ಲಲಿತ್ ಜೆ. ರಾವ್
ಲಲಿತ್ ಜೆ. ರಾವ್
ಲಲಿತ್ ಜೆ. ರಾವ್ ಕನ್ನಡ ನಾಡಿನ ಪ್ರಸಿದ್ಧ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕಿ. ಅವರು ಆಗ್ರಾ ಘರಾನಾ ಶೈಲಿಯ ಪ್ರತಿನಿಧಿ.
ಲಲಿತ್ ಅವರು 1942ರ ನವೆಂಬರ್ 6ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರಿಗೆ ಮೂರನೇ ವಯಸ್ಸಿನಲ್ಲಿ ಆಗ್ರಾ ಘರಾನಾ ಮೇರುಗಾಯಕ ಉಸ್ತಾದ್ ಫಯಾಜ್ ಖಾನ್ ಅವರ ಸಂಗೀತ ಕಚೇರಿಯಿಂದ ಶಾಸ್ತ್ರೀಯ ಸಂಗೀತಕ್ಕೆ ಮೊದಲ ಪರಿಚಯ ದೊರಕಿತು.
ಲಲಿತ್ ಅವರು ರಾಮರಾವ್ ನಾಯಕ್ ಅವರಿಂದ ಸಂಗೀತವನ್ನು ಕಲಿಯಲು ಆರಂಭಿಸಿದರು. 12ನೇ ವಯಸ್ಸಿನಲ್ಲಿ ಬೆಂಗಳೂರಿನ ಸಂಗೀತ ಸಭೆಯಲ್ಲಿ ತಮ್ಮ ಮೊದಲ ಸಂಗೀತ ಕಚೇರಿಯನ್ನು ನೀಡಿದರು. 14ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಡೆದ ಅಖಿಲ ಭಾರತ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದರು.
ಲಲಿತ್ ರಾವ್ ಅವರು ಎಲೆಕ್ಟ್ರಿಕಲ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ನಲ್ಲಿ ಪದವಿ ಮತ್ತು ಯೂನಿವರ್ಸಿಟಿ ಆಫ್ ಬ್ರುನ್ಸ್'ವಿಕ್ ಇಂದ ಮಾಸ್ಟರ್ಸ್ ಪದವಿಯನ್ನೂ ಗಳಿಸಿದರು. 1967ರಲ್ಲಿ ಜಯವಂತ ರಾವ್ ಅವರನ್ನು ವಿವಾಹವಾಗಿ ಉದ್ಯೋಗಕ್ಕಾಗಿ ದೆಹಲಿಗೆ ತೆರಳಿದರು. ಸಂಗೀತ ಪ್ರೇಮಿಗಳಾದ ಪತಿ ಜಯವಂತ ರಾಯರು ಲಲಿತ್ ಅವರಿಗೆ ಇಂಜಿನಿಯರಿಂಗ್ ಕ್ಷೇತ್ರದಿಂದ ಹೊರಬಂದು ಸಂಗೀತದಲ್ಲಿ ಮುಂದುವರೆಯುವಂತೆ ಮನವೊಲಿಸಿದರು. ಹೀಗೆ ಲಲಿತ್ ಅವರು ದಿನಕರ್ ಕಾಯ್ಕಿಣಿ ಮತ್ತು ಖದಿಮ್ ಹುಸೇನ್ ಖಾನ್ ಅವರಲ್ಲಿ ಹೆಚ್ಚಿನ ಸಂಗೀತ ಸಾಧನೆ ಮಾಡಿದರು.
ಲಲಿತ್ ರಾವ್ ಅವರು ಖ್ಯಾಲ್, ಧ್ರುಪದ್, ಧಮಾರ್, ಠುಮ್ರಿ, ತರಾನಾ ಮತ್ತು ಹೋರಿ ಹಾಡುವುದರಲ್ಲಿ ಪ್ರವೀಣತೆ ಸಾಧಿಸಿದ್ದಾರೆ. ದೇಶ ವಿದೇಶಗಳಲ್ಲೆಲ್ಲ ಪ್ರಸಿದ್ಧ ವೇದಿಕೆಗಳಲ್ಲಿ ಸಂಗೀತಸುಧೆ ಹರಿಸಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶಗಳ ಉನ್ನತ ದರ್ಜೆಯ ಕಲಾವಿದರಾಗಿದ್ದಾರೆ. "ಸಜನ್ ಮಿಲಾಪ್" ಎಂಬ ಸಂಸ್ಥೆಯನ್ನು ಸ್ಥಾಪಿಸಿದ ಪ್ರಮುಖ ವ್ಯಕ್ತಿಗಳಲ್ಲಿ ಲಲಿತ್ ರಾವ್ ಅವರೂ ಒಬ್ಬರಾಗಿದ್ದಾರೆ. ಲಲಿತ್ ಅವರು 1989-91 ಅವಧಿಯ ಐಟಿಸಿ ಸಂಗೀತ ಸಂಶೋಧನಾ ಅಕಾಡೆಮಿಯ ಫೋರ್ಡ್ ಫೌಂಡೇಶನ್ ಅರ್ಚಿವಲ್ ಯೋಜನೆಯ ಮುಖ್ಯ ಸಂಯೋಜಕರಾಗಿದ್ದರು.
ಲಲಿತ್ ಜೆ ರಾವ್ ಅವರಿಗೆ 2018ರಲ್ಲಿ ಭಾರತ ಸರ್ಕಾರದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2017ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವ ಪುರಸ್ಕಾರ, ಕರ್ನಾಟಕ ಕಲಾಶ್ರೀ ಗೌರವ, ಗುಜರಾತ್ ಸರ್ಕಾರದಿಂದ ತಾನಾ ರಿರಿ ಪ್ರಶಸ್ತಿ, ಕೇರಳ ಸರ್ಕಾರದಿಂದ ನಿಶಾಗಂಧಿ ಪುರಸ್ಕಾರ, ಬೆಂಗಳೂರು ಗಾಯನ ಸಮಾಜದಿಂದ ಜೀವಮಾನದ ಸಾಧನೆ ಪ್ರಶಸ್ತಿ, ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಹಿರಿಯ ಸಂಗೀತಗಾರ್ತಿ ಲಲಿತ್ ಜೆ ರಾವ್ ಅವರಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.
On the birthday of Hindustani classical vocalist Lalith J Rao
ಕಾಮೆಂಟ್‌ಗಳು