ಗಿರಿಜಾ
ಗಿರಿಜಾ
ಇಂದು ಗಿರಿಜಾ ಅವರ ಹುಟ್ಟುಹಬ್ಬ. ಗಿರಿಜಾ ಅಂದರೆ ಮೊದಲು ಕಣ್ಮುಂದೆ ಬರುವುದು ಅವರ 'ಗಿರಿಯಾನ'. ಇದು ಅವರ ಬ್ಲಾಗ್ ( http://www.giriyana.blogspot.in/). ಅಲ್ಲಿ ಅವರ ವೈವಿಧ್ಯಮಯ ಪ್ರವಾಸಗಳ ಕುರಿತಾದ ಆಪ್ತ ವಿಚಾರಗಳಿವೆ. ‘ಗಿರಿ' ಎಂಬುದು ಗಿರಿಜಾ ಅವರ ಹೆಸರಿನ ಎರಡಕ್ಷರ. 'ಯಾನ' ಗಿರಿಜಾ ಅವರ ಪ್ರೀತಿ. ಹೀಗಾಗಿ ಅವರದು 'ಗಿರಿಯಾನ'. ಅವರಿಗೆ ಗಿರಿಗಳ ಕುರಿತಾದ ಅದರಲ್ಲೂ ಹಿಮಾಲಯದ ಕುರಿತಾದ ಯಾನಗಳ ಕುರಿತು ಅಪಾರ ಪ್ರೀತಿ. ಹಿಮಾಲಯದ ನಿವಾಸಿಯಾದ 'ಗಿರಿಜೆ'ಯ ಮೇಲೆ ಈ ಗಿರಿಜೆಗೆ ಅಕ್ಕರೆ ಸ್ವಾಭಾವಿಕ ತಾನೇ. ಹ್ಞಾ ಮತ್ತೊಂದು ವಿಚಾರ ಈಗ ಗಿರಿಜಾ ಬ್ಲಾಗ್ ಲೋಕದಿಂದ ಯೂ ಟ್ಯೂಬ್ ಲೋಕದಲ್ಲಿ
(https://www.youtube.com/@girijaraikva) ತಮ್ಮನ್ನು ಹೆಚ್ಚು ವ್ಯಾಪಿಸಿಕೊಂಡಿದ್ದಾರೆ.
ಗಿರಿಜಾ ತಮ್ಮನ್ನು 'ಹಗಲು ಕನಸು ಕಾಣುವಾಕೆ', 'ಪ್ರವಾಸಿ', 'ತಾಯಿ' ಮತ್ತು 'ಜಿಪ್ಸಿ' ಎಂದು ಕಂಡುಕೊಳ್ಳುತ್ತಾರೆ. ವೃತ್ತಿಯಲ್ಲಿ ಅವರು ಕಾರ್ಪೊರೇಟ್ ರಿಯಲ್ ಎಸ್ಟೇಟ್ ಮತ್ತು ಫೆಸಿಲಿಟೀಸ್ ಮ್ಯಾನೇಜ್ಮೆಂಟ್ ವೃತ್ತಿಯಲ್ಲಿದ್ದು, "ಕಾರ್ಪೋರೇಟ್ ವರ್ಕ್ ಸ್ಪೇಸ್ ಸೃಜನೆಯಲ್ಲಿ" ಅಪರಿಮಿತ ಒಲವುಳ್ಳವರಾಗಿದ್ದಾರೆ.
ವಿಶ್ವದೆಲ್ಲೆಡೆ ಸುತ್ತುವ ಹೊಂಗನಸನು ಹೊತ್ತಿದ್ದ ಗಿರಿಜಾ ಅವರಿಗೆ, ಯಾವುದೇ ಪರ್ಯಟನೆ ಸಾಧ್ಯವಾಗಿದ್ದು ಅವರು ಗಳಿಸಿದ ಸ್ವಾವಲಂಬನೆಯಿಂದ. ಕಾಲಿಗೆ ಚಕ್ರಕಟ್ಟಿಕೊಂಡು ಪರ್ಯಟನೆ ಕೈಗೊಳ್ಳುವ ಅವರ ಈ ಹವ್ಯಾಸಕ್ಕೆ ಅವರ ಪತಿ ಮತ್ತು ಮಗಳ ಸಹಕಾರವೂ ಇದೆ. ಗಿರಿಜಾ ಅವರ ಬ್ಲಾಗಿನಲ್ಲಿ ಮತ್ತು ಯೂಟ್ಯೂಬ್ ವಾಹಿನಿಗಳಲ್ಲಿ, ಅವರು ದೇಶದಲ್ಲಿ ಮತ್ತು ವಿದೇಶಗಳಲ್ಲಿ ಕಂಡುಕೊಂಡ ಅನುಭವಗಳಿವೆ. ಹೋದೆಡೆಗಳೆಲ್ಲಿ ಒಂದಷ್ಟು ತ್ರಾಸವೆನಿಸಿದರೂ ಕಾಲ್ನಡಿಗೆ ಅನುಭವವೂ ಅವರಿಗಿಷ್ಟ.
ಗಿರಿಜಾ ಅವರು ರಂಗ ಕಲಾವಿದೆ ಮತ್ತು ಕವಯಿತ್ರಿ ಕೂಡ.
ಲೋಕದೃಷ್ಟಿಯ ಸುಂದರ ಕನಸುಳ್ಳ, ಕಾರ್ಪೊರೇಟ್ ಲೋಕಕ್ಕೆ ಸೌಕರ್ಯಯುತ ಸೃಜನಶೀಲ ಕಾರ್ಯಲೋಕವನ್ನು ಕಟ್ಟಿಕೊಡುವ ಸಾಮರ್ಥ್ಯವುಳ್ಳ, ಎಲ್ಲರಲ್ಲೂ ಆತ್ಮೀಯ ಭಾವ ಮೂಡಿಸುವ, ಬಹು ಸದಭಿರುಚಿಗಳ ಗಿರಿಜಾ ಅವರ ಬದುಕಿನ ಸುಖ ಪಯಣ ನಿರಂತರವಾಗಿರಲಿ ಎಂದು ಹಾರೈಸುತ್ತ ಅವರಿಗೆ ಹುಟ್ಟುಹಬ್ಬದ ಶುಭಕೋರೋಣ.
Happy birthday Girija Raikva 🌷🌷🌷
ಕಾಮೆಂಟ್‌ಗಳು