ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿದ್ವಾನ್ ಎಸ್. ಶಂಕರ್


 ವಿದ್ವಾನ್ ಎಸ್. ಶಂಕರ್

ವಿದ್ವಾನ್ ಎಸ್. ಶಂಕರ್ ಕರ್ನಾಟಕ ಸಂಗೀತದ ಮಹತ್ಸಾಧಕರಲ್ಲಿ ಒಬ್ಬರು.

ಶಂಕರ್ ಅವರು ಜಿ. ವಿ. ಶಾಸ್ತ್ರಿ ಮತ್ತು ರಾಜಮ್ಮ ದಂಪತಿಗಳ ಸುಪುತ್ರರಾಗಿ 1950ರ ನವೆಂಬರ್ 27ರಂದು ಜೋಗದಲ್ಲಿ ಜನಿಸಿದರು. ತಂದೆಯವರು ಕರ್ನಾಟಕ ವಿದ್ಯುತ್ಚ್ಚಕ್ತಿ ನಿಗಮದಲ್ಲಿನ ಲೆಕ್ಕಪತ್ರ ವಿಭಾಗದ ಸೂಪರಿಂಟೆಂಡೆಂಟ್ ಆಗಿದ್ದರು. ಅವರಿಗೆ 1951ರಲ್ಲಿ ಜೋಗದಿಂದ ವರ್ಗವಾದಾಗ ಬೆಂಗಳೂರಿಗೆ ಬಂದರು.  

ತಾಯಿ ರಾಜಮ್ಮನವರು ಮಗ ಶಂಕರನನ್ನು ಎಂಟನೇ ವಯಸ್ಸಿನಲ್ಲೇ ಸಂಗೀತಕ್ಕೆ ಕರೆತಂದರು. ಮುಂದೆ ಶಂಕರ್, ನಾಗರತ್ನಾ ಬಾಯಿ ಹಾಗೂ  ವಲ್ಲಭಮ್ ಕಲ್ಯಾಣ ಸುಂದರಮ್ ಅವರ ಬಳಿ ಸಂಗೀತ ಸಾಧನೆ ಮಾಡಿದರು.  ಶಂಕರ್, 1961ರಲ್ಲಿ ಸಂಗೀತ ಗಾಯನದಲ್ಲಿ ಜೂನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು.  ಅದೇ ವರ್ಷ ಸಮಾರಂಭವೊಂದರಲ್ಲಿ ಅರೈಕುಡಿ ರಾಮಾನುಜ ಅಯಂಗಾರ್ ಅವರಿಂದ ಬಹುಮಾನ ಸ್ವೀಕರಿಸಿದರು. ಮಲ್ಲೇಶ್ವರದ ಸಂಗೀತ ಸಭಾ ಮತ್ತು ಬೆಂಗಳೂರಿನ ಇತರ  ಪ್ರಸಿದ್ಧ ವೇದಿಕೆಗಳಲ್ಲಿ ಅವರು ಅನೇಕ ಪ್ರಸಿದ್ಧರ ಸಂಗೀತ ಕೇಳುತ್ತಾ ಬೆಳೆದರು. ಜೊತೆಗೆ ಮಹಾನ್ ಸಂಗೀತ ವಿದ್ವಾಂಸರುಗಳಾದ ಮೈಸೂರು ವಾಸುದೇವಾಚಾರ್ಯರ ಮೊಮ್ಮಗ ಎಸ್.ಕೃಷ್ಣಮೂರ್ತಿ,  ಪದ್ಮಚರಣ್  ಎಂದು ಪ್ರಸಿದ್ಧರಾದ ಎ. ವಿ. ಕೃಷ್ಣಮಾಚಾರ್ಯ, ಟಿ ಎನ್. ಪದ್ಮನಾಭನ್ ಮತ್ತು ಅನೇಕ ಸಂಗೀತ ವಿದ್ವಾಂಸರುಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರು.

ಬೆಂಗಳೂರು ಹೈಸ್ಕೂಲಿನಲ್ಲಿ ಓದಿದ ಶಂಕರ್ ಮುಂದೆ ರೇಣುಕಾಚಾರ್ಯ ಕಾಲೇಜಿನಲ್ಲಿ ಬಿ.ಎಸ್‍ಸಿ ಹಾಗೂ ಸೆಂಟ್ರಲ್ ಕಾಲೇಜಿನಿಂದ ಗಣಿತದಲ್ಲಿ ಎಂ.ಎಸ್ಸಿ ಪದವಿ ಪಡೆದರು.

1973ರಲ್ಲಿ ಎಸ್. ಶಂಕರ್ ಅವರು ಅಖಿಲ ಭಾರತ ಆಕಾಶವಾಣಿ ಸಂಗೀತ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಗಳಿಸಿದರು.  ಅವರಿಗೆ ಮದ್ರಾಸ್ ಮ್ಯೂಸಿಕ್ ಅಕಾಡಮಿ ಮತ್ತು ಬೆಂಗಳೂರು  ಗಾಯನ ಸಮಾಜದ ಯುವ ಸಂಗೀತಗಾರನಿಗೆ ಸಲ್ಲುವ ಪುರಸ್ಕಾರಗಳು ಸಂದವು.  1980ರಲ್ಲಿ ಆಕಾಶವಾಣಿಯಿಂದ ಬಿ ಗ್ರೇಡ್ ಕಲಾವಿದರಾಗಿ ಪರಿಗಣಿತರಾಗಿದ್ದ ಶಂಕರ್ 2001ರ ವೇಳೆಗೆ ಎ-ಟಾಪ್ ಶ್ರೇಣಿಯ ಕಲಾವಿದರಾಗಿ ಪರಿಗಣಿತರಾದರು.

ಎಸ್. ಶಂಕರ್ ಅವರು ವೃತ್ತಿಯಲ್ಲಿ ಬೆಂಗಳೂರಿನ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ 38 ವರ್ಷಗಳ ಸೇವೆ ಸಲ್ಲಿಸಿ 2010ರಲ್ಲಿ ನಿವೃತ್ತರಾದರು. ಅಲ್ಲಿನ ಗೆಳೆಯರೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಶಂಕರ್, ಹಲವಾರು ನಾಟಕಗಳಿಗೂ ಸಂಗೀತ  ಸಂಯೋಜಿಸಿದ್ದರು. 

ವಿದ್ವಾನ್ ಎಸ್. ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಶಂಕರ್, ಬೆಂಗಳೂರು ಮತ್ತು ಲಂಡನ್ನಿನ ಭಾರತೀಯ ವಿದ್ಯಾಭವನಕ್ಕಾಗಿ  ಅನೇಕ ಸಂಗೀತ ಸಂಯೋಜನೆಗಳಲ್ಲಿ ಪಾಲ್ಗೊಂಡಿದ್ದರು. ದೇಶದಾದ್ಯಂತ ಮತ್ತು ಅನೇಕ ವಿದೇಶಿ ಕೇಂದ್ರಗಳಲ್ಲಿ ಅವರ ಸಂಗೀತ ಕಛೇರಿಗಳು ನಡೆಯುತ್ತ ಬಂದಿವೆ. ಡಿ. ವಿ. ಜಿ. ಅವರ ಅಂತಃಪುರ ಗೀತೆಗಳೂ ಸೇರಿದಂತೆ ಅನೇಕ ಸಂಗೀತ ಸಂಯೋಜನೆಗಳನ್ನು ಮಾಡಿದ್ದಾರೆ.

ಶಂಕರ್ ಅವರು ಸಂಗೀತ ಕೃತಿಮಾಲ, ಸದಾಶಿವ ಬ್ರಹ್ಮೇಂದ್ರ, ಭದ್ರಾಚಲ ರಾಮದಾಸ್, ಪುರಂದರದಾಸರು, ಜಯಚಾಮರಾಜೇಂದ್ರ ಒಡೆಯರ್, ಬಿಡಾರಂ ಕೃಷ್ಣಪ್ಪ, ಮೈಸೂರು ವಾಸುದೇವಾಚಾರ್ಯ, ಪದ್ಮಚರಣ್ ಮುಂತಾದವರ ಕುರಿತು ಬರವಣಿಗೆಗಳನ್ನೂ, ಕಾರ್ಯಕ್ರಮ ಸಂಯೋಜನೆಗಳನ್ನೂ ಮಾಡಿದ್ದಾರೆ. 

ಎಸ್. ಶಂಕರ್ ಅವರು 2012ರಲ್ಲಿ ಎಸ್. ಕೃಷ್ಣಮೂರ್ತಿ ಅವರ 90ನೇ ಜನ್ಮದಿನ, 2018ರಲ್ಲಿ ಗುರು ಶ್ರೀಮತಿ ವಲ್ಲಭಂ ಕಲ್ಯಾಣ ಸುಂದರಂ ಅವರ ಜನ್ಮಶತಾಬ್ಧಿ, ಮಯೂರಂ ವಿಶ್ವನಾಥ ಶಾಸ್ತ್ರಿಗಳ 125ನೇ ಜನ್ಮದಿನ, 2020ರಲ್ಲಿ ಪದ್ಮಚರಣ್ ಜನ್ಮಶತಾಬ್ಧಿ ಮುಂತಾದ ಕಾರ್ಯಕ್ರಮಗಳನ್ನೂ ಆಯೋಜಿಸಿದ್ದರು. ಈ ಮಹನೀಯರ ಬದುಕು ಮತ್ತು ಸಾಧನೆಗಳ ಕುರಿತ ಕಿರುಚಿತ್ರಗಳನ್ನೂ ನಿರ್ಮಿಸಿದ್ದರು.

ಎಸ್. ಶಂಕರ್ ಅವರ ಅನೇಕ ಶಿಷ್ಯವರ್ಗದವರು ಸಂಗೀತಲೋಕದಲ್ಲಿ ಹೆಸರಾಗಿದ್ದಾರೆ.

ವಿದ್ವಾನ್ ಎಸ್. ಶಂಕರ್ ಅವರಿಗೆ ಸಂಗೀತ ವಿದ್ಯಾನಿಧಿ, ನಾದನಿಧಿ, ಕಂಚಿ ಮತ್ತು ಆವನಿ ಶಂಕರ ಮಠಗಳಿಂದ ಆಸ್ಥಾನ ವಿದ್ವಾನ್, ಸಂಗೀತ ಕಲಾರತ್ನ, ಸಂಗೀತ ಕಲಾಸರಸ್ವತಿ, ಕಲಾಭೂಷಣ, ಕರ್ನಾಟಕ ಕಲಾಶ್ರೀ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.

ವಿದ್ವಾನ್ ಎಸ್. ಶಂಕರ್ ಅವರಿಗೆ ಜನ್ಮದಿನದ ಶುಭಹಾರೈಕೆಗಳು.  ನಮಸ್ಕಾರ.

On the birthday of Carnatic classical vocalist Vidwan S. Shankar 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ