ಎಚ್ ವಿ ನಂಜುಂಡಯ್ಯ
ಎಚ್. ವಿ. ನಂಜುಂಡಯ್ಯ
ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು ಹಾಗೂ ಕನ್ನಡದ ಪ್ರಥಮ ಮೂರು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷಪೀಠವನ್ನು ಅಲಂಕರಿಸಿದ್ದವರು ಎಚ್. ವಿ. ನಂಜುಂಡಯ್ಯನವರು.
ಕನ್ನಡವನ್ನು, ಕನ್ನಡ ಸಾಹಿತ್ಯ ಪರಿಷತ್ತನ್ನು, ಮೈಸೂರು ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸಿದ ನಂಜುಂಡಯ್ಯನವರು 1860ರ ಅಕ್ಟೋಬರ್ 13ರಂದು ಮೈಸೂರಿನಲ್ಲಿ ಜನಿಸಿದರು. ಅವರ ವಂಶಸ್ಥರು ಆಂಧ್ರದ ಮೂಲದವರು (ಎಚ್-ಹೆಬ್ಬಳಲು, ವಿ-ವೇಲ್ಪನೂರು). ತಂದೆ ಸುಬ್ಬಯ್ಯನವರು. ತಾಯಿ ಅನ್ನಪೂರ್ಣಮ್ಮನವರು. ಬಡತನದಲ್ಲಿ ಜೀವನ ಸಾಗಿಸಿದ ನಂಜುಂಡಯ್ಯನವರು ಮೈಸೂರು ಮಹಾರಾಜರಿಂದ ವಿದ್ಯಾರ್ಥಿ ವೇತನ ಪಡೆದು ವ್ಯಾಸಂಗ ನಡೆಸಿದರು. ಮೈಸೂರಿನ ವೆಸ್ಲಿಯನ್ ಪ್ರೌಢಶಾಲೆ ಹಾಗೂ ಮದರಾಸಿನ ಕ್ರಿಶ್ಚಿಯನ್ ಕಾಲೇಜುಗಳಲ್ಲಿ ಓದಿ 1880ರಲ್ಲಿ ಬಿ.ಎ. ಪದವಿ, ನಂತರ ಬಿ.ಎಲ್ ಮತ್ತು 1883ರಲ್ಲಿ ಎಂ.ಎಲ್. ಪದವಿಗಳನ್ನು ಗಳಿಸಿದರು.
ನಂಜುಂಡಯ್ಯನವರು 1885ರಲ್ಲಿ ನಂಜನಗೂಡಿನಲ್ಲಿ ಮುನ್ಸೀಫರಾಗಿ ಉದ್ಯೋಗ ಪ್ರಾರಂಭಿಸಿದರು. ಮುಂದೆ ಹಾಸನದ ಅಸಿಸ್ಟೆಂಟ್ ಕಮೀಷನರ್, ಬೆಂಗಳೂರಿನ ಸಬ್ ಜಡ್ಜ್, ಮದರಾಸು ವಿಶ್ವವಿದ್ಯಾಲಯದ ಫೆಲೋ, ಮೈಸೂರು ಸರ್ಕಾರದ ಕಾರ್ಯದರ್ಶಿ; ಶಿವಮೊಗ್ಗ ಜಿಲ್ಲೆಯ ಜಿಲ್ಲಾಕಾರಿ, ಸರಕಾರದ ಮುಖ್ಯ ಕಾರ್ಯದರ್ಶಿ, ಮುಖ್ಯ ನ್ಯಾಯಾಧೀಶ, ವಿದ್ಯಾ ಇಲಾಖೆಯ ಪ್ರಧಾನ ಆಡಳಿತಾಧಿಕಾರಿ, ಕೌನ್ಸಿಲರ್ ಹೀಗೆ ವಿವಿಧ ಹುದ್ದೆಗಳಲ್ಲಿ ದುಡಿದು 1916ರಲ್ಲಿ ನಿವೃತ್ತಿ ಪಡೆದರು.
ಸರ್ ಎಂ. ವಿಶ್ವೇಶ್ವರಯ್ಯನವರು ದಿವಾನರಾಗಿ ಮೈಸೂರು ಸಂಸ್ಥಾನದಲ್ಲಿ ದಿವಾನ ಹುದ್ದೆಗೆ ಬಂದಾಗ, ಸಂಸ್ಥಾನದಲ್ಲಿ ಹಿರಿಯ ಹುದ್ದೆಯಲ್ಲಿದ್ದವರು ನಂಜುಂಡಯ್ಯನವರು. ನಂಜುಂಡಯ್ಯನವರು ಸೇವೆಯ ಹಿರಿತನದ ಪ್ರಕಾರ ದಿವಾನ್ ಹುದ್ದೆಗೆ ಅರ್ಹರಾಗಿದ್ದರು. ಹೊಸ ರೀತಿಯ ಅಭಿವೃದ್ಧಿಯ ನಿಟ್ಟಿನಲ್ಲಿ ಇಂಜಿನಿಯರ್ ಆಗಿ ಮುಂಬೈನಲ್ಲಿ ಹೆಸರಾಗಿದ್ದ ಎಂ. ವಿ. ಅವರನ್ನು ಮಹಾರಾಜರು ಕರೆತಂದಾಗ, ಯಾವುದೇ ಅತೃಪ್ತಿಯನ್ನು ಹೊರಗೆಡುಹದ ನಂಜುಂಡಯ್ಯನವರು ತಮ್ಮ ಕೆಲಸಕಾರ್ಯಗಳನ್ನು ನಿಷ್ಠೆಯಿಂದ ನಡೆಸುತ್ತಾ ಸಾಗಿದರು. ವಿದ್ಯಾಇಲಾಖೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಂಜುಂಡಯ್ಯನವರ ಕಾರ್ಯವನ್ನು ಸರ್ ಎಂ ವಿ ಅವರು ಯಾವುದೇ ಹಸ್ತಕ್ಷೇಪವಿಲ್ಲದ ಹಾಗೆ ಗೌರವಿಸಿದ್ದರು. ಹಾಗೇಯೇ ನಂಜುಂಡಯ್ಯನವರಿಗೂ ಸರ್ ಎಂ ವಿ ಅವರಲ್ಲಿ ಅಪಾರ ಗೌರವವಿತ್ತು.
ನಂಜುಂಡಯ್ಯನವರು ಅಕ್ಕನಿಗಾದ ವೈಧವ್ಯದ ಬಾಳಿನಿಂದ ಸಂವೇದಿತರಾಗಿ ವಿಧವೆಯರ ಸಹ್ಯ ಬಾಳ್ವೆಗಾಗಿ Widows Home ಅನ್ನು ಸ್ಥಾಪಿಸಿದರಲ್ಲದೆ, ಹರಿಜನರ ಉದ್ಧಾರಕ್ಕಾಗಿ ಸೆಂಟ್ರಲ್ ಬೋರ್ಡಿಂಗ್ ಶಾಲೆಯನ್ನು ಸ್ಥಾಪಿಸಿ, ವಸತಿ ಶಾಲೆ, ಕೈ ಕಸುಬಿನ ಶಾಲೆ, ಸ್ತ್ರೀ ವಿದ್ಯಾಭ್ಯಾಸಕ್ಕೆ ಉತ್ತೇಜನ ಮುಂತಾದ ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಹಳ್ಳಿ ಹಳ್ಳಿಗೂ ತಿರುಗಿ ವಿದ್ಯಾಭ್ಯಾಸದ ಕುಂದು ಕೊರತೆಗಳನ್ನು ಗುರುತಿಸಿ ರಾಷ್ಟ್ರ ವಿದ್ಯಾಭ್ಯಾಸಕ್ಕೆ ಕರೆಕೊಟ್ಟರು. ಅವರು 1911ರಲ್ಲಿ ದೆಹಲಿಯ ಚಕ್ರವರ್ತಿಯ ಪಟ್ಟಾಭಿಷೇಕ ಮಹೋತ್ಸವಕ್ಕೆ ಆಹ್ವಾನ ಪಡೆದಿದ್ದರು.
1914-15ರಲ್ಲಿ ವಿಶ್ವವಿದ್ಯಾಲಯದ ನಿಯೋಗವೊಂದು ಮದರಾಸಿನಿಂದ ಬಂದಾಗ ಕ್ರಮಬದ್ಧ ಯೋಜನೆಯ ಕರಡು ಪ್ರತಿ ಸಿದ್ಧಪಡಿಸಿದರು. ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆಯೊಂದಿಗೆ ಉಪಕುಲಪತಿಗಳಾಗಿ ನೇಮಕಗೊಂಡ ನಂಜುಂಡಯ್ಯನವರು ನಿವೃತ್ತರಾಗುವವರೆವಿಗೂ ಆ ಸ್ಥಾನದಲ್ಲಿ ಮುಂದುವರಿದರು. 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯ ಸಾಧನೆ ಮಾಡಿದರು.
ನಂಜುಂಡಯ್ಯನವರು ರಾಜ್ಯಶಾಸ್ತ್ರ, ನ್ಯಾಯಶಾಸ್ತ್ರ, ಅರ್ಥಶಾಸ್ತ್ರ ಮುಂತಾದ ವಿಷಯಗಳಲ್ಲಿ ವಿದ್ವಾಂಸರಾಗಿದ್ದು ಹಲವಾರು ಗ್ರಂಥಗಳ ರಚನೆ ಮಾಡಿದರು. ಕನ್ನಡಕ್ಕೆ ಮನ್ನಣೆಯೇ ಇಲ್ಲದೆ ಕನ್ನಡವೆಂದರೆ ಮೂಗು ಮುರಿಯುತ್ತಿದ್ದ ಕಾಲದಲ್ಲಿ ನಂಜುಂಡಯ್ಯನವರು ವ್ಯವಹಾರ ದೀಪಿಕೆ, ವ್ಯವಹಾರ ಧರ್ಮಶಾಸ್ತ್ರ, ಅರ್ಥಶಾಸ್ತ್ರ, ಲೇಖ್ಯಬೋಧಿನಿ, ರಾತ್ರಿಯಲ್ಲಿ ಕಂಬನಿ ಮುಂತಾದ ಗ್ರಂಥಗಳನ್ನು ರಚಿಸಿದರಲ್ಲದೆ ಇಂಗ್ಲಿಷ್‌ನಲ್ಲಿ Mysore Tribes and Castes, Tears in the night ಮುಂತಾದ ಕೃತಿಗಳ ರಚನೆ ಮಾಡಿದರು.
ಎಚ್ ವಿ ನಂಜುಂಡಯ್ಯನವರ ಕಾರ್ಯದಕ್ಷತೆಗೆ ಮೈಸೂರು ಮಹಾರಾಜರಿಂದ ‘ರಾಜಮಂತ್ರ ಪ್ರವೀಣ’ ಬಿರುದು, ಬ್ರಿಟಿಷ್ ಸರಕಾರದಿಂದ Companion of the Indian Empire ಬಿರುದು ಸಂದಿತು. ಎಚ್ ವಿ ನಂಜುಂಡಯ್ಯನವರನ್ನು 1915-20ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದುದೇ ಅಲ್ಲದೆ, ಮೂರು ಬಾರಿ ಬೆಂಗಳೂರು, ಮೈಸೂರುಗಳಲ್ಲಿ ನಡೆದ ಮೂರು ಸಾಹಿತ್ಯ ಸಮ್ಮೇಳನಗಳಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಕನ್ನಡಿಗರು ಗೌರವ ತೋರಿದರು.
ಈ ಮಹಾನ್ ಸಾಧಕರಾದ ಎಚ್ ವಿ ನಂಜುಂಡಯ್ಯನವರು 1920ರ ಮೇ 7ರಂದು ಈ ಲೋಕವನ್ನಗಲಿದರು.
On Remembrance Day of first President of Kannada Sahitya Parishat Sir H V Nanjundaiah
ಕಾಮೆಂಟ್‌ಗಳು