ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಶ್ಫಾಕುಲ್ಲಾ ಖಾನ್


 ಅಶ್ಫಾಕುಲ್ಲಾ ಖಾನ್ 


ಅಶ್ಫಾಕುಲ್ಲಾ ಖಾನ್ ಎಳೆಯ ವಯಸ್ಸಿನಲ್ಲೇ ದೇಶದ ಸ್ವಾತಂತ್ರ್ಯಕ್ಕೆ ನೇಣಿಗೆ ಗುರಿಯಾದ ಮಹಾನ್ ದೇಶಭಕ್ತ ಕ್ರಾಂತಿಕಾರಿ ಹೋರಾಟಗಾರ. 

ಅಶ್ಫಾಕುಲ್ಲಾ ಖಾನ್ ಅವರು 1900ರ ಅಕ್ಟೊಬರ್ 22ರಂದು ಜನಿಸಿದರು.

ಆಗಸ್ಟ್ 9 , 1925  ಭಾರತದ ಕ್ರಾಂತಿಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾದ ಕಾಕೋರಿ ಪ್ರಕರಣದ ದಿನ. ಅಂದಿನ ದಿನದಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಕೆಲವು ನಾಯಕರು ಸೇರಿ 'ಹಿಂದುಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್' ಸ್ಥಾಪಿಸಿಕೊಂಡಿದ್ದರು.  ಆಂಗ್ಲರು ಈ  ಸಮಿತಿಯ ಕುರಿತು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ.  

ರಾಮಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕುಲ್ಲಾ ಖಾನ್ ಆಪ್ತ ಗೆಳೆಯರು.  ಅಶ್ಫಾಕ್  ಉತ್ತರಪ್ರದೇಶದ ಷಹಜಹಾನ್ ಪುರದವನು. ರಾಮ್ ಪ್ರಸಾದ್ ಬಿಸ್ಮಿಲ್ ಅಂತೆಯೇ ಅಶ್ಫಾಕ್  ಕೂಡಾ ಕವಿಯಾಗಿದ್ದ.  ಉರ್ದುವಿನಲ್ಲಿ  ಅತ್ಯಂತ ಉದ್ಬೋಧಕ ದೇಶಭಕ್ತಿ ಗೀತೆಗಳನ್ನು ಬರೆದ ಕವಿಯಾತ.

ದೇಶದ ಸ್ವಾತಂತ್ರ್ಯಕ್ಕಾಗಿ ಶಾಂತವಾಗಿದ್ದ ಕ್ರಾಂತಿಯನ್ನು ಮತ್ತೆ ಭುಗಿಲೆಬ್ಬಿಸಬೇಕೆಂದು  ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಗೆಳೆಯರು ನಿರಂತರ ಚಿಂತಿಸುತ್ತಿದ್ದರು. ಕ್ರಾಂತಿಕಾರಿ ಸಂಘಟನೆಗಾಗಿ ಜರ್ಮನಿಯಿಂದ  ಶಸ್ತ್ರಾಸ್ತ್ರ ಕೊಳ್ಳಲು ಈ ಯುವಕರು  ಹೆಣೆದ ತಂತ್ರವೇ, 'ಕಾಕೋರಿ' ಪ್ರಕರಣ.

ಷಹಜಹಾನ್ ಪುರದಿಂದ, ಲಕ್ನೋವರೆಗೆ ಹೊರಡುತ್ತಿದ್ದ ರೈಲಿನಲ್ಲಿ, ಪ್ರತಿನಿತ್ಯ ಬ್ರಿಟಿಷರು ತಾವು, ಬಡಭಾರತೀಯರನ್ನು ಹೆದರಿಸಿ ವಸೂಲಿ ಮಾಡಿದ ಹಣವನ್ನು ಸಾಗಿಸುತ್ತಿದ್ದರು. ಸುಮಾರು ಹತ್ತು ಸಾವಿರಕ್ಕೂ ಮೀರಿದ ಹಣ ದಿನಾ ಆಂಗ್ಲರ ಪಾಲಾಗುತ್ತಿತ್ತು. 

ರಾಮಪ್ರಸಾದ್, ಅಶ್ಫಾಕ್, ಶಚಿಂದ್ರನಾಥ್ ಬಕ್ಷಿ, ರಾಜೇಂದ್ರ ಲಾಹಿರಿ, ಥಾಕೂರ್ ರೋಶನ್ ಸಿಂಹ, ಮುಕುಂದೀಲಾಲ್, ಮನ್ಮಥನಾಥ್ ಗುಪ್ತ, ಮತ್ತು ಆಜಾದ್, ಇವರೆಲ್ಲರನ್ನು ಒಳಗೊಂಡ ಒಂದು ತಂಡ ತಯಾರಾಯಿತು.

ಲಕ್ನೋದ ಹತ್ತಿರ  ‘ಕಾಕೋರಿ’ ಎಂಬ ಒಂದು ಸ್ಟೇಷನ್. ಅದು ನಿರ್ಜನ ಪ್ರದೇಶ. ಸುತ್ತಲೂ ಮರ-ಗಿಡ ಪೊದೆಗಳು ಬಹಳಷ್ಟು  ಬೆಳೆದಿದ್ದರಿಂದ ಬಿಸ್ಮಿಲ್ ಆ ಪ್ರದೇಶವನ್ನು ತನ್ನ ಕಾರ್ಯಾಚರಣೆಗೆ ಆಯ್ದುಕೊಂಡರು. ಆಗಸ್ಟ್ 8ರಂದು, ಎಲ್ಲರೂ ತಮ್ಮ ರಹಸ್ಯ ಸ್ಥಳಗಳಿಂದ ಕಾಕೋರಿ ರೈಲುನಿಲ್ದಾಣ ತಲುಪಿದರು. ಅವರು ದರೋಡೆ ಮಾಡಬೇಕಿದ್ದ ಏಯ್ಟ್ ಡೌನ್ ರೈಲು ಕೂಡಲೇ ಬಂದೇಬಿಟ್ಟಿತು. ನೋಡನೋಡುತ್ತಲೇ ಲಕ್ನೋಗೆ ಹೊರಟೇ ಹೋಯಿತು. ಅಂದು  ಕ್ರಾಂತಿಕಾರಿಗಳು 10 ನಿಮಿಷ ತಡವಾಗಿ ಬಂದಿದ್ದರಿಂದ ಈ ಪ್ರಮಾದವಾಗಿತ್ತು. ನಿರಾಶೆಯಿಂದ ಹಿಂತಿರುಗಿದ ಅವರು, ಮರುದಿನಕ್ಕೆ ಹೊಸಯೋಜನೆಯನ್ನು ಮಾಡಿದರು.

ಆಗಸ್ಟ್ 9ರಂದು ಈ ತಂಡದ ಎಲ್ಲರೂ, ಲಕ್ನೋ  ತಲುಪಿ, ಅಲ್ಲಿಂದಲೇ ಆ ರೈಲನ್ನು ಹತ್ತಿ ಕುಳಿತರು. ಕಾಕೊರಿಯ ನಿಲ್ದಾಣ ಬರುತ್ತಲೇ, ಪೂರ್ವನಿರ್ಧಾರದಂತೆ ಶಚಿಂದ್ರ ರೈಲಿನ ಸರಪಳಿ ಎಳೆದ. ಹೊರಗಡೆ ದಟ್ಟ ಕತ್ತಲು. ಎಲ್ಲರೂ ಏನಾಗುತ್ತಿದೆ ಅಂದುಕೊಳ್ಳುವಷ್ಟರಲ್ಲೇ, ಬಿಸ್ಮಿಲ್  ಸೂಚನೆಯಂತೆ ಎಲ್ಲ ಕ್ರಾಂತಿಕಾರಿಗಳೂ ಕೆಳಗಿಳಿದು, ಗಾರ್ಡ್ ಡಬ್ಬಿಯೊಳಗೆ ನುಗ್ಗಿ ಅಲ್ಲಿದ್ದ ಹಣದ ಸಂದೂಕನ್ನು ಕೆಳಗಿಳಿಸಿದರು. ಉಪಾಯ ಫಲಿಸಿತ್ತು. ಆಂಗ್ಲರು ಉಪೇಕ್ಷೆ ಮಾಡಿದ್ದ  ಈ ಯುವಕರು, ಒಂದೇ ರಾತ್ರಿ ಬ್ರಿಟಿಷ್  ಪ್ರಭುತ್ವಕ್ಕೆ  ನಡುಕ ಹುಟ್ಟಿಸುವ  ಸಾಹಸ ಮಾಡಿಬಿಟ್ಟಿದ್ದರು. 

ಆದರೆ ಸರ್ಕಾರ ಎಚ್ಚೆತ್ತು, ತ್ವರಿತಗತಿಯಲ್ಲಿ ಹುಡುಕಾಟ ನಡೆಸಿತು.  ದೇಶದ್ರೋಹಿಗಳ ಕುಯುಕ್ತಿಗಳಿಂದ ಬಿಸ್ಸ್ಮಿಲ್ ಕೂಡಲೇ ಸಿಕ್ಕಿಬಿದ್ದರು. ಉಳಿದ ಕೆಲವರು ಕಾಶಿಗೆ ಓಡಿಹೋದರು. ಆದರೆ ಕಾಶಿಯ ಪೊಲೀಸರಿಗೆ ಮೊದಲಿಂದಲೂ ಇವರ ಬಗ್ಗೆ ಅನುಮಾನ ಇದ್ದಿದ್ದರಿಂದ ವಿಚಾರಣೆ ನಡೆಸಿದರು. ಮನ್ಮಥನಾಥ್ ಗುಪ್ತ, ಸುರೇಶ ಭಟ್ಟಾಚಾರ್ಯ ಬಂಧನಕ್ಕೊಳಗಾದರು. ಮನ್ಮಥನಾಥನಿಗೆ 12 ವರ್ಷ ಶಿಕ್ಷೆ ಆಯಿತು. ರಾಜೇಂದ್ರ ಲಾಹಿರಿ, ಬಾಂಬ್ ತರಬೇತಿಗಾಗಿ ಕಲ್ಕತ್ತೆಗೆ ಹೋಗಿದ್ದರಿಂದ ಅವನ ಸುಳಿವು ಸಿಗಲಿಲ್ಲ.

ಇತ್ತ ಅಶ್ಫಾಕ್ ದಿಲ್ಲಿಯಲ್ಲಿ ತಲೆಮರೆಸಿಕೊಂಡಿದ್ದಾಗ, ಮಿತ್ರದ್ರೋಹಿಯಿಂದ ಬಂಧನಕ್ಕೆ ಒಳಗಾಗಿ, ಲಕ್ನೋ  ಸೆರೆಮನೆಗೆ ಬಂದಿದ್ದ. ಬ್ರಿಟಿಷರ ಎಲ್ಲ ಹಿಂಸೆಗಳನ್ನೂ ನಗುತ್ತಲೇ ಸಹಿಸಿಕೊಂಡಿದ್ದ. ಅವನ ಮತ್ತು ಬಿಸ್ಮಿಲ್ಲನ ಸ್ನೇಹ ಎಷ್ಟಿತ್ತೆಂದರೆ, ಕೊನೆಗೆ ಸಾವಿನಲ್ಲಿಯೂ ಅವರಿಬ್ಬರೂ ಒಂದಾದರು.

ಇಬ್ಬರೂ ಬೇರೆ ಬೇರೆ ಜೈಲಿನಲ್ಲಿದ್ದಾರೂ 1927 ವರ್ಷದ ಡಿಸೆಂಬರ್ 19ರಂದು ಇಬ್ಬರನ್ನೂ ನೇಣಿಗೆ ಹಾಕಲಾಯಿತು. 

ಕೇವಲ 27ರ ತಾರುಣ್ಯದಲ್ಲಿ ದೇಶಕ್ಕಾಗಿ   ನೇಣಿಗೆ ಕುತ್ತಿಗೆ ನೀಡಿದ  ಅಶ್ಫಾಕುಲ್ಲಾ ಖಾನ್ "ದೇಶಭಕ್ತಿ ತನ್ನ ಜೊತೆಗೆ ಎಲ್ಲ ರೀತಿಯ ವಿಪತ್ತು ಮತ್ತು ದುಃಖಗಳನ್ನು ಇಟ್ಟುಕೊಂಡಿರುತ್ತೆ.  ಆ ದೇಶಭಕ್ತಿಯ ಮಾರ್ಗವನ್ನು ಅನುಸರಿಸುವುದು ಕ್ರಾಂತಿಕಾರಿಗೆ ಮಾತ್ರವೇ ಸಾಧ್ಯ.  ನನ್ನ ದೇಶದ ಮೇಲಿನ ಪ್ರೀತಿಯಿಂದ ಎಲ್ಲ  ಕಷ್ಟಗಳನ್ನೂ  ಸಂತೋಷದಿಂದ ಅನುಭವಿಸುತ್ತಿದ್ದೇನೆ. ನನ್ನ ಒಂದೇ ಒಂದು ಕನಸೆಂದರೆ, ನನ್ನ ದೇಶ ಬಿಡುಗಡೆಯಾಗುವವರೆಗೂ ಯುವಕರು ಇದೇ ರೀತಿ ಹೋರಾಟವನ್ನು  ಮುಂದುವರೆಸಿ ದೇಶಕ್ಕಾಗಿ ಜೀವವನ್ನು  ಮುಡಿಪಿಡಬೇಕು" ಎಂದು ನುಡಿದಿದ್ದ.  ಈ ಮಹಾನ್ ಚೇತನಕ್ಕೆ ನಮನ.

On the birth anniversary of great freedom fighter Ashfaqulla Khan 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ