ಚನ್ನಪ್ಪ ಎರೇಸೀಮೆ
ಪಂಡಿತ ಚನ್ನಪ್ಪ ಎರೇಸೀಮೆ
ಪಂಡಿತ ಚನ್ನಪ್ಪ ಎರೇಸೀಮೆ ಅವರು ಈ ನಾಡು ಕಂಡ ಶ್ರೇಷ್ಠ ವಿದ್ವಾಂಸರಲ್ಲೊಬ್ಬರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಅವರು ಪ್ರವೃತ್ತಿಯಲ್ಲಿ ಸಾಹಿತಿ, ಬರಹಗಾರ ಮತ್ತು ಪ್ರಖರ ವಾಗ್ಮಿ. ಉತ್ತಮ ನಾಟಕಕಾರರೂ ಮತ್ತು ಪ್ರವಚನಕಾರರೂ ಆದ ಅವರು ‘ನುಡಿಗಾರುಡಿಗ’ ಎಂದೇ ಖ್ಯಾತರಾಗಿದ್ದರು. ಸರಳ, ಸಜ್ಜನಿಕೆಯ ಸಾಕಾರಮೂರ್ತಿಯಂತಿದ್ದ ಅವರು ಕುತೂಹಲ ಕೆರಳಿಸುವಂತೆ ಕಥಾ ಕಾಲಕ್ಷೇಪ ಮಾಡುವುದರಲ್ಲಿಯೂ ಸಿದ್ಧಹಸ್ತರಾಗಿದ್ದರು.
ಚನ್ನಪ್ಪ ಎರೇಸೀಮೆ ಅವರು 1919 ವರ್ಷದ ಸೆಪ್ಟೆಂಬರ್ 3ರಂದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹರವಿ ಗ್ರಾಮದಲ್ಲಿ ಜನಿಸಿದರು. ಅವರು ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ಶಿಕ್ಷಕರಾಗಿದ್ದುಕೊಂಡೇ ನಾಟಕ ಬರೆದರು, ಕೀರ್ತನೆ ಹೇಳಿದರು ಮತ್ತು ಪ್ರವಚನಗಳನ್ನೂ ಮಾಡಿದರು. ಶಿಕ್ಷಕ ತರಬೇತಿ ಕಾಲೇಜಿನಲ್ಲಿ ಭಾಷಾ ಸಾಹಿತ್ಯದ ಶಿಕ್ಷಕರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಎರೇಸೀಮೆ ಅವರು ವಿದ್ಯಾರ್ಥಿಗಳ ಪಾಲಿಗೆ ಎಂದೆಂದೂ 'ಪ್ರೀತಿಯ ಮೇಷ್ಟ್ರು’. ಒಂಭತ್ತು ರೂಪಾಯಿ ಪಗಾರದ ಒಬ್ಬ ಗಾಂವಠೀ ಶಾಲೆಯ ಮೇಷ್ಟರು ಕಡುಬಡತನ, ನಿರುತ್ಸಾಹದ ಸನ್ನಿವೇಶದಲ್ಲೂ ಧೈರ್ಯ, ಸಾಹಸ, ಶ್ರದ್ಧಾಸಕ್ತಿಗಳಿಂದ ಹಂತಹಂತವಾಗಿ ಮೇಲೇರಿ ಹೈಸ್ಕೂಲು, ತರಬೇತಿ ಕಾಲೇಜುಗಳಲ್ಲಿ ಭಾಷಾಬೋಧಕರಾಗಿ ಕೀರ್ತಿಗಳಿಸುವ ಹಂತಕ್ಕೆ ಏರಿದ ವೀರಗಾಥೆಯನ್ನು ಅವರ ಆತ್ಮಕಥೆಯಲ್ಲಿ ಕಾಣಬಹುದಾಗಿದೆ.
ಪಂಡಿತ ಚನ್ನಪ್ಪ ಎರೇಸೀಮೆ ಅವರು ಸಾಹಿತ್ಯ ಕ್ಷೇತ್ರದಲ್ಲಿ ಅಮೂಲ್ಯ ಕೃತಿಗಳನ್ನು ನೀಡಿದ್ದಾರೆ. ಹೊಸಗನ್ನಡ ಸರಳ ವ್ಯಾಕರಣ ಪಾಠಗಳು, ಅರವಿಂದ, ಬಸವಣ್ಣನವರ ಕ್ರಾಂತಿ ಕಹಳೆ, ಬಸವಣ್ಣನವರ ಪಂಚಪರುಷ, ಅಜಗಣ್ಣ-ಮುಕ್ತಾಯಕ್ಕ, ಸಿದ್ಧರಾಮನ ಲಿಂಗತಪಸ್ಸು, ಸಿದ್ಧಗಂಗಾ ಕ್ಷೇತ್ರದ ಇತಿಹಾಸ-ಪರಂಪರೆ, ಚನ್ನಮಲ್ಲಿಕಾರ್ಜುನ, ಉದ್ದಾನ ಶಿವಯೋಗಿ, ರಾಜಶೇಖರ ವಿಳಾಸ ಸೇರಿದಂತೆ ಹದಿನೆಂಟು ಮೌಲಿಕ ಕೃತಿಗಳನ್ನು ನೀಡಿದ್ದಾರೆ. ಹಿರಿಯ ವಿದ್ವಾಂಸರ ಜತೆ ಸೇರಿ ಒಂಬತ್ತು ಶ್ರೇಷ್ಠ ಪ್ರೌಢ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಎಂಬತ್ತಕ್ಕೂ ಹೆಚ್ಚು ಮೌಲಿಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಅವರು ಮಕ್ಕಳಿಗೆ ಸಂಬಂಧಿಸಿದಂತೆಯೂ ಅನೇಕ ಕೃತಿಗಳನ್ನು ಪ್ರಕಟಿಸಿದ್ದರು.
ಎರೇಸೀಮೆ ಅವರು ತುಮಕೂರಿನ ಸಿದ್ಧಗಂಗಾ ಮಠ ಹಾಗೂ ಡಾ. ಶಿವಕುಮಾರ ಸ್ವಾಮೀಜಿ ಜತೆ ಅವಿನಾಭಾವ ಸಂಬಂಧ ಹೊಂದಿದ್ದರು. ಮೂರು ದಶಕಗಳ ಕಾಲ ಸಿದ್ಧಗಂಗಾ ಕ್ಷೇತ್ರದ 'ಸಿದ್ಧಗಂಗಾ’ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಡಾ.ಶಿವಕುಮಾರ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವದ ಮಹಾಸಂಪುಟ ‘ಸಿದ್ಧಗಂಗಾಶ್ರೀ’ ಮತ್ತು ವಜ್ರಮಹೋತ್ಸವ ಮಹಾಸಂಪುಟ ‘ದಾಸೋಹಸಿರಿ’ ಉದ್ಗ್ರಂಥಗಳನ್ನು ಟಿ.ಆರ್. ಮಹಾದೇವಯ್ಯನವರ ಜೊತೆ ಸೇರಿ ಹೊರ ತಂದಿದ್ದರು. ಇದಲ್ಲದೆ ಕ.ಸಾ.ಪ ದತ್ತಿ ಉಪನ್ಯಾಸಗಳು, ಅಕಾಡೆಮಿ ಹಾಗೂ ವಿಚಾರ ಸಂಕಿರಣಗಳ ಉಪನ್ಯಾಸಗಳು, ಬೆಂಗಳೂರು ವಿಶ್ವವಿದ್ಯಾಲಯದ ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಗಾಗಿ ಬರೆದ ಲೇಖನಗಳು, ಬೆಂಗಳೂರು ಆಕಾಶವಾಣಿಯಿಂದ ಪ್ರಸಾರವಾದ ಕಾರ್ಯಕ್ರಮಗಳು, ಹೀಗೆ ಹಲವಾರು ರೂಪಗಳಲ್ಲಿ ಅವರಿಂದ ಹೊರ ಹೊಮ್ಮಿದ ಜ್ಞಾನ ಗಂಗೆಯ ಆಳ ವಿಸ್ತಾರಗಳು ಇನ್ನೆಷ್ಟೆಷ್ಟೋ ...
ಪಂಡಿತ ಚನ್ನಪ್ಪ ಎರೇಸೀಮೆ ಅವರು ಪ್ರಾಥಮಿಕ, ಪ್ರೌಢಶಾಲಾ ಮತ್ತು ಪಿಯು ಮಂಡಳಿ ಪಠ್ಯಪುಸ್ತಕ ಸಮಿತಿ, ಕೇರಳ ರಾಜ್ಯ ಪಠ್ಯಪುಸ್ತಕ ಸಮಿತಿ, ಕೇಂದ್ರ ಸರ್ಕಾರದ ಪಠ್ಯಪುಸ್ತಕ ಸಮಿತಿಗಳಲ್ಲಿ ಸಹಾ ಸೇವೆ ಸಲ್ಲಿಸಿದ್ದರು.
ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗಾಗಿ ಪಂಡಿತ ಚನ್ನಪ್ಪ ಎರೇಸೀಮೆ ಅವರಿಗೆ ಹಲವಾರು ಗೌರವ ಪ್ರಶಸ್ತಿಗಳು ಸಂದಿದ್ದವು.
ಈ ಮಹಾನ್ ವಿದ್ವಾಂಸರಾದ ಪಂಡಿತ ಚನ್ನಪ್ಪ ಎರೇಸೀಮೆ ಅವರು 2004 ವರ್ಷದ ಫೆಬ್ರವರಿ 29ರಂದು ಇಹಲೋಕದ ಬದುಕಿಗೆ ವಿದಾಯ ಹೇಳಿದರು. ಈ ಮಹಾನ್ ಚೇತನಕ್ಕೆ ನಮನ.
Great scholar Channappa Yereseeme
ಕಾಮೆಂಟ್‌ಗಳು