ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸ್ವಾಮಿ ರಾಮತೀರ್ಥ


 ಸ್ವಾಮಿ  ರಾಮತೀರ್ಥರು 


ಸ್ವಾಮಿ ರಾಮತೀರ್ಥರು ಮಹಾನ್ ಸಂತರಲ್ಲಿ ಒಬ್ಬರು.

ಸ್ವಾಮಿ ರಾಮತೀರ್ಥರು 1873ರ  ಅಕ್ಟೊಬರ್ 22ರಂದು  ಈಗಿನ ಪಾಕಿಸ್ತಾನಕ್ಕೆ ಸೇರಿದ ಗುಜ್ರನ್ ವಾಲಾ ಎಂಬಲ್ಲಿ ಜನಿಸಿದರು.

"ನನ್ನ ಅಂತರಾಳದಲ್ಲಿರುವುದು ಎಲ್ಲರ ಆತ್ಮ. ನಾನು ನಡೆಯುವಾಗ ಭಾರತ ನಡೆಯುತ್ತಿದೆ ಎಂಬ ಭಾವನೆ ನನ್ನಲ್ಲಿ ಮೂಡುತ್ತದೆ. ನಾನು ಮಾತನಾಡುವಾಗ ಭಾರತ ಮಾತನಾಡುತ್ತಿದೆ ಎಂದೆನ್ನಿಸುತ್ತದೆ. ನಾನು ಉಸಿರಾಡುವಾಗ ಭಾರತ ಉಸಿರಾಡುತ್ತಿದೆ  ಎನಿಸುತ್ತದೆ. ನಾನೇ ಭಾರತ’!   ಇದು ಸ್ವಾಮಿ ರಾಮತೀರ್ಥರ ನುಡಿ.  ಕೇವಲ 33 ವರ್ಷ ಬಾಳಿ, ಅಗಾಧವಾದ ಅನುಭವ ಭಂಡಾರವನ್ನು ಉಪನ್ಯಾಸ ಮಾಲೆಯಾಗಿ ನೀಡಿ ಆಸಕ್ತರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವವರು ಸ್ವಾಮಿ ರಾಮತೀರ್ಥರು. ಅವರು ಪ್ರಸ್ತುತ ಪಡಿಸಿದ ಪ್ರಾಯೋಗಿಕ ವೇದಾಂತದ ಕ್ರಿಯಾಶೀಲ ಭಾವನೆಗಳು ಅಂದಿಗೂ, ಇಂದಿಗೂ ಪ್ರಸ್ತುತವಾದ ನಿತ್ಯಸತ್ಯ ತತ್ತ್ವಗಳೆನಿಸಿವೆ.

ಸ್ವಾಮಿ ರಾಮತೀರ್ಥರ ಅನುಭಾವಗಳು  ಕನ್ನಡದಲ್ಲಿ ‘ಪರಮಾತ್ಮನ ಅನುಭವದ ಮಹಾರಣ್ಯಗಳಲ್ಲಿ’ ಎಂಬ ಶೀರ್ಷಿಕೆಯಲ್ಲಿ ಶ್ರೀಮೂರ್ತಿ ಅವರಿಂದ ಪ್ರಕಟವಾಗಿತ್ತು. ಇದರ ಮೊದಲ ಆವೃತ್ತಿ ಹೊರಬಂದದ್ದು 1966ರಲ್ಲಿ. 
ಇತ್ತೀಚಿನ ವರ್ಷಗಳಲ್ಲಿ ಬಂದ 'ಪರಮಾತ್ಮಅನುಭವದ ಮಹಾರಣ್ಯಗಳಲ್ಲಿ’ ಕೃತಿಯು ಮೂರು  ವಿಭಾಗಗಳನ್ನು ಹೊಂದಿದೆ. ಮೊದಲ ಭಾಗ  'ಒಳಗಿನ ಧ್ರುವತಾರೆ', ಎರಡನೆಯದ್ದು 'ಶಕ್ತಿಯ ಕಾರಂಜಿ, ಚಿಲುಮೆ, ಉಗಮ' ಮತ್ತು ಮೂರನೇ ಭಾಗ  'ಆತ್ಮಾನುಭವದ ಸಾಧನಗಳು'.  

ಸುಖವು ಹೊರಗಿಲ್ಲ ನಮ್ಮೊಳಗೇ ಇದೆ, ಯಶಸ್ಸಿನ ರಹಸ್ಯ- ಕಾರ್ಯಸಿದ್ಧಿಯ ಗುಟ್ಟು, ಎಲ್ಲ ಬಯಕೆಗಳು ಸಫಲಗೊಳ್ಳುವ ಹಾದಿ, ಜಯಶಾಲಿಯಾಗುವ ಅಧ್ಯಾತ್ಮ ಶಕ್ತಿ, ಶಾಶ್ವತ ಜೀವನದ ನಿಯಮ, ಪ್ರೇಮದ ಸಮರ್ಪಣ ಭಾವ ಮುಂತಾದ ಸರಳ ಸ್ಪೂರ್ತಿದಾಯಕ ವಿಷಯಗಳು ರಾಮತೀರ್ಥರ ಬೋಧೆಗಳಲ್ಲಿವೆ. ಜಪಾನ್, ಅಮೆರಿಕ ಸೇರಿ ಹಲವು ದೇಶಗಳಲ್ಲಿ ನೀಡಿದ ಉಪನ್ಯಾಸ ಮಾಲಿಕೆಗಳ ಸಂಕಲನ ಮೇಲ್ಕಂಡ ಗ್ರಂಥಗಳಲ್ಲಿದೆ. ಪ್ರತಿಯೊಂದು ಉಪನ್ಯಾಸದ ಆರಂಭದಲ್ಲಿ ದೇಶ, ಸ್ಥಳ ಮತ್ತು ದಿನಾಂಕಗಳ ಮಾಹಿತಿ ಇದೆ. ಅವರ ಸುದೀರ್ಘವಾದ ಉಪನ್ಯಾಸಗಳಲ್ಲಿ ಬರುವ ಕಥೆಗಳು ಅದ್ಭುತ ಎನಿಸುವಂಥವು.  ಒಂದು ಮಗು ತನ್ನ ನೆರಳನ್ನು ಹಿಡಿಯಲು ಕಷ್ಟ ಪಡುತ್ತದೆ. ಅದನ್ನು ಹಿಡಿಯಲು ಮುಂದೆ ಹೋದರೆ ನೆರಳು ಕೂಡ ಮುಂದೋಡುತ್ತದೆ! ಪಕ್ಕಕ್ಕೆ ತಿರುಗಿದರೆ ನೆರಳು ಕೂಡ ತಿರುಗುತ್ತದೆ. ಇದನ್ನು ಕಂಡ ತಾಯಿ ಮಗುವಿನ ಕೈಯನ್ನು  ಮೇಲಿಡಿಸುತ್ತಾಳೆ. ಆಗ ಮಗು ತನ್ನ ನೆರಳಿನ ತಲೆಯನ್ನು ಹಿಡಿದುಕೊಂಡು ಸಂತಸಪಡುತ್ತದೆ. ‘ಸುಖ ಎಂಬ ನೆರಳನ್ನು ಹಿಡಿಯಲು ಹೋದರೆ ಹೀಗೆ ಆಗುವುದು. ಸುಖದ ಪರಿಕಲ್ಪನೆ ಎಂದರೆ ಹೀಗೆ. ನೀ ಬೆನ್ನಟ್ಟಿದಷ್ಟು ಅದೂ ಮುಂದೋಡುತ್ತದೆ. ನಿನ್ನ ನೀ ಹಿಡಿದರೆ ಅದೇ ನಿನ್ನ ಕೈಯಲ್ಲಿರುತ್ತದೆ’ ಎಂಬುದನ್ನು ಈ ಕಥೆೆಯ ಮೂಲಕ ಅದ್ಭುತವಾಗಿ ನಮಗೆ ದಾಟಿಸುತ್ತಾರೆ ಸ್ವಾಮಿ ರಾಮತೀರ್ಥರು.

ರಾಮತೀರ್ಥರ ನಡೆ-ನುಡಿ ಹಾಗೂ ಮಾತುಗಳನ್ನು ಗಾಂಧಿ, ಮದನಮೋಹನ ಮಾಳವೀಯ ಮುಂತಾದ ಮಹನೀಯರು  ಮನದುಂಬಿ ಆರಾಧಿಸಿದ್ದರು. 1920ರ ದಶಕದಲ್ಲೇ ‘ಕರ್ನಾಟಕದ ಗಾಂಧಿ’ ಹರ್ಡೆಕರ್ ಮಂಜಪ್ಪ ಅವರು ಸ್ವಾಮಿ ರಾಮತೀರ್ಥರ ಉಪನ್ಯಾಸಗಳನ್ನು ಕನ್ನಡದಲ್ಲಿ ಭಾಷಾಂತರಿಸಿ ಪ್ರಕಟಿಸಿದ್ದರು.

'ತೀರ್ಥರಾಮರು ಅದ್ವೈತ ವೇದಾಂತದ ಉಜ್ವಲ ದೀಪದಾರಿಗಳಾಗುತ್ತಾರೆ’ ಎಂದು ಭವಿಷ್ಯ ನುಡಿದಿದ್ದು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು. ‘ನೈಜ ಆತ್ಮವೇ ಸ್ವಾಮಿ ರಾಮತೀರ್ಥರಾಗಿ ಮೈವೆತ್ತಿದೆ’ ಎಂದವರು ಭಗವಾನ್ ರಮಣ ಮಹರ್ಷಿಗಳು!

ಸ್ವಾಮಿ  ರಾಮತೀರ್ಥರು ಇಹಲೋಕದ ಯಾತ್ರೆಯನ್ನು ಮುಗಿಸಿದ್ದು 1906 ವರ್ಷದ ಅಕ್ಟೊಬರ್ 17ರಂದು. ಈ ಮಹಾನ್  ತೇಜಸ್ವಿಗೆ ನಮನ.

On the birth anniversary of great philosopher Swami Rama Tirtha 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ