ತಾರಾನಾಥನ್
ರುದ್ರಪಟ್ನಂ ಸಹೋದರರು
ವಿದ್ವಾನ್ ಆರ್.ಎನ್. ತ್ಯಾಗರಾಜನ್ ಮತ್ತು ವಿದ್ವಾನ್ ಡಾ.ಆರ್.ಎನ್.ತಾರಾನಾಥನ್ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಪಂಚಕ್ಕೆ ರುದ್ರಪಟ್ನಂ ಸಹೋದರರೆಂದೇ ಪರಿಚಿತರು.
ಈ ಸಹೋದರರ ಪೈಕಿ ಹಿರಿಯರಾದ ತ್ಯಾಗರಾಜನ್ ದೂರದರ್ಶನದ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಪಡೆದವರು. ತಾರಾನಾಥನ್ ಅವರು ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ವಿಜ್ಞಾನಿಯಾಗಿದ್ದವರು.
ಡಾ. ಆರ್. ಎನ್. ತಾರಾನಾಥನ್ ಅವರು ಜನಿಸಿದ ದಿನ ನವೆಂಬರ್ 6, 1946. ಆರ್. ಎನ್. ತ್ಯಾಗರಾಜನ್ ಅವರು ಜನಿಸಿದ್ದು ಜುಲೈ 15, 1943ರಲ್ಲಿ. ಈ ಇಬ್ಬರೂ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರ ಸಹೋದರಿ ಡಾ. ಆರ್. ಎನ್. ಶ್ರಿಲತಾ ಅವರು ಕೂಡ ಸುಪ್ರಸಿದ್ಧ ಸಂಗೀತಗಾರ್ತಿ ಹಾಗೂ ಮೈಸೂರಿನ ಲಲಿತ ಕಲಾ ಕಾಲೇಜಿನ ಸಂಗೀತ ವಿಭಾಗದ ಮುಖ್ಯಸ್ಥರು.
ಈ ರುದ್ರಪಟ್ನಂ ಸಹೋದರರ ತಂದೆ ಆರ್. ಕೆ. ನಾರಾಯಣ ಸ್ವಾಮಿಯವರು ಮದ್ರಾಸಿನಲ್ಲಿ ಮುಸುರಿ ಸುಬ್ರಹ್ಮಣ್ಯ ಅಯ್ಯರ್ ಅವರ ಬಳಿ ಶಿಕ್ಷಣ ಪಡೆದು ಪಾಂಡಿತ್ಯ ಗಳಿಸಿದಂತಹವರು. ಮೈಸೂರಿಗೆ ಬಂದ ಮೇಲೆ ಅವರಿಗೆ ಸಂಗೀತದಲ್ಲಿ ಪ್ರೋತ್ಸಾಹ - ಅವಕಾಶ ಸಿಗದೆ ನಿರಾಶರಾಗಿಬಿಟ್ಟಿದ್ದರು. ಆದ್ದರಿಂದ ಸಂಗೀತದಲ್ಲಿ ಏನೂ ಭವಿಷ್ಯವಿಲ್ಲವೆಂದು ಮಕ್ಕಳಿಗೆ ಸಂಗೀತ ಕಲಿಸಲೇಬಾರದೆಂದು ತೀರ್ಮಾನಿಸಿದ್ದರು. ಆದರೆ ಅವರ ತಾಯಿಯವರಿಗೆ ಮಾತ್ರ ಇದರಲ್ಲಿ ಬಹಳ ಆಸಕ್ತಿ ಇತ್ತು. ಮನೆಗೆ ಆಗಾಗ್ಗೆ ಬರುತ್ತಿದ್ದ ದೊಡ್ಡಪ್ಪನವರಾದ ಆರ್. ಕೆ. ವೆಂಕಟರಾಮ ಶಾಸ್ತ್ರಿಗಳು ಹಾಗೂ ಚಿಕ್ಕಪ್ಪಂದಿರಾದ ಆರ್. ಕೆ. ರಾಮನಾಥನ್ ಮತ್ತು ಆರ್. ಕೆ. ಶ್ರಿಕಂಠನ್ ಅವರು ಮನೆಯ ಬೇರೆ ಬೇರೆ ಕೋಣೆಗಳಲ್ಲಿ ಹಾಡುವುದು ಈ ಸಹೋದರರ ಕಿವಿಗೆ ಬೀಳುತ್ತಿತ್ತು. ಈ ಕೇಳ್ಮೆಯಿಂದಲೇ ಸುಮಾರು ರಚನೆಗಳು ಈ ಸಹೋದರರಿಗೆ ಹಾಡಲು ಬಂದುಬಿಟ್ಟಿದ್ದವು. ಹೀಗಿರುವಾಗ ಇವರ ಮನೆಯ ಹತ್ತಿರವಿದ್ದ ಶ್ರಿ ಹನುಮಂತರಾವ್ ಎಂಬುವರು ಇವರ ತಾಯಿಗೆ ಹೇಳಿ, ಈ ಸಹೋದರರ ಒಂದೂವರೆ ಗಂಟೆ ಕಾಲದ ಕಛೇರಿಯನ್ನು ಏರ್ಪಡಿಸಿಬಿಟ್ಟರು. ಕಡೆಗೆ ತಾಯಿಯ ಬಲವಂತಕ್ಕಾಗಿ ಬೇಸರಿಸಿಕೊಂಡೇ, ತಂದೆಯವರು ಈ ಸಹೋದರರನ್ನು ಕಛೇರಿಗೆ ತಯಾರು ಮಾಡಿದರು. ಹಾಡಿದ್ದಕ್ಕೆ ಈ ಹುಡುಗರಿಗೆ ಸಾಕಷ್ಟು ಪ್ರಶಂಸೆ ಸಿಕ್ಕಿತು. ಆಗ ತ್ಯಾಗರಾಜನಿಗೆ ಹನ್ನೆರಡು ವರ್ಷ, ತಾರಾನಾಥನಿಗೆ ಒಂಬತ್ತು. ಹೀಗೆಯೇ, ಅವರ ಅಜ್ಜಿ ಹಾಗೂ ಇತರರ ಪ್ರೋತ್ಸಾಹದ ಮೂಲಕ ಈ ಹುಡುಗರ ಐದಾರು ಕಛೇರಿಗಳು ನಡೆದವು. ಆಗ, ಮಕ್ಕಳಿಗೆ ಹೇಳಿಕೊಡದೆ ಬಿಟ್ಟರೆ ಸರಿಯಲ್ಲವೆನಿಸಿ, ಇವರ ತಂದೆ ಪ್ರಾರಂಭದಿಂದ ಸಂಗೀತ ಶಿಕ್ಷಣ ಪ್ರಾರಂಭಿಸಿದರು. ನಂತರ ಚಿಕ್ಕಪ್ಪರಿಂದಲೂ ಹಲವಾರು ಕೃತಿಗಳನ್ನು ಕಲಿತರು. ದೊಡ್ಡಪ್ಪನವರು ಬೇಸಿಗೆ ರಜೆಯಲ್ಲಿ ಮದರಾಸಿಗೆ ಕರೆದುಕೊಂಡು ಹೋಗುತ್ತಿದ್ದಾಗ’ ಬೇಕಾದಷ್ಟು ಪಾಠ ಮಾಡಿದರು. ಜೊತೆಗೆ ಕೆ.ವಿ.ನಾರಾಯಣ ಸ್ವಾಮಿಯವರಿಂದ ಕೆಲವು ಕೃತಿಗಳನ್ನೂ, ಲಾಲ್ಗುಡಿ ಜಯರಾಮನ್ ಅವರಿಂದ ಕೆಲವು ವರ್ಣ, ತಿಲ್ಲಾನಗಳನ್ನೂ ಕಲಿತರು. ಬಿ. ಕೆ. ಪದ್ಮನಾಭ ರಾವ್ ಮತ್ತು ವಿ. ರಾಮರತ್ನಂ ಅವರಿಂದಲೂ ಈ ಸಹೋದರರು ಕಲಿತರು. ಇವರ ಮೇಲೆ ಅತ್ಯಂತ ಪ್ರಭಾವ ಬೀರಿದ ವಿದ್ವಾಂಸರೆಂದರೆ ಮುಖ್ಯವಾಗಿ ರಾಮನಾಡ್ ಕೃಷ್ಣನ್, ಶೆಮ್ಮಂಗುಡಿ ಮತ್ತು ಜಿ.ಎನ್.ಬಿ.ಯವರು.
ಈ ಸಹೋದರರದು ಸಂಪ್ರದಾಯ ಬದ್ಧ ಸಂಗೀತವೆಂದೇ ಪ್ರಸಿದ್ಧಿ. ಈ ವಿಚಾರವಾಗಿ ಈ ಸಹೋದರರು ಹೀಗೆ ದನಿಗೂಡಿಸುತ್ತಾರೆ. “ಶಾಸ್ತ್ರೀಯತೆ ಅರ್ಥವಾಗದವರೂ ಮೆಚ್ಚುವಂತೆ ಹಾಡುವುದು ನಮ್ಮ ಗುರಿಯಲ್ಲ. ಅವರನ್ನು ಮೆಚ್ಚಿಸಲು ಅವರಿಗೆ ಬೇಕಾದಂತಹ ಕೃತಿಗಳನ್ನು ಹಾಡುವುದು, ಪ್ರಾರಂಭಿಸಿದಾಕ್ಷಣ ಜನರಿಗೆ ಆಕರ್ಷಣೆ ಉಂಟು ಮಾಡುವಂತಹ ಕೀರ್ತನೆಗಳನ್ನು ಹಾಡುವುದು, ಗಿಮಿಕ್ ಮಾಡುವುದು, ಇದನ್ನೆಲ್ಲಾ ನಾವು ಮಾಡುವುದಿಲ್ಲ. ಸಂಗೀತವನ್ನು ನಾವು ಹಾಡುವುದು ದೇವರಿಗೋಸ್ಕರ, ನಮ್ಮ ಸಂತೋಷಕ್ಕೋಸ್ಕರ.”
1972ರಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ಈ ಸಹೋದರರ ಕಛೇರಿ ಏರ್ಪಾಡಾಗಿತ್ತು. ಹರಿಕಾಂಭೋಜಿ ರಾಗ ಹಾಡುತ್ತಿದ್ದರು. ಆಗ ಯಾರೋ ಅದನ್ನು ಕೇಳಿ, ರಾಮನಾಡ್ ಅವರಿಗೆ ಫೋನು ಮಾಡಿ, 'ಇಲ್ಲಿ ಇಬ್ಬರು ಹುಡುಗರು ಹಾಡುತ್ತಿದ್ದಾರೆ. ಅದನ್ನು ಕೇಳಿದರೆ ತಮ್ಮ ಶೈಲಿ ನೆನಪಿಗೆ ಬರುತ್ತಿದೆ' ಎಂದು ಹೇಳಿದರು! ಆಗ ಅವರು ಕಛೇರಿ ಮುಗಿದ ತಕ್ಷಣವೇ ಈ ಹುಡುಗರನ್ನು ಅವರ ಮನೆಗೆ ಕರೆದುಕೊಂಡು ಬರಲು ಕೇಳಿಕೊಂಡರಂತೆ. ಅಂತೆಯೇ ಅವರನ್ನು ಭೇಟಿ ಮಾಡಿದರು. ಅವರು ಇವರೊಡನೆ ಮಾತನಾಡಿ ಆಶೀರ್ವದಿಸಿ ಕಳಿಸಿಕೊಟ್ಟರು. ಇದು ಈ ಸಹೋದರರಿಗೆ ಮರೆಯಲಾಗದ ಅನುಭವ.
ಈ ಸಹೋದರರ ಸಂಗೀತ ಸಾಧನೆಗೆ 'ಪದ್ಮಶ್ರೀ' ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ, ಮುಸುರಿ ಸುಬ್ರಹ್ಮಣ್ಯ ಅಯ್ಯರ್ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಗಾನ ಸುಧಾಕರ, ಕರ್ನಾಟಕ ಕಲಾಶ್ರಿ, ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ನಾಗರತ್ನಮ್ಮ ಟ್ರಸ್ಟಿನ ತ್ಯಾಗರಾಜ ಪ್ರಶಸ್ತಿ, ಮೈಸೂರಿನ ಜೆ.ಎಸ್.ಎಸ್. ಸಂಗೀತ ಸಭೆಯ 'ಸಂಗೀತ ವಿದ್ಯಾನಿಧಿ' ಬಿರುದು, ಬೆಂಗಳೂರು ಗಾಯನ ಸಮಾಜದ 'ಆರ್ಟಿಸ್ಟ್ ಆಫ್ ದಿ ಇಯರ್' ಪ್ರಶಸ್ತಿ, ಕಂಚಿ ಕಾಮಕೋಟಿ ಪೀಠದ ‘ಆಸ್ಥಾನ ವಿದ್ವಾನ್` ಪ್ರಶಸ್ತಿ, ಚೌಡಯ್ಯ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಸಂದಿವೆ.
ನಮ್ಮ ಕನ್ನಡನಾಡಿನ ಹಿರಿಯ ಸಂಗೀತ ವಿದ್ವಾಂಸರಾದ ರುದ್ರಪಟ್ನಂ ಸಹೋದರರಿಗೆ ನಮ್ಮ ಗೌರವಗಳು. ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಡಾ. ಆರ್. ಎನ್. ತಾರಾನಾಥನ್ ಅವರಿಗೆ ಹುಟ್ಟುಹಬ್ಬದ ಶುಭ ಹಾರೈಕೆಗಳು.
On the birth day of Rudrapatnam brothers fame R. N. Tharnathan
ಕಾಮೆಂಟ್‌ಗಳು