ್ತ್ಯನೆಂಬ ಬ್ರಹ್ಮಋಷಿಗೆ ವಿಶ್ರವಸ್ಸು ಎಂಬ ಮಗನಾದನು. ಈ ವಿಶ್ರವಸ್ಸುವಿಗೆ ದೇವದರ್ಣಿಯಲ್ಲಿ ವೈಶ್ರವಣನೆಂಬ ಪುತ್ರ ಜನಿಸಿದನು. ಈತನೇ ದೇವತೆಗಳ ನಿಧಿಯನ್ನು ನೋಡಿಕೊಳ್ಳುವ ಕುಬೇರನೆನಿಸಿದನು. ಈ ವಿಶ್ರವಸ್ಸುವಿಗೆ ಕೈಕಸಿಯೆಂಬ ಮತ್ತೊಬ್ಬ ರಾಕ್ಷಸ ಸ್ತ್ರೀಯಲ್ಲಿ ದಶಗ್ರೀವ, ಕುಂಭಕರ್ಣ ಮತ್ತು ವಿಭೀಷಣರೆಂಬ ಮೂವರು ಗಂಡುಮಕ್ಕಳೂ, ಶೂರ್ಪನಖಿಯೆಂಬ ಮಗಳೂ ಹುಟ್ಟಿದರು. ಇವರಲ್ಲಿ ದಶಗ್ರೀವನು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ತನಗೆ ದೇವವರ್ಗದವರಾರಿಂದಲೂ ಮರಣವುಂಟಾಗ ಬಾರದೆಂಬ ವರವನ್ನು ಮಾತ್ರ ಪಡೆದಿದ್ದನು. ಕುಂಭಕರ್ಣನಿಗೆ ಮಂಕು ಕವಿದು ತನಗೆ ನಿದ್ರೆ ಬೇಕೆಂದು ಕೇಳಿದ್ದುದರಿಂದ ಅವನು ಸದಾ ನಿದ್ರಿಸುತ್ತಿದ್ದನು. ವಿಭೀಷಣನು ತಾನು ಧರ್ಮಿಷ್ಠನಾಗಿರುವಂತೆ ವರವನ್ನು ಬೇಡಿ ಅದೇ ರೀತಿ ಹೆಸರುವಾಸಿಯಾದನು.

ದಶಗ್ರೀವನು ತನ್ನ ಅಣ್ಣನಾದ ಕುಬೇರನನ್ನು ಹೆದರಿಸಿ ಲಂಕೆಯನ್ನು ಆಕ್ರಮಿಸಿಕೊಂಡುದರಿಂದ ಕುಬೇರನು ಕೈಲಾಸದಲ್ಲಿ ತನ್ನ ರಾಜ್ಯವನ್ನು ಕಟ್ಟಿಕೊಂಡನು. ಅಲ್ಲಿಗೂ ದಶಗ್ರೀವನು ಕುಬೇರನ ಮೇಲೆ ಯುದ್ಧಕ್ಕೆ ಹೋಗಿ ಅಪೂರ್ವವಾದ ಪುಷ್ಪಕ ವಿಮಾನವನ್ನು ಕಿತ್ತುಕೊಂಡು ಬಂದಿದ್ದನು. ತನ್ನ ವಿಮಾನಕ್ಕೆ ತಡೆ ಮಾಡಿತೆಂಬ ಕಾರಣದಿಂದ, ಕೈಲಾಸ ಪರ್ವತವನ್ನೇ ಕಿತ್ತೊಗೆಯಲು ಆ ಪರ್ವತದ ಅಡಿಗೆ ಕೈಯಿಟ್ಟು ಅಲುಗಿಸಿದನು. ಆಗ ಪರಶಿವನು ತನ್ನ ಬೆರಳಿನಿಂದ ಅದುಮಿದಾಗ ದಶಗ್ರೀವನು ಲೋಕವೆಲ್ಲಾ ನಡುಗುವಂತೆ ಕಿರುಚಿಕೊಂಡನು. ಈ ಕಾರಣದಿಂದಲೇ ಅವನಿಗೆ ರಾವಣನೆಂಬ ಹೆಸರಾಯಿತು. ಕಡೆಗೆ ರಾವಣನು ಶಿವನನ್ನು ಕುರಿತು ತಪಸ್ಸುಮಾಡಿ ಅನೇಕ ವರಗಳನ್ನು ಪಡೆದನು. ಇಲ್ಲಿಂದ ಮುಂದೆ ರಾವಣನು ಅವನ ಮಗನಾದ ಇಂದ್ರಜಿತ್ತುವಿನೊಡನೆ ಕೊಬ್ಬಿನಿಂದ ದೇವತೆಗಳನ್ನು ಋಷಿಗಳನ್ನೂ ಬಹಳವಾಗಿ ಹಿಂಸೆ ಮಾಡುತ್ತಿದ್ದುದರಿಂದ ದೇವತೆಗಳು ರಾವಣನ ಬಾಧೆ ತಾಳಲಾರದೆ ಮಹಾ ವಿಷ್ಣುವಿನ ಮೊರೆಹೊಕ್ಕಿದ್ದರು. ಇದರಿಂದಲೇ ಶ್ರೀಹರಿಯು ಮಾನವನಾಗಿ ಶ್ರೀರಾಮಾವತಾರ ತಾಳಬೇಕಾಯಿತು.

ಶ್ರೀರಾಮಚಂದ್ರನು ತನ್ನ ತಮ್ಮಂದಿರೊಡಗೂಡಿ ಅನೇಕ ವರ್ಷಕಾಲ ಧರ್ಮದಿಂದ ರಾಜ್ಯ ಪರಿಪಾಲನೆ ಮಾಡುತ್ತಿದ್ದನು. ರಾಮರಾಜ್ಯದಲ್ಲಿ ಯಾವುದಕ್ಕೂ ಕೊರತೆಯೇ ಇರಲಿಲ್ಲ. ಸೀತೆಯು ಗರ್ಭಿಣಿಯಾದಳು. ಒಮ್ಮೆ ಆಕೆಯು ತನ್ನ ವಲ್ಲಭನಲ್ಲಿ ವನಾಶ್ರಮಗಳಲ್ಲಿನ ಋಷಿಪತ್ನಿಯರನ್ನು ಮತ್ತೊಂದು ಸಲ ತಾನು ನೋಡಿಕೊಂಡು ಬರುವ ಬಯಕೆಯನ್ನು ತಿಳಿಸಿದ್ದಳು. ಇದಕ್ಕೆ ಸೀತಾಪತಿಯು ಸಮ್ಮತಿಸಿದನು.

ಹೀಗಿರಲು ನಿತ್ಯವೂ ಪ್ರಜೆಗಳ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದ ಶ್ರೀರಾಮನಿಗೆ ಒಂದು ದಿನ ಅಪ್ರಿಯವಾರ್ತೆ ಮುಟ್ಟಿತು. ರಾವಣನ ವಶದಲ್ಲಿ ಹಿಂದೆ ಸೀತೆಯೂ ಇದ್ದ ವಿಷಯವನ್ನು ಒಬ್ಬ ಅಗಸನು ತುಚ್ಛವಾದ ರೀತಿಯಲ್ಲಿ ತನ್ನ ಪತ್ನಿಗೆ ತಿಳಿಸಿದ ಸಂಗತಿಯು ರಾಮನನ್ನು ಚಿಂತಾಕ್ರಾಂತನನ್ನಾಗಿ ಮಾಡಿತು. ಲೋಕಾಪವಾದಕ್ಕೆ ಹೆದರಿ ವೈದೇಹಿಯನ್ನು ತಾನು ಕೊಡಲೇ ತ್ಯಜಿಸುವ ನಿಶ್ಚಯಮಾಡಿ ನಿರಪರಾಧಿಯೂ ಪತಿವ್ರತೆಯೂ ಆದ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಬರುವಂತೆ ಲಕ್ಷ್ಮಣನಿಗೆ ಕಟ್ಟಪ್ಪಣೆ ಮಾಡಿದನು. ಆಗ ಸೌಮಿತ್ರಿಯು ತನಗಿಷ್ಟವಿಲ್ಲದಿದ್ದರೂ ವನಾಭಿಲಾಷೆಯಲ್ಲಿದ್ದ ಸೀತೆಯನ್ನು ರಥದಲ್ಲಿ ಕರೆದುಕೊಂಡು ಹೋಗಿ ವನಾಂತರದಲ್ಲಿ ಬಿಟ್ಟುಬಂದನು.

ದಿವ್ಯಜ್ಞಾನಿಗಳಾದ ವಾಲ್ಮೀಕಿ ಋಷಿಗಳು ಗರ್ಭಿಣಿಯಾದ ಸೀತೆಯನ್ನು ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋಗಿ ರಕ್ಷಿಸುತ್ತಿದ್ದರು. ಕಾಲಕ್ರಮದಲ್ಲಿ ಜಾನಕಿಗೆ ಲವಕುಶರೆಂಬ ಆವಳಿ ಮಕ್ಕಳಾದರು. ವಾಲ್ಮೀಕಿ ಮುನಿಗಳು ಈ ಲವಕುಶರನ್ನು ಸಕಲ ವಿದ್ಯಾಪಾರಂತರನ್ನಾಗಿ ಮಾಡಿದರು.

ಇತ್ತ ಶ್ರೀರಾಮನು ಆತ್ಮಶಾಂತಿಗೂ ಲೋಕಕಲ್ಯಾಣಕ್ಕೂ ಅಶ್ವಮೇಧಯಾಗವನ್ನು ಕೈಗೊಂಡು ವೈಭವದಿಂದ ಆಚರಿಸಿದನು. ಆ ಸಮಯದಲ್ಲಿ ವಾಲ್ಮೀಕಿ ಮಹರ್ಷಿಗಳು ಶ್ರೀರಾಮನಿಗೆ ಆತನ ಮಕ್ಕಳಾದ ಲವಕುಶರನ್ನು ಒಪ್ಪಿಸಿ ಅವರಿಂದ ಶ್ರೀಮದ್ರಾಮಾಯಣವನ್ನು ಗಾನ ಮಾಡಿಸಿದರು. ಆಗ ರಾಮನಿಗೆ ಅಪಾರ ಆನಂದವುಂಟಾಯಿತು. ಆದರೆ ಶ್ರೀರಾಮನ ಪಾತಿವ್ರತ್ಯ ಪರೀಕ್ಷೆಯಿಂದ ನೊಂದ ಸೀತಾಮಾತೆಯು ತನ್ನ ತಾಯಿಯಾದ ಭೋದೇವಿಯ ಬಳಿ ಹೋಗಿ ಸೇರಿಬಿಟ್ಟಳು. ಇದರಿಂದ ರಾಮಚಂದ್ರನು ಪರಿತಪಿಸಬೇಕಾಯಿತು.

ಶ್ರೀರಾಮನು ತನ್ನ ಮಕ್ಕಳಾದ ಲವಕುಶರಿಗೆ ರಾಜ್ಯಾಭಿಷೇಕಮಾಡಿ, ತಾನು ದಿವ್ಯವಾದ ವೈಕುಂಠಲೋಕಕ್ಕೆ ತೆರಳಿದನು. ಭೂಲೋಕದಲ್ಲಿ ಲೀಲಾನಾಟಕವನ್ನಾಡಿದ ಶ್ರೀ ಸೀತಾರಾಮರೇ ಶ್ರೀ ಲಕ್ಷ್ಮೀನಾರಾಯಣರಾಗಿ ಮತ್ತೆ ವೈಕುಂಠದಲ್ಲಿ ಶೋಭಿಸಿದರು. ಹೀಗೆ ದುಷ್ಟ ಶಿಕ್ಷಣ ಮತ್ತು ಶಿಷ್ಟಪರಿಪಾಲನಾರ್ಥವಾದ ಶ್ರೀರಾಮಾವತಾರವು ಕೊನೆಗೊಂಡಿತು.

ಶ್ರೀಮದ್ವಾಲ್ಮೀಕಿ ಮಹರ್ಷಿಗಳಿಂದ ರಚಿತವಾದ ಶ್ರೀಮದ್ರಾಮಾಯಣವನ್ನು ಸಂಗ್ರಹವಾಗಿಯಾದರೂ ಓದಿ ತಿಳಿದುಕೊಂಡವರೆಲ್ಲರಿಗೂ ಮಂಗಳವುಂಟಾಗುವುದು. ತನ್ನನ್ನು ನೆನೆದ ಭಕ್ತರ ಕೋರಿಕೆಗಳನ್ನು ಆ ಶ್ರೀರಾಮನು ನೆರವೆರಿಸುವನು. ಶ್ರೀ ಸೀತಾರಾಮಾಂಜನೇಯರು ನಮ್ಮೆಲ್ಲರ ಹೃದಯ ಮಂದಿರದಲ್ಲಿ ನೆಲೆಸುವಂತಾಗಲಿ.

ಶ್ರೀ ಸೀತಾರಾಮಾಂಜನೇಯರಲ್ಲಿ ಒಬ್ಬೊಬ್ಬರ ಗುಣಗಳೂ ಅಪಾರವಾಗಿ ವಾಲ್ಮೀಕಿ ರಾಮಾಯಣದಲ್ಲಿ ವರ್ಣಿತವಾಗಿವೆ. ಸೌಂದರ್ಯ, ಮಾಧುರ್ಯ, ಕ್ಷಮೆ, ವಿವೇಕ, ಧೈರ್ಯ ಮತ್ತು ಪ್ರತಿಭಕ್ತಿಗಳಿಗೆ ಪ್ರಸಿದ್ಧಳಾಗಿರುವ ಸೀತಾಮಾತೆಯನ್ನೂ, ಗುಣವಂತನೂ ವೀರ್ಯವಂತನೂ ಧರ್ಮಾತ್ಮನೂ ಸತ್ಯ ಪರಾಕ್ರಮಿಯೂ ಮತ್ತು ಜಿತೇಂದ್ರಿಯನೂ ಆದ ಶ್ರೀರಾಮಚಂದ್ರನನ್ನು ಭಕ್ತರು ಸದಾಕಾಲವೂ ನೆನೆಯುವಂತಾಗಲಿ.

ಎಲ್ಲಿ ಶ್ರೀರಾಮನಿರುವನೋ ಅಲ್ಲಿ ವಾಯುಪುತ್ರನೂ ಅಂಜನಾದೇವಿ ಸಂಜಾತನೂ ಆದ ಆಂಜನೇಯ ಸ್ವಾಮಿಯೂ ಸಿದ್ಧನಾಗಿರುವನು. ಶ್ರೀಮದ್ರಾಮಾಯಣ ನಡೆಯುವಲ್ಲಿ ಮಾರುತಿಯು ಕೈಮುಗಿದು ನಿಲ್ಲುವನು. ಶ್ರೀರಾಮ ಭಕ್ತನೂ ಮಹಾ ಜ್ಞಾನಿಯೂ ಶಕ್ತಿಸ್ವರೂಪಿಯೂ ಆದ ಶ್ರೀ ಆಂಜನೇಯ ಸ್ವಾಮಿಯನ್ನು ನೆನೆದ ಭಕ್ತರ ಇಷ್ಟಾರ್ಥವನ್ನೂ ಆತನು ಕೈಗೂಡಿಸುವನು. ಬುದ್ಧಿಯನ್ನೂ ಬಲವನ್ನೂ ಯಶಸ್ಸನ್ನೂ ಧೈರ್ಯವನ್ನೂ ಆರೋಗ್ಯವನ್ನೂ ಮತ್ತು ಜ್ಞಾನವನ್ನೂ ನೀಡುವ ಶ್ರೀ ಸೀತಾರಾಮಾಂಜನೇಯ ಸ್ವಾಮಿಯನ್ನು ಎಲ್ಲರೂ ಭಕ್ತಿಯಿಂದ ಸೇವಿಸುವಂತಾಗಲಿ.

ಶ್ರೀ ವಾಲ್ಮೀಕಿಗಿರಿಯಲ್ಲಿ ಹುಟ್ಟಿ ಶ್ರೀರಾಮ ಸಾಗರವನ್ನು ಕುರಿತು ಹರಿಯುವ ಪುಣ್ಯಪ್ರದ ಶ್ರೀಮದ್ರಾಮಾಯಣ ಮಹಾನದಿಯು ಈ ಭುವನವನ್ನು ಪವಿತ್ರವನ್ನಾಗಿ ಮಾಡಲಿ.

||ಶುಭಮಸ್ತು||


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ