ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಸುಧೇಂದ್ರ


 

ವಸುಧೇಂದ್ರರ 'ತೇಜೋ ತುಂಗಭದ್ರಾ' ಈಗ ಇಂಗ್ಲಿಷಿನಲ್ಲಿ

ನಮ್ಮ ಪ್ರಸಿದ್ಧ ಬರಹಗಾರರಾದ ವಸುಧೇಂದ್ರರ ಮತ್ತೊಂದು ಕೃತಿಯೀಗ ವಿಶ್ವವ್ಯಾಪಿಯಾಗಿದೆ.  ವಸುಧೇಂದ್ರರ 'ತೇಜೋ ತುಂಗಭದ್ರಾ' ಈಗ ಮೈತ್ರೇಯಿ ಕರ್ನೂರ್ ಅವರಿಂದ ಇಂಗ್ಲಿಷ್ ಭಾಷೆಗೆ ಅನುವಾದಗೊಂಡು ಪ್ರತಿಷ್ಠಿತ ಪೆಂಗ್ವಿನ್ ಪ್ರಕಾಶನದಿಂದ ವಿಶ್ವವ್ಯಾಪಕತೆಗೆ ಪ್ರವೇಶಿಸಿದೆ.  

ತಮ್ಮ ಸುಲಲಿತ ಕನ್ನಡ ಬರಹಗಳಿಂದ, ಚೆಂದದ ಪುಸ್ತಕಗಳ ‘ಛಂದ ಪ್ರಕಾಶನದಿಂದ’, ಅಂತೆಯೇ ತಮ್ಮ ನಿತ್ಯ ಹಸನ್ಮುಖ ಸರಳ, ಸಜ್ಜನಿಕೆ, ಸಾಂಸ್ಕೃತಿಕ ಮನೋಭಾವಗಳಿಂದ ವಿಶಿಷ್ಟರಾಗಿ ನಮ್ಮ ನಡುವೆ ಎದ್ದು ಕಾಣುವ ವಸುಧೇಂದ್ರರು 1969ರ ವರ್ಷದಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಜನಿಸಿದರು.

ವಸುಧೇಂದ್ರರು, ಇತ್ತೀಚಿನ ವರ್ಷಗಳಲ್ಲಿ ಕನ್ನಡ ಜನಮಾನಸದಲ್ಲಿ ನೆಲೆಸಿರುವ ಪರಿ ಇಂತಿದೆ:  “ಪೂರ್ಣಚಂದ್ರ ತೇಜಸ್ವಿಯವರ ನಂತರ ವಸುಧೇಂದ್ರರ ಬರಹಗಳು ವಿಶಿಷ್ಟ ಗುಣ ಮತ್ತು ಸೂಕ್ಷ್ಮತೆಯಿಂದ ಗಮನ ಸೆಳೆಯುತ್ತಿವೆ. ವಸುಧೇಂದ್ರರ ಬರಹಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಯಾವುದು ಕಥೆ? ಯಾವುದು ಕಾದಂಬರಿ ಎಂಬ ಗೊಂದಲ ಮೂಡುವುದು ಸಹಜ. ಆದರೆ ಪ್ರತಿ ಬರವಣಿಗೆಗಳೂ ಸ್ವಾರಸ್ಯಕರವಾಗಿದ್ದು, ಅನುಭವದ ಆಧಾರದಲ್ಲಿ ಅವರು ಬರೆಯುತ್ತಾರೆ. ವಸುಧೇಂದ್ರರ 'ನನ್ನಮ್ಮ ಅಂದ್ರೆ ನಂಗಿಷ್ಟ' ಎನ್ನುವ ಲಲಿತ ಪ್ರಬಂಧದ ಶೀರ್ಷಿಕೆಯ ಹಾಗೆ ತೇಜಸ್ವಿ ಬಳಿಕ ವಸುಧೇಂದ್ರ ಅಂದರೆ ನನಗಿಷ್ಟ'' ಎನ್ನುತ್ತಾರೆ ಶತಾವಧಾನಿ ಆರ್. ಗಣೇಶ್.    ಜಾನ್ ಕ್ರಾಕೌರ್ ಅವರ  ಕೃತಿಯನ್ನು  ಕನ್ನಡದಲ್ಲಿ  ತಂದಿರುವ  ವಸುಧೇಂದ್ರರ  ‘ಎವರೆಸ್ಟ್’ ಕೃತಿಯನ್ನು  ವಿಮರ್ಶಿಸಿರುವ  ರಹಮತ್ ತರೀಕೆರೆ ಅವರು  “ಹಿಮಪರ್ವತಗಳ ಚಾರಣಿಗ, ವಸುಧೇಂದ್ರ ಅವರ ಸಹಜವಾದ ಕಥನಕುಶಲತೆಯ ಕಾರಣದಿಂದ ಇದರ ಅನುವಾದವು ಕನ್ನಡ ಮೂಲದಲ್ಲಿಯೇ ಹುಟ್ಟಿರುವಂತೆ ಆಪ್ತವಾಗಿದೆ” ಎಂದು  ಬಣ್ಣಿಸಿದ್ದಾರೆ.  ರವಿ ಬೆಳಗೆರೆ ಹೇಳುತ್ತಾರೆ “..... ವಸುಧೇಂದ್ರ ನನಗಿಂತ ಸಾಕಷ್ಟು ಕಿರಿಯ. But a wonderful writer. ನೀವು ಅವನ ‘ಮೋಹನ ಸ್ವಾಮಿ’ ಕೃತಿಯನ್ನು ಓದಿದ್ದೀರಾ? Please read. ವಸುಧೇಂದ್ರ ನಿಮಗೆ ಇನ್ನೂ ಜಾಸ್ತಿ ಇಷ್ಟವಾಗುತ್ತಾನೆ.” ಸಂಧ್ಯಾ ಎಸ್. ಪೈ ಅವರು 'ತೇಜೋ ತುಂಗಭದ್ರಾ' ಕುರಿತು ಹೇಳುತ್ತಾರೆ: "ಇತಿಹಾಸದೊಳಗೊಂದು ಇಣುಕು ಹಾಕುವಂತೆ ಮಾಡುವ, ಅಪಾರ ಸಂಶೋಧನೆ, ಚಿಂತನೆ, ಸೃಜನಶೀಲತೆಗಳಿಂದ ಸಮೃದ್ಧವಾದ ಕಥಾಹಂದರವಿದು.  ಬಹುಶಃ ಜೀವಮಾನದಲ್ಲಿ ಅಪರೂಪಕ್ಕೊಮ್ಮೆ ಲಭಿಸುವ ಅನನ್ಯ, ಮಹತ್ವದ ಕಾಲಮಾನ ಕೃತಿ ಇದು."

“ತಾವು  ಇಷ್ಟೆಲ್ಲಾ  ತಂತ್ರಜ್ಞಾನದ  ಓದಿನಲ್ಲಿ  ಮುಳುಗಿ  ನಂತರ  ಹಲವು ಸಾಗರಗಳನ್ನು ದಾಟಿ  ದೇಶ ವಿದೇಶಗಳಲ್ಲಿ  ಸಾಫ್ಟ್ವೇರ್  ಉದ್ಯೋಗಿದಲ್ಲಿ  ಈಜಿದವರು.  ಈ  ಕನ್ನಡದಲ್ಲಿ  ಬರಹ   ಹೇಗೆ  ಸಾರ್?” ಅಂದ್ರೆ  ತಮ್ಮನ್ನು  ಸಾಧಾರಣವಾಗಿ  ಬಿಂಬಿಸಿಕೊಳ್ಳುವ  ಸೌಜನ್ಯಯುತ  ಹಸನ್ಮುಖದಲ್ಲಿ  ವಸುಧೇಂದ್ರ ಹೇಳುತ್ತಾರೆ  “ನನಗೆ  ಬರೋ  ಭಾಷೆ  ಕನ್ನಡ  ಒಂದೇ, ಅದು ಬಿಟ್ಟು  ಬೇರೆ  ಯಾವ  ಭಾಷೇಲಿ  ಬರೀಲಿ.  ನಾನು  ಶಾಲೆಯಲ್ಲಿ  ಓದಿದ್ದೆಲ್ಲಾ  ಕನ್ನಡದಲ್ಲೇ”.  

ಹೀಗೆ  ತಮ್ಮ  ವೃತ್ತಿಪರ  ಔನ್ನತ್ಯದ ಸಾಫ್ಟವೇರ್  ಸಾಧನೆಯ ಸಂಕೇತವನ್ನು   ಅತಿಯಾಗಿ  ತಲೆಗೇರಿಸಿಕೊಳ್ಳದೆ, ತಮ್ಮ ಬೆಳವಣಿಗೆಯ ಹಂತದ  ಕನ್ನಡತನವನ್ನು ಆಪ್ತವಾಗಿ  ಜೊತೆಗಿರಿಸಿಕೊಂಡ  ವಸುಧೇಂದ್ರರು  ಇಂಗ್ಲೆಂಡಿನಲ್ಲಿ  ಹಲವು ವರ್ಷ  ಕಾರ್ಯನಿಮಿತ್ತದಲ್ಲಿದ್ದಾಗಲೇ  ಬರೆದ  ಕಥೆ  ಪ್ರಬಂಧಗಳು  ಕನ್ನಡದ ಪ್ರಸಿದ್ಧ  ಪತ್ರಿಕೆಗಳಲ್ಲಿ  ಪ್ರಕಟವಾಗತೊಡಗಿದ್ದವು.  ಮುಂದೆ  ಅವರು  ಕನ್ನಡ  ನಾಡಿಗೆ  ಬಂದು  ತಮ್ಮ  ಬರಹಗಳನ್ನು  ಪುಸ್ತಕರೂಪದಲ್ಲಿ  ಪ್ರಕಟಪಡಿಸಲು ಪ್ರಕಾಶಕರ  ಬಳಿ ಕೋರಿಕೆ ಸಲ್ಲಿಸಿದಾಗ, ಪ್ರಕಟಿಸುವುದಿರಲಿ  ಪ್ರತಿಕ್ರಿಯೆ  ಕೂಡಾ  ಬರಲಿಲ್ಲ. ಒಂದಿಬ್ಬರು  ಪ್ರಕಾಶಕರು  ಮಾತ್ರಾ  ‘ಇಲ್ಲ’  ಎಂದು ಹೇಳಿದರೆ,  ಉಳಿದ  ಪ್ರಕಾಶಕರು  ಆ ಗೋಜಿಗೂ  ಹೋಗಲಿಲ್ಲ.   ಆದರೆ  ಪತ್ರಿಕೆಗಳಲ್ಲಿ  ಬಂದ ವಸುಧೇಂದ್ರರ ಬರಹಗಳಿಗೆ  ಅಷ್ಟು  ಹೊತ್ತಿಗಾಗಲೇ  ಬಹಳಷ್ಟು  ಹೆಸರು  ಬಂದಿತ್ತು.  ಅದರ ಆಳದ  ಅರಿವು  ವ್ಯಾಪಾರೀ ಮನೋಧರ್ಮದ  ಪುಸ್ತಕ  ಪ್ರಕಾಶಗರಿಗಿರಲಿ, ವಿದೇಶದಲ್ಲಿ  ತಮ್ಮ  ಉದ್ಯೋಗ ನಿಮಿತ್ತ  ಕಾಲ ಕಳೆದಿದ್ದ    ಸ್ವಯಂ  ವಸುಧೇಂದ್ರರಿಗೂ ಇರಲಿಲ್ಲ.   ಪುಸ್ತಕಗಳ  ಪ್ರಕಟಣೆಗೆ  ವಸುಧೇಂದ್ರರು  ಪ್ರಯತ್ನಿಸುತ್ತಿದ್ದಾರೆ  ಎಂಬುದರ  ಬಗ್ಗೆ  ಅರಿತ  ಅವರ ಹಲವು ಗೆಳೆಯರು  ಇದನ್ನು   ಅವರ  ಗಮನಕ್ಕೆ  ತಂದು,  ಸ್ವಯಂ  ವಸುಧೇಂದ್ರರೇ ಪುಸ್ತಕಗಳನ್ನು  ಪ್ರಕಟಪಡಿಸಲು  ಪ್ರೇರಣೆ ಇತ್ತರು.  ಹೀಗೆ  2004ರ  ವರ್ಷದಲ್ಲಿ  ಪ್ರಾರಂಭವಾದದ್ದು  ‘ಛಂದ ಪ್ರಕಾಶನ’.  ತಮ್ಮ ಪ್ರಕಾಶನದಿಂದಲೇ  ತಮ್ಮ ಪುಸ್ತಕಗಳನ್ನು  ಪ್ರಕಟಪಡಿಸುವಾಗ  ಅವರು ತಮ್ಮ  ಗೆಳೆಯರ ಮುಖೇನ ಮೂಡಿಸಲು  ಪ್ರಾರಂಭಿಸಿದ ಹೊಸತನವುಳ್ಳ  ಆಕರ್ಷಕ  ಪುಸ್ತಕ  ವಿನ್ಯಾಸ  ಮತ್ತು ಉನ್ನತ   ಗುಣಮಟ್ಟಗಳ ನೀಡಿಕೆಗಳು   ಕನ್ನಡ  ಪುಸ್ತಕಗಳ ಪ್ರಕಟಣಾ  ಪ್ರಪಂಚದಲ್ಲಿ  ಹೊಸ  ಹೆಜ್ಜೆ  ಮೂಡಿಸಿತು.     ಪ್ರಾರಂಭದ  ದಿನಗಳಲ್ಲಿ  ಪುಸ್ತಕ  ವಿತರಣೆಗೆ ಅವರು  ಮಾರಾಟಗಾರರ ಬಾಗಿಲಿಗೆ  ಎಡತಾಕಬೇಕಾಯಿತಾದರೂ  ಕೆಲವೇ  ದಿನಗಳಲ್ಲಿ  ವಸುಧೇಂದ್ರರಿಗಿದ್ದ  ಜನಪ್ರಿಯತೆ  ಮಾರುಕಟ್ಟೆಯಲ್ಲಿ  ಪ್ರತಿಧ್ವನಿಸತೊಡಗಿ  ಅವರ  ಪುಸ್ತಕಗಳಿಗೆ  ಬೇಡಿಕೆ ತಾನೇ   ತಾನಾಗಿ  ಹರಿದು ಬರತೊಡಗಿತು.  ಮುಂದೆ ವೃತ್ತಿಯಿಂದ  ಪ್ರವೃತ್ತಿಯ ಕಡೆಗೆ  ಮನಸ್ಸನ್ನು  ಹರಿಸಿದ  ವಸುಧೇಂದ್ರರು ಪತಿಷ್ಟಿತ ಸಾಫ್ಟ್ವೇರ್   ಉದ್ಯೋಗದಿಂದ ಹೊರಬಂದು ತಮ್ಮ  ಪ್ರೀತಿಯ  ಅಭಿವ್ಯಕ್ತಿಯಾದ  ಬರವಣಿಗೆ ಮತ್ತು  ‘ಛಂದ ಪ್ರಕಾಶನ’ದಲ್ಲಿ  ನಿರತರಾದರು.  

ವಸುಧೇಂದ್ರರ ವೈವಿಧ್ಯಪೂರ್ಣ ಬರಹಗಳಲ್ಲಿ ‘ಮನೀಷೆ’, ‘ಯುಗಾದಿ’, ‘ಚೇಳು’, ‘ಹಂಪಿ ಎಕ್ಸ್ಪ್ರೆಸ್’, 'ಮೋಹನಸ್ವಾಮಿ’, 'ವಿಷಮ ಭಿನ್ನರಾಶಿ' ಮುಂತಾದ ಕಥಾ ಸಂಕಲಗಳು; ‘ಕೋತಿಗಳು’, ‘ನಮ್ಮಮ್ಮ ಅಂದ್ರೆ ನಂಗಿಷ್ಟ’,  ‘ರಕ್ಷಕ ಅನಾಥ’, ‘ವರ್ಣಮಯ’, 'ಐದು ಪೈಸೆ ವರದಕ್ಷಿಣೆ' ಮುಂತಾದ ಲಲಿತ ಪ್ರಬಂಧಗಳು; ‘ಹರಿಚಿತ್ತ ಸತ್ಯ’ ಕಾದಂಬರಿ; ‘ಮಿಥುನ’ ಎಂಬ ಶ್ರೀರಮಣರ ಕಥೆಗಳ ಅನುವಾದ; 'ತೇಜೋ ತುಂಗಭದ್ರಾ' ಕಾದಂಬರಿ; ‘ಎವರೆಸ್ಟ್’ ಎಂಬ  ‘ಜಾನ್ ಕ್ರಾಕೌರ್  ಅವರ  ಪರ್ವತಾರೋಹಣ ಕಥನ  ಅನುವಾದ, 'ಇ-ಕಾಮರ್ಸ್' ಎಂಬ ವಿಜ್ಞಾನ ಬರಹ; 'ಅದೃಶ್ಯ ಕಾವ್ಯ' ಎಂಬ ಬ್ರೈಲ್ ಲಿಪಿಯಲ್ಲಿನ ಪುಸ್ತಕ ಮುಂತಾದವು ಸೇರಿವೆ.   ಅವರ  ಕಳೆದ  ವರ್ಷಗಳವರೆಗಿನ ಅವರ ಬರಹಗಳು   ಪುನರ್ವಸು  1 ಮತ್ತು  ಪುನರ್ವಸು 2 ಎಂಬ  ಸಂಕಲನ ರೂಪದಲ್ಲಿ ಕೂಡಾ  ಮೂಡಿಬಂದಿವೆ.    ವಸುಧೇಂದ್ರರ  ಲಲಿತ ಬರಹಗಳಾದ  ‘ಸ್ಟೈನ್ಲೆಸ್ ಸ್ಟೀಲ್  ಪಾತ್ರೆಗಳು’, 'ಶ್ರೀದೇವಿ ಮಹಾತ್ಮೆ' ಮುಂತಾದವು ರಂಗಪ್ರಯೋಗವಾಗಿ  ಜನಮೆಚ್ಚುಗೆ ಪಡೆದಿದೆ. ಅವರ ಮೋಹನಸ್ವಾಮಿ ಇಂಗ್ಲಿಷ್ ಕೃತಿಯಾಗಿ ಹಾಗೂ ಕೆಲವು ಯೂರೋಪಿಯನ್ ಬಾಷೆಗಳಲ್ಲಿ ಬಹು ಜನಪ್ರಿಯತೆ ಗಳಿಸಿದೆ.  ‘The unforgiving city and other cities’ ಅವರ ಮತ್ತೊಂದು ಪ್ರಸಿದ್ದ ಇಂಗ್ಲಿಷ್ ಸಂಕಲನ.  ಅವರ ಅನೇಕ ಕೃತಿಗಳು ಇತರ ಬಾಷಾ ಆವೃತ್ತಿಗಳಲ್ಲಿ ಅನುವಾದಗೊಂಡಿವೆ. ಮೋಹನಸ್ವಾಮಿ ಕೂಡಾ ಯಶಸ್ವೀ ರಂಗಪ್ರಯೋಗ ನಡೆಸಿದೆ.

ವಸುಧೇಂದ್ರರ  ‘ಛಂದ ಪ್ರಕಾಶನದ’  ಹೆಗ್ಗಳಿಕೆ  ವಸುಧೇಂದ್ರರ  ಕೃತಿಗಳ  ಪ್ರಕಟಣೆಯ ಜೊತೆಗೆ  ಅವರು  ಯುವ ಬರಹಗಾರರಿಗೆ  ನೀಡುತ್ತಿರುವ  ಪ್ರೋತ್ಸಾಹಗಳಲ್ಲಿದೆ.  ಅವರು ಯುವ ಬರಹಗಾರರ  ಕೃತಿಗಳನ್ನು  ಪ್ರಕಟಿಸುತ್ತಿರುವುದರ ಜೊತೆ   ಜೊತೆಗೆ  ಪ್ರತೀ ವರ್ಷ  ಆಯ್ದ  ನವ  ಪ್ರತಿಭಾನ್ವಿತರ  ಬರಹಗಳಿಗೆ  ‘ಛಂದ  ಪುಸ್ತಕ  ಬಹುಮಾನ’ವನ್ನು  ಸಹಾ  ನೀಡುತ್ತಾ  ಬಂದಿದ್ದಾರೆ.  ಹೀಗೆ  ಅವರು ಈಗಾಗಲೇ ತಮ್ಮ  ಬರಹಗಳ  ಹೊರತಾಗಿ  ಪ್ರಕಟಿಸಿರುವ  ಯುವ ಬರಹಗಾರರ  ಕೃತಿಗಳೇ ಸುಮಾರು ನೂರರಷ್ಟು.  ಅವರು  ತಮ್ಮ  ‘ಛಂದ  ಪ್ರಕಾಶನ’ದ  ಮೂಲಕ ಕೇವಲ  ಯುವಬರಹಗಾರರ  ಕೃತಿಗಳನ್ನು ಮಾತ್ರಾ  ಪ್ರಕಟಿಸುವ  ಸಂಕಲ್ಪಕ್ಕೆ  ಬದ್ಧರಾಗಿದ್ದಾರೆ.

ವಸುಧೇಂದ್ರರು ಬರವಣಿಗೆ  ಮತ್ತು  ಪ್ರಕಾಶನ ಚಟುವಟಿಕೆಗಳ  ಜೊತೆ  ಜೊತೆಗೆ  ತಮ್ಮ ಇತರ   ಜೀವನ ಪ್ರೀತಿಗಳಾದ ಅಪರಿಮಿತ  ಓದು,  ವಿಶ್ವದ  ಶ್ರೇಷ್ಠ  ಸಿನಿಮಾ  ವೀಕ್ಷಣೆ,  ರಂಗಾಸಕ್ತಿ, ಚಾರಣ, ಕ್ರೀಡೆ, ಸಂಗೀತ, ಸೃಜನಶೀಲ  ಮನೋಭಾವದ ಸಾಹಿತ್ಯ  ಚರ್ಚೆ, ಕಥಾ ಕಮ್ಮಟಗಳಲ್ಲಿ ಮಾರ್ಗದರ್ಶನ, ಜನಸಮುದಾಯದೊಡನೆ ಸಾಂಸ್ಕೃತಿಕ ಸಂಪರ್ಕ, ವಾರಾಂತ್ಯಗಳಲ್ಲಿ ಬೋಧನೆ,  ಮಾನಸಿಕ  ಒತ್ತಡದಿಂದ  ಬಳಲುವರಿಗಾಗಿ ಸಾಂತ್ವನದ  ಮಾರ್ಗದರ್ಶನ  ಹೀಗೆ ಹಲವು ನಿಟ್ಟಿನಲ್ಲಿ ತಮ್ಮ ಲವಲವಿಕೆಯ ಬದುಕನ್ನು ತಮ್ಮ ಜೊತೆಗಿರಿಸಿಕೊಂಡಿದ್ದಾರೆ.  ಬೇಡದ್ದನ್ನು ಬಿಟ್ಟಿದ್ದಾರೆ.  ಅವುಗಳಲ್ಲಿ ಪ್ರಮುಖವಾದುದೆಂದರೆ “ಕಳೆದ 20 ವರ್ಷಗಳಿಂದ ಟಿ.ವಿ. ನೋಡುವುದಿಲ್ಲ ಎಂಬ ನಿರ್ಧಾರವನ್ನು ಪಾಲಿಸಿಕೊಂಡು ಬಂದಿರುವುದು”.  

ವಸುಧೇಂದ್ರರ  ಓದಿನ  ಆಳ  ಅಪರಿಮಿತವಾದದ್ದು.  ಕೆಲವು  ದಿನಗಳ  ಹಿಂದೆ  ನಾನು ತೇನ್ಸಿಂಗ್  ಕುರಿತು  ಮೂಡಿಸಲು  ಯತ್ನಿಸಿದ  ಲೇಖನವನ್ನು  ಅವರ  ಮುಂದಿರಿಸಿದಾಗ  ಅವರು  ಅದರ  ಹಿನ್ನೆಲೆಯಲ್ಲಿ  ನೀಡಿದ  ಸಮಸ್ತ  ಪರ್ವತಾರೋಹಣದ  ಕುರಿತಾದ  ಅಧ್ಯಯನಪೂರ್ಣ  ಹಿನ್ನೆಲೆಯ ವಿಚಾರಗಳು  ನನ್ನನ್ನು  ದಂಗುಬಡಿಸುವಷ್ಟು  ವ್ಯಾಪ್ತಿಯದ್ದಾಗಿದ್ದವು.  ಹೀಗೆ  ಸಮಸ್ತವನ್ನೂ  ಅತ್ಯಂತ  ವ್ಯವಸ್ಥಿತ  ಅಧ್ಯಯನದ  ಹಿನ್ನೆಲೆಯಲ್ಲಿ  ಅವರು  ಕಾಣುತ್ತಾರೆ.   ಶ್ರೇಷ್ಠ  ಓದನ್ನು  ಬಯಸುವವರಿಗೆ  ಅವರು ನೀಡುವ ಕೃತಿ   ಮಾರ್ಗದರ್ಶನ  ಅತ್ಯಂತ  ಉಪಯುಕ್ತ.  ವಿದೇಶದಲ್ಲಿ  ತಾವು  ಇದ್ದ  ಸಮಯದಿಂದ    ವಿಶ್ವದ  ಶ್ರೇಷ್ಠ  ಚಲನಚಿತ್ರಗಳನ್ನು  ವೀಕ್ಷಿಸುವ  ಹವ್ಯಾಸವುಳ್ಳ ವಸುಧೇಂದ್ರರು  ಆ  ಹವ್ಯಾಸ  ತಮ್ಮ  ಕ್ರಿಯಾತ್ಮಕ  ಬದುಕಿನಲ್ಲಿ  ತುಂಬಿರುವ  ಶಕ್ತಿ ಅಗಾಧವಾದದ್ದು  ಎಂಬುದನ್ನೂ  ಕಂಡುಕೊಂಡಿದ್ದಾರೆ.  ಹಲವಾರು  ಪ್ರಸಿದ್ಧ  ಚಲನಚಿತ್ರ  ನಿರ್ದೇಶಕರು  ತಮ್ಮ  ಚಿತ್ರಕಥಾ ಹಂದರ ನಿರ್ಮಾಣ  ಸಮಯದಲ್ಲಿ  ವಸುಧೇಂದ್ರರ  ಪಾಲ್ಗೊಳ್ಳುವಿಕೆಯ  ಲಾಭವನ್ನು  ಪಡೆಯುವುದಿದೆ.

ಕ್ರೀಡಾಪರ  ಮನೋಭಾವ ಮತ್ತು  ನಿರಂತರ  ಶಿಸ್ತುಬದ್ಧ ನಡೆ, ಓಟ, ಆಟ, ಚಾರಣ ಮುಂತಾದವು      ವಸುಧೇಂದ್ರರ  ಬದುಕಿನ  ಅವಿಭಾಜ್ಯ  ಅಂಗಗಳಾಗಿವೆ.  ಚಾರಣದಲ್ಲಂತೂ  ವಿಶೇಷ  ಆಸಕ್ತಿ ಇರುವ  ವಸುಧೇಂದ್ರರು ನಮ್ಮ  ಪಶ್ಚಿಮ ಘಟ್ಟದ  ಕಾಡಿನಲ್ಲಿರುವ  ಹಲವು ಬೆಟ್ಟಗಳನ್ನೂ,  ತಾಂಜಾನಿಯಾ ದೇಶದಲ್ಲಿರುವ  ಕಿಲಿಮಂಜಾರೋ ಪರ್ವತವನ್ನೂ ಮತ್ತು  ಹಿಮಾಲಯದಲ್ಲಿರುವ  ಹಲವಾರು  ಪರ್ವತಗಳನ್ನೂ  ಹತ್ತಿದ್ದಾರೆ.  ಟಿಬೇಟಿನಲ್ಲಿರುವ  ಕೈಲಾಶ  ಮತ್ತು  ಮಾನಸ ಸರೋವರದ  ಚಾರಣವನ್ನೂ  ಮಾಡಿದ್ದಾರೆ.  ಸ್ಕ್ವಾಷ್ ಆಟ,  ಮಹಾಭಾರತದ  ಅಧ್ಯಯನ ಮತ್ತು  ಶಾಸ್ತ್ರೀಯ  ಸಂಗೀತವನ್ನು  ಕೇಳುವುದು  ಅವರ  ಪ್ರಮುಖ  ಆಸಕ್ತಿಗಳಲ್ಲಿ  ಸೇರಿವೆ.    ‘ಮನಃಶಾಸ್ತ್ರ  ಮಾರ್ಗದರ್ಶನ’ದಲ್ಲಿ  ತರಬೇತಿಯನ್ನೂ  ಪಡೆದಿರುವ  ವಸುಧೇಂದ್ರರ  ಮಾರ್ಗದರ್ಶನದ ಲಾಭವನ್ನು,   ವಿವಿಧರೀತಿಯ  ಬದುಕಿನ  ಒತ್ತಡಗಳಿಗೆ  ಸಿಲುಕಿ ಮಾನಸಿಕವಾಗಿ  ಬಳಲಿದವರು  ಪಡೆದುಕೊಂಡಿದ್ದಾರೆ.   ವಸುಧೇಂದ್ರರ ಈ  ಮಾರ್ಗದರ್ಶನದ  ಲಾಭವನ್ನು  ತನ್ನ ಉದ್ಯೋಗಿಗಳಿಗೆ  ಒದಗಿಸಲು  ಅನೇಕ  ಸಂಸ್ಥೆಗಳು ಸಹಾ   ಅವರನ್ನು  ಆಹ್ವಾನಿಸುತ್ತಿವೆ.     

ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ದ. ರಾ. ಬೇಂದ್ರೆ ಕಥಾ ಪ್ರಶಸ್ತಿ, ಮಾಸ್ತಿ ಕಥಾ ಪುರಸ್ಕಾರ, ಯು. ಆರ್. ಅನಂತಮೂರ್ತಿ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ವಸುಧೇಂದ್ರರನ್ನರಸಿ ಬರುತ್ತಿವೆ.  

ವಸುಧೇಂದ್ರರ ಮತ್ತೊಂದು ಕೃತಿ  'ತೇಜೋ ತುಂಗಭದ್ರಾ' ಇದೀಗ ವಿಶ್ವವ್ಯಾಪಕತೆ ಪಡೆದಿರುವುದು ಕನ್ನಡಿಗರಾದ ನಮ್ಮೆಲ್ಲರ ಹೆಮ್ಮೆ ಕೂಡಾ ಹೌದು.  ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 

Vasudhendra Sir’s 'Tejo Tungabhadra' in English now

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ