ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಿ.ಎನ್. ರಾಮಚಂದ್ರನ್

 


ಜಿ.ಎನ್. ರಾಮಚಂದ್ರನ್

ಜಿ. ಎನ್. ರಾಮಚಂದ್ರನ್ ಪ್ರಸಿದ್ಧ ಭೌತವಿಜ್ಞಾನಿ.  ಭೌತಶಾಸ್ತ್ರ ಮತ್ತು ಜೀವಶಾಸ್ತ್ರಗಳಲ್ಲಿ ಬಹು ಅಮೂಲ್ಯ ಕೊಡುಗೆಗಳಿಗೆ ವಿಶ್ವಮಾನ್ಯರಾದ ರಾಮಚಂದ್ರನ್ ನೊಬಲ್ ಪ್ರಶಸ್ತಿಗೆ ಬಹು ಹತ್ತಿರದಲ್ಲಿದ್ದವರು.

ಗೋಪಾಲಸಮುದ್ರಂ ನಾರಾಯಣನ್  ಅವರು 1922ರ ಅಕ್ಟೋಬರ್ 8ರಂದು ಕೇರಳದ ಎರ್ನಾಕುಲಂನಲ್ಲಿ ಜನಿಸಿದರು. 1939 ರಲ್ಲಿ ತಿರುಚಿರಾಪಳ್ಳಿಯ ಸೇಂಟ್ ಜೋಸೆಫ್ ಕಾಲೇಜಿನಿಂದ ಭೌತಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಪಡೆದ ಅವರು 1942 ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗವನ್ನು ಸೇರಿದರು. ಆದರೆ ಶೀಘ್ರದಲ್ಲಿಯೇ ತಮ್ಮ  ಆಸಕ್ತಿ ಇರುವುದು ಭೌತಶಾಸ್ತ್ರದಲ್ಲಿ ಎಂದು  ಅರಿತುಕೊಂಡ ಅವರು, ಸರ್ ಸಿ. ವಿ. ರಾಮನ್ ಮೇಲ್ವಿಚಾರಣೆಯಲ್ಲಿ ಸ್ನಾತಕೋತ್ತರ ಓದು ಮತ್ತು ಸಂಶೋಧನೆ ನಡೆಸಲು ಭೌತಶಾಸ್ತ್ರ ವಿಭಾಗಕ್ಕೆ ಬಂದರು.  1942ರಲ್ಲಿ ಅವರು ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ ಬೆಂಗಳೂರಿನಿಂದ ಸಲ್ಲಿಸಿದ ಪ್ರಬಂಧದಿಂದ ಅವರಿಗೆ ಕಾಲೇಜಿಗೆ ಹಾಜರಾಗದೆಯೇ ಸ್ನಾತಕೋತ್ತರ ಪದವಿ ಸಂದಿತು. 1947ರಲ್ಲಿ  ಅವರು ಡಿ.ಎಸ್‍ಸಿ ಗೌರವ  ಪಡೆದರು.


ರಾಮಚಂದ್ರನ್   ಕ್ರಿಸ್ಟಲ್ ಭೌತಶಾಸ್ತ್ರ ಮತ್ತು ಸ್ಫಟಿಕ ದೃಗ್ವಿಜ್ಞಾನವನ್ನು ಅಧ್ಯಯನ ಮಾಡಿದರು. ತಮ್ಮ ಅಧ್ಯಯನದ ಸಮಯದಲ್ಲಿ ಎಕ್ಸರೆ ಮೈಕ್ರೊಸ್ಕೋಪ್ಗಾಗಿ ಎಕ್ಸರೆ ಕೇಂದ್ರೀಕೃತ ಕನ್ನಡಿಯನ್ನು ರಚಿಸಿದರು.


ಮುಂದೆ ರಾಮಚಂದ್ರನ್ ಕೇಂಬ್ರಿಡ್ಜಿನ  ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ಎರಡು ವರ್ಷಗಳ ಕಾಲ (1947-1949) ಪ್ರಖ್ಯಾತ ವಿಜ್ಞಾನಿ ಅಲ್ಫ್ರೆಡ್ ವೂಸ್ಟರ್ನ್ ಅವರ ಮಾರ್ಗದರ್ಶನದಲ್ಲಿ 'ಎಕ್ಸರೆ ಪ್ರಸರಣ ಸ್ಕ್ಯಾಟರಿಂಗ್ ಮತ್ತು ಸ್ಥಿತಿಸ್ಥಾಪಕ ಸ್ಥಿರಾಂಕಗಳ ನಿರ್ಣಯದ ಮೇಲಿನ ಅಧ್ಯಯನ ಮಾಡಿ ಪಿಎಚ್.ಡಿ ಗಳಿಸಿದರು.   ನಂತರ 1949ರಲ್ಲಿ ಭೌತಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ಗೆ ಹಿಂದಿರುಗಿದರು. 1952 ರಲ್ಲಿ ಅವರು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಮತ್ತು ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು.  ಅಲ್ಲಿ ಅವರು ಸ್ಫಟಿಕ ಭೌತಶಾಸ್ತ್ರದಲ್ಲಿ ತಮ್ಮ ಕೆಲಸವನ್ನು ಮುಂದುವರಿಸಿದರು.


ರಾಮಚಂದ್ರನ್ ಮುಂದೆ  ಜೈವಿಕ ಮ್ಯಾಕ್ರೋಮೋಲ್ಕುಲಗಳ ರಚನೆಗಳ ಕುರಿತು  ಗಮನ ಹರಿಸಿದರು. ಎಕ್ಸ್-ರೇ ವಿವರಣೆಯನ್ನು ಬಳಸುವುದರ ಕುರಿತಾಗಿ ಬೆಳಕು ಚೆಲ್ಲುವ  ಕಾಲಜನ್ನ ಟ್ರಿಪಲ್ ಹೆಲಿಕಲ್ ರಚನೆಯನ್ನು ರಾಮಚಂದ್ರನ್ ಅವರು ಗೋಪಿನಾಥ್ ಕಾರ್ತಾ ಜೊತೆಯಲ್ಲಿ 1954 ರಲ್ಲಿ ನೇಚರ್ ನಿಯತಕಾಲಿಕದಲ್ಲಿ ಪ್ರಸ್ತಾಪಿಸಿದರು.  ಪ್ರೋಟೀನ್ಕಾನ್ಫರ್ಮೇಷನ್ ಕ್ಷೇತ್ರದಲ್ಲಿ ಪ್ರಸಿದ್ಧವಾದ ಇವರ ಸಂಶೋಧನೆ 1963 ರಲ್ಲಿ ಜರ್ನಲ್ ಆಫ್ ಮಾಲಿಕ್ಯುಲರ್ ಬಯಾಲಜಿ ಯಲ್ಲಿ ಪ್ರಕಟವಾಯಿತು. ಪೆಪ್ಟೈಡ್  ಮೂಲಸ್ವರೂಪಗಳನ್ನು ಅರಿಯಲು ಇವರು  ನೀಡಿದ ಕ್ರಮ 'ರಾಮಚಂದ್ರನ್ ಪ್ಲಾಟ್' ಎಂದೇ ವಿಶ್ವಮಾನ್ಯವಾಗಿದೆ.  ಎಕ್ಸ್-ರೇ ಸ್ಫಟಿಕಶಾಸ್ತ್ರ, ಪೆಪ್ಟೈಡ್ ಸಂಶ್ಲೇಷಣೆ, ಎನ್ಎಂಆರ್ ಮತ್ತು ಇತರ ಆಪ್ಟಿಕಲ್ ಅಧ್ಯಯನಗಳು ಮತ್ತು ಭೌತ-ರಾಸಾಯನಿಕ ಪ್ರಯೋಗಗಳ ಅತಿದೊಡ್ಡ ಕ್ಷೇತ್ರಗಳನ್ನು ಅಣು ಜೀವಶಾಸ್ತ್ರದ ಒಂದು ಕ್ಷೇತ್ರಕ್ಕೆ ಒಟ್ಟಿಗೆ ಸೇರಿಸಿದ ಕೀರ್ತಿ ರಾಮಚಂದ್ರನ್ ಅವರಿಗೆ ಸಲ್ಲುತ್ತದೆ.


ರಾಮಚಂದ್ರನ್ ಅವರು 1970 ರಲ್ಲಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಮಾಲಿಕ್ಯೂಲರ್ ಬಯೋಫಿಸಿಕ್ಸ್ ಘಟಕವನ್ನು ಸ್ಥಾಪಿಸಿದರು.  ರಾಮಚಂದ್ರನ್ ಮತ್ತು ಎ.ವಿ. ಲಕ್ಷ್ಮಿನಾರಾಯಣನ್ ಎಕ್ಸಿರೇಷನ್-ಬ್ಯಾಕ್ ಪ್ರೊಜೆಕ್ಷನ್ ಅಲ್ಗಾರಿದಮ್ಗಳನ್ನು ಅಭಿವೃದ್ಧಿಪಡಿಸಿದರು. ಇದು ಎಕ್ಸ್-ರೇ ಟೊಮೊಗ್ರಫಿ ಮೂಲಕ ಪಡೆಯುವ ಫಲಿತಾಂಶಗಳ ಗುಣಮಟ್ಟ ಮತ್ತು ಪ್ರಾಯೋಗಿಕತೆಯನ್ನು ಉತ್ತಮಗೊಳಿಸಿತು.


ರಾಮಚಂದ್ರನ್ ಅವರಿಗೆ ಪ್ರೋಟೀನ್ ಮತ್ತು ಪಾಲಿಪೆಪ್ಟೈಡ್ ಕಾನ್ಫರ್ಮೇಷನ್ ಬಗೆಗಿನ ಸಂಶೋಧನೆಗೆ 1968ರಲ್ಲಿ ಪ್ರತಿಷ್ಠಿತ ಜವಾಹರಲಾಲ್ ನೆಹರೂ ಫೆಲೋಶಿಪ್ ಸಂದಿತು. 1981 ರಲ್ಲಿ ರಾಮಚಂದ್ರನ್ ವಿಶ್ವ ಸಾಂಸ್ಕೃತಿಕ ಮಂಡಳಿಯ ಸ್ಥಾಪಕ ಸದಸ್ಯರಾದರು. ರಾಮಚಂದ್ರನ್  ಅವರಿಗೆ ಭೌತಶಾಸ್ತ್ರಕ್ಕಾಗಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ (1961), ಲಂಡನ್ ರಾಯಲ್ ಸೊಸೈಟಿಯ ಫೆಲೋಶಿಪ್. (1999), ಇಂಟರ್ನ್ಯಾಷನಲ್ ಯೂನಿಯನ್ ಆಫ್ ಕ್ರಿಸ್ಟಲೋಗ್ರಫಿ ಇಂದ  'ಸ್ಫಟಿಕಶಾಸ್ತ್ರ ಕ್ಷೇತ್ರದಲ್ಲಿನ ಅತ್ಯುತ್ತಮ ಕೊಡುಗೆ'ಗಾಗಿ ಇವಾಲ್ಡ್ ಪ್ರೈಜ್ ಮುಂತಾದ ಪ್ರತಿಷ್ಟಿತ ಗೌರವಗಳು ಸಂದಿದ್ದವು. ಪ್ರೋಟೀನ್ ರಚನೆ ಮತ್ತು ಕಾರ್ಯಚಟುವಟಿಕೆಗಳಲ್ಲಿನ ಅವರ ಮೂಲಭೂತ ಕೊಡುಗೆಗಳಿಗಾಗಿ ಅವರ ಹೆಸರು ನೊಬೆಲ್ ಪ್ರಶಸ್ತಿಗೆ ಸಹಾ ನಾಮನಿರ್ದೇಶನಗೊಂಡಿತ್ತು.


ಪ್ರೊ.  ಜಿ. ಎನ್. ರಾಮಚಂದ್ರನ್ ಅವರು 2001ರ ಎಪ್ರಿಲ್ 7ರಂದು ಈ ಲೋಕವನ್ನಗಲಿದರು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ