ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ಎನ್. ಲಾವಣ್ಯ ಪ್ರಭಾ


 ಕೆ. ಎನ್. ಲಾವಣ್ಯ ಪ್ರಭಾ

ಡಾ. ಕೆ. ಎನ್. ಲಾವಣ್ಯ ಪ್ರಭಾ ಅವರು ಪ್ರಖ್ಯಾತ ಕವಯಿತ್ರಿ ಮತ್ತು ಸುಶ್ರಾವ್ಯ ಕಾವ್ಯ ವಾಚಕಿ. ಸಾಹಿತ್ಯ, ಸಂಸ್ಕೃತಿ, ಸುಗಮ ಸಂಗೀತ ಹೀಗೆ ಅವರ ಆಸಕ್ತಿಗಳು ಬಹುಮುಖಿ.  ಜೊತೆಗೆ ಇವೆಲ್ಲವುಗಳ ಕಾಂತಿಯನ್ನು ಪ್ರತಿಫಲಿಸುವಂತಹ ನಿತ್ಯ ಹಸನ್ಮುಖಿ.

ನವೆಂಬರ್ 2, ಲಾವಣ್ಯ ಪ್ರಭಾ ಅವರ ಜನ್ಮದಿನ.  ಅವರು ಜನಿಸಿದ್ದು ಕನಕಪುರದಲ್ಲಿ.  ಪ್ರಸಕ್ತದಲ್ಲಿ ಅವರು ಮೈಸೂರು ನಿವಾಸಿ.  ಪದವಿ ಪಡೆದು ಸಾಂಸಾರಿಕ ಜವಾಬ್ದಾರಿಗಳನ್ನು ನಿರ್ವಹಿಸಿ, ಹದಿನೈದು ವರ್ಷಗಳ ನಂತರ ಸ್ನಾತಕೋತ್ತರ ಪದವಿ ಪಡೆದ ಇವರು, "ಎಂ. ವಿ. ಸೀತಾರಾಮಯ್ಯನವರ ಸಾಹಿತ್ಯ"ದ ಕುರಿತಾದ ಮಹಾ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದಿಂದ  ಪಿಎಚ್‌.ಡಿ ಸಾಧನೆಯನ್ನೂ ಮಾಡಿದ್ದಾರೆ.

ಲಾವಣ್ಯ ಪ್ರಭಾ ಅವರ ಬಹುಮುಖಿ ಬರಹಗಳು ಪ್ರಜಾವಾಣಿ, ಕನ್ನಡ ಪ್ರಭ, ವಿಜಯಕರ್ನಾಟಕ, ಸುಧಾ, ತರಂಗ, ಮಯೂರ, ತುಷಾರ ಸೇರಿದಂತೆ ಎಲ್ಲ ನಿಯತಕಾಲಿಕಗಳು  ಮತ್ತು ಅಂತರಜಾಲ ಮಾಧ್ಯಮಗಳಲ್ಲಿ ಕಂಗೊಳಿಸುತ್ತ ಬಂದಿವೆ. ಮೈಸೂರಿನ ದಸರಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ,  ಸಂಚಯದ ಸಾಹಿತ್ಯ ಸಂಜೆ, ಸುಚಿತ್ರಾ ಫಿಲ್ಮ್ ಸೊಸೈಟಿಯ ನವರಾತ್ರಿ ಕವಿಗೋಷ್ಠಿ, ಸಿರಿಗೆರೆ ಮಠದ ಬೆಳದಿಂಗಳ ಕವಿಗೋಷ್ಠಿಗಳಲ್ಲಿ ಮತ್ತು ಮೈಸೂರು ಆಕಾಶವಾಣಿ, ಚಂದನ ದೂರದರ್ಶನ ವಾಹಿನಿಯ ಪ್ರಮುಖ ಕವಿಗೋಷ್ಟಿಗಳಲ್ಲದೆ ಅನೇಕ ಕಡೆ ಕವಿತೆ ವಾಚಿಸಿದ್ದಾರೆ. ಕೆಲವು ಕವಿಗೋಷ್ಠಿಗಳ ಅಧ್ಯಕ್ಷತೆಯನ್ನೂ ನಿರ್ವಹಿಸಿದ್ದಾರೆ. ಇವರದೇ ಯೂಟ್ಯೂಬ್ ಚಾನೆಲ್ ಸಹಾ ಇದೆ. 

ಲಾವಣ್ಯ ಪ್ರಭಾ ಅವರ ಪ್ರಕಟಿತ ಕೃತಿಗಳಲ್ಲಿ 'ನದಿ ಧ್ಯಾನದಲ್ಲಿದೆ’, ‘ಹುಟ್ಟಲಿರುವ ನಾಳೆಗಾಗಿ’, ‘ಗೋಡೆಗಿಡ’, 'ಸ್ಪರ್ಶ ಶಿಲೆ' ಕವನ ಸಂಕಲನಗಳು ಸೇರಿವೆ. 

ಲಾವಣ್ಯ ಪ್ರಭಾ ಅವರ ಕವಿತೆಯೊಂದು ಹೀಗೆ ಕಂಗೊಳಿಸಿದೆ:

ಮಳೆಗೆ ತೊಯ್ದು ಬಿಸಿಲಲ್ಲಿ ಕಾದು
ಹದಗೊಂಡ ರಾತ್ರಿರಾಣಿಯ
ಒಡ್ಡೋಲಗದಲ್ಲಿ…..
ಇರುಳು ಹೊರಳಿದಷ್ಟೂ ಹೊತ್ತು
ಮತ್ತಷ್ಟು ಮಗದಷ್ಟು
ಆವರಿಸುತ್ತಾ ಪಿಸುಮಾತಿನಲ್ಲೇ
ಸವಿಮುತ್ತನೊತ್ತಿ
ಕಾಡಿಸುವ ಚಂದಿರನ ಸಂಭ್ರಮಕೆ
ಹಾಡು ಹಸೆ ಹಿನ್ನೆಲೆಯಲ್ಲಿ
ನಕ್ಷತ್ರ ನಿಹಾರಿಕೆಗಳ ಸಡಗರ
ಮಧುವನದ ತುಂಬೆಲ್ಲಾ ಗಿಲಿಗಿಲಿ
ಗಿಲಕಿ ಗಿರಕಿ ಹೊಡೆದು
ಬೆಳದಿಂಗಳಿನುಯ್ಯಾಲೆಯಲಿ
ರಾಗ ಅನುರಾಗದ ಕೊರಳು
ಮಿಡಿದ ಕವಿತೆಗಳ
ಮಾಯದ ನೆರಳಲ್ಲಿ
ನಾಗಸ್ವರದಲೆ ಅಲೆ ತೇಲಿ….
ರೆಕ್ಕೆಯಗಲಿಸಿದ ಬಾನಹಕ್ಕಿಯ
ಹೂದೋಟದಲ್ಲಿ ನೆನಪು ಕನಸುಗಳ
ಸುಖಮೇಳ
ಹುಣ್ಣಿಮೆಯ ರಾತ್ರಿಯಲ್ಲಿ
ಹನಿಹನಿ ಹಿಮ್ಮೇಳ
ಚಂದಿರನೂರಿನ ತುಂಬೆಲ್ಲಾ
ಈಗ
ಭರಪೂರ ಪ್ರೇಮೋತ್ಸವ……

ಲಾವಣ್ಯಾ ಅವರಿಗೆ ಎರಡು ಬಾರಿ "ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ", ಮುಂಬೈನ ಡೊಂಬಿವಿಲಿ ಕರ್ನಾಟಕ ಸಂಘದ ಬಹುಮಾನ, ಸಂಕ್ರಮಣ ಸಾಹಿತ್ಯ ಸ್ಪರ್ಧೆ ಬಹುಮಾನ, ಕ್ರೈಸ್ಟ್ ಕಾಲೇಜಿನ "ದ.ರಾ.ಬೇಂದ್ರೆ ಸ್ಮೃತಿ ಸ್ಮಾರಕ ಬಹುಮಾನ", "ನದಿ ಧ್ಯಾನದಲ್ಲಿದೆ" ಸಂಕಲನಕ್ಕೆ "ಡಾ.ಲತಾ ರಾಜಶೇಖರ ದತ್ತಿನಿಧಿ ಪ್ರಶಸ್ತಿ", ಕನ್ನಡ ಸಾಹಿತ್ಯ ಪರಿಷತ್ತಿನ "ಡಾ.ಸಿ.ಎಚ್. ಮರಿದೇವರು ದತ್ತಿನಿಧಿ" ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ. 

ನಿತ್ಯ ನಗೆಮೊಗದ ಸಾಹಸಿ, ಕವಯಿತ್ರಿ, ಆತ್ಮೀಯರಾದ ಲಾವಣ್ಯ ಪ್ರಭಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Lavanya Prabha 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ