ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಮರ್ ಬೋಸ್


 ಅಮರ್ ಬೋಸ್


ವಿಶ್ವದ ಶ್ರೇಷ್ಠ ಧ್ವನಿ ಹೊರಡಿಸುವ ಸ್ಪೀಕರುಗಳನ್ನು ತಯಾರಿಸುವ ಕಂಪೆನಿಯ ಹೆಸರು ಬೋಸ್.  ಅದರ ಹಿಂದಿದ್ದ ಚೇತನ ಭಾರತೀಯ ಮೂಲಸ್ಥ ಕುಟುಂಬಕ್ಕೆ ಸೇರಿದ ಅಮರ್ ಗೋಪಾಲ್ ಬೋಸ್. ಉತ್ತಮ ಧ್ವನಿ ಹೊರಡಿಸಲು ಸ್ಪೀಕರುಗಳು ದೊಡ್ಡದಾಗಿರಬೇಕೆಂಬ ತಪ್ಪುಕಲ್ಪನೆಯನ್ನು ಸುಳ್ಳಾಗಿಸಿ  ಸಣ್ಣ ಸ್ಪೀಕರುಗಳಿಂದಲೇ ಶ್ರೇಷ್ಠ ಗುಣಮಟ್ಟದ ಧ್ವನಿಯನ್ನು ಆಲಿಸಬಹುದು ಎಂದು ಜಗತ್ತಿಗೆ ತೋರಿಸಿಕೊಟ್ಟ ಬೋಸ್ ಕಂಪೆನಿಯನ್ನು  ಹುಟ್ಟುಹಾಕಿದವರು ಅಮರ್‌ ಬೋಸ್.‌

ಅಮರ್‌ ಬೋಸ್‌ ಅಮೆರಿಕದ ಫಿಲಡೆಲ್ಫಿಯಾದಲ್ಲಿ 1929ರ ನವೆಂಬರ್‌ 2ರಂದು ಜನಿಸಿದರು. ಅಮರ್ ಬೋಸ್‌ ಅವರ ತಂದೆ ಬಂಗಾಳದ ನೊನಿ ಗೋಪಾಲ್ ಬೋಸ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಅಮೆರಿಕದ ಫಿಲಡೆಲ್‌ಫಿಯಾಗೆ ಹೋದವರು ಅಲ್ಲಿಯೇ ನೆಲೆಸಿದರು.

1920ರಲ್ಲಿ  ಬ್ರಿಟಿಷ್ ಸರ್ಕಾರ, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ನೊನಿ ಗೋಪಾಲ್ ಬೋಸರನ್ನು  ತಪ್ಪಿತಸ್ಥರನ್ನಾಗಿ ಮಾಡಿ ಶಿಕ್ಷೆಗೆ ಗುರಿಯಾಗಿಸಿತು.   ಗೋಪಾಲ ಬೋಸ್ ಹೇಗೋ ತಪ್ಪಿಸಿಕೊಂಡು ಕೋಲ್ಕೊತ್ತಾದಿಂದ ಹಡಗಿನಲ್ಲಿ ಹೊರಟು ಅಲೆದಲೆದು ಕೊನೆಗೆ ಅಮೆರಿಕ ತಲುಪಿದರು.  ಕೈಯಲ್ಲಿ ಹಣವಿಲ್ಲ, ಯಾರ ಪರಿಚಯವೂ ಇಲ್ಲ, ಎಲ್ಲವೂ ಹೊಸದು. ವೇದಾಂತವನ್ನು ಒಪ್ಪಿಕೊಂಡು ಕೃಷ್ಣಭಕ್ತೆಯಾಗಿದ್ದ ಜರ್ಮನ್ ಮೂಲಸಂಜಾತೆ ಶಾರ್ರ್ಲೊಟ್ ಗೋಪಾಲ ಬೋಸರ ಕೈಹಿಡಿದರು.   ಆಕೆ ಶಾಲಾ ಶಿಕ್ಷಕಿಯಾಗಿದ್ದರು.  ಈಕೆಯನ್ನು ಮದುವೆಯಾದ  ಗೋಪಾಲ್ ಬೋಸ್  ಫಿಲಡೆಲ್ಫಿಯಾದಲ್ಲಿ ಜೀವನ ಪ್ರಾರಂಭಿಸಿದರು.  ಇವರಿಗೆ ಜನ್ಮತಾಳಿದ ಮಗುವೇ ಅಮರ್ ಗೋಪಾಲ್ ಬೋಸ್.    

ಅಮರ್ ಎಷ್ಟು ಚುರುಕಿನ ಹುಡುಗ ಆಗಿದ್ದ ಅಂದರೆ, ಸುಮಾರು ಹತ್ತು ವರ್ಷದವನಿರುವಾಗಲೇ ಬೇರೆ ಮಕ್ಕಳ ವಿವಿಧ ರೀತಿಯ ಗೊಂಬೆಗಳನ್ನು, ಆಟೋಮ್ಯಾಟಿಕ್ ರೈಲು ಮುಂತಾದ ಹಾಳಾಗಿದ್ದ ಗೊಂಬೆಗಳನ್ನು ಸರಿ ಮಾಡಿಕೊಡುತ್ತಿದ್ದ. ಕ್ರಮೇಣ ಈತನ ಪ್ರವೃತ್ತಿಯಿಂದಾಗಿ ಆಕರ್ಷಿತರಾದ ಜನ ಬೇರೆ ಬೇರೆಯ ಅಟಿಕೆ, ರೇಡಿಯೋದಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನೂ ಇವನ ಹತ್ತಿರ ರಿಪೇರಿಗಾಗಿ ಕೊಡಲು ಪ್ರಾರಂಭಿಸಿದರು. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆ ಕಾಲದಲ್ಲಿ, ಮನೆಯ ಸುತ್ತ ಬಿಳಿಯರೇ ಇದ್ದ ಆ ಪ್ರದೇಶದಲ್ಲಿ, ಈ ತರಹದ ವಿಶ್ವಾಸಗಳಿಸಿದ್ದು ಈತನ ವಿಶೇಷ  ಸಾಧನೆಯೇ ಆಗಿತ್ತು. ಹೀಗೆ ವಿದ್ಯಾರ್ಥಿದೆಸೆಯಲ್ಲೇ ಸ್ವಾವಲಂಬಿಯಾಗುವತ್ತ ಅಮರ್ ಹೆಜ್ಜೆ ಹಾಕಿದ್ದ. ಮೊದಮೊದಲು ಬೇರೆ ಅಂಗಡಿಯ ಮೂಲಕ ಕೆಲಸ ತೆಗೆದುಕೊಳ್ಳುತ್ತಿದ್ದುದರಿಂದ ಸಣ್ಣಪ್ರಮಾಣದ ಹಣ ಮಾತ್ರಾ ದೊರೆಯುತ್ತಿತ್ತು. ನಂತರ ಜನ ನೇರವಾಗಿ ಇವನ ಹತ್ತಿರವೇ ಬರಲಾರಂಭಿಸಿದಾಗ ಸ್ವತಂತ್ರವಾಗಿ ಒಂದು ರಿಪೇರಿ ಅಂಗಡಿಯನ್ನೇ ಪ್ರಾರಂಭಿಸಿದ. ಅದು ಎರಡನೇ ಮಹಾಯುದ್ಧದ ಕಾಲವಾದ್ದರಿಂದ ತಂದೆ ನಡೆಸುತ್ತಿದ್ದ ಆಮದು-ರಫ್ತು ವ್ಯಾಪಾರ ದುಃಸ್ಥಿಯಲ್ಲಿತ್ತು. ಹಾಗಾಗಿ ಮಗನ ರಿಪೇರಿ ಅಂಗಡಿಯೇ ಸಂಸಾರಕ್ಕೆ ಜೀವನಾಧಾರವಾಯಿತು. ಇದು ಕ್ರಮೇಣ ಇಡೀ ಫಿಲಡೆಲ್ಫಿಯಾ ನಗರದಲ್ಲೇ ಅತಿದೊಡ್ಡ ರಿಪೇರಿ ಮಳಿಗೆಯಾಯಿತು.  ಇದಲ್ಲದೆ ಅಮರ್  ವಿದ್ಯಾರ್ಥಿಯಾಗಿದ್ದಾಗಲೇ ಅನೇಕ ಹೊಟೇಲುಗಳಲ್ಲೂ ಕೆಲಸವನ್ನು ಮಾಡಿದ್ದರು. ಅವರ ಮಾತಿನಲ್ಲೇ ಹೇಳುವುದಾದರೆ, "ನಾನು ಕೆಲಸ ಮಾಡದ ಹೊಟೇಲ್ಲೇ,  ಫಿಲಡೆಲ್ಫಿಯಾದಲ್ಲಿ ಯಾವುದೂ ಇರಲಿಲ್ಲ".

ಸಂಗೀತದಲ್ಲಿ ಅಪಾರ  ಆಸಕ್ತಿ ಹೊಂದಿದ್ದ  ಅಮರ್ ಬೋಸ್,  ಒಂದುದಿನ ಸಂಗೀತ ಶ್ರವಣ ಸಾಧನವನ್ನು ಕೊಂಡು ತಂದರು. ಅದನ್ನು ಎಷ್ಟು ಸರಿದೂಗಿಸಲು ಕಷ್ಟಪಟ್ಟರೂ ಇವರಿಗೆ ತೃಪ್ತಿದಾಯಕ  ಗುಣಮಟ್ಟ  ಹೊರಹೊಮ್ಮಲಿಲ್ಲ.   ಎಷ್ಟು ಕೆಚ್ಚು ಬಂತೆಂದರೆ "ನಾನು ಜಗತ್ತಿನಲ್ಲಿಯೇ ಅತ್ಯುತ್ತಮ ಧ್ವನಿವರ್ಧಕವನ್ನು ತಯಾರು ಮಾಡುತ್ತೇನೆ" ಅಂದುಕೊಂಡರು, ಮಾತ್ರವಲ್ಲದೆ  ಅದನ್ನೇ ತಮ್ಮ ಮುಂದಿನ ಸಂಶೋಧನಾ ಕ್ಷೇತ್ರವನ್ನಾಗಿಸಿಕೊಂಡರು. ಗಣಿತಶಾಸ್ತ್ರದಲ್ಲಿ ಅಸಾಧ್ಯ ಬುದ್ದಿವಂತರಾಗಿದ್ದ ಅಮರ್ ಬೋಸ್, ಪ್ರಸಿದ್ಧ ಮೆಸ್ಯಾಚುಸೆಟ್ಸ್ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಓದಿದರು. ಹಾಗೆಯೇ ಸ್ನಾತಕೋತ್ತರ ಪದವಿಯನ್ನು ಪೂರೈಸಿ ಅಲ್ಲಿಯೇ ಪ್ರಾಧ್ಯಾಪಕ ವೃತ್ತಿಯನ್ನೂ ಆರಂಭಿಸಿದರು. ಹೆಚ್ಚಿನ ಜ್ಞಾನಕ್ಕಾಗಿ ವಿವಿಧ ದೇಶಗಳಲ್ಲಿ ಅಧ್ಯಯನ ನಡೆಸಿದರು. ನವದೆಹಲಿಯಲ್ಲಿ ಕೂಡ ಒಂದು ವರ್ಷ ವ್ಯಾಸಂಗ ಮಾಡಿದರು. ನಂತರ ಎಂಐಟಿಯಲ್ಲಿ ಪಾಠ ಮಾಡುತ್ತಾ, ಜೊತೆಜೊತೆಗೇ ಗಣಿತ ಸೂತ್ರಗಳನ್ನು ಉಪಯೋಗಿಸುತ್ತಾ ಸಂಶೋಧನೆಯನ್ನು ತೀವ್ರಗೊಳಿಸಿದಾಗ ಉತ್ತಮ ಫಲಿತಾಂಶ ಬಂತು. ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಇವರ ಸಂಶೋಧನೆಗಾಗಿ ಎಂ ಐ ಟಿ ವಿಶ್ವವಿದ್ಯಾಲಯವು ಇವರಿಗೆ  ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಡಾಕ್ಟೊರೇಟ್ ಪ್ರಧಾನ ಮಾಡಿತು.  ಮುಂದೆ 1964ರಲ್ಲಿ ಅಮರ್ ಗೋಪಾಲ್ ಬೋಸ್ ತಮ್ಮ  ಸಹೋದ್ಯೋಗಿಯೊಬ್ಬರ ಸಹಯೋಗದಲ್ಲಿ ತಮ್ಮದೇ ಆದ ಸಂಸ್ಥೆಯನ್ನು ಪ್ರಾರಂಭಿಸಿದರು.  ಅದೇ ಇಂದು ವಿಶ್ವಪ್ರಸಿದ್ಧವಾಗಿ ಬೆಳೆದಿರುವ ‘ಬೋಸ್ ಕಾರ್ಪೋರೇಷನ್’.

1968ರಲ್ಲಿ ಬೋಸರು  ಅಭಿವೃದ್ದಿಪಡಿಸಿದ 901 ಮಾಲಿಕೆಯ ಧ್ವನಿವರ್ಧಕಗಳು ಇಡೀ ಉದ್ಯಮಕ್ಕೇ ಮಾದರಿಯಾಯಿತು. ಮುಂದೆ ವೇವ್, ಆಡಿಷನರ್, ಲೈಫ್ ಸ್ಟೈಲ್, ನಾಯ್ಸ್ ಕಿಲ್ಲರ್  ಮುಂತಾದ ಹೆಸರಿನಲ್ಲಿ ಹೊಸ ಹೊಸ ರೀತಿಯ ಶ್ರೇಷ್ಠ ದರ್ಜೆಯ ಧ್ವನಿವರ್ಧಕ, ಸ್ಪೀಕರ್, ಹೆಡ್ ಫೋನ್, ಹೋಮ್ ಥಿಯೇಟರ್, ಕಾರ್ ಸ್ಟೀರಿಯೋ, ಹೀಗೆ  ಧ್ವನಿ ಮಾದ್ಯಮದಲ್ಲಿ ಏನೇನಿದೆಯೋ ಎಲ್ಲ ರೀತಿಯ ಉಪಕರಣಗಳನ್ನೂ  ಅತ್ಯುತ್ಕೃಷ್ಟ  ಗುಣಮಟ್ಟದಲ್ಲಿ ಉತ್ಪಾದಿಸಿ ಉದ್ಯಮದಲ್ಲಿ ಅತೀ ಎತ್ತರಕ್ಕೆ ಏರಿದರು.  ಬೋಸ್ ಪರಿಕರಗಳು ಸ್ವಲ್ಪ ದುಬಾರಿ ಎನಿಸಿದರೂ ಗುಣಮಟ್ಟದಲ್ಲಿ ಅತ್ಯಂತ ಶ್ರೇಷ್ಠ, ಇದನ್ನು ಪಡೆದುಕೊಳ್ಳುವುದೇ ಹೆಮ್ಮೆ  ಎಂದು ವಿಶ್ವದೆಲ್ಲೆಡೆಯಲ್ಲಿ ಗ್ರಾಹಕರ ಅಭಿಮಾನವನ್ನು ಸಂಪಾದಿಸಿದವು.  ಮನೆಯ ಸಣ್ಣ ಸಿಡಿ ಪ್ಲೇಯರಿನಿಂದ ಹಿಡಿದು, ಚರ್ಚು, ನಾಟಕ-ಚಿತ್ರಮಂದಿರಗಳು, ಸಾರ್ವಜನಿಕ ಸಭೆಗಳು, ವಾಹನಗಳು ಮಾತ್ರವಲ್ಲದೆ  ನಾಸಾ ಉಪಗ್ರಹ ಕೇಂದ್ರದವರೆಗೂ ಎಲ್ಲ ಕ್ಷೇತ್ರಗಳಲ್ಲಿ "ಬೋಸ್" ಸಂಸ್ಥೆಯ ಪರಿಕರಗಳು ತಮ್ಮ   ಪ್ರಾಬಲ್ಯವನ್ನು  ಮೆರೆದವು.

1987ರಲ್ಲಿ ವೈಜ್ಞಾನಿಕ ಸಮುದಾಯ ಅಮರ್ ಗೋಪಾಲ್ ಬೋಸರನ್ನು 'ಇನ್ವೆಂಟರ್ ಆಫ್ ದಿ ಇಯರ್' ಎಂದು ಸನ್ಮಾನಿಸಿತು. ಸಣ್ಣ ವಯಸ್ಸಿನಲ್ಲಿ ಹೋಟೆಲ್ಲಿನ ಮಾಣಿಯಾಗಿ, ರೇಡಿಯೋ ರಿಪೇರಿ ಮಾಡಿ, ಮನೆಯ ಬಾಡಿಗೆ ಕಟ್ಟಲು ಹೆಣಗಾಡುತ್ತಿದ್ದ ಹುಡುಗ, 2007ರ ವರ್ಷದಲ್ಲಿ 1.8 ಬಿಲಿಯನ್ ಡಾಲರ್ ಶ್ರೀಮಂತಿಕೆಯಿಂದ ವಿಶ್ವದ ಅತೀ ಶ್ರೀಮಂತರ ಪಟ್ಟಿಯಲ್ಲಿ 271ನೆಯವರು ಎಂದು ಫೋರ್ಬ್ಸ್ ಸಂಸ್ಥೆಯ ವರದಿಯಲ್ಲಿ ನಮೂದಿತರಾದರು. 

2008ರಲ್ಲಿ ಸುಮಾರು 25 ಪೇಟೆಂಟುಗಳನ್ನು ಹೊಂದಿದ್ದ ಅಮರ್ ಬೋಸರನ್ನು ‘ಇನ್ವೆಂಟರ್ಸ್ ಹಾಲ್ ಆಫ್ ಫೇಮ್'ನಲ್ಲಿ ಇತರ ಶ್ರೇಷ್ಠ ಸಂಶೋಧಕರ  ಸಾಲಿನಲ್ಲಿ ಪ್ರತಿಷ್ಠಾಪಿಸಲಾಯಿತು.   ಅಮೆರಿಕದಲ್ಲಿ ಇದೊಂದು ದೊಡ್ಡಗೌರವ.  ಇದರೊಂದಿಗೆ ಇವರ ಇನ್ನೊಂದು ಅಚ್ಚರಿ ಹುಟ್ಟಿಸುವ ಶೋಧನೆ ಎಂದರೆ ಎಲೆಕ್ಟ್ರೋ ಮ್ಯಾಗ್ನೆಟಿಕ್ ಆಟೋ ಸಸ್ಪೆನ್ಷನ್ ವ್ಯವಸ್ಥೆ.   1980ರಿಂದ ಗಣಿತ ಸೂತ್ರಗಳ ಮೂಲಕ ಆರಂಭವಾದ ಈ ಹೊಸ ರೀತಿಯ ‘ಶಾಕ್ ಅಬ್ಸಾರ್ಬರ್’ ಸಂಶೋಧನೆ, ವಾಹನ ಉದ್ಯಮದಲ್ಲೇ ಒಂದು ಹೊಸ ಕ್ರಾಂತಿಯುಂಟುಮಾಡುತ್ತದೆ ಎಂಬುದು ತಂತ್ರಜ್ಞಾನ ಪಂಡಿತರ ನಿರೀಕ್ಷೆಯಾಗಿದೆ.

ಅಮರ್‌ ಬೋಸ್‌ ಅಧ್ಯಾಪನ ವೃತ್ತಿಯನ್ನು ತುಂಬಾ ಇಷ್ಟಪಟ್ಟಿದ್ದರು, ಬೋಸ್ ಕಂಪೆನಿಯ ಅಧ್ಯಕ್ಷರಾಗಿದ್ದಾಗಲೂ ಎಂ ಐ ಟಿ ವಿದ್ಯಾರ್ಥಿ‌ಗಳಿಗೆ ಅವರು ಪಾಠ ಮಾಡುತ್ತಿದ್ದರು.  2001ರಲ್ಲಿ ಪಾಠ ಮಾಡುವುದನ್ನು ನಿಲ್ಲಿಸಿದ ಬೋಸ್‌,  2011ರಲ್ಲಿ ತಮ್ಮ ಸಂಸ್ಥೆಯ ಬಹುಪಾಲು ಮತ ಚಲಾವಣೆಯ ಹಕ್ಕನ್ನು ಹೊಂದಿಲ್ಲದಂತಹ ಶೇರುಗಳನ್ನು ಪುನರ್ ಮಾರಾಟ ಮಾಡುವುದಿಲ್ಲ ಎಂಬ ಷರತ್ತಿನ ಮೇಲೆ ಎಂಐಟಿಗೆ ಕೊಡುಗೆಯಾಗಿ ನೀಡಿದರು.   ಅಮರ್ ಬೋಸ್ ಅವರ ಪುತ್ರ 'ವನು ಬೋಸ್' ಮುಂದೆ ಬೋಸ್ ಕಾರ್ಪೋರೇಷನ್ನಿನ ಮುಖ್ಯಸ್ಥರಾದರು. 

ಅಮರ್ ಗೋಪಾಲ್ ಬೋಸರು 2013ರ ಜುಲೈ 11ರಂದು ನಿಧನರಾದರು.  ದೇಹ ಅಶಾಶ್ವತ.  ಮನುಜ ತಾನು ಮಾಡಿದ ಕೆಲಸದಿಂದ ಮಾತ್ರ ಈ ಭುವಿಯಲ್ಲಿ ಸುದೀರ್ಘ ಕಾಲ ಉಳಿಯಬಲ್ಲ.  ಅಂತಹ ಸುಧೀರ್ಘ ಕಾಲ ಉಳಿಯುವ ಕೆಲಸವನ್ನು ಮಾಡುವವರು ಈ ವಿಶ್ವದಲ್ಲಿ ಅತ್ಯಲ್ಪ ಜನ ಎಂಬುದು ನಮಗೆ ತಿಳಿದ ವಿಷಯ.  ಇಂಥ ತುಂಬಾ ಕಡಿಮೆ ಮಂದಿಯಲ್ಲಿ ಅಮರ್ ಗೋಪಾಲ್ ಬೋಸರದ್ದು ಪ್ರಮುಖ ಹೆಸರು.  ಒಂದು ಅಚ್ಚರಿಯ ವಿಚಾರವೆಂದರೆ ಇಂಥಹ ಶ್ರೇಷ್ಠ ಸಾಧಕನ ಹೆಸರು ಭಾರತದಲ್ಲಿ ಹೆಚ್ಚು ಪ್ರಚಾರದಲ್ಲಿಲ್ಲದೆ ಇದ್ದದ್ದು!  ಬಹುಶಃ ಅದು ಪ್ರಚಾರದಲ್ಲಿದಿದ್ದರೆ ನಾವು ಬೋಸ್‍ ಸ್ಪೀಕರುಗಳನ್ನೂ ಆಶಿಸುತ್ತಿರಲಿಲ್ಲವೇನೊ!

On the birth anniversary of great resilience behind great sound Amar Bose

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ