ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹಸುರು ಹೊನ್ನು


 ಹಸುರು ಹೊನ್ನು
(ಡಾ. ಬಿ.ಜಿ. ಎಲ್ ಸ್ವಾಮಿ ಅವರ ಪುಸ್ತಕ)


ನಾನು ಹಿಂದೆ ದುಬೈನಲ್ಲಿದ್ದ ಸುಮಾರು ಒಂದು ದಶಕದ ಅವಧಿಯಲ್ಲಿ (ಈಗ ಪುನಃ ದುಬೈನಲ್ಲಿದ್ದೇನೆ), ನಾನು ವಾಹನ ಚಲಿಸದೆ ಇದ್ದುದರಿಂದ ನನಗೆ ಆದ ಉಪಯೋಗಗಳು ಹಲವಾರು.  (ಅದರಿಂದ ಲೋಕಕ್ಕೆ ಆಗಿರುವ ಉಪಯೋಗಗಳು ಕೂಡ ಹಲವಾರು!)  ನನಗೆ ಆಗಿರುವ ಪ್ರಮುಖ ಉಪಯೋಗವೆಂದರೆ ಓದುವುದು.   ವಾರದಲ್ಲಿ ಎರಡು ಬಾರಿ ದುಬೈನಿಂದ ಅಬುಧಾಬಿಗೆ ಬಸ್ಸಿನಲ್ಲಿ ಪಯಣಿಸುವಾಗ ಕಡೇಪಕ್ಷ ವಾರಕ್ಕೆ ಎಂಟು ಗಂಟೆಗಳ ಸಮಯದಲ್ಲಿ ಕಡೇ ಪಕ್ಷ ಎರಡು ಮೂರು ಗಂಟೆಗಳಾದರೂ ಓದುವ ಸಮಯ ಮತ್ತು ಓದುವ ಮನಸ್ಸು ಇರುತ್ತಿತ್ತು. ಬಸ್ಸಿನ ಶಬ್ಧ ಮತ್ತು ಸಹಪ್ರಯಾಣಿಕರ ತರಾವರಿ ಗೊರಕೆ ಶಬ್ಧ ನನಗೆ ರೂಡಿಯಾಗಿರುವುದು ಕೂಡ ತುಂಬಾ ಸಹಾಯಕವಾಗಿತ್ತು.  ಹೀಗೆ ಕಳೆದ ಅವಧಿಯಲ್ಲಿ ನಾನು  ಓದಿದ ಅತ್ಯುತ್ತಮ ಪುಸ್ತಕಗಳಲ್ಲೊಂದು  ‘ಹಸುರುಹೊನ್ನು’.   ನಾನು ಸಾಹಿತ್ಯದ  ವಿದ್ಯಾರ್ಥಿಯಾಗಲೀ, ಓದುವ ಹುಳುವಾಗಲೀ ಅಲ್ಲ. ಯಾರೋ ಹೇಳಿದ, ಬಹುಶಃ ಓದಿದರೆ ಒಂದಷ್ಟಾದರೂ ಪ್ರತಿಷ್ಠೆ ಇದೆ ಎಂಬ ಮನೋಭಾವನೆಯ, ಜೊತೆಗೆ ತಮಗೆಲ್ಲ ತಿಳಿದಿರುವಂತೆ ಓದಿ ತಲೆ ಪ್ರತಿಷ್ಠೆ ಮಾಡುವಂತಹ ವ್ಯಕ್ತಿ.  ಕೆಲವೊಮ್ಮೆ ಒಂದು ತರಹದ ಪುಸ್ತಕ ಓದಿದರೆ, ಅದೇ ತರಹದ ಪುಸ್ತಕಗಳನ್ನೇ ಪುನಃ ಹುಡುಕುವುದೂ ಉಂಟು.  ಇದಕ್ಕೆ  ಹಿಂದೆ  ಮೈಸೂರಿನಲ್ಲಿದ್ದಾಗ, ಬಿ.ಜಿ.ಎಲ್ ಸ್ವಾಮಿ ಅವರ  ‘ಪ್ರಾಧ್ಯಾಪಕನ ಪೀಠದಲ್ಲಿ’ ಕೊಂಡು ತಂದಿದ್ದೆ.  ಅದನ್ನು ಓದಿದ ಸಂತಸದ ನಂತರದಲ್ಲಿ ಅವರ ಇತರ ಪುಸ್ತಕಗಳನ್ನು ಓದುವ ಇನ್ನಷ್ಟು ಇಚ್ಛೆ ಉಂಟಾಯಿತು.  ಹೀಗೆ ‘ಹಸುರುಹೊನ್ನು’ ನನ್ನ ಓದಿಗೆ ಸೇರ್ಪಡೆಯಾಯ್ತು.

“ಕಾಲಾನುಕಾಲದಿಂದ ನಮ್ಮ ಬದುಕಿನೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಒಡನಾಡಿಗಳಾಗಿ ಬೆಳೆದುಬಂದಿರುವ ಕೆಲವು ಗಿಡಮರಗಳ ಪರಿಚಯ ಮಾಡಿಕೊಡುವುದು ಈ ಬರವಣಿಗೆಯ ಪ್ರಯತ್ನ” ಎಂದು ಮುನ್ನುಡಿಯಲ್ಲಿ ಸ್ವಾಮಿ ಅವರು ಹೇಳುತ್ತಾರೆ.   ಮೊದಲ ಕೆಲವು ಪುಟಗಳಲ್ಲಿ ಒಂದಿಷ್ಟು ಹಾಸ್ಯ ಪ್ರಹಸನಗಳನ್ನು  ಓದಿದನಂತರ ನನಗೆ ಗೊತ್ತಿಲ್ಲದ ಯಾವುದೋ ಸಸ್ಯಶಾಸ್ತ್ರದ ಪುಸ್ತಕ ಓದುತ್ತಿದ್ದೇನೆಯೇ, ಇದನ್ನು ನಾನು ಪೂರ್ಣ ಓದಿ ಮುಗಿಸುತ್ತೇನೆಯೇ ಎಂಬ ಭಾವ ಪ್ರಶ್ನೆ ಮೂಡಲು  ಪ್ರಾರಂಭವಾಯಿತು.  ನನ್ನಲ್ಲಿರುವ ಸುಮಾರು ಪುಸ್ತಕಗಳನ್ನು ಹೀಗೆ ಕೆಲವು ಪುಟಗಳನ್ನು ಓದಿ ಹಾಗೇ ಇಟ್ಟಿದ್ದೇನೆ.  ಆದರೆ ಬಿ.ಜಿ.ಎಲ್ ಸ್ವಾಮಿ ಅವರ ಬರಹದ ವೈಶಿಷ್ಟ್ಯವೇ ವೈಶಿಷ್ಟ್ಯ.  ಸಾಮಾನ್ಯ ಓದುಗರಾದ ನನ್ನಂತವರಿಗೆ  ನಾವು ಚಿಕ್ಕಂದಿನಲ್ಲಿ ಸಿನಿಮಾಗೆ ಮುಂಚೆ ನೋಡುತ್ತಿದ್ದ Documentary ಚಿತ್ರವಾಗಬಹುದಾದ ‘ಸಸ್ಯಶಾಸ್ತ್ರದ’ ಜ್ಞಾನವನ್ನು ವಿದ್ಯಾರ್ಥಿಗಳ, ಆಡಳಿತಾತ್ಮಕ ವ್ಯವಸ್ಥೆಗಳ, ಪ್ರಯಾಣದ  ಹಾಸ್ಯ ಪ್ರಹಸನಗಳ ಹೊಳೆಯ ನಡುವೆ ಸುಂದರ ಪ್ರವಾಸದಲ್ಲಿನ  ಒಂದು ಹೂಬನದಂತೆ ದರ್ಶನ ಮಾಡಿಸುವ ಬಿ ಜಿ ಎಲ್ ಸ್ವಾಮಿ ಅವರ ಬರಹದ ಸೊಗಸು ನನ್ನಲ್ಲಿ ಇನ್ನಷ್ಟು ಓದಬೇಕೆಂದು ಆಸೆ ಹುಟ್ಟಿಸಿದೆ.  ಇದನ್ನು ಓದಿದಾಗ ಅನಿಸಿತು.  “ನಾವು ಓದಿದ ಪಾಠ ಪುಸ್ತಕಗಳೆಲ್ಲ ಇದೇ ತೆರನಾಗಿದ್ದಿದ್ದರೆ ನಾವೆಲ್ಲಾ ಎಷ್ಟೊಂದು ಸಂತೋಷದಿಂದ ನಮ್ಮ ವಿದ್ಯಾಭ್ಯಾಸವನ್ನು ಮಾಡಬಹುದಿತ್ತಲ್ಲವೇ?”.  

ಇಲ್ಲಿ ನೂರಾರು ಗಿಡಮರ ಬಳ್ಳಿಗಳ ಪರಿಚಯ ಬರುತ್ತದೆ – ಡ್ರೈನೇರಿಯ,  ಜಾಯಿಕಾಯಿ, ಪತ್ರೆ, ಹಲಸು, ಪುತ್ರಂಜೀವ, ಕದಂಬ, ಬಲಮುರಿ, ರುದ್ರಾಕ್ಷಿ, ಭದ್ರಾಕ್ಷಿ, ಸಪ್ತಪರ್ಣಿ, ಅನಿಮೋನ್, ಸರ್ಪಗಂಧಿ, ಆನೆಹುಲ್ಲು, ಅಶೋಕ, ನಾಗಸಂಪಿಗೆ, ಬೂರುಗ, ಮಾಧವೀಲತೆ, ಸಾರ್ಕೆಂಡ್ರ, ಗೋರಂಟಿ, ಪಾದರಿ, ಹಾಲೆ, ತೇಗ, ಗೌರಿಹೂ, ಕುಷ್ಠ, ಸೀತಾಳಿ, ಮಜ್ಜಿಗೆಹುಲ್ಲು, ಧೂಮ, ಕನ್ಯಾಸ್ತ್ರೀ, ಬಗನೀ, ಸೀತೆಯ ದಂಡೆ, ಬಿದಿರು, ನೆಲ್ಲಿ, ಜೀರ್ಕಾ, ಕವಲು, ತಮಾಲ (ಲವಂಗ), ಮೆಣಸು, ಮೆಣಸಿನಕಾಯಿ, ಇವೂ ಅಲ್ಲದೆ,  ತಾಲ, ಶ್ರೀತಾಲ, ಅನಡಿಯಾಮಿನಿ, ಅಸಿಟಾಬುಲೇರಿಯಾ, ಜಿಲೆಡಿಯಂ, ಸಮುದ್ರಸೌತೆ, ಗೋಡಂಬಿ, ಕೇದಗೆ, ಜಾಪಾಳ, ನೆಗ್ಗಿಲು, ವಿಂಕಾರೋಸಿಯ, ಅಶ್ವತ್ಥ, ಕಮಲ, ಕುಮುದ, ಅಡಕೆ, ಗ್ಲೋರಿಯೋಸ (ಕಾಂದಲ್), ಬಕುಳ ಇತ್ಯಾದಿ ಬಹಳಷ್ಟು ನಮ್ಮ ಕಣ್ಮುಂದೆ ನಿಲ್ಲುತ್ತವೆ.  ಅವರು ಹೇಳುವ ಪಾಚಿಯಂತಹ ನಮಗೆ ಅಸಹನೀಯವೆನಿಸುವ ಸಸ್ಯದ ಕತೆ ಕೂಡ ವೈಭವಪೂರ್ಣವಾಗಿದೆ.

ಮೇಲೆ ಹೇಳಿದಂತೆ ಇಂತಹ ಒಂದು ಬರಹ,  ಕೇವಲ ಅಧ್ಯಯನ  ಬರಹ ಆಗಿಬಿಡುವ ಸಾಧ್ಯತೆ ಆಗಿರುವಾಗ ಅದನ್ನು ನನ್ನಂತಹ ಸಾಮಾನ್ಯ ಓದುಗನಿಗೆ ಕೂಡ ಅರ್ಥವಾಗುವಂತೆ ಅವರು ಪರಿಚಯಿಸುವ ಪರಿ ಮನಮೋಹಕ.  ಪರಿಚಯಕ್ಕೆ ಮೊದಲು ಒಂದು ವಿನೋದದ ವಾತಾವರಣ ನಮ್ಮ ಕಣ್ಮುಂದೆ ಸೃಷ್ಟಿಯಾಗುತ್ತದೆ.  ನಾವು ಆ ವಿನೋದದ ವಾತಾವರಣದಲ್ಲಿ ಮೀಯುತ್ತಿರುವ ಹಾಗೆ, ನಮಗೇ ಅರಿವಿಲ್ಲದಂತೆ ಒಂದು ಬಸ್ಸಿನಲ್ಲೋ, ರೈಲಿನಲ್ಲೋ ಒಂದು ಪ್ರವಾಸಕ್ಕೆ ಹೋಗಿ ಬಿಜಿಎಲ್ ಸ್ವಾಮಿ ಮತ್ತು ಅವರ ಶಿಷ್ಯವೃಂದವನ್ನು ಸೇರಿಕೊಂಡ ಹರ್ಷದಲ್ಲಿ ಸೇರಿಹೊಗಿರುತ್ತೇವೆ. “ಓ ಇದು ನಾನು ನೋಡಿರುವ ಊಟಿಯ ಸಮೀಪ ಇದೆ; ಓ ಇದು ರಾಮೇಶ್ವರ, ನಾನು ಯಾತ್ರೆ ಹೋಗಿದ್ದೆನಲ್ಲ ಅದು;  ಇದು ಆಗುಂಬೆ, ಅಲ್ಲಿನ ಸೂರ್ಯಾಸ್ತದ ನೆನೆಪೇ ನೆನಪು”  ಹೀಗೆ ಭಾವಿಸುತ್ತ, ನೀವು ಈಗಾಗಲೇ ಭೇಟಿಕೊಟ್ಟಿರುವ ಸ್ಥಳಗಳ ವೀಕ್ಷಣೆಗೆ ಮತ್ತೊಮ್ಮೆ ಬಿ ಜಿ ಎಲ್ ಸ್ವಾಮಿ ಅವರ ತಂಡದೊಂದಿಗೆ ಹೋಗಿರುತ್ತೀರಿ.  ಆದರೆ ನೀವು ನೋಡುವುದು ಮಾತ್ರ ಈಗಾಗಲೇ ನೋಡಿರುವ ಸೀಮಿತ ಪಿಕ್ನಿಕ್ ಸ್ಪಾಟ್ ಅಲ್ಲ.  ಅದರ ಆಚೆಯ ಬದಿಯಲ್ಲಿ ನೀವು ಬಹುಶಃ ಎಂದೂ ಕಾಣದಿರುವ ಪ್ರಕೃತಿಯ ವಿಸ್ಮಯ ಸೃಷ್ಟಿಯನ್ನ.  ಜೊತೆಗೆ ನೀವು ನೋಡಿರುವ ಆಗುಂಬೆ, ಆಗುಂಬೆಯ ಮಳೆ, ರಸ್ತೆ ಬದಿಯಲ್ಲಿರುವ ಹಸಿರು ಕೂಡ ಬಿ ಜಿ ಎಲ್ ಸ್ವಾಮಿ  ಅವರೊಡನೆ ನೋಡಿದಾಗ ಇನ್ನಷ್ಟು ಆತ್ಮೀಯವಾಗುತ್ತದೆ.  (ಈ ಹಿಂದೆ ಈ ಪುಸ್ತಕದಿಂದ ಆಯ್ದ ‘ತೇಗ’ ಮತ್ತು ‘ಆಗುಂಬೆಯ ಸೂರ್ಯಾಸ್ತ’ ಎಂಬ ಎರಡು ಲೇಖನಗಳನ್ನು ‘ಕನ್ನಡ ಸಂಪದ’ ದಲ್ಲಿ ಪ್ರಕಟಿಸಿದ್ದೇನೆ).

ಈ ಕಥನ ರೀತಿ ಒಮ್ಮೊಮ್ಮೆ ಸಮಗ್ರ ದೃಷ್ಟಿಯನ್ನು ತಾಳಿರುತ್ತದೆ.  ಉದಾಹರಣೆಗೆ ಅವರು ವರ್ಣಿಸುವ ‘ಮಾವು’.   ಹುಳಿ ಮಾವು ಸಿಹಿಯಾದ ಬಗೆಯನ್ನು ತಿಳಿಸಿ, ಮಾವಿನ ಭೇದ, ಪ್ರಭೇದಗಳನ್ನು ಗಮನಿಸಿ, ಶಿಲ್ಪಗಳಲ್ಲಿ ಚಿತ್ರಗಳಲ್ಲಿ ಹಾಗೂ ರೇಷಿಮೆ ಸೀರೆಗಳಲ್ಲಿ ಅದು ರೂಪಸ್ಥಗಿತ ಮನೋಹರತೆಯನ್ನು ತಾಳಿದ್ದ ಬಗೆಯನ್ನು ಕಾಣಿಸಿ, ಸಮಾಜದ ಶುಭಕಾರ್ಯಗಳಲ್ಲಿ ಹಬ್ಬ ಹುಣ್ಣಿಮೆಗಳಲ್ಲಿ ಅದರ ಅನಿವಾರ್ಯತೆಯನ್ನು ನಿರೂಪಿಸಿ, ಔಷಧಿಯಲ್ಲಿ ಅದರ ಪಾತ್ರ ತಿಳಿಸಿ, ಸಂಸ್ಕೃತ ಕವಿಗಳು ಅದರ ಪ್ರಭಾವಕ್ಕೊಳಗಾದವರೇ? ಅದನ್ನು ಕುರಿತು ಕವಿತೆಗಳನ್ನು ಬರೆದಿರುವರೇ ಎಂದು ಅವಲೋಕಿಸಿ, ತಮಿಳು ಕವಿಗಳು ಅದಕ್ಕೆ ಮಾರುಹೋದ ಬಗೆಯನ್ನು ವರ್ಣಿಸಿ ಕನ್ನಡ ಕವಿಗಳು, ಪಂಪನಿಂದ ಇಂದಿನವರೆಗೆ, ಅದರಿಂದ ಹೇಗೆ ಪ್ರಭಾವಿತರಾದರೆಂಬುದುನ್ನು ಅವರು ಹೇಳುವ ಸೊಬಗಿನಲ್ಲಿ ನಾವು ಸಂಪೂರ್ಣವಾಗಿ ಕಾವ್ಯ ಪ್ರಪಂಚದಲ್ಲಿ ತಲ್ಲೀನರಾಗಿಬಿಡುತ್ತೇವೆ.  

ಅಶ್ವತ್ಥ ವೃಕ್ಷ ನೋಡಿದೊಡನೆ 
“ನಾವಾರೋ ಜಗಕೇನೋ ಎಂತೋ
ಈ ಬಾಳಿನ ಬಳಿಕೇನುಂಟೋ
ಈ ಚಿಂತೆಗಳಿಗೇಕೋ ಬರಿದು
ದಯೆಯೊಂದೇ ದೈವವು ಸೌಗತವು”
ಎಂದು ವಿ.ಸೀ ಅವರು ಹೇಳುವ ಗೌತಮನ ಸಾಕ್ಷಾತ್ಕಾರ ತೆರೆದುಕೊಳ್ಳುತ್ತದೆ ಅಲ್ಲಿ.  

ಕಮಲ, ಕುಮುದವನ್ನು ಕಂಡೊಡನೆ ಗದುಗಿನ ಅರಣ್ಯಪರ್ವದಲ್ಲಿನ 
“ಕನಕಮಯ ರಥವೇರಿ ರವಿ ಬರೆ
ವನಜವರಳಿತು ಕುಮುದ ಮುಚ್ಚಿದುದು” 
ಎಂಬ ರಮಣೀಯ ವರ್ಣನೆ ಕಾಣುತ್ತದೆ.  

ಬಕುಳದ ಸನಿಹದಲ್ಲಿ, ಅವರ ವಿದ್ಯಾರ್ಥಿ ಒಬ್ಬಳು ಕೆಮ್ಮು ಕೆನೆದು ಸೀನು ಹಾಕಿದಾಗ. ಅದಕ್ಕಲ್ಲವೇ, ಪಂಪ   “ಮಧುವ ಕಂಪಂ ಮುಕ್ಕುಳಿಸಿದ ವಕುಳ” ಎಂದದ್ದು! ಹೀಗೆ ಸಾಗುತ್ತದೆ ಅವರ ಕಾವ್ಯಾತ್ಮಕ ಸೊಬಗು.  

ನೆಲ್ಲಿಕಾಯಿ ಮರದ ಕುರಿತು ಋಗ್ವೇದ ಕಾಲದಿಂದಲೂ ಅಮಲಾ, ಆಮಳಕಾ ಎಂದು ಪರಿಚಿತವಾಗಿ ‘ಅಂಗೈಯ ನೆಲ್ಲಿಕಾಯಿ’ ಆಗಿರುವ ಮರ ಇದು ಎಂದು ನೆನಪಿಸುತ್ತಾರೆ.  

ಇನ್ನು ಹಾಸ್ಯದ ವಿಚಾರದಲ್ಲಿ ಬಿ.ಜಿ. ಎಲ್ ಸ್ವಾಮಿ ಅವರನ್ನು ಓದಿದವರಿಗೆಲ್ಲ ಗೊತ್ತು ಅವರು ಉಣಬಡಿಸುವ ರಸದೌತಣ ಸ್ವಾದ.  ನಮ್ಮ ಇಂದಿನ ವಿದ್ಯಾಭ್ಯಾಸದ ಮಟ್ಟದ ಕುರಿತಾಗಿ ಸ್ವಾಮಿ ಅವರ ಒಂದು ಸಣ್ಣ ವಿಡಂಭನೆ ಹೇಳುತ್ತೇನೆ.  ಒಮ್ಮೆ ಪ್ರಸಿದ್ಧ ಸಸ್ಯಶಾಸ್ತ್ರಜ್ಞ ಎಂ.ಎಸ್. ರಾಂಧವ ಅವರು, ಸಸ್ಯಶಾಸ್ತ್ರಕ್ಕೆ ಸಂಬಂಧಪಟ್ಟ ಹುದ್ದೆಯೊಂದಕ್ಕೆ ಉಮೆದುವಾರನನ್ನು ಆಯ್ಕೆ ಮಾಡುವ ಕಮಿಟಿಯೊಂದರಲ್ಲಿ ಕುಳಿತು ಕೊಳ್ಳುವ ಸಂದರ್ಭವೊಂದು ಒದಗಿತಂತೆ. ಫಸ್ಟ್ ಕ್ಲಾಸಿನಲ್ಲಿ ಎಂ.ಎಸ್.ಸಿ ಡಿಗ್ರಿ ಪಡೆದಿದ್ದ ಅಭ್ಯರ್ಥಿಯೊಬ್ಬನನ್ನು ‘ಗೋಧಿಯ ಗಿಡವನ್ನು ನೋಡಿದ್ದೀಯಾ? ಅದು ಮರವೆ, ಗಿಡವೆ ಬಳ್ಳಿಯೇ?’ ಎಂದು ಕೇಳಿದಾಗ ಉತ್ತರ ಹೇಳಲು ಬಾರದೆ ತಬ್ಬಿಬ್ಬಾದನಂತೆ.  ಮೇಲ್ಛಾವಣಿಯ ತೊಲೆಗಳನ್ನು ತೋರಿಸಿ ‘ಗೋಧಿಯ ಮರದಿಂದ ಬಂದ ತೊಲೆಗಳಿವು’ ಎಂದಾಗ ‘ಹೌದು’ ಎಂದು ಹಲ್ಲುಕಿರಿದನಂತೆ!  

ಹೀಗೆ ನನ್ನ ಹಲವು ಬಸ್ ಪಯಣಗಳಲ್ಲಿ ನನ್ನ ಮತ್ತು ಬಸ್ಸಿನ ಒಳಗು ಹೊರಗುಗಳ ವೀಕ್ಷಣೆ, ಬಸ್ಸಿನಲ್ಲಿ ಮೂಡುವ ಬೆಳಕಿನ ಅವಕಾಶಗಳಲ್ಲಿ ಓದಿದ ಈ ಪುಸ್ತಕ ನನಗೆ ಗೊತ್ತಿಲ್ಲದ ಹಲವು ಲೋಕಗಳ ಸುಂದರ ಪ್ರವಾಸ ನೀಡಿತು.  ಈ ಹಿಂದಿನ ಹಲವು ವರ್ಷಗಳಲ್ಲಿ ಒಂದಿಷ್ಟು ಅಧ್ಯಾತ್ಮ ಎಂಬ ಹೆಸರಿನ ಹುಚ್ಚು ಆಗಾಗ ಮೂಡಿ ಅದರ ಬಗೆಯ ಹಲವು ಸಣ್ಣ ಪುಸ್ತಕಗಳನ್ನು ಅಲ್ಲಿ ಇಲ್ಲಿ ಓದುತ್ತಿದ್ದೆ.  ಕೆಲವೊಮ್ಮೆ ಓದಿದ್ದನ್ನೆಲ್ಲ ಆಧ್ಯಾತ್ಮದ ಪರಿಧಿಯಲ್ಲಿ ನೋಡುವ ಹುಚ್ಚು ಕೂಡ ಇದೆ.  ನಮ್ಮ ಪರಿಸರ, ಸಸ್ಯ ಸಂಪತ್ತು ಇತ್ಯಾದಿಗಳ ‘ಹಸುರುಹೊನ್ನು’ ಪುಸ್ತಕದ ದರ್ಶನದ ಪ್ರಭಾವದಲ್ಲಿ ನನ್ನನ್ನೇ ಹೀಗೆ ಪ್ರಶ್ನಿಸಿಕೊಂಡೆ.  ದೇವರು, ಆತನ ಕೆಲಸವನ್ನು ನೋಡುವ ಇಷ್ಟೊಂದು ಸೊಬಗನ್ನು ನಮ್ಮ ಮುಂದಿಟ್ಟಿರುವಾಗ ಏನನ್ನೂ ಅರಿಯದೆ  ಅವನ ಬಳಿ ಹೋಗಿ ಗಮಾರನಂತೆ ಮಿಕಿ ಮಿಕಿ ನೋಡುತ್ತಾ, ಆತನಿಗೆ ಹಿಂಸೆ ಉಂಟು ಮಾಡುವ ಕೆಲಸವನ್ನೇ ನಾನು ಹೆಚ್ಚು ಮಾಡುತ್ತಿರಬಹುದೇ?  

ಅಂದ ಹಾಗೆ ಇದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ ಕೂಡ ಹೌದು.  ನೀವೂ ಈ ಪುಸ್ತಕ ಓದಿ ನಿಮ್ಮ ಅಭಿಪ್ರಾಯಕೂಡ ಬರೆಯಿರಿ.

A great book in Kannada on the treasure of greenery

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ