ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುನೀತಾ ಅನಂತಸ್ವಾಮಿ


ಸುನೀತಾ ಅನಂತಸ್ವಾಮಿ


“ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ ನೀ ಬಂದು ನಿಂತಿಲ್ಲಿ ದೀಪ ಹಚ್ಚ” ಗೀತೆಯನ್ನು ಕೇಳಿದಾಗಲೆಲ್ಲಾ ಒಂದು ರೀತಿಯ ಅವ್ಯಕ್ತ ಆನಂದದ ಲೋಕದಲ್ಲಿ ತೇಲುವ ಭಾವ ಮೂಡುತ್ತದೆ. ಎಸ್ ವಿ ಪರಮೇಶ್ವರ ಭಟ್ ಅವರ ಈ ಗೀತೆಗೆ ಧ್ವನಿಯಾದವರು ಮೈಸೂರು ಅನಂತಸ್ವಾಮಿಯವರ ಪುತ್ರಿ ಸುನೀತಾ ಅನಂತಸ್ವಾಮಿ. ದೂರದಲ್ಲೆಲ್ಲೂ ಅಮೆರಿಕದಲ್ಲಿ ನಿಂತಿದ್ದರೂ ಕನ್ನಡದ ಪ್ರೀತಿಯ ಹಣತೆಗಳನ್ನು ಅವರು ನಿರಂತರವಾಗಿ ಹಚ್ಚುತ್ತಲೇ ನಡೆದಿದ್ದಾರೆ. ಅದರಲ್ಲೂ ಇವರು ತಮ್ಮ ತಾಯಿ ಮತ್ತು ಸಹೋದರಿಯರೊಡಗೂಡಿ ಮೈಸೂರು ಅನಂತಸ್ವಾಮಿ ಮತ್ತು ರಾಜು ಅನಂತಸ್ವಾಮಿಯವರ ಗಾನ ಸಂಭ್ರಮದ ನೆನಪುಗಳನ್ನು ನಮ್ಮಲ್ಲಿ ನಿರಂತರವಾಗಿ ಹಸಿರಾಗಿಡುತ್ತಾ ಮುನ್ನಡೆದಿರುವ ಕಾಯಕ ಅನನ್ಯವಾದದ್ದು.

ಮೈಸೂರು ಅನಂತಸ್ವಾಮಿಗಳ ಮನೆಯಲ್ಲಿ ಎಲ್ಲವೂ ಸಂಗೀತಮಯವಿತ್ತೇನೋ. ಅವರ ಮನೆಯಲ್ಲಿ ಎಲ್ಲ ರೀತಿಯ ಸಂಗೀತವಾದ್ಯಗಳೂ ನೆಲೆಗೊಂಡಿದ್ದವು ಎಂದು ಕೇಳಿದ್ದು – ಓದಿದ್ದು ನೆನಪಿದೆ. ಅಂದಿನ ಮೈಸೂರು ಅನಂತಸ್ವಾಮಿಯವರ ಕಚೇರಿಗಳಲ್ಲಿ ಒಂದು ಕಡೆ ರಾಜು ಮತ್ತೊಂದು ಕಡೆ ಸುನೀತಾ ಪುಟ್ಟ ಮಕ್ಕಳಾಗಿದ್ದರೂ ತಂದೆಗೆ ಜೊತೆಗೂಡಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದುದನ್ನು ಕಂಡವರಿಗೆ ಇದಕ್ಕೆ ಹೆಚ್ಚು ಪುರಾವೆಯೇನೂ ಅಗತ್ಯವಿಲ್ಲ. ಸಂಗೀತದ ನಾದ ಆ ಕುಟುಂಬದಲ್ಲಿ ನಿರಂತರ ಅಂತರಗಂಗೆಯಂತೆ ಪ್ರವಹಿಸುತ್ತಿದ್ದಿರಬೇಕು.

ಹಾಗಾಗಿ ಸುನೀತಾ ಪುಟ್ಟ ವಯಸ್ಸಿನಲ್ಲೇ ಶಾಲೆಯಲ್ಲಿ, ಮನೆಯಲ್ಲಿ, ಬಂಧು ಬಳಗಗಳೆದುರು ಹಾಡುತ್ತಿದ್ದರು. ಸುನೀತಾಗೆ ಅವರ ತಾಯಿ ಶಾಂತಾ ಅನಂತಸ್ವಾಮಿಯವರೇ ಮೊದಲಗುರು ಮತ್ತು ಮಾರ್ಗದರ್ಶಕರು. ಸುನೀತಾಗೆ ಹಿಂದುಸ್ಥಾನಿ, ಗಝಲ್, ಟುಮರಿ ಇತ್ಯಾದಿ ಸಂಗೀತ ಪ್ರಕಾರಗಳನ್ನು ಪರಿಚಯಿಸಿದ್ದು ಅವರೇ. ಮನೆಯಲ್ಲಿ ಸದಾಕಾಲ ಭಾವಗೀತೆ ಇದ್ದೇ ಇರುತ್ತಿತ್ತು. ಮನೆಯಿಂದ ಹೊರಗೆ ಮೊಟ್ಟ ಮೊದಲು ಅವರು ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿದ್ದು ಡಿ.ಬಿ ಹರೀಂದ್ರ ಅವರಿಂದ. ನಂತರ ಸುಮಾರು ಎರಡು ವರುಷಗಳ ಕಾಲ ಪಂಡಿತ್ ರಾಜೀವ್ ತಾರಾನಾಥ್ ಅವರಿಂದ ಕಲಿತರು. ಇವೆಲ್ಲದರ ಜೊತೆಗೆ ಅವರು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಹಲವಾರು ವರ್ಷ ಅವರು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದವರು,

ಅನಂತಸ್ವಾಮಿಗಳ ಪರಂಪರೆ ಎಂಬಂತೆ ಸುನೀತಾ ಕೂಡಾ ಹಾರ್ಮೋನಿಯಮ್ ನುಡಿಸಿಕೊಂಡೇ ಹಾಡುತ್ತಾರೆ. ಗಿಟಾರ್, ಮ್ಯಾಂಡೋಲಿನ್ ಮುಂತಾದ ಇತರ ವಾದ್ಯಗಳಲ್ಲಿ ಸಹಾ ಅವರಿಗೆ ಪರಿಣತಿಯಿದೆ. ಬೆಂಗಳೂರು ದೂರದರ್ಶನದ ಕನ್ನಡ ವಾರ್ತೆಗಳ ಸಿಗ್ನೇಚರ್ ಟ್ಯೂನಿಗೆ ಸಹಾ ಅವರು ನುಡಿಸಿದ್ದರು. ಕೆಲವೊಂದು ಚಲನಚಿತ್ರಗಳಿಗೆ ಹಾಗೂ ಭಾವಗೀತೆಯ ಆಲ್ಬಮ್ಮುಗಳಿಗೆ ಸಹಾ ಅವರ ವಾದ್ಯ ಸಂಗೀತ ಸಂದಿದೆ.

ಸುನೀತಾ ಹನ್ನೆರಡು ವರ್ಷ ವಯಸ್ಸಿನಲ್ಲೇ ತಂದೆಯವರ ಕಾರ್ಯಕ್ರಮಗಳಲ್ಲಿ ಸಮೂಹಗಾನಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅಂದಿನ ದಿನಗಳಲ್ಲಿ ಮೈಸೂರು ಅನಂತಸ್ವಾಮಿಗಳ ಜೊತೆಯಲ್ಲಿ ಹಾಡುತ್ತಿದ್ದ ಗಾಯಕಿಯರು ಸಂಸಾರಸ್ಥರಾಗಿ ಕಾರ್ಯಕ್ರಮಗಳಿಗೆ ಬರುವುದು ನಿಂತ ಸಂದರ್ಭದಲ್ಲಿ ಸುನೀತಾ ಅವರಿಗೆ ತಮ್ಮ ತಂದೆಯವರ ಕಚೇರಿಗಳಲ್ಲಿ ಪ್ರಧಾನ ಗಾಯಕಿಯಾಗಿ ಹಾಡುವ ಅವಕಾಶ ಅರಸಿಬಂತು.

1991ರ ವರ್ಷದಲ್ಲಿ ಸುನೀತಾ ಅವರು ಎಸ್.ಆರ್ ರಾಮಕೃಷ್ಣ ಜೊತೆ ಸೇರಿ ‘ಆಹಾ ! ಪ್ರೀತಿ?’ ಎಂಬ ಧ್ವನಿಸುರಳಿಯನ್ನು ಹೊರತಂದರು. ಇದು ಸುನೀತಾ ಅವರು ಸಂಗೀತ ನಿರ್ದೇಶನಕ್ಕೆ ಪ್ರಧಾನವಾಗಿ ಕಾಲಿಟ್ಟ ಪ್ರಯತ್ನ. ಮುಂದೆ ಅವರ ಸಂಗೀತ ನಿರ್ದೇಶನದಲ್ಲಿ ಅನೇಕ ಗೀತೆಗಳು ಮೂಡಿಬಂದಿವೆ. ‘ಅಕ್ಕ’ ಸಮ್ಮೇಳನದ ಸಾಂಸ್ಕೃತಿಕ ನಿಟ್ಟಿನಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿರುವ ಸುನೀತಾ ಹಲವಾರು 'ಅಕ್ಕ' ಸಮ್ಮೇಳನದ ಆಶಯ ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. 1981ರಿಂದ 1991ರ ವರೆಗೆ ಸುನೀತಾ ಒಂದು ದಶಕದ ಕಾಲ ತಂದೆ ಮೈಸೂರು ಅನಂತಸ್ವಾಮಿ ಮತ್ತು ಸಹೋದರ ರಾಜು ಅನಂತಸ್ವಾಮಿ ಜೊತೆಯಲ್ಲಿ ಭಾರತ ಮತ್ತು ಅಮೆರಿಕಗಳಲ್ಲಿ ಸುಗಮ ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟಿದ್ದಾರೆ. ವಿವಾಹದ ನಂತರದಲ್ಲಿ ಎರಡೂವರೆ ದಶಕಗಳಿಂದ ಅಮೆರಿಕದಲ್ಲಿ ನೆಲೆಸಿರುವ ಸುನೀತಾ ತಮ್ಮ ಕಚೇರಿಗಳನ್ನು ಮುಂದುವರೆಸಿದ್ದಾರೆ. ಈ ಕಾಯಕದಲ್ಲಿ ಅವರಿಗೆ ಅವರ ಸಹೋದರಿ ಅನಿತಾ ಅನಂತಸ್ವಾಮಿ ಕೂಡಾ ಎಲ್ಲರೀತಿಯಲ್ಲಿ ಸಹಧ್ವನಿಯಾಗಿದ್ದಾರೆ. ಗಾಯನವೇ ಅಲ್ಲದೆ ಸಂಗೀತ ಶಿಕ್ಷಣವನ್ನು ಸಹಾ ನೀಡುವುದರ ಮೂಲಕ ಭಾರತೀಯ ಸಂಗೀತದ ಸೌಗಂಧವನ್ನು ಅಮೆರಿಕದ ನೆಲದಲ್ಲಿ ಪಸರಿಸುವಲ್ಲಿ ಈ ಸಹೋದರಿಯರು ತಮ್ಮದೇ ಆದ ರೀತಿಯಲ್ಲಿ ಶ್ರಮವಹಿಸುತ್ತಿದ್ದಾರೆ.

ಸುನೀತಾ ಅನಂತಸ್ವಾಮಿಯವರ ಪ್ರೀತಿಯ ಕರೆ ಕೇಳಿ, ತಿಳಿ ಮುಗಿಲ ತೊಟ್ಟಿಲಲಿ, ಮೊದಲ ತಾಯ ಹಾಲು ಕುಡಿದು, ಲೋಕದ ಕಣ್ಣಿಗೆ ರಾಧೆಯು, ಅಮ್ಮ ನಾನು ದೇವರಾಣೆ, ನೀನೊಬ್ಬನೇ ಬಾರೋ, ರಾಘವೇಂದ್ರ ಸಲಹೋ, ಅಂಬಿಗಾ ನಾ ನಿನ್ನ ನಂಬಿದೆ, ನಾಗರಹಾವೆ ಹಾವೊಳು ಹೂವೆ ಮುಂತಾದ ಬಹಳ ಹಾಡುಗಳ ನೆನಪಾಗುತ್ತವೆ. ದೂರದರ್ಶನದ ಅವರ ಸಂದರ್ಶನದಲ್ಲಿ ಸುಗಮ ಸಂಗೀತವೇ ಅಲ್ಲದೆ ಅವರು ಪ್ರಸ್ತುತ ಪಡಿಸಿದ ಗಜಲ್ ಸಂಗೀತ ಕೂಡಾ ಮನಸ್ಸಿನಲ್ಲಿ ನೆಲೆ ನಿಂತಿರುವಂತಿದೆ.

ತಮ್ಮ ಗುರಿ ಏನು ಎಂಬುದಕ್ಕೆ ಸುನೀತಾ ಒಂದು ಸಂದರ್ಶನದಲ್ಲಿ ಕೊಟ್ಟ ಉತ್ತರ “ಸುಗಮ ಸಂಗೀತ, ಸುಗಮ ಸಂಗೀತ, ಸುಗಮ ಸಂಗೀತ!”. ಅವರಲ್ಲಿರುವ ಸಂಗೀತ ಪ್ರೀತಿ ಅಂತದ್ದು. ಸುನೀತವಾದದ್ದು, ಜೊತೆಗೆ ಅನಂತವಾದದ್ದು.

ಫೇಸ್ಬುಕ್ಕಿನ ಬಳಗದಲ್ಲಿ ನಮ್ಮಲ್ಲೊಬ್ಬರಾಗಿ ಬೆರೆತಿರುವ ಈ ಹೃದಯವಂತ, ಪ್ರತಿಭಾವಂತ ಸಹೋದರಿ, ಕನ್ನಡದ ಸಂಗೀತ ಕುವರಿಗೆ ನಮ್ಮ ಹೃತ್ಪೂರ್ವಕ ಶುಭ ಹಾರೈಕೆಗಳು.

Our singer, musician, ambassador of our music culture and great friend Sunitha Ananthaswamy


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ