ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹರಿವಂಶರಾಯ್


ಹರಿವಂಶರಾಯ್ ಬಚ್ಚನ್

ಹರಿವಂಶರಾಯ್ ಬಚ್ಚನ್ ಶ್ರೀವಾಸ್ತವ್ ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿ ಪ್ರತಿಷ್ಠಿತ ಹೆಸರು. 20ನೇ ಶತಮಾನದ ಆದಿಯಲ್ಲಿಯೇ ತಮ್ಮ ಛಾಪನ್ನು ಮೂಡಿಸಿದ್ದ ಹರಿವಂಶ್ 'ಮಧುಶಾಲಾ' ಮೂಲಕ ಖ್ಯಾತಿಗಳಿಸಿದವರು.  

ಹರಿವಂಶರಾಯ್  ಬಚ್ಚನ್ ಅವರು ಅಲಹಾಬಾದಿನ ಪ್ರತಾಪ್‍ಘಡ್ ಜಿಲ್ಲೆಯ ಪಾಟ್ಟಿ ಎಂಬ ಗ್ರಾಮದಲ್ಲಿ 1907ರ  ನವೆಂಬರ್ 27ರಂದು ಜನಿಸಿದರು. ಪ್ರತಾಪ್ ನರೈನ್ ಶ್ರೀವಾಸ್ತವ್ ಮತ್ತು ಸರಸ್ವತಿ ದಂಪತಿಗಳ ಹಿರಿಯ ಪುತ್ರರಾಗಿದ್ದ ಅವರನ್ನು ಮನೆಯಲ್ಲಿ ಪ್ರೀತಿಯಿಂದ 'ಬಚ್ಚನ್' ಎಂದೇ ಕರೆಯುತ್ತಿದ್ದರು. ಸಂಪ್ರದಾಯದಂತೆ ಅವರು ಪ್ರಾಥಮಿಕ ಶಿಕ್ಷಣವನ್ನು (ಉರ್ದು ಭಾಷೆ) ಕಾಯಸ್ಥ ಪಾಠಶಾಲೆಯಲ್ಲಿ ಪೂರೈಸಿದ್ದರು. ನಂತರ ಅಲಹಾಬಾದ್ ವಿಶ್ವವಿದ್ಯಾಲಯ ಮತ್ತು  ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿಯೂ ಶಿಕ್ಷಣ ಪಡೆದಿದ್ದರು. ತದನಂತರ ಅವರ ಮನಸ್ಸು ಸ್ವಾತಂತ್ರ್ಯ ಹೋರಾಟದತ್ತ ಸೆಳೆದಿತ್ತು, ಆ ಹಿನ್ನೆಲೆಯಲ್ಲಿ ಮಹಾತ್ಮಗಾಂಧಿ ಅವರ ನೇತೃತ್ವದಲ್ಲಿ ಚಳವಳಿಗೆ ಧುಮುಕಿದ್ದರು.

ಮುಂದೆ ಪುನಃ ವಿಶ್ವವಿದ್ಯಾಲಯಕ್ಕೆ ಮರಳಿದ ಹರಿವಂಶರಾಯ್ 1941ರಿಂದ 1952ರವರೆಗೆ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ  ಇಂಗ್ಲಿಷ್ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ಬಳಿಕ ಎರಡು ವರ್ಷಗಳ ಕಾಲ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಡಬ್ಲು.ಬಿ.ಯೇಟ್ಸ್ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧದ ಕುರಿತು ಸಂಶೋಧನೆ ಕೈಗೊಂಡರು. ಆ ಸಂದರ್ಭದಲ್ಲಿಯೇ ಅವರು ತಮ್ಮ ಹೆಸರಿನ ಮುಂದೆ ಶ್ರೀವಾಸ್ತವ್ ಬದಲು 'ಬಚ್ಚನ್'ಎಂಬುದಾಗಿ ಉಪಯೋಗಿಸಲು ಪ್ರಾರಂಭಿಸಿದ್ದರು.  ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ  ಇಂಗ್ಲಿಷ್ ಸಾಹಿತ್ಯಕ್ಕಾಗಿ ಡಾಕ್ಟರೇಟ್ ಗೌರವ ಪಡೆದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದ್ದು. ಭಾರತಕ್ಕೆ ಮರಳಿದ ನಂತರವೂ ಅವರು ತಮ್ಮ ಉಪನ್ಯಾಸಕ ವೃತ್ತಿಯನ್ನು ಮುಂದುವರಿಸಿದರು.  ಕೆಲಕಾಲ ಅಲಹಾಬಾದ್ ಆಕಾಶವಾಣಿ ಕೇಂದ್ರದಲ್ಲಿಯೂ ಕಾರ್ಯನಿರ್ವಹಿಸಿದರು.

ಬಚ್ಚನ್ 1926ರಲ್ಲಿ ತಮ್ಮ 19ರ ಹರೆಯದಲ್ಲಿಯೇ 14ರ ಹರೆಯದ  ಶ್ಯಾಮಲಾ ಎಂಬಾಕೆಯೊಂದಿಗೆ ಹಸೆಮಣೆ ಏರಿದ್ದರು. 1936ರಲ್ಲಿ ಶ್ಯಾಮಲಾ ಕ್ಷಯದ ಕಾಯಿಲೆಯಿಂದ  ವಿಧಿವಶರಾದರು. ಹತ್ತು ವರ್ಷಗಳ ದಾಂಪತ್ಯ ಜೀವನಸಾಗಿಸಿದ್ದ ಬಚ್ಚನ್ ಪತ್ನಿಯ ಸಾವಿನಿಂದಾಗಿ ತುಂಬಾ ಆಘಾತಕ್ಕೊಳಗಾಗಿದ್ದರು. ಮುಂದೆ ಬಚ್ಚನ್ನರು  1941ರಲ್ಲಿ  ಸಿಕ್ ಕುಟುಂಬದ ತೇಜಿ ಸೂರಿಯೊಂದಿಗೆ ಎರಡನೇ ಮದುವೆಯಾದರು. ಈ ದಂಪತಿಗಳ ಪುತ್ರರೇ ಅಮಿತಾಬ್ ಬಚ್ಚನ್ ಮತ್ತು ಅಜಿತಾಬ್ ಬಚ್ಚನ್.

1955ರಲ್ಲಿ ಹರಿವಂಶರಾಯ್  ಕುಟುಂಬ ದೆಹಲಿಗೆ ತಮ್ಮ ವಾಸ್ತವ್ಯವನ್ನು ಬದಲಿಸಿತು. ಆಗ ಹರಿವಂಶರಾಯ್ ಬಚ್ಚನ್ನರು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಅಧಿಕಾರಿಯಾಗಿ ಸೇರ್ಪಡೆಗೊಂಡು ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿಯೇ ಬಚ್ಚನ್ ಕುಟುಂಬ ನೆಹರು ಮತ್ತು ಇಂದಿರಾ ಬಳಗದೊಂದಿಗೆ ನಿಕಟಸಂಪರ್ಕ ಹೊಂದಿತ್ತು.

ಹರಿವಂಶರಾಯ್ ಭಗವದ್ಗೀತೆ, ಶೇಕ್ಸಪೀಯರನ ಮೆಕ್ಬೆತ್ ಹಾಗೂ ಓಥೆಲ್ಲೊ ನಾಟಕಗಳನ್ನು ಹಿಂದಿಗೆ ಭಾಷಾಂತರಿಸಿದರು. 1984ರಲ್ಲಿ ಇಂದಿರಾ ಹತ್ಯೆಯ ನಂತರ 'ಏಕ್ ನವೆಂಬರ್ 1984' ಹರಿವಂಶ ರಾಯ್ ಅವರ ಕೊನೆಯ ಕವನವಾಗಿತ್ತು.

1966ರಲ್ಲಿ ಬಚ್ಚನ್ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿನ ಕೃಷಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸರಸ್ವತಿ ಸಮ್ಮಾನ್  ಮತ್ತು 1976ರಲ್ಲಿ ಪ್ರತಿಷ್ಠಿತ ಪದ್ಮಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು. 

ಹರಿವಂಶರಾಯ್ ಬಚ್ಚನ್ ಅವರು ತಮ್ಮ 95ರ ಹರೆಯದಲ್ಲಿ 2003 ಜನವರಿ 18ರಂದು ಇಹಲೋಕ ತ್ಯಜಿಸಿದರು. 2007ರಲ್ಲಿ ತೇಜಿ ಬಚ್ಚನ್ (93) ಕೂಡ ಸಾವನ್ನಪ್ಪಿದ್ದರು.

ಅಗ್ನಿಪಥ್, ತೇರಾ ಹಾರ್, ಮಧುಶಾಲಾ, ಮಧುಬಾಲಾ, ಮಧುಕಲಶ್, ನಿಶಾ ನಿಮಂತ್ರಣ್, ಏಕಾಂತ್ ಸಂಗೀತ್, ಅಕುಲ್ ಅಂತರ್, ಹಾಲಾಹಲ್, ಸೂತ್ ಕೀ ಮಾಲ್, ಪ್ರಣಯ್ ಪತ್ರಿಕಾ, ಮಿಲನ್ ಯಾಮಿನಿ ಹರಿವಂಶ ರಾಯ್ ಬಚ್ಚನ್ ಅವರ ಪ್ರಮುಖ ಕವನಗಳಾಗಿವೆ.

“ಮಣ್ಣಿಂದಾದ ತನು, ಆಟವಾಡುವ ಮನ, ಒಂದು ಕ್ಷಣದ  ಬದುಕು – ಇದು ನನ್ನ ಪರಿಚಯ” ಎಂಬುದು  ಹರಿವಂಶರಾಯ್ ಅವರ ಪ್ರಸಿದ್ಧ ವ್ಯಾಖ್ಯೆ.  

ಈ ಮಹಾನ್ ವ್ಯಕ್ತಿತ್ವಕ್ಕೆ ನಮ್ಮ ನಮನ.

On the birth anniversary of great poet and scholar Harivansh Rai Bacchan


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ