ಡಿ. ಜಿ. ತೆಂಡೂಲ್ಕರ್
ಡಿ. ಜಿ. ತೆಂಡೂಲ್ಕರ್
ದೀನನಾಥ ಗೋಪಾಲ ತೆಂಡೂಲ್ಕರ್ ಮಹಾತ್ಮ ಗಾಂಧಿಯವರ ಸಮಗ್ರ ಜೀವನ ಚರಿತ್ರೆಯನ್ನು ಎಂಟು ಸಂಪುಟಗಳಲ್ಲಿ ಬರೆದು ಪ್ರಸಿದ್ಧರಾದವರು.
ತೆಂಡೂಲ್ಕರ್ ಅವರು ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯಲ್ಲಿ 1909ರ ಅಕ್ಟೋಬರ್ 9 ರಂದು ಜನಿಸಿದರು. ಸ್ವಾತಂತ್ರ್ಯ ಹೋರಾಟದ ರೋಮಾಂಚಕಾರಿ ಘಟನೆಗಳು ಬಾಲ್ಯದಲ್ಲಿ ಇವರ ಮೇಲೆ ಪರಿಣಾಮವನ್ನು ಉಂಟುಮಾಡಿದವು. 1920ರಲ್ಲಿ ಲೋಕಮಾನ್ ತಿಲಕರು ನಿಧನರಾದಾಗ ನಡೆದ ಬೃಹತ್ ಶೋಕ ಮೆರವಣಿಗೆಯನ್ನು ಕಂಡು ಅದರ ನಾಯಕರಾಗಿದ್ದ ಗಾಂಧೀಜಿಯವರ ಪ್ರಭಾವಕ್ಕೊಳಗಾದರು. ಅಂದಿನಿಂದ ಅವರು ಗಾಂಧಿಯವರ ಹೋರಾಟ ಪ್ರಕ್ರಿಯೆಗಳನ್ನು ಶ್ರದ್ಧೆಯಿಂದ ಪರಿಶೀಲಿಸಲಾರಂಭಿಸಿದರು.
ತೆಂಡುಲ್ಕರ್ ಅವರು ಮುಂಬಯಿಯ ಎಲ್ಫಿನ್ ಸ್ಟನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಮೇಲೆ ಇಂಗ್ಲೆಂಡಿಗೆ ತೆರಳಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದಲ್ಲಿ ಉನ್ನತ ಪದವಿ ಗಳಿಸಿ ಅನಂತರ ಜರ್ಮನಿಯ ಗಾಟಿಂಗೆನ್ ವಿಶ್ವವಿದ್ಯಾಲಯವನ್ನು ಸೇರಿದರು. ಆಗ ಜರ್ಮನಿಯಲ್ಲಿ ಹಿಟ್ಲರನ ಸರ್ವಾಧಿಕಾರವಿತ್ತು. ಪ್ರಗತಿಶೀಲ ವಿಚಾರಧೋರಣೆಯ ತೆಂಡೂಲ್ಕರ್ ಪೋಲಿಸರ ಸಂಶಯದ ದೃಷ್ಟಿಗೆ ಬಿದ್ದು ಬಂಧನಕ್ಕೊಳಗಾದರು. ಸ್ವಲ್ಪ ಕಾಲದಲ್ಲೇ ಬಿಡುಗಡೆ ಹೊಂದಿದರು. ಅನಂತರ ಸೋವಿಯೆತ್ ರಷ್ಯಕ್ಕೆ ಹೋದರು. ಭಾರತಕ್ಕೆ ಮರಳಿದ ಮೇಲೆ ಗಾಂಧಿಯವರ ಆಂದೋಳನದಲ್ಲಿ ತೀವ್ರ ಆಸಕ್ತಿ ತಳೆದರು. ಗಾಂಧೀ ವಿಚಾರ, ದರ್ಶನ ಮತ್ತು ಕ್ರಾಂತಿ ಪ್ರಕ್ರಿಯೆಗಳನ್ನು ಗಾಢವಾಗಿ ಅಭ್ಯಾಸ ಮಾಡತೊಡಗಿದರು.
ತೆಂಡುಲ್ಕರ್ ಅವರು ಮಹಾತ್ಮ ಗಾಂಧಿಯವರ ಜೀವನ ಚರಿತ್ರೆ ಬರೆಯಲು ನಿರ್ಧರಿಸಿದ್ದು 1940 ರಲ್ಲಿ ನಾಸಿಕ್ ಕಾರಾಗೃಹದಲ್ಲಿದ್ದಾಗ. ತಮ್ಮ ಮುಂದಿನ ಹಲವಾರು ವರ್ಷಗಳನ್ನು ಇದಕ್ಕಾಗಿಯೇ ಮುಡುಪಾಗಿಟ್ಟರು. ಗಾಂಧಿಯವರ ಮುಖ್ಯ ಕಾರ್ಯಕೇಂದ್ರಗಳಿಗೆಲ್ಲ ಭೇಟಿಕೊಟ್ಟು ಅಲ್ಲಿ ದೊರೆತ ಮೂಲ ದಾಖಲೆಗಳನ್ನೂ ಮಾಹಿತಿಗಳನ್ನೂ ಸಂಗ್ರಹಿಸಿದರು. ಐವತ್ತು ವರ್ಷಗಳ ವೃತ್ತಪತ್ರಿಕೆಗಳನ್ನೂ ದಾಖಲೆಗಳನ್ನೂ ಅಧ್ಯಯನ ಮಾಡಿದರು. ಗಾಂಧಿಯವರ ಲೇಖನ, ಭಾಷಣ, ಸಂಭಾಷಣೆ ಇತ್ಯಾದಿಗಳನ್ನು ಅವಲೋಕಿಸಿದರು. ಈ ದೀರ್ಘಪ್ರಯತ್ನದ ಫಲವೇ ಮಹಾತ್ಮ ಎಂಬ ಎಂಟು ಸಂಪುಟಗಳ ಬೃಹತ್ ಗ್ರಂಥ. ಇದನ್ನು ಇವರು ಬರೆದದ್ದು 1951 - 54 ರ ಅವಧಿಯಲ್ಲಿ. ಈ ಗ್ರಂಥದ ಬಹುಭಾಗವನ್ನು ಗಾಂಧಿಯವರು ಸ್ವತಃ ಪರಿಶೀಲಿಸಿ ಅದಕ್ಕೆ ತಮ್ಮ ಒಪ್ಪಿಗೆ ನೀಡಿದ್ದರು. ಗಾಂಧಿಯವರು ತೀರಿಕೊಳ್ಳಲು ಒಂದು ವಾರದ ಹಿಂದೆ ಈ ಸಂಪುಟಗಳ ಮುದ್ರಣ ವಿನ್ಯಾಸ ಹಾಗೂ ಇತರ ವಿವರಗಳ ಬಗ್ಗೆ ತೆಂಡೂಲ್ಕರರಿಗೆ ಸಲಹೆಗಳನ್ನು ನೀಡಿದ್ದರು. ಈ ಗ್ರಂಥ ಗಾಂಧಿಯವರ ಜೀವನ, ವಿಚಾರ, ದರ್ಶನ ಹಾಗೂ ಕಾರ್ಯಚಟುವಟಿಕೆಗಳ ಸುದೀರ್ಘ ಇತಿಹಾಸವನ್ನೊಳಗೊಂಡಿದೆಯಲ್ಲದೆ ಕಳೆದ ಶತಮಾನದ ಮೊದಲ ಐವತ್ತು ವರ್ಷಗಳ ಭಾರತದ ಇತಿಹಾಸದ ಆಧಾರಗ್ರಂಥವೂ ಆಗಿದೆ.
ಸೋವಿಯೆತ್ ಸಂಸ್ಕೃತಿ (1942), ರಷಿಯಾಂತ 30 ಮಹೀನೆ (1943) - ಇವೆರಡೂ ತೆಂಡೂಲ್ಕರರ ಮರಾಠಿ ಗ್ರಂಥಗಳು. ಥರ್ಟಿ ಮಂತ್ಸ್ ಇನ್ ರಷ್ಯ (1943), ಗಾಂಧಿ ಇನ್ ಚಂಪಾರಣ (1957) - ಇವು ಇವರ ಇನ್ನೆರಡು ಗ್ರಂಥಗಳು. ಇವರು ಬರೆದ ಖಾನ್ ಅಬ್ದುಲ್‍ಗಫಾರ್ ಖಾನರ ಜೀವನ ಚರಿತ್ರೆಯೂ ಪ್ರಸಿದ್ಧವಾಗಿದೆ. ಗಾಂಧಿಯವರ 75ನೆಯ ಹುಟ್ಟುಹಬ್ಬದ ನೆನಪಿಗಾಗಿ ಇತರರ ಜೊತೆಯಲ್ಲಿ ಇವರು ಸಂಪಾದಿಸಿದ ಗ್ರಂಥ ಗುಜರಾತಿ ಹಾಗೂ ಕನ್ನಡಕ್ಕೆ ಅನುವಾದಗೊಂಡಿದೆ.
ತೆಂಡೂಲ್ಕರರು ಆಜನ್ಮಬ್ರಹ್ಮಚಾರಿಯಾಗಿದ್ದರು. ಇವರ ಮುಂಬಯಿಯ ನಿವಾಸದ ಹೆಸರು ಏಕಾಂತ. ಇವರ ಬರೆವಣಿಗೆ ಬಹುತೇಕ ನಡೆದದು ಅಲ್ಲೇ. ಇವರ ಕಾರ್ಯಶ್ರದ್ಧೆಯನ್ನು ಮೆಚ್ಚಿದ ಗೆಳೆಯರು ಆರ್ಥಿಕ ನೆರವು ನೀಡಿ, ಇವರು ಗ್ರಂಥರಚನೆಯಲ್ಲಿ ತೊಡಗಲು ಅನುವು ಮಾಡಿಕೊಟ್ಟರು.
ತಮಗೆ ಸಂದ ಪದ್ಮಭೂಷಣ ಪ್ರಶಸ್ತಿಯನ್ನೂ ನಿರಾಕರಿಸಿದ ಮಹಾತ್ಮರ ಅನುಯಾಯಿ ಮಹಾತ್ಮನೀತ. ಇವರು ಸಾಕ್ಷಚಿತ್ರ ಕೂಡಾ ನಿರ್ಮಿಸುತ್ತಿದ್ದರು.
ತೆಂಡೂಲ್ಕರರು ತಮ್ಮ ಅರವತ್ತೆರಡನೆಯ ವಯಸ್ಸಿನಲ್ಲಿ ನಿಧನರಾದರು.
On the birth anniversary of writer Dinanath Gopal Tendulkar
ಕಾಮೆಂಟ್‌ಗಳು