ವಾಸುದೇವ ಸಾಮಗ
ಮಲ್ಪೆ ವಾಸುದೇವ ಸಾಮಗರು ಇನ್ನಿಲ್ಲ
ಯಕ್ಷಗಾನ ಕಲಾಲೋಕದ ಮಹಾನ್ ಕಲಾವಿದರಾದ ಮಲ್ಪೆ ವಾಸುದೇವ ಸಾಮಗರು ಇಂದು (2020 ನವೆಂಬರ್ 7ರಂದು) ನಿಧನರಾಗಿದ್ದಾರೆ. ಅವರಿಗೆ 71ವರ್ಷವಾಗಿತ್ತು.
ತೆಂಕು-ಬಡಗು ತಿಟ್ಟಿನ ಸವ್ಯಸಾಚಿ ಕಲಾವಿದರೆಂದು ಹೆಸರಾಗಿದ್ದ ವಾಸುದೇವ ಸಾಮಗರು ಕುಂದಸಪುರದಲ್ಲಿ ನೆಲೆಸಿದ್ದರು. ಮಲ್ಪೆ ವಾಸುದೇವ ಸಾಮಗರು ಯಕ್ಷ ದಿಗ್ಗಜರೆರೆನಿಸಿಕೊಂಡಿದ್ದ ಪ್ರಸಿದ್ಧ ಹರಿದಾಸರಾದ ಮಲ್ಪೆ ರಾಮದಾಸ ಸಾಮಗರ ಪುತ್ರರು. ಮಲ್ಪೆ ಶಂಕರ ನಾರಾಯಣ ಸಾಮಗರು ಇವರ ದೊಡ್ಡಪ್ಪ ಹಾಗೂ ಗುರುಗಳು. ಈ ಪ್ರಭಾವದಿಂದ ವಾಸುದೇವ ಸಾಮಗರು ಸಹಜವಾಗಿಯೇ ಯಕ್ಷಗಾನದಲ್ಲಿ ಒಲವು ಮೂಡಿಸಿಕೊಂಡಿದ್ದರು.
ವಾಸುದೇವ ಸಾಮಗರು ಕೋಟ ಶ್ರೀಧರ ಹಂದೆಯವರ ಒತ್ತಾಸೆಯ ಮೇರೆಗೆ ಪ್ರಥಮ ಬಾರಿಗೆ ದೊಡ್ಡ ಕೂಟದಲ್ಲಿ ಅರ್ಥಧಾರಿಯಾಗಿ ಗಮನಸೆಳೆದು, ಅವರದ್ದೇ ಯಜಮಾನಿಕೆಯ ಅಮೃತೇಶ್ವರಿ ಮೇಳದಲ್ಲಿ ವೃತ್ತಿರಂಗಕ್ಕೆ ಕಾಲಿಟ್ಟರು.
ಮುಂದೆ ಸಾಮಗರು ನಾರಣಪ್ಪ ಉಪ್ಪೂರರ ಒಡನಾಟದಲ್ಲಿ ಪರಿಪೂರ್ಣ ಕಲಾವಿದರಾಗಿ ಆ ಮೇಳದಲ್ಲಿ ಗುರುತಿಸಿಕೊಂಡರು. ಅಲ್ಲಿ ದೊಡ್ಡ ಸಾಮಗರು, ಚಿಟ್ಟಾಣಿಯವರು, ಕೋಟ ವೈಕುಂಠ, ಎಂ. ಎ. ನಾಯಕ್, ನಗರ ಜಗನ್ನಾಥ ಶೆಟ್ಟಿ, ಗೋಡೆ ನಾರಾಯಣ ಹೆಗಡೆ ಅಂತಹ ಘಟಾನುಘಟಿಗಳ ಸಾಂಗತ್ಯ ಅವರಿಗೆ ದೊರೆಯಿತು. ಅಂದಿನ ದಿನಗಳಲ್ಲಿ ಪ್ರದೀಪನ ಪಾತ್ರ ಅವರಿಗೆ ಅಪಾರ ಜನಪ್ರಿಯತೆ ತಂದಿತ್ತು.
ವಾಸುದೇವ ಸಾಮಗರು ಧರ್ಮಸ್ಥಳ, ಕದ್ರಿ, ಸುರತ್ಕಲ್ ಮೇಳಗಳಲ್ಲಿ ಪಾಲ್ಗೊಂಡು ನಂತರ ಕಾಳಿಂಗ ನಾವಡರ ಪ್ರಸಿದ್ಧಿಯ ಕಾಲದಲ್ಲಿ ಸಾಲಿಗ್ರಾಮ ಮೇಳ ಸೇರಿದರು. ಅಲ್ಲಿ ಅವರ ಭಾನುತೇಜಸ್ವಿ ಪ್ರಸಂಗದ ಭಾನುತೇಜಸ್ವಿ, ಚೈತ್ರಪಲ್ಲವಿಯ ಪಾತ್ರಗಳು ಪ್ರಸಿದ್ಧಿ ಪಡೆದವು. ನಾಗಶ್ರೀ ಪ್ರಸಂಗದ ಶುಭ್ರಾಂಗನ ಪಾತ್ರಕ್ಕೆ ಶಿರಿಯಾರ ಮಂಜು ನಾಯ್ಕರ ನಂತರ ಹೊಸರೂಪವನ್ನು ನೀಡಿದ ಸಾಮಗರು, ಯಕ್ಷಗಾನದಲ್ಲಿ ಪ್ರಥಮ ಬಾರಿಗೆ ನ್ಯಾಯಾಲಯ ಸನ್ನಿವೇಶವನ್ನು ಸೃಜಿಸಿದರು. ಪೆರ್ಡೂರು ಮೇಳದಲ್ಲಿಯೂ ಹೊಸ ಪ್ರಸಂಗಗಳಲ್ಲಿ ಸಿದ್ದಕಟ್ಟೆ ಚೆನ್ನಪ್ಪಶೆಟ್ಟಿ ಮತ್ತು ಇವರ ಜೋಡಿವೇಷಗಳು ಸಂಭಾಷಣೆಯ ಚತುರತೆಗಳಿಂದ ಹೊಸ ಹೊಸ ಪ್ರೇಕ್ಷಕರನ್ನು ಯಕ್ಷಗಾನದತ್ತ ಸೆಳೆದಿತ್ತು. ಬಳಿಕ ಬಗ್ವಾಡಿ ಸೌಕೂರು ಮುಂತಾದ ಬಯಲಾಟ ಮೇಳದಲ್ಲಿ ಭಾಗವಹಿಸಿ ಮೇಳದ ಯಜಮಾನಿಕೆಯನ್ನೂ ಮಾಡಿ ಸಿಹಿ ಕಹಿ ಉಂಡರು.
ವಾಸುದೇವ ಸಾಮಗರು ಅನೇಕ ಪ್ರಸಂಗಗಳಲ್ಲಿ ನಾಯಕ, ಪ್ರತಿನಾಯಕ, ಹಾಸ್ಯ ಮತ್ತು ಸ್ತ್ರೀವೇಷಗಳನ್ನೂ ನಿರ್ವಹಿಸಿದ್ದರು. ವಿಭಿನ್ನ ನಿಲುವಿನ ಕೈಕೆ, ದಶರಥ, ದೇವವ್ರತ-ಭೀಷ್ಮ, ಕಂಸ, ಕೃಷ್ಣ, ರುಕ್ಮಾಂಗದ-ಮೋಹಿನಿ, ಅಂಬೆ-ಪರಶುರಾಮ, ಮಂಥರೆ ಮುಂತಾದ ಪಾತ್ರಗಳನ್ನು ತಮ್ಮ ವೈಚಾರಿಕ ನಿಲುವಿನಿಂದ ಪ್ರಸ್ತುತಪಡಿಸಿದ್ದರು. ಉತ್ತರಕುಮಾರ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.
ವಾಸುದೇವ ಸಾಮಗರು 80 ಪ್ರಸಂಗಗಳ ಪುಸ್ತಕ ರಚಿಸಿದ್ದಾರೆ
ಮಲ್ಪೆ ವಾಸುದೇವ ಸಾಮಗರು 'ಸಂಯಮಂ' ಎಂಬ ಸಂಸ್ಥೆಯನ್ನು ಸ್ಥಾಪಿಸಿ ತಮ್ಮ ಧ್ಯೇಯ ಧೋರಣೆಯಂತೆ ಸಮಯಮಿತಿಯ ತಾಳಮದ್ಧಳೆ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ ಯಕ್ಷಗಾನ ಕಲೆಗೆ ಹೊಸ ಶಿಸ್ತನ್ನು ತಂದಿತ್ತ ಸಾಹಸಿಗಳಾಗಿ ಅಮರರಾಗಿದ್ದಾರೆ.
ಅಗಲಿದ ಈ ಮಹಾನ್ ಚೇತನಕ್ಕೆ ನಮನ.
Respects to the departed soul Yakshagana artiste Malpe Vasudeva Samaga
ಕಾಮೆಂಟ್‌ಗಳು