ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್. ಜಿ. ರಘುರಾಮ್


ಎಸ್. ಜಿ. ರಘುರಾಮ್

ಎಸ್. ಜಿ. ರಘುರಾಮ್ ಸುಗಮ ಸಂಗೀತ ಕಲಾವಿದರಾಗಿ, ಸುಗಮ ಸಂಗೀತ ಅಕಾಡೆಮಿ ಸ್ಥಾಪಕರಾಗಿ, ರಂಗ ಕಲಾವಿದರಾಗಿ, ಬರಹಗಾರರಾಗಿ ಹೀಗೆ ಮಹತ್ವದ ಸಾಧಕರಾಗಿ ಹೆಸರಾಗಿದ್ದವರು.  

ರಘುರಾಮ್ 1939ರ ಫೆಬ್ರವರಿ 28ರಂದು ಜನಿಸಿದರು.  ಬಿ.ಎ, ಬಿಎಡ್ ಮತ್ತು ಬಿ.ಎಲ್.  ಅವರ ಶೈಕ್ಷಣಿಕ ಸಾಧನೆಗಳು.

ರಘುರಾಮ್ ಗಾಯಕರಾಗಿ, ವಕೀಲರಾಗಿ ಮತ್ತು ಆಕಾಶವಾಣಿ - ದೂರದರ್ಶನ ಜಾಹೀರಾತು ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು.  5 ವರ್ಷಗಳ ಕಾಲ ಆಕಾಶವಾಣಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದರು.

ರಘುರಾಮ್ ಸುಗಮ ಸಂಗೀತ ಕಲಾವಿದರಾಗಿ ರಾಜಸ್ಥಾನದ ಜೈಪುರದಲ್ಲಿ ನಡೆದ ಅಖಿಲ ಭಾರತ ಯುವ ಸಮ್ಮೇಳನದಲ್ಲಿ ಜಾನಪದ ಸಂಗೀತ ತಂಡದ ನಿರ್ದೇಶಕರಾಗಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.  ಅನೇಕ ಸುಂದರ ಸಂಗೀತ ರೂಪಕಗಳನ್ನು ಬರೆದು ನಿರೂಪಿಸುತ್ತಿದ್ದರು. ಆಕಾಶವಾಣಿ ಆಯೋಜಿಸಿದ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದರು. ಆಕಾಶವಾಣಿ ಕೇಂದ್ರಗಳಲ್ಲಿ ಶ್ರೇಣೀಕೃತ ಸಂಗೀತ ಸಂಯೋಜಕರಾಗಿದ್ದರು.  ಮೈಸೂರು, ಮಂಗಳೂರು, ಬೆಂಗಳೂರು, ನವದೆಹಲಿ ಆಕಾಶವಾಣಿ ಕೇಂದ್ರಗಳಿಂದ ಹಾಡಿದ್ದರು.  ದೂರದರ್ಶನ ಕೇಂದ್ರಗಳಿಂದಲೂ ಇವರ ಸುಗಮ ಸಂಗೀತ ಕಾರ್ಯಕ್ರಮಗಳು ಪ್ರಸಾರಗೊಂಡಿದ್ದವು. ಐ ಬಿ ಎಚ್ ನಿರ್ಮಿಸಿದ ಕ್ಯಾಸೆಟ್‌ನಲ್ಲಿ ಇವರು ರಾಷ್ಟ್ರಕವಿ ಕುವೆಂಪು ಅವರ ಕವನಗಳನ್ನು ಹಾಡಿದ್ದರು.  ಕರ್ನಾಟಕದ ಅರಣ್ಯ ಇಲಾಖೆಯು ನಿರ್ಮಿಸಿದ ಪರಿಸರದ ಮೇಲಿನ ಗೀತೆಗಳ ಕ್ಯಾಸೆಟ್‌ನಲ್ಲಿ ಹಾಡಿದ್ದರು.  ಲಘು ಸಂಗೀತ ಮಾಂತ್ರಿಕ ದಿವಂಗತ ಪಿ. ಕಾಳಿಂಗರಾವ್ ಅವರೊಂದಿಗೆ ಹಾಡುವ ಸೌಭಾಗ್ಯವನ್ನು ಪಡೆದಿದ್ದರು. ಕರ್ನಾಟಕದ ಎಲ್ಲ ಕೇಂದ್ರಗಳಿಂದ ಪ್ರಸಾರವಾದ 'ಝೇಂಕಾರ'ಕ್ಕೆ ಸಂಗೀತ ಸಂಯೋಜಿಸಿದರು.

ರಘುರಾಮ್ ಮೈಸೂರು, ಬೆಂಗಳೂರು, ಹೊಸದಿಲ್ಲಿ, ಬರೋಡಾ, ಲಖನೌ, ಗದಗ, ರಾಯಚೂರು, ಹಾಸನ, ಶಿವಮೊಗ್ಗ, ನಂಜನಗೂಡು, ಗಿರಿಜಾ ಕಲ್ಯಾಣ, ಕೆ.ಆರ್.ನಗರ, ಟಿ.ನರಸೀಪುರ ಮತ್ತಿತರೆಡೆ ಸಾರ್ವಜನಿಕ ಕಾರ್ಯಕ್ರಮಗಳನ್ನು ನೀಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದರು.

ರಘುರಾಮ್ ಸುಗಮ ಸಂಗೀತವನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ ಮೈಸೂರಿನಲ್ಲಿ ಸುಗಮ ಸಂಗೀತ ಅಕಾಡೆಮಿ ಎಂಬ ಟ್ರಸ್ಟ್ ಸ್ಥಾಪಿಸಿದರು.  ಇದು ಕರ್ನಾಟಕದಲ್ಲಿ ಈ ರೀತಿಯ ಮೊದಲನೆಯದು. ಡಾ. ಎಂ. ಬಾಲಮುರಳೀಕೃಷ್ಣ, ಮುಂಬೈನ ಶ್ರೀ ಸುಧೀರ್ ಪಡ್ಕೆ, ಎಚ್.ಆರ್.ಲೀಲಾವತಿ, ಮೈಸೂರು ಅನಂತ ಸ್ವಾಮಿ, ಶ್ರೀ ಸಿ.ಅಶ್ವತ್, ಜಿ.ವಿ.ಅತ್ರಿ, ಶಿವಮೊಗ್ಗ ಸುಬ್ಬಣ್ಣ, ಮುದ್ದುಕೃಷ್ಣ, ಶಂಕರ್ ಶಾನಬಾಗ್, ಕುಸುಮಾ, ಡಾ.ಮಂಗಳಾ, ಡಾ.ರೋಹಿಣಿ ಮೋಹನ್, ಶ್ರೀಮತಿ. ರೇಖಾ ಸುರೇಶ್, ಮಂಜುಳಾ ಗುರುರಾಜ್ ಮುಂತಾದವರು ಅಕಾಡೆಮಿಯ ಬ್ಯಾನರ್ ಅಡಿಯಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಅಕಾಡೆಮಿಯು ಮಕ್ಕಳು ಮತ್ತು ಯುವ ಕಲಾವಿದರನ್ನು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಪ್ರೋತ್ಸಾಹಿಸುತ್ತಿದೆ. ಅಕಾಡೆಮಿಯ 10ನೇ ವರ್ಷದ ಸಂಭ್ರಮಾಚರಣೆಯಲ್ಲಿ ಪ್ರಸಿದ್ಧ ಕವಿಗಳು, ಬರಹಗಾರರು ಮತ್ತು ಕಲಾವಿದರನ್ನು ಗೌರವಿಸಲಾಯಿತು. ಸಾಹಿತ್ಯ ದಿಗ್ಗಜರಾದ ಡಾ. ಶಿವರಾಮ ಕಾರಂತ, ಕಯ್ಯಾರ ಕಿಞ್ಞಣ್ಣ ರೈ , ನಾಗರತ್ನಮ್ಮ, ಸಿ ಅಶ್ವತ್, ಧಾರವಾಡದ ಅನುರಾದ ಧಾರೇಶ್ವರ್, ಡಾ.ಪಿ.ಎಸ್.ರಾಮಾನುಜಂ, ಬಿ.ವಿ.ಕೆ. ಶಾಸ್ತ್ರಿ, ಟಿ. ಎಸ್. ಸತ್ಯನ್, ಶ್ರೀಮತಿ. ವಸುಂಧರಾ ದೊರೆಸ್ವಾಮಿ, ಪಿ.ಜಿ.ಲಕ್ಷ್ಮೀನಾರಾಯಣ ಮುಂತಾದವರನ್ನು ಸನ್ಮಾನಿಸಲಾಯಿತು.

ರಘುರಾಮ್ ನಾಟಕ ಕಲಾವಿದರಾಗಿ ಆಕಾಶವಾಣಿಯ ಅನೇಕ ನಾಟಕಗಳಲ್ಲಿ ಪಾತ್ರವಹಿಸಿದ್ದರು. ಕುರುಕ್ಷೇತ್ರದ ನಾಟಕಕ್ಕಾಗಿ ನವದೆಹಲಿಯ ಕುಟುಂಬ ಯೋಜನೆ ಫೌಂಡೇಶನ್ ವತಿಯಿಂದ  ಪ್ರಥಮ ಬಹುಮಾನ ಗೆದ್ದಿದ್ದರು. ಈ ನಾಟಕವು ಆಕಾಶವಾಣಿಯಲ್ಲಿ ಪ್ರಸಾರಗೊಂಡಿತು.  ರಘುರಾಮ್ ಅವರು 'ಇಂಡಿಯನ್ ಸಮ್ಮರ್' ಎಂಬ ಇಂಗ್ಲಿಷ್ ಚಲನಚಿತ್ರದಲ್ಲಿ ಮತ್ತು ಅರ್. ಕೆ. ನಾರಾಯಣ್ ಅವರ "ಮಾಲ್ಗುಡಿ ಡೇಸ್" ಸರಣಿಯಲ್ಲಿ ನಟಿಸಿದ್ದರು. ಕರ್ನಾಟಕ ಸರ್ಕಾರ ನಿರ್ಮಿಸಿದ ಸಾಕ್ಷ್ಯಚಿತ್ರಗಳಿಗೆ ಧ್ವನಿ ವಿವರಣೆ ನೀಡಿದ್ದರು.

ರಘುರಾಮ್ ಬರಹಗಾರರಾಗಿ ತರಂಗ, ಮಲ್ಲಿಗೆ, ಸುಧಾ ಸೇರಿದಂತೆ ಕರ್ನಾಟಕದ ಪ್ರಸಿದ್ಧ ನಿಯತಕಾಲಿಕೆಗಳಿಗೆ ಹಾಸ್ಯ ಲೇಖನಗಳನ್ನು ಕೊಡುಗೆ ನೀಡಿದ್ದರು.  ಅವರ 'ನಗೆಗಡಲು' ಸಂಕಲನ ಕನ್ನಡ ಹಾಸ್ಯ ಸಾಹಿತ್ಯಲೋಕದಲ್ಲೊಂದು ವಿಶಿಷ್ಟ ಕೃತಿ. 

ಎಸ್. ಜಿ. ರಘುರಾಮ್ ಅವರಿಗೆ ಬರೋಡಾ ಕನ್ನಡ ಸಂಘದಿಂದ, ಮೈಸೂರು ಬನುಮಯ್ಯ ಕಾಲೇಜು ಸುವರ್ಣ ಮಹೋತ್ಸವ ಸಮಿತಿಯಿಂದ, ಮೈಸೂರಿನ ವಸುಂಧರ ಪ್ರದರ್ಶನ ಕಲಾ ಕೇಂದ್ರದಿಂದ ಮತ್ತು  ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಗೌರವ ಸನ್ಮಾನಗಳು ಸಂದವು. ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿಯು ಸುಗಮ ಸಂಗೀತ ಗಾಯನಕ್ಕೆ ಪ್ರಶಸ್ತಿ ಮತ್ತು 1997ರಲ್ಲಿ ಕರ್ನಾಟಕ ಕಲಾಶ್ರೀ ಗೌರವ ನೀಡಿ ಸನ್ಮಾನಿಸಿತು.

ಎಸ್. ಜಿ. ರಘುರಾಮ್ ಅವರು ತಮ್ಮ ಪತ್ನಿ ಎಚ್. ಆರ್. ಲೀಲಾವತಿ ಅವರ ಜನಪ್ರಿಯತೆಯ ಕುರಿತಾಗಿ ಅಪಾರ ಮೆಚ್ಚುಗೆ ಅಭಿಮಾನ ಉಳ್ಳವರಾಗಿದ್ದು ಅವರೊಂದಿಗೆ ಅನೇಕ ಗಾಯನ ಕಾರ್ಯಕ್ರಮಗಳನ್ನು ನೀಡಿದ್ದರು.   ಎಸ್. ಜಿ. ರಘುರಾಂ - ಎಚ್. ಆರ್. ಲೀಲಾವತಿ ದಂಪತಿಗಳನ್ನು 1983ರಲ್ಲಿ ಅಮೆರಿಕೆಯ ಟ್ರೆಂಟನ್ ನಗರದಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಸುಗಮ ಸಂಗೀತ ಹಾಡುವ ಪ್ರಪ್ರಥಮ ಗಾಯಕ ರಾಯಭಾರಿಗಳನ್ನಾಗಿ ಕರ್ನಾಟಕ ಸರ್ಕಾರ ಕಳುಹಿಸಿತ್ತು . ಕೊಡುಗೈ ದಾನಿಯಾಗಿದ್ದ ರಘುರಾಮ್ ತಮ್ಮ ಶಿಷ್ಯರನ್ನು ಅಪಾರ ಅಕ್ಕರೆಯಿಂದ ಕಾಣುತ್ತಿದ್ದರು. 

ಎಸ್. ಜಿ. ರಘುರಾಮ್ 2007ರ ಮಾರ್ಚ್ 31ರಂದು ಈ ಲೋಕವನ್ನಗಲಿದರು.  ದಿನಾಂಕ 14.3.2022ರಂದು ಅವರ ಸ್ಮರಣಾರ್ಥ ಮೈಸೂರಿನಲ್ಲಿ ಅವರ ಸಂಗೀತ ಸಂಯೋಜನೆಗಳ ಗೀತಗಾಯನ ಕಾರ್ಯಕ್ರಮ ನಡೆಯುತ್ತಿದೆ.

ಕೃತಜ್ಞತೆಗಳು: Leelavathi HR ಅಮ್ಮಾ 🌷🙏🌷

In remembrance of great name in Sugama Sangeetha S. G. Raghuram 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ